ಕಾಲೇಜು ಮತ್ತು ವಿವಿ ಶಿಕ್ಷಕರ ಸಂಘಟನೆಯ ಹಿರಿಯ ಮುಖಂಡ ಡಾ.ಕಿಶೋರ್ ಠೇಕೇದತ್ತ್ ನಿಧನ

ನವದೆಹಲಿ : ಅಖಿಲ ಭಾರತ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘಟನೆಗಳ ಒಕ್ಕೂಟ (ಎಐಎಫ್‍ಸಿಟಿಒ)ದ ಮಾಜಿ ಅಧ್ಯಕ್ಷ  ಡಾ. ಕಿಶೋರ್ ಠೇಕೇದತ್ತ್ ಡಿಸೆಂಬರ್ 20ರ ರಾತ್ರಿ ಮುಂಬೈಯಲ್ಲಿ ನಿಧನರಾಗಿದ್ದಾರೆ. ಅವರಿಗೆ 89ವರ್ಷವಾಗಿತ್ತು. ಪ್ರಸಿದ್ಧ ವಿಧ್ವಾಂಸರು, ಚಿಂತಕರು, ಬರಹಗಾರರು, ಅಧ್ಯಾಪಕರು ಮತ್ತು ಹೋರಾಟಗಾರರೂ ಆಗಿದ್ದ ಪ್ರೊ. ಠೇಕೆದತ್ತ್ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಾಪಕರುಗಳ ಚಳುವಳಿಯನ್ನು ಕಟ್ಟಿ ಬೆಳೆಸಿದವರು ಮ್ತತ್ತು  1960ರದಶಕದಿಂದ 1990ರ ದಶಕ ದವರೆಗೆ  ಶಿಕ್ಷಕರ ಹಲವಾರ ಹೋರಾಟಗಳಿಗೆ ನೇತೃತ್ವ ನೀಡಿದವರು.

ಮುಂಬೈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಮುಂಬೈ ಮತ್ತು ಅದರ ಪಕ್ಕದ ಜಿಲ್ಲೆಗಳಲ್ಲಿ ಕಾಲೇಜು ಶಿಕ್ಷಕರ ಚಳುವಳಿಯನ್ನು ಕಟ್ಟುವ ಪ್ರಯತ್ನದಲ್ಲಿ ನಿಯಮಿತವಾಗಿ ಹಲವಾರು ಕಾಲೇಜುಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಶಿಕ್ಷಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡ ಅವರು ಸರ್ಕಾರ, ವಿಶ್ವವಿದ್ಯಾಲಯ ಮತ್ತು ಕಾಲೇಜು ಆಡಳಿತ ಮಂಡಳಿಗಳು ತಮ್ಮ ಶಿಕ್ಷಕರ ಮೇಲೆ ಹೇರಿದ ಅನ್ಯಾಯದ ವಿರುದ್ಧ ಹೋರಾಡಲು ಅವರನ್ನು ಸಂಘಟಿಸಿದರು. 1966 ರಲ್ಲಿ ಮುಂಬೈವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘದ  (ಬಿಯುಸಿಟಿಯು) ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾದ ಅವರು  ನಂತರ ಅದರ ಅಧ್ಯಕ್ಷರಾಗಿ ಆಯ್ಕೆಯಾದರು. 1975 ರಲ್ಲಿ ಅವರು ಮಹಾರಾಷ್ಟ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘಟನೆಗಳ ಒಕ್ಕೂಟದ (ಎಂಎಫ್‍ಸಿಟಿಒ) ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ ಅದರ ಅಧ್ಯಕ್ಷರಾಗಿ ಆಯ್ಕೆಯಾದರು. 1987 ರಲ್ಲಿ ಅವರು ಅಖಿಲ ಭಾರತ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿಯೂ ಆಯ್ಕೆಯಾದರು.

ಡಾ. ಕಿಶೋರ್ ಠೇಕೆದತ್ತ್ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಸಂಯುಕ್ತ ಶಿಕ್ಷಕರ ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಕೆಜಿಯಿಂದ ಪಿಜಿವರೆಗಿನ ವಿವಿಧ ಶಿಕ್ಷಕ ಸಂಘಟನೆಗಳನ್ನು ಒಗ್ಗೂಡಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅದೇ ರೀತಿ, ಅವರು ಸಂಯುಕ್ತ ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಇದನ್ನೂ ಓದಿ : ಎಲೆಕ್ಟೋರಲ್ ಬಾಂಡ್ ಬದಲಿಗೆ ದೇಣಿಗೆ; ಯಾವ ಪಾರ್ಟಿಗಳಿಗೆ ಎಷ್ಟು ಮೊತ್ತ?

ಮೂಲತಃ ಕೇರಳದ ಎರ್ನಾಕುಲಂ ಜಿಲ್ಲೆಯವರಾಗಿದ್ದರೂ ಡಾ.ಠೇಕೆದತ್ತ್, ಹುಟ್ಟಿದ್ದು  ಬೆಳೆದದ್ದು ಮುಂಬೈಯಲ್ಲೇ. ಅವರ ತಂದೆ ಮುಂಬೈಯಲ್ಲಿ ಜವಳಿ ಗಿರಣಿ ಕಾರ್ಮಿಕರಾಗಿದ್ದರು. ಮುಂಬೈನ ರುಯಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು, ಗಣಿತ ಮತ್ತು ಭೌತಶಾಸ್ತ್ರ ಎರಡರಲ್ಲೂ ಎಂ.ಎಸ್ಸಿ ಪದವಿ ಪಡೆದರು ಮತ್ತು ನಂತರ ಪಿಎಚ್‌ಡಿ ಪದವಿ ಪಡೆದರು. ಅವರು ಮೊದಲು ಬಾಂಬೆ ಸ್ಕಾಟಿಷ್ ಶಾಲೆಯಲ್ಲಿ ಕೆಲವು ವರ್ಷಗಳ ಕಾಲ ಬೋಧಿಸಿದರು, ಮತ್ತು ನಂತರ ಮುಂಬೈನ ಪ್ರಸಿದ್ಧ ವಿಲ್ಸನ್ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ, 1994 ರಲ್ಲಿ ಸ್ವಯಂ ನಿವೃತ್ತಿ ಪಡೆಯುವ ವರೆಗೆ ಪ್ರಾಧ್ಯಾಪಕರಾಗಿದ್ದರು.

ಪ್ರಸಿದ್ಧ ಮಾರ್ಕ್ಸ್ ವಾದಿ ಚಿಂತಕರಾಗಿದ್ದ ಅವರು ಹಲವಾರು ಲೇಖನಗಳು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪಿಹೆಚ್‍ಡಿ ಪ್ರಬಂಧ ಗತಿತಾರ್ಕಿಕತೆ, ಸಾಪೇಕ್ಷತೆ ಮತ್ತು ಕ್ವಾಂಟಂ. ಗತಿತಾರ್ಕಿಕತೆ, ವಿಜ್ಞಾನ, ರಾಜಕೀಯ ಅರ್ಥಶಾಸ್ತ್ರ, ವಿಜ್ಞಾನದ ತತ್ವಶಾಸ್ತ್ರೀಯ ಬುನಾದಿ ಇತ್ಯಾದಿ ವಿಷಯಗಳ ಬಗ್ಗೆ ಅವರ ಲೇಖನಗಳು ಸೋಷಿಯಲ್‍ ಸೈಂಟಿಸ್ಟ್, ದಿ ಮಾರ್ಕ್ಸಿಸ್ಟ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಇತ್ತೀಚಿನ ಲೇಖನ ಫ್ರೆಡ್ರಿಕ್‍ ಎಂಗೆಲ್ಸ್  ಮತ್ತು ಆಧುನಿಕ ವಿಜ್ಞಾನ. ಅವರು ಆರ್‌ಎಸ್‌ಎಸ್, ಬಿಜೆಪಿ ಮತ್ತು ಸಂಘ ಪರಿವಾರದ ಕಟ್ಟಾ ವಿರೋಧಿಯಾಗಿದ್ದರು. ಇದು ಅವರ ಎಲ್ಲಾ ಬರಹಗಳು ಮತ್ತು ಭಾಷಣಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಅಧ್ಯಯನದ ಜೊತೆಗೆ ಶಿಕ್ಷಕರ ಸಂಘಟನೆಯಲ್ಲೂ ತೊಡಗಿಕೊಂಡ ಅವರು ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯ ಶಿಕ್ಷಕರ ಸಮರಧೀರ  ಚಳುವಳಿ ಮತ್ತು ಸಂಘಟನೆಗೆ ಅಡಿಪಾಯ ಹಾಕಿದ ಅತ್ಯುತ್ತಮ ನಾಯಕ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯ  ಮತ್ತು ಅಖಿಲ ಭಾರತ ಕಿಸಾನ್‍ ಸಭಾದ ಅಧ್ಯಕ್ಷ ಡಾ.ಅಶೋಕ ಧವಳೆ ನೆನಪಿಸಿಕೊಂಡಿದ್ದಾರೆ. 1975-77ರವರೆಗಿನ ತುರ್ತು ಪರಿಸ್ಥಿತಿಯ ಅವಧಿಯಲ್ಲಿ 19 ತಿಂಗಳ ವರೆಗೆ ಬಂಧನದಲ್ಲಿದ್ದರು.

ಅವರ ಪತ್ನಿ ಶೋಭಾ ಪಡ್‍ಗಾಂವ್ಕರ್ ಕೂಡ ಮುಂಬೈನ ಸೋಫಿಯಾ ಮಹಿಳಾ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಶಿಕ್ಷಕಿಯಾಗಿದ್ದವರು. ಮತ್ತು ಅವರು ಸಮಾಜಶಾಸ್ತ್ರ ಮತ್ತು ಸಂಸ್ಕೃತ ಎರಡರಲ್ಲೂ ಎಂ.ಎ. ಪದವಿ ಪಡೆದಿದ್ದರು.

ಶಿಕ್ಷಕರ ಸಂಘಟನೆಯಲ್ಲಿ ತೊಡಗಿಸಿಕೊಂಡ ಅವರು ಮಹಾರಾಷ್ಟ್ರದಲ್ಲಿ ಒಬ್ಬ ಪ್ರಮುಖ ಸಿಪಿಐ(ಎಂ) ಮುಖಂಡರಾಗಿಯೂ ಬೆಳೆದರು. 1985 ರಲ್ಲಿ ಸಿಪಿಐ(ಎಂ) ರಾಜ್ಯ ಸಮಿತಿಗೆ ಮತ್ತು ನಂತರ 2008 ರಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿಗೆ ಚುನಾಯಿತರಾಗಿದ್ದ ಅವರು  ನಿಧನದ ವರೆಗೂ ರಾಜ್ಯ ಸಮಿತಿಗೆ ವಿಶೇಷ ಆಹ್ವಾನಿತರಾಗಿದ್ದರು. ಪಕ್ಷಕ್ಕೆ ಅವರ ಕೊಡುಗೆ ಬಹಳ ಮೌಲ್ಯಯುತ ಮತ್ತು ಬಹುಮುಖಿಯಾಗಿತ್ತು ಎಂದು ಡಾ.ಅಶೋಕ ಧವಳೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದ್ದಾರೆ.

ಇದನ್ನೂ ನೋಡಿ :

 

Donate Janashakthi Media

Leave a Reply

Your email address will not be published. Required fields are marked *