ಬೆಂಗಳೂರು ಡ್ರಗ್ಸ್ ದಂಧೆ; ರಾಗಿಣಿ ಸೇರಿ 12 ಮಂದಿ ಮೇಲೆ ಎಫ್ಐಆರ್​ ದಾಖಲು

ಡ್ರಗ್ಸ್ ದಂಧೆ ಮಾಹಿತಿ ನೀಡಿದ ರವಿಶಂಕರ್ ಅಪ್ರೂವರ್

 

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಸಂಪೂರ್ಣ ಜಾಲಾಟಕ್ಕಿಳಿದಿದ್ದಾರೆ. ರಾಗಿಣಿ ದ್ವಿವೇದಿ ಸೇರಿದಂತೆ 12 ಮಂದಿ ಮೇಲೆ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇದರಲ್ಲಿ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಕೂಡ ಇದ್ದಾರೆ. ಶಿವಪ್ರಕಾಶ್ ಎಂಬುವರನ್ನು ಎ1 ಆರೋಪಿ ಎಂದು ಹೆಸರಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ ಎ2 ಆರೋಪಿಯಾ ದರೆ, ಫ್ಯಾಷನ್ ಲೋಕದ ಸೆಲಬ್ರಿಟಿ ವೀರೇನ್ ಖನ್ನಾ ಎ3 ಆರೋಪಿಯಾಗಿದ್ಧಾರೆ. ಪ್ರಶಾಂತ್ ರಾಂಕಾ, ವೈಭವ್ ಜೈನ್, ಆದಿತ್ಯ ಆಳ್ವ, ಲೂಮ್ ಪೆಪ್ಪರ್, ಸೈಮನ್, ಪ್ರಶಾಂತ್ ಬಾಬು, ಅಶ್ವಿನ್ ಅಲಿಯಾಸ್ ಬೂಗಿ, ರಾಹುಲ್ ತೋನ್ಸೆ, ವಿನಯ್ ಹಾಗೂ ಇತರರನ್ನು ಕ್ರಮ ಪ್ರಕಾರವಾಗಿ ಆರೋಪಿಗಳನ್ನಾಗಿ ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ.

ಸೆಕ್ಷನ್ 120ಬಿ ಹಾಗೂ ಎನ್​ಡಿಪಿಎಸ್ ಕಾಯ್ದೆಯ 21, 21ಸಿ, 27ಎ, 27ಬಿ, 29 ಸೆಕ್ಷನ್ ಅಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ. ಎನ್​ಡಿಪಿಎಸ್ ಸೆಕ್ಷನ್ 21ಸಿ ಅಡಿ ಆರೋಪ ಸಾಬೀತಾದರೆ 10 ವರ್ಷಗಳಿಗೂ ಮೇಲ್ಪಟ್ಟು ಜೈಲುಶಿಕ್ಷೆ ವಿಧಿಸುವ ಅವಕಾಶ ಇದೆ.

ಕುತೂಹಲವೆಂದರೆ, ರಾಗಿಣಿ ದ್ವಿವೇದಿ ಸಿಕ್ಕಿಬೀಳಲು ಕಾರಣವಾದ ಆರ್​ಟಿಒ ಅಧಿಕಾರಿ ರವಿಶಂಕರ್ ಅವರ ಹೆಸರು ಈ ಎಫ್​ಐಆರ್​ನಲ್ಲಿ ಇಲ್ಲ. ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಮೊದಲ ಆರೋಪಿಗಳ ಪೈಕಿ ರವಿಶಂಕರ್ ಕೂಡ ಒಬ್ಬರು. ವಿಚಾರಣೆಯಲ್ಲಿ ಡ್ರಗ್ ಸಪ್ಲೈ, ಸೇವೆ, ಪಾರ್ಟಿ ಆಯೋಜಕರು ಇತ್ಯಾದಿ ಅನೇಕ ಮಾಹಿತಿಯನ್ನು ಇವರು ನೀಡಿದ್ದರೆನ್ನಲಾಗಿದೆ. ನಟಿ ರಾಗಿಣಿ ದ್ವಿವೇದಿ ಮತ್ತು ವಿರೇನ್ ಖನ್ನಾ ಬಗ್ಗೆಯೂ ಮಾಹಿತಿ ನೀಡಿದ್ದು ಇದೇ ರವಿಶಂಕರ್. ಸಿಸಿಬಿ ಮೂಲಗಳ ಪ್ರಕಾರ, ರವಿಶಂಕರ್ ಅವರನ್ನು ಅಪ್ರೂವರ್ ಆಗಿ ಮಾಡಲಾಗಿದೆ. ಹೀಗಾಗಿ ಎಫ್​ಐಆರ್​ನಲ್ಲಿ ಅವರ ಹೆಸರು ದಾಖಲಾಗಿಲ್ಲ.

ಎ7 ಆರೋಪಿ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪಾರ್ ಅಲಿಯಾಸ್ ಸೈಮಾನ್ ವಿದೇಶದಿಂದ ಬರುತ್ತಿದ್ದ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ಸರಬರಾಜು ಮಾಡುತ್ತಿದ್ದೆನ್ನಲಾಗಿದೆ. ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಆರೋಪಿ ರಾಹುಲ್​ನ ವಿಚಾರಣೆ ಕೂಡ ನಡೆಯುತ್ತಿದೆ. ಸಂಜನಾ ಗಲ್​ರಾಣಿ ಆಪ್ತನಾಗಿರುವ ರಾಹುಲ್ ಈ ವಿಚಾರಣೆ ವೇಳೆ ನೀಡುವ ಮಾಹಿತಿ ಬಹಳ ಮುಖ್ಯವಾಗಿದೆ. ನಿನ್ನೆ ಬಂಧಿತರಾಗಿದ್ದ ರಾಗಿಣಿ ದ್ವಿವೇದಿ ಅವರನ್ನು ಮಧ್ಯಾಹ್ನದ ನಂತರ ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಇತ್ತ, ಬೆಂಗಳೂರು ಕಮಿಷನರ್ ಕಚೇರಿಯಲ್ಲಿ ಡ್ರಗ್ಸ್ ಪ್ರಕರಣ ವಿಚಾರವಾಗಿ ತುರ್ತು ಸಭೆ ನಡೆಯಿತು. ಆಯುಕ್ತ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಸಿ, ಎಸಿಬಿ, ಇನ್ಸ್​ಪೆಕ್ಟರ್ ಮೊದಲಾದ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು ತನಿಖೆಯ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *