ಬರ್ಲಿನ್: ಜರ್ಮನಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಪ್ರವಾಹ ಎದುರಾಗಿದ್ದು ಇದುವರೆಗೆ 103 ಮಂದಿ ಮೃತಪಟ್ಟಿದ್ದಾರೆ. ಯುರೋಪ್ನಲ್ಲಿಯೂ ಸುರಿದ ಭಾರಿ ಮಳೆಗೆ ಸಾವಿಗೀಡಾದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ.
ಜರ್ಮನಿಯಲ್ಲಿ ಹಲವಾರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಜರ್ಮನಿಯ ರಹಿನೆಲ್ಯಾಂಡ್-ಪಾಲಟಿನೇಟ್ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದ್ದು, ಅಲ್ಲಿ ಈವರೆಗೆ 43 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ಇದುವರೆಗೆ 13 ಮಂದಿ ಸಾವು
ಜರ್ಮನಿಸಯ ಸೇನಾ ರಕ್ಷಣಾ ಪಡೆಯು ಹೆಲಿಕಾಪ್ಟರ್ ಹಾಗೂ ಬೋಟ್ಗಳ ಮುಖಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದ್ದಾರೆ. ಪರ್ವತ ಪ್ರದೇಶದ ಶ್ಲುಲ್ಡ್ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳು ಕುಸಿಯುವ ಹಂತದಲ್ಲಿವೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನಷ್ಟು ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ.
ಜರ್ಮನಿಯಲ್ಲಿ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಯಚಾರಣೆಗೆ ಅಡಚಣೆ ಉಂಟಾಗಿದೆ.
ರೈನ್ ನದಿ ಮತ್ತು ಅದರ ಉಪನದಿಗಳ ನೀರಿನ ಮಟ್ಟ ಅಪಾಯ ಮಟ್ಟ ಮೀರಿದೆ. ಪ್ರವಾಹಪೀಡಿತ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮತ್ತು ಕಲ್ಲು ಮಣ್ಣುಗಳನ್ನು ತೆರವುಗೊಳಿಸಲು ಸಹಾಯ ಮಾಡಲು ಸುಮಾರು 1,000 ಸೈನಿಕರನ್ನು ನಿಯೋಜಿಸಲಾಗಿದೆ.
ಬೆಲ್ಜಿಯಂನಲ್ಲಿಯೂ ಪ್ರವಾಹ ಹೆಚ್ಚಾಗಿದೆ. ಅಲ್ಲಿಯೂ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಾಲೆಂಡ್ನಲ್ಲಿ ಪ್ರವಾಹದಿಂದ ಅಪಾರ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ. ಲಕ್ಸಂಬರ್ಗ್ ಮತ್ತು ನೆದರ್ಲ್ಯಾಂಡ್ ದೇಶಗಳಲ್ಲೂ ಪ್ರವಾಹದ ತೀವ್ರತೆ ಹೆಚ್ಚಾಗಿದೆ. ಇಲ್ಲಿನ ತಗ್ಗು ಪ್ರದೇಶಗಳಲ್ಲಿದ್ದ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.