ಪೆಗಸಾಸ್‌ ಪ್ರಕರಣ: ವಿವರವಾದ ಪ್ರಮಾಣ ಪತ್ರ ಸಲ್ಲಿಸುವುದಿಲ್ಲವೆಂದ ಕೇಂದ್ರ

ನವದೆಹಲಿ: ಪೆಗಾಸಸ್ ಬೇಹುಗಾರಿಕೆ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ವಿವರವಾದಂತಹ ಪ್ರಮಾಣಪತ್ರವನ್ನು ಸಲ್ಲಿಸುವುದಿಲ್ಲ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿದೆ.

‘ಸದ್ಯ ಆದೇಶವನ್ನು ಕಾಯ್ದಿರಿಸಲಾಗಿದೆ. ವಿವರವಾದ ಪ್ರಮಾಣಪತ್ರವೇನಾದರೂ ಸಲ್ಲಿಸುವುದಾದರೆ ತಿಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವು ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು. ಅಲ್ಲದೆ, ಇನ್ನೆರಡು ಮೂರು ದಿನಗಳಲ್ಲಿ ಮಧ್ಯಂತರ ಆದೇಶ ಹೊರಡಿಸುತ್ತೇವೆ ಎಂದು ಪೀಠವು ಹೇಳಿದೆ.

ಇದನ್ನು ಓದಿ: ಪೆಗಾಸಸ್‌ ಆರೋಪಗಳಲ್ಲಿ ಸತ್ಯಾಂಶವಿದ್ದರೇ, ಅದು ಗಂಭೀರವಾದದ್ದೇ: ಸುಪ್ರೀಂ ಕೋರ್ಟ್

ಈ ವಿವಾದದಲ್ಲಿ ಅಡಗಿಸಿಡುವಂತಹ ವಿಚಾರವೇನೂ ಇಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರವು ತಿಳಿಸಿದೆ. ಅಲ್ಲದೆ, ತಜ್ಞರ ಸಮಿತಿಯ ವರದಿಯನ್ನು ಸುಪ್ರೀಂ ಕೋರ್ಟ್ ಮುಂದೆ ಇಡಲಾಗುವುದು. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದನ್ನೂ ಸರ್ಕಾರ ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಾಲಿಸಿಟರ್ ಜನರಲ್ ಮೆಹ್ತಾ ತಿಳಿಸಿದರು.

ರಾಷ್ಟ್ರೀಯ ಭದ್ರತೆಯ ಸಮಸ್ಯೆಗೂ ಪ್ರಸ್ತುತ ವಿಚಾರಣೆಗೂ ಸಂಬಂಧವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ  ಸ್ಪಷ್ಟಪಡಿಸಿದರು. “ರಾಷ್ಟ್ರೀಯ ಭದ್ರತೆ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಆಸಕ್ತಿ ಇಲ್ಲ, ಬದಲಿಗೆ ಕೆಲವು ಸಾಫ್ಟ್‌ವೇರ್‌ಗಳನ್ನು ವಕೀಲರಂತಹ ನಾಗರಿಕರ ವಿರುದ್ಧ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ತಿಳಿದುಕೊಳ್ಳಲು ಇಚ್ಛಿಸಿದ್ದೇವೆ. ಕಾನೂನಿನ ಅಡಿಯಲ್ಲಿ ಇದಕ್ಕೆ ಅನುಮತಿ ನೀಡಲಾಗಿದೆಯೇ ಎಂದು ತಿಳಿಯಲು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು.

‘ಸರ್ಕಾರ ಪ್ರಮಾಣಪತ್ರ ಸಲ್ಲಿಸಲು ಬಯಸುವುದಿಲ್ಲ ಎಂದು ನೀವು ಪದೇ ಪದೇ ಹೇಳುತ್ತಿದ್ದೀರಿ. ಈ ಎಲ್ಲಾ ವಿಷಯಗಳನ್ನು ಗಮನಿಸಿ ನಾವು ಮಧ್ಯಂತರ ಆದೇಶ ನೀಡಬೇಕಿದೆ’ ಎಂದು ಹೇಳಿದ ನ್ಯಾಯಪೀಠ, ‘ಮೆಹ್ತಾ ಅವರೇ, ನೀವು ಪೊದೆಯ ಸುತ್ತ ಹೊಡೆಯುತ್ತಿದ್ದೀರಿ, ಅದು ಇಲ್ಲಿ ಪ್ರಶ್ನೆಯಲ್ಲ’ ಎಂದು ಮಾರ್ಮಿಕವಾಗಿ ನುಡಿಯಿತು.

ಈ ಹಿಂದೆ ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರಕಾರವು ಸೀಮಿತವಾಗಿ ಪ್ರಮಾಣ ಪತ್ರವನ್ನು ಸಲ್ಲಿಸಿತ್ತು. ಆಗ ಪೆಗಾಸಸ್‌ ಬೇಹುಕಾರಿಕೆ ಕುರಿತಾದ ಆರೋಪಗಳು ಊಹೆಗಳು ಮತ್ತು ಆಧಾರರಹಿತ ಮಾಧ್ಯಮ ವರದಿಗಳ ಹಾಗೂ ದೃಢೀಕರಿಸದ ವಿಷಯಗಳ ಮೇಲೆ ಆಧರಿಸಿವೆ ಎಂದು ತಿಳಿಸಿತ್ತು.

Donate Janashakthi Media

Leave a Reply

Your email address will not be published. Required fields are marked *