ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್-19ರ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಮುಂಬೈನಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶನಿವಾರ ಮತ್ತು ಭಾನುವಾರ ಮುಂಬೈನಲ್ಲಿ 144 ಸೆಕ್ಷನ್ ಅನ್ನು ಜಾರಿಗೊಳಿಸಲಾಗಿದೆ.
ಹೊಸ ರೂಪಾಂತರಿ ವೈರಸ್ ಹರಡುವುದನ್ನು ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಬೈ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಗುಂಪು ಸೇರುವುದು, ಪ್ರತಿಭಟನೆ ನಡೆಸುವುದು ಹಾಗೂ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ದೊಡ್ಡ ಸಮಾರಂಭಗಳನ್ನು ಆಯೋಜಿಸುವುದನ್ನೂ ನಿರ್ಬಂಧಿಸಲಾಗಿದೆ. ಮುಂಬೈ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿ ಎರಡು ದಿನಗಳಲ್ಲಿ ಜನರು ಮತ್ತು ವಾಹನಗಳನ್ನು ಒಳಗೊಂಡ ರ‍್ಯಾಲಿಗಳು ಮತ್ತು ಪ್ರತಿಭಟನಾ ಮೆರವಣಿಗೆಗಳನ್ನು ನಿರ್ಬಂಧಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿದ್ದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ.
ಕಳೆದ ವಾರ ಮಹಾರಾಷ್ಟ್ರದ ಅಮರಾವತಿ ಮತ್ತು ಇತರ ಪ್ರದೇಶಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶಗಳನ್ನು ಹೊರಡಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 695 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 12 ಸಾವುಗಳು ವರದಿಯಾಗಿವೆ. ಹೊಸ ಸೋಂಕಿನೊಂದಿಗೆ, ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,534ಕ್ಕೆ ಏರಿದೆ. ಇಲ್ಲಿಯವರೆಗೆ ಒಟ್ಟು 66,42,372 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಆರೋಗ್ಯ ಇಲಾಖೆ ವರದಿ ಪ್ರಕಾರ, ರಾಜ್ಯದಲ್ಲಿ ಕಂಡುಬಂದ ಒಮಿಕ್ರಾನ್ ರೂಪಾಂತರದ ಸೋಂಕಿನ ಸಂಖ್ಯೆ 17 ಕ್ಕೆ ಏರಿದೆ.
ಮೂರು ವರ್ಷದ ಮಗುವಿನಲ್ಲೂ ಓಮಿಕ್ರಾನ್
ಮಹಾರಾಷ್ಟ್ರದಲ್ಲಿ ಶುಕ್ರವಾರ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳಲ್ಲಿ ಮೂರು ವರ್ಷದ ಮಗುವಿನಲ್ಲೂ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಅಲ್ಲದೆ ಉಳಿದ ಕೆಲವರಲ್ಲಿ ಇವರಲ್ಲಿ ಹಲವರಿಗೆ ಸೋಂಕಿನ ಲಕ್ಷಣಗಳೇ ಕಂಡು ಬಂದಿರಲಿಲ್ಲ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಮೂರು ಓಮಿಕ್ರಾನ್ ಸೋಂಕಿತರು ಮತ್ತು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ನಾಲ್ಕು ಸೋಂಕಿತ ಪ್ರಕರಣಗಳು ವರದಿಯಾಗಿವೆ
ಡಿಸೆಂಬರ್ 1 ರಿಂದ, ಒಟ್ಟು 93 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇವುಗಳಲ್ಲಿ 83 ಒಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಬಂದವರೇ ಆಗಿದ್ದಾರೆ, ಉಳಿದ 13 ಮಂದಿ ಇತರ ದೇಶಗಳಿಂದ ಬಂದವರು ಎಂದು ಲಾವ್ ಅಗರ್ವಾಲ್ ಹೇಳಿದ್ದಾರೆ. ಇದುವರೆಗೆ 59 ದೇಶಗಳಲ್ಲಿ ಒಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಭಾರತದಲ್ಲಿ 32 ಓಮಿಕ್ರಾನ್ ಸೋಂಕಿತ ಪ್ರಕರಣ
ದೇಶದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 17 ಪ್ರಕರಣಗಳು, ರಾಜಸ್ಥಾನದಲ್ಲಿ 9 ಪ್ರಕರಣಗಳು, ಗುಜರಾತ್ 3, ಕರ್ನಾಟಕ 2 ಮತ್ತು ದೆಹಲಿಯಲ್ಲಿ ಒಂದು ಪ್ರಕರಣಗಳು ವರದಿಯಾಗಿವೆ.