ಪೆರಂಬಲೂರು : ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದ ಕೋತಿಯೊಂದರ ಪ್ರಾಣವನ್ನು ಚಾಲಕನೋರ್ವ ಉಳಿಸಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದ್ದು, ಚಾಲಕ ಕೋತಿ ಪ್ರಾಣವನ್ನು ಉಳಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.
ತಮಿಳುನಾಡಿನ ಪೆರಂಬಲೂರಿನ ಕುನ್ನಂ ತಾಲೂಕಿನ 38 ವರ್ಷದ ವ್ಯಕ್ತಿಯೊಬ್ಬರು ಕೋತಿ ಜೀವ ಉಳಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಗಾಯಗೊಂಡು ನಿತ್ರಾಣವಾಗಿದ್ದ ಕೋತಿಗೆ ಮರುಜೀವ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿ.9ರಂದು ಕುನ್ನಂ ತಾಲೂಕಿನ ಒಥಿಯಂ ಸಮತುವಪುರಂ ಎಂಬಲ್ಲಿ ಕೋತಿಯೊಂದನ್ನು ಬೀದಿನಾಯಿಗಳು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದ್ದವು. ನಾಯಿಗಳು ಕೋತಿಗೆ ಕಚ್ಚಿ ಗಾಯ ಮಾಡಿದ್ದವು. ನಾಯಿಗಳಿಂದ ತಪ್ಪಿಸಿಕೊಳ್ಳಲು ಕೋತಿ ಮರವೇರಿತ್ತು. ಮರದ ಮೇಲೆ ಗಾಯಗೊಂಡಿದ್ದ ಕೋತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ಇದನ್ನು ಕಂಡ ಕಾರು ಚಾಲಕ ಎಂ ಪ್ರಭು ಕೂಡಲೇ ನಾಯಿಗಳನ್ನು ಅಲ್ಲಿಂದ ಓಡಿಸಿ, ಆ ಮುಳ್ಳಿನ ಮರವನ್ನು ಏರಿ ಕೋತಿಯನ್ನು ಕೆಳಗೆ ತಂದಿದ್ದಾರೆ.
ಬಳಿಕ ಅದಕ್ಕೆ ನೀರು ಕೊಟ್ಟು ತನ್ನ ಸ್ನೇಹಿತರ ಸಹಾಯದೊಂದಿಗೆ ದ್ವಿಚಕ್ರ ವಾಹನದಲ್ಲಿ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾರು. ಆದರೆ ಪೆರಂಬಲೂರು-ಅರಿಯಲೂರು ರಸ್ತೆಯಲ್ಲಿ ಸಾಗುತ್ತಿದ್ದಾಗ ಕೋತಿಯ ಶ್ವಾಸ ನಿಧಾನವಾಗಿ ಕ್ಷೀಣಿಸುತ್ತಿರುವುದನ್ನು ಕಂಡ ಪ್ರಭು ಕೂಡಲೇ ಕೋತಿಗೆ ರಸ್ತೆಯಲ್ಲೇ ಹೃದಯದ ಪಂಪ್ ಮಾಡಲು ಆರಂಭಿಸಿದರು. ಅದರ ಬಾಯಿಗೆ ತಮ್ಮ ಬಾಯಿ ಇಟ್ಟು ಉಸಿರು ನೀಡುವ ಮೂಲಕ ಅದು ಮತ್ತೆ ಉಸಿರಾಡುವಂತೆ ಮಾಡುವ ಪ್ರಯತ್ನ ಮಾಡಿದರು. ಬಳಿಕ ಕೋತಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಲ್ಲಿ ಕೋತಿಗೆ ಲಸಿಕೆ ಮತ್ತು ಗ್ಲೂಕೋಸ್ ನೀಡಲಾಯಿತು. ಬಳಿಕ ಚೇತರಿಸಿಕೊಂಡ ಕೋತಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಮನುಷ್ಯ ಮನುಷ್ಯನಿಗೆ ಸಹಾಯ ಮಾಡದ ಈ ಕಾಲದಲ್ಲಿ ಪ್ರಭುರವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.