ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಹಿಜಾಬ್ ಗೊಂದಲಕ್ಕೆ ಎಡೆಮಾಡಿಕೊಡದೆ ಪರೀಕ್ಷೆ ಬರೆಯುವಂತೆ ಜಿಲ್ಲಾಡಳಿತ ವಿದ್ಯಾರ್ಥಿಗಳಿಗೆ ಮನವಿ ಮಾಡಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಕಾಲೇಜುವರೆಗೂ ಹಿಜಾಬ್ ಹಾಗೂ ಬುರ್ಕಾ ಧರಿಸಿ ಬಂದರೂ, ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್, ಬುರ್ಕಾ ತೆಗೆದಿಟ್ಟು ಪರೀಕ್ಷಾ ಕೇಂದ್ರ ಪ್ರವೇಶಿಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನೂ ಕೆಲವೆಡೆ ಹಿಜಾಬ್ ತೆಗೆಯುವುದಿಲ್ಲ ಎಂದ ಪಟ್ಟು ಹಿಡಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ನಿರಾಕರಣೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಯಿತು.ಅವರನ್ನು ಪ್ರವೇಶ ದ್ವಾರದ ಬಳಿಯೆ ತಡೆದ ಪೊಲೀಸರು ಹಿಜಾಬ್ ತೆಗದು ಬರುವಂತೆ ಸೂಚಿಸಿದ್ದಾರೆ. ಅದರಂತೆ ಹಿಜಾಬ್ ಅನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದ ವಿದ್ಯಾರ್ಥಿನಿಯರು ಪ್ರವೇಶಿಸಿದ್ದಾರೆ.
ಬಳ್ಳಾರಿ, ಬೆಂಗಳೂರು, ಶಿವಮೊಗ್ಗದಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಪ್ರಾಂಶುಪಾಲರ ಮಾತಿಗೆ ಮನ್ನಣೆ ನೀಡಿ ಪರೀಕ್ಷೆ ಬರೆದಿದ್ದಾರೆ. ನಮಗೆ ಧರ್ಮಕ್ಕಿಂತ ಪರೀಕ್ಷೆ ಮುಖ್ಯ ಎಂದು ವಿದ್ಯಾರ್ಥಿನಿಯರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಮನೆಗೆ ವಾಪಸ್ ಆಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡಪಿಯ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಮತ್ತು ರೇಷಂ ಮನವಿ ಮಾಡಿದ್ದರು. ಆದರೆ ಪರೀಕ್ಷೆ ಆರಂಭವಾದರೂ ಇವರಿಬ್ಬರೂ ಪ್ರಾಚಾರ್ಯರ ಕಚೇರಿಯಲ್ಲಿಯೇ ಕುಳಿತು ಚರ್ಚೆ ನಡೆಸದರು. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ ನಂತರ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಮನೆಗೆ ವಾಪಸ್ ಆಗಿದ್ದಾರೆ.
ಸರಕಾರ ಈ ರೀತಿಯ ಗೊಂದಲದ ನಿರ್ಧಾರ ತೆಗೆದುಕೊಳ್ಳುವ ಬದಲು ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆಯಬೇಕಾಗಿತ್ತು. ಇದು ಮಕ್ಕಳ ಭವಿಷ್ಯದ ಪ್ರಶ್ನೆ ಎಂದು ಸರಕಾರ ಯೋಚಿಸಬೇಕಿತ್ತು. ಇನ್ನೂ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಪಟ್ಟು ಹಿಡಿಯದೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ತೆಗೆದಿರಿಸಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಪರೀಕ್ಷೆ ಮುಗಿಯುವ ವರೆಗೆ ಯಾವುದೆ ಗೊಂದಲಕ್ಕೆ ಅವಕಾಶ ನೀಡದೆ ಮಕ್ಕಳ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸುವತ್ತ ಶಿಕ್ಷಣ ಇಲಾಖೆ ಮತ್ತು ಸರಕಾರ ಕ್ರಮವನ್ನು ಜರುಗಿಸಬೇಕಿದೆ.