ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಐದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಂತೆ ಅಕ್ಟೋಬರ್-09 ರಂದು ಸಂಜೆಯಾಗುತ್ತಲೇ ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡವು. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಬೆಂಗಳೂರಿನಲ್ಲಿ
ಇದನ್ನೂ ಓದಿ:ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಸಾಧಾರಣ ಮಳೆ ಸಾಧ್ಯತೆ
ಸಂಜೆಯಾಗುತ್ತಲೇ ನಗರದ ಮೆಜೆಸ್ಟಿಕ್, ಮಾರ್ಕೆಟ್, ಮಲ್ಲೇಶ್ವರಂ, ರಿಚ್ ಮಂಡ್ ಸರ್ಕಲ್, ಸದಾಶಿವನಗರ, ಶಾಂತಿನಗರ, ಬಿಟಿಎಂ ಲೇಔಟ್ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಧಾರಾಕಾರ ಮಳೆಗೆ ಜನರು ತತ್ತರಿಸಿದ್ದಾರೆ. ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ, ರೈಲ್ವೆ ಅಂಡರ್ಪಾಸ್, ವಿಜಯನಗರದ ಧನಂಜಯ ಪ್ಯಾಲೇಸ್ ಬಳಿ, ಬನ್ನೇರುಘಟ್ಟ ರಸ್ತೆ, ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣನಗರ ಬ್ರಿಡ್ಜ್, ಹೆಸರಘಟ್ಟದಲ್ಲಿ ರಸ್ತೆಗಳು ಜಲಾವೃತವಾಗಿದೆ. ಬೆಂಗಳೂರಿನಲ್ಲಿ
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೊಮ್ಮನಹಳ್ಳಿ ಹಾಗೂ ಮಡಿವಾಳ ಮುಖ್ಯ ರಸ್ತೆ ಜಲಾವೃತಗೊಂಡಿದೆ. ವಾಹನ ಸವಾರರು ನೀರು ತುಂಬಿದ ರಸ್ತೆಯಲ್ಲಿ ಸಂಚಾರ ಮಾಡಲು ಪರದಾಟ ನಡೆಸುತ್ತಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಪ್ರತೀ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಉಂಟಾಗುತ್ತದೆ. ಮಳೆನೀರು ಹರಿದು ಹೋಗಲು ಜಾಗವಿಲ್ಲದೆ ಈ ಅವಾಂತರ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ
ಇದನ್ನೂ ಓದಿ:ರಾಜ್ಯದಲ್ಲಿ ಬಿರುಸಿನ ಮಳೆ ಸಾಧ್ಯತೆ, 14 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್: ಹವಮಾನ ಇಲಾಖೆ ಸೂಚನೆ
ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್:
ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ ಈ ಪರಿಣಾಮ ಅನೇಕ ಸಮಸ್ಯೆಗಳು ಕೂಡ ಎದುರಾಗಿವೆ. ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು ಸುಮಾರು 4-5 ಕಿಲೋ ಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಇನ್ನು ಬೆಂಗಳೂರಿನ ಅಂಡರ್ ಪಾಸ್ ರಸ್ತೆಗಳು ಮಳೆಗೆ ಮೃತ್ಯುಕೂಪವಾಗಿದೆ. ಭಾರಿ ಮಳೆಯಿಂದ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಬಳಿಯ ರಸ್ತೆ ಜಲಾವೃತವಾಗಿದ್ದು ಸುಮಾರು 15ಕ್ಕೂ ಹೆಚ್ಚು ವಾಹನಗಳು ಮತ್ತು ಗರ್ಭಿಣಿ ಸೇರಿ 50ಕ್ಕೂ ಹೆಚ್ಚು ಜನ ಸಿಲುಕಿಕೊಂಡ ಘಟನೆ ನಡೆದಿದೆ.
ಕೆ.ಆರ್.ಸರ್ಕಲ್ ಅಂಡರ್ ಪಾಸ್ನಲ್ಲಿ ನೀರು ನಿಂತು ದುರಂತವೊಂದು ಸಂಭವಿಸಿತ್ತು. ಅದೇ ಮಾದರಿಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗ್ಗಿದ್ದು 50 ಮೀಟರ್ ಉದ್ದದ ರಸ್ತೆ ಜಲಾವೃತಗೊಂಡಿತ್ತು. ನಿಮಿಷ ನಿಮಿಷಕ್ಕೂ ನೀರಿನ ಮಟ್ಟ ಏರಿಕೆಯಾಗಿತ್ತು. 15ಕ್ಕೂ ಹೆಚ್ಚು ವಾಹನ, 50ಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿಕೊಂಡಿದ್ದರು. ರಸ್ತೆಯಲ್ಲಿ ನೀರಿನ ಮಟ್ಟ ಏರಿಕೆಯಿಂದ ವಾಹನಗಳು ಹೊರಬರಲಾಗದೆ ಪರದಾಡುತ್ತಿದ್ದವು. ಕ್ಷಣ ಕ್ಷಣಕ್ಕೂ ಜನರಲ್ಲಿ ಆತಂಕ ಹೆಚ್ಚಾಗುತ್ತಿತ್ತು. 50ಕ್ಕೂ ಹೆಚ್ಚು ಜನ ಮಳೆ ನೀರಿನಲ್ಲಿ ಸಿಲುಕಿ ಕೆಲಹೊತ್ತು ನರಕ ಅನುಭವಿಸಿದರು. ಸೋಮವಾರ ರಾತ್ರಿ 11 ಗಂಟೆಗೆ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗರ್ಭಿಣಿ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ನೀರಲ್ಲಿ ಸಿಲುಕಿದ್ದವರನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರಿಸಿದ್ದಾರೆ.
ವಾಹನಗಳಲ್ಲಿದ್ದ 50ಕ್ಕೂ ಹೆಚ್ಚು ಜನರನ್ನು ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿದರು. ಕೊಂಚ ಯಾಮಾರಿದ್ರೂ ಅಂಡರ್ ಪಾಸ್ ಜನರ ಜೀವಕ್ಕೆ ಕಂಠಕವಾಗುತ್ತಿತ್ತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಭಾರಿ ಅನಾಹುತ ತಪ್ಪಿದೆ.
ಇದನ್ನೂ ಓದಿ:ಒಂದೇ ರಾತ್ರಿ 64.8ಮಿಮೀ ದಾಖಲೆಯ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಬೆಂಗಳೂರಿನಲ್ಲಿ ಇನ್ನೂ 4 ದಿನ ಮಳೆ ಮುನ್ಸೂಚನೆ:
ಬೆಂಗಳೂರು ನಗರದಲ್ಲಿ ಕಳೆದೆರಡು ದಿನಗಳಿಂದ ಮತ್ತೆ ಮಳೆ ಆರಂಭವಾಗಿದೆ. ನಿನ್ನೆ ಅಕ್ಟೋಬರ್-09 ಸಂಜೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಗರದ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹೇಳಿದೆ.
ವಿಡಿಯೋ ನೋಡಿ:ಇದು ಶಾಲೆಯಾ? ಅಥವಾ ಸ್ವಿಮ್ಮಿಂಗ್ ಫೂಲ್! ಶಾಸಕರೆ ಉತ್ತರಿಸಿ Janashakthi Media