“ಆಳುವವರ ಆರ್ಥಿಕ ಧೋರಣೆಗಳ ಮತ್ತು ಆಳ್ವಿಕೆಯ ವೈಫಲ್ಯವನ್ನು ಕಾರ್ಮಿಕ ಸಂಘಗಳ ತಲೆಗೆ ಕಟ್ಟಬೇಡಿ”

ದೇಶದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಯ ಬಗ್ಗೆ ಪರಾಮರ್ಶೆ ಮತ್ತು ಮರು ಯೋಚನೆ ನಡೆಸಬೇಕು-ಸಿಐಟಿಯು ಆಗ್ರಹ
ನವ-ಉದಾರವಾದವನ್ನು ಹೇಗಾದರೂ ಸಮರ್ಥಿಸ ಬೇಕು ಎಂದಿರುವವರತಾರ್ಕಿಕ ದಾವೆಗಳಿಗೆ  ವ್ಯತಿರಿಕ್ತವಾಗಿ,  ಕೈಗಾರಿಕಾ ಘಟಕಗಳನ್ನು ಮುಚ್ಚುವಂತೆ ಬಲವಂತ ಮಾಡುತ್ತಿರುವುದು, ದೇಶದ ಮುಖ್ಯ ನ್ಯಾಯಾಧೀಶರು ಭಾವಿಸಿರುವಂತೆ,  ಕಾರ್ಮಿಕ ಸಂಘಗಳ ಕೈಗಾರಿಕಾ ವಿವಾದಗಳಲ್ಲ. ತದ್ವಿರುದ್ಧವಾಗಿ, ಬಂಡವಾಳಶಾಹಿ ನವ-ಉದಾರವಾದಿ ವ್ಯವಸ್ಥೆಯೊಳಗಿನ ಬಿಕ್ಕಟ್ಟು ಮತ್ತು ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳು (MSME ಗಳು) ಹಾಗೂ ಒಟ್ಟಾರೆ ಉತ್ಪಾದಕ ಕ್ಷೇತ್ರದ ಹಿತಗಳನ್ನು ಬಲಿಗೊಟ್ಟು ನಡೆದಿರುವ ಅರ್ಥವ್ಯವಸ್ಥೆಯ ಲಂಗುಲಗಾಮಿಲ್ಲದ ಕೇಂದ್ರೀಕರಣ ಮತ್ತು  ಹಾಗೂ ವಿತ್ತೀಕರಣಗಳೇ ಹೆಚ್ಚುತ್ತಿರುವ ಕೈಗಾರಿಕಾ ಮುಚ್ಚಿಕೆಗಳಿಗೆ ಕಾರಣವಾಗಿವೆ. ವ್ಯವಸ್ಥೆಯ ಧೋರಣೆಗಳ   ಹಾಗೂ ಆರ್ಥಿಕ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಕಾರ್ಮಿಕ ಸಂಘಗಳನ್ನು ಯಾವುದೇ ರೀತಿಯಲ್ಲಿ ಬಲಿಪಶು ಮಾಡುವುದು ಸಾಧ್ಯವಿಲ್ಲ  ಎಂದು ಅಂಕಿ-ಅಂಶಗಳನ್ನು ಉಲ್ಲೇಖಿಸುತ್ತ ಸಿಐಟಿಯು ಜನವರಿ 29ರಂದು ನೀಡಿರುವ ಹೇಳಿಕೆಯಲ್ಲಿ  ತಿಳಿಸಿದೆ. ಆಳುವವರ

“ದೇಶದಲ್ಲಿ ಎಷ್ಟು ಉದ್ದಿಮೆ ಘಟಕಗಳು ಕಾರ್ಮಿಕ ಸಂಘಗಳ ಕೃಪೆಯಿಂದಾಗಿ ಮುಚ್ಚಿಹೋಗಿವೆ?  ವಾಸ್ತವತೆಗಳನ್ನು ತಿಳಿಯೋಣ . ದೇಶದಲ್ಲಿನ ಎಲ್ಲ ಪಾರಂಪರಿಕ ಉದ್ದಿಮೆಗಳು, ಎಲ್ಲವೂ ಈ ಝಂಡಾ ಯೂನಿಯನ್‍ಗಳಿಂದಾಗಿ ದೇಶದಾದ್ಯಂತ ಮುಚ್ಚಿವೆ. ಕೆಲಸ ಮಾಡುವುದು ಅವರಿಗೆ ಬೇಕಿಲ್ಲ.  ಕಾರ್ಮಿಕ ಸಂಘಗಳ ಮುಖಂಡರು, ಅವರು ಬಹುಪಾಲು ಉದ್ದಿಮೆಗಳ ಬೆಳವಣಿಗೆ ನಿಲ್ಲಲು ಹೊಣೆಗಾರರು”!

ಇಂತಹ ಮಾತುಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ.ಹೆಚ್ಚಾಗಿ ಇವು ಉದ್ಯಮಿಗಳ, ಅದರಲ್ಲೂ ಲಾಭಗಳಿಕೆಗಾಗಿಯೇ ಎಲ್ಲವೂ ಎಂದು ಭಾವಿಸುವ ಉದ್ಯಮಿಗಳ  ಮತ್ತು  ‘ಉದ್ಯೋಗದಾತರು’ ಎನಿಸಿಕೊಂಡವರ ಬಾಯಿಂದ ಕೇಳುವ ಮಾತುಗಳು. ಆದರೆ ಈ ಮೇಲಿನ ಉದ್ಗಾರ ಕೇಳಬಂದದ್ದು ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶ(ಸಿಜೆಐ)ರ ಬಾಯಿಂದ. ಜನವರಿ 29ರಂದು ಪೆನ್ನ್ ತೋಳಿಲ್ಲಾರ್ಗಳ್ ಸಂಘಂ  vs ಭಾರತ  ಒಕ್ಕೂಟ  (W.P.(C) No. 42/2026) ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‍) ವಿಚಾರಣೆಯ ವೇಳೆ ಅವರು ಈ ರೀತಿ ಟಿಪ್ಪಣಿ ಮಾಡಿದರು ಎಂದು ವರದಿಯಾಗಿದೆ.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನೆಗೆಲಸ ಮಾಡುವವರಿಗೆ ಕಲ್ಯಾಣ ಕ್ರಮಗಳು ಮತ್ತು ಕನಿಷ್ಟ ಸಂಬಳ ರಕ್ಷಣೆ ಬೇಕೆಂದು ಕೇಳಲಾಗಿದೆ.ಈ ಬಗ್ಗೆ ಟಿಪ್ಪಣಿಮಾಡುತ್ತ ಮುಖ್ಯ ನ್ಯಾಯಮೂರ್ತಿಗಳು ಕನಿಷ್ಟ ಸಂಬಳವನ್ನು ನಿಗದಿಪಡಿಸುವುದು, ಅದರಲ್ಲೂ ಮನೆಗೆಲಸದಂತಹ ಕ್ಷೇತ್ರಗಳಲ್ಲಿ, ಮಾಲಕರು  ಕೆಲಸಗಾರರನ್ನು ನೇಮಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುವಂತೆ ಮಾಡುತ್ತದೆ. ಆ ಮೂಲಕ ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಅಡ್ಡಿ-ಆತಂಕಗಳನ್ನು ಸೃಷ್ಟಿಸುತ್ತದೆ. ಮನೆಗೆಲಸದವರಿಗೆ ಬೇಡಿಕೆಯನ್ನು ಕುಂದಿಸಬಹುದು ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಮನೆಗೆಲಸದವರನ್ನು ನೇಮಿಸಿಕೊಳ್ಳುವುದು ಸಾಧ್ಯವಾಗದಂತೆ ಮಾಡಬಹುದು  ಎಂದು  ಹೇಳಿರುವುದಾಗಿಯೂ ವರದಿಯಾಗಿದೆ.

ದೇಶದ ಮುಖ್ಯ ನ್ಯಾಯಾಧೀಶರ  ಉದ್ಗಾರಗಳಿಗೆ ಕಾರ್ಮಿಕ ಮುಖಂಡರು ಮಾತ್ರವಲ್ಲ, ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆಯಿರುವವರೂ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿಯವರ ಹೇಳಿಕೆ ಅತ್ಯಂತ ದುರದೃಷ್ಟಕರ ಹಾಗೂ ಸಂವಿಧಾನ ವಿರೋಧಿ ಎಂದಿರುವ ದೇಶದ ಒಂದು ಪ್ರಮುಖ ಕೇಂದ್ರೀಯ ಕಾರ್ಮಿಕ ಸಂಘಟನೆ ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಎಳಮಾರಂ ಕರೀಮ್ , ಇದು ಸಂಪೂರ್ಣವಾಗಿ ವಾಸ್ತವ ಸಂಗತಿಯಿಂದ  ದೂರವಾಗಿರುವ ಹೇಳಿಕೆ ಎಂದಿದ್ದಾರೆ. ಮುಖ್ಯ ನ್ಯಾಯಾಧೀಶರು ವಾಸ್ತವತೆಗಳನ್ನು ತಿಳಿಯೋಣ ಎಂದಿದ್ದಾರೆ. ಸಿಐಟಿಯು ಪ್ರಧಾನ ಕಾರ್ಯದರ್ಶಿಗಳು ಇದಕ್ಕೆ ಲೇಬರ್ ಬ್ಯುರೋದ ವರದಿಗಳನ್ನು ತಮ್ಮ ಪ್ರತ್ಯುತ್ತರದ ಹೇಳಿಕೆಯಲ್ಲಿ  ಉಲ್ಲೇಖಿಸುತ್ತಾರೆ.

ಇದನ್ನೂ ಓದಿ : ವಿಬಿ-ಜಿರಾಮ್ (ಜಿ): “ಸಮರ್ಥಿಸಿಕೊಳ್ಳಲಾಗದನ್ನು ಸಮರ್ಥಿಸಿಕೊಳ್ಳಲು ಈಗ ಕೃಷಿ ಸಚಿವರ ಜುಮ್ಲಾಗಳು”

ಉದ್ದಿಮೆಗಳು ಮುಚ್ಚುವಂತಾಗುತ್ತಿರುವುದು ಏಕೆ?

“ಭಾರತದಲ್ಲಿ ಕೈಗಾರಿಕಾ ವಿವಾದಗಳು, ಮುಚ್ಚಿಕೆಗಳು, ರಿಟ್ರೆಂಚ್‍ಮೆಂಟ್‍ಗಳು ಮತ್ತು ಲೇ-ಆಫ್‌ಗಳು” ಕುರಿತ ಲೇಬರ್‍ ಬ್ಯೂರೋ ಪ್ರಕಟಿಸುವ ವರದಿಗಳು ಈ ವಿಷಯದ ಅತ್ಯಂತ ಸಮಗ್ರ ಹಾಗೂ ವಸ್ತುನಿಷ್ಠ ದತ್ತಾಂಶ ಮೂಲಗಳಾಗಿವೆ. ಈ ದತ್ತಾಂಶಗಳನ್ನು ನಿಕಟವಾಗಿ ಪರಿಶೀಲಿಸಿದರೆ, ಕೈಗಾರಿಕಾ ವಿವಾದಗಳಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ;

  • ಕೈಗಾರಿಕಾ ವಿವಾದಗಳ ಸಂಖ್ಯೆ 2023ರಲ್ಲಿ 17 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಸೆಪ್ಟೆಂಬರ್ 2023ರ ತನಕ ಕೇವಲ 30 ವಿವಾದಗಳು ಮಾತ್ರ ವರದಿಯಾಗಿವೆ.
  • ಇದನ್ನು 2006, 2007 ಮತ್ತು 2008ರ ಸಂಖ್ಯೆಗಳೊಂದಿಗೆ ಹೋಲಿಸಿ ನೋಡಿದರೆ ತೀವ್ರ ವ್ಯತ್ಯಾಸ ಎದ್ದು ಕಾಣುತ್ತದೆ. 2006ರಲ್ಲಿ ಅದು ಗರಿಷ್ಟ ಮಟ್ಟ ತಲುಪಿತ್ತು-430 ವಿವಾದಗಳು.  2008ರಲ್ಲಿ 421 ಮತ್ತು 2007ರಲ್ಲಿ 389 ವಿವಾದಗಳು ದಾಖಲಾಗಿದ್ದವು.
  • 2006ರಿಂದ 2014ರ ವರೆಗೆ ಕೈಗಾರಿಕಾ ವಿವಾದಗಳ ಸರಾಸರಿ ಸಂಖ್ಯೆ 354 ಆಗಿದ್ದರೆ, 2015ರಿಂದ 2023ರ ನಡುವೆ ಅದು ತೀವ್ರವಾಗಿ ಕುಸಿದು ಕೇವಲ 76ಕ್ಕೆ ಇಳಿದಿದೆ.
  • ವಾಸ್ತವವಾಗಿ, 2018ರಿಂದ ಪ್ರತಿವರ್ಷವೂ ಕೈಗಾರಿಕಾ ವಿವಾದಗಳ ಒಟ್ಟು ಸಂಖ್ಯೆ 100ಕ್ಕಿಂತ ಕಡಿಮೆಯಾಗಿದೆ.
  • ಜೊತೆಗೆ, ದೇಶದ ವಿವಿಧ ರಾಜ್ಯಗಳಲ್ಲಿ ಕಾನೂನುಬದ್ಧವಾಗಿಯೂ, ಅಕ್ರಮವಾಗಿಯೂ ನಡೆಯುವ ಕೈಗಾರಿಕಾ ಮುಚ್ಚಿಕೆಗಳ ಪ್ರಕರಣಗಳನ್ನು ನಿಕಟವಾಗಿ ಪರಿಶೀಲಿಸಿದರೆ, ಕಾರ್ಮಿಕ ಚಳವಳಿ ದುರ್ಬಲವಾಗಿರುವ ಅಥವಾ ಕನಿಷ್ಟ ಮಟ್ಟದಲ್ಲಿರುವ ರಾಜ್ಯಗಳಲ್ಲಿಯೇ ಮುಚ್ಚಿಕೆಗಳ ಪ್ರಮಾಣ ಹೆಚ್ಚಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

ಇನ್ನೊಂದು ಕಡೆ, ಇತ್ತೀಚಿನ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷ್ ಮಲ್ಹೋತ್ರ ಅವರು, ವಿಲೀನ, ಪರಿವರ್ತನೆ, ವಿಸರ್ಜನೆ ಅಥವಾ ಕಂಪನಿಗಳ ಕಾಯ್ದೆ, 2013ರ ಅಡಿಯಲ್ಲಿ  ತೆಗೆದು ಹಾಕಿರುವ ಕಾರಣದಿಂದ ಐದು ವರ್ಷಗಳಲ್ಲಿ 2,04,268 ಖಾಸಗಿ ಕಂಪನಿಗಳು ಮುಚ್ಚಲ್ಪಟ್ಟಿವೆ ಎಂದು ಹೇಳಿರುವುದನ್ನು ಸಿಐಟಿಯು ಮುಖಂಡರು ನೆನಪಿಸುತ್ತಾರೆ. ಇಷ್ಟೇ ಅಲ್ಲ, ಭಾರತದ ಹಣಕಾಸಿನ ದಿವಾಳಿತನ ಮತ್ತು ದಿವಾಳಿ ಮಂಡಳಿ (IBBI) ಯ ಅಂಕಿಅಂಶಗಳೂ ಇದನ್ನು ಸಾಬೀತು ಪಡಿಸುತ್ತವೆ. ಈ ಅಂಕಿ-ಅಂಶಗಳು ಕೈಗಾರಿಕಾ ಮುಚ್ಚಿಕೆಗಳ ಸ್ವರೂಪ ಹಾಗೂ ಕಾರಣಗಳು ಮತ್ತು ಸಾಲಕೊಟ್ಟ ಸಾರ್ವಜನಿಕ ವಲಯದ ಬ್ಯಾಂಕುಗಳು ಆ ಸಾಲಗಳಲ್ಲಿ ಎಷ್ಟನ್ನು (ಶೇಕಡಾ) ವಸೂಲಿ ಮಾಡಲು ಸಾಧ್ಯವಾಗಿದೆ  ಎಂಬುದನ್ನು ತೋರಿಸುತ್ತವೆ ಎಂದು ಸಿಐಟಿಯು ಪರವಾಗಿ ನೀಡಿರುವ ಹೇಳಿಕೆಯಲ್ಲಿ ಎಳಮಾರಂ ಕರೀಮ್‍ ಹೇಳುತ್ತಾರೆ.

ಸರಕಾರದ ದತ್ತಾಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸರಾಸರಿ ಕೈಗಾರಿಕಾವಿವಾದಗಳ ಸಂಖ್ಯೆ 100ಕ್ಕಿಂತ ಕಡಿಮೆ ಇದೆ. ಆದರೆ ಮುಚ್ಚಿದ ಕೈಗಾರಿಕೆಗಳ ಸಂಖ್ಯೆ 40,000ಕ್ಕಿಂತ ಹೆಚ್ಚಿವೆ.

ಆದ್ದರಿಂದ,   ಉದ್ದಿಮೆಗಳು ಮುಚ್ಚುವಂತೆ ಬಲವಂತ ಮಾಡುತ್ತಿರುವುದು ಬಂಡವಾಳಶಾಹಿ ನವ-ಉದಾರವಾದಿ ವ್ಯವಸ್ಥೆಯೊಳಗಿನ ಬಿಕ್ಕಟ್ಟು ಮತ್ತು ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳು (MSME ಗಳು) ಹಾಗೂ ಒಟ್ಟಾರೆ ಉತ್ಪಾದಕ ಕ್ಷೇತ್ರದ ಹಿತಗಳನ್ನು ಬಲಿಗೊಟ್ಟು ನಡೆದಿರುವ ಅರ್ಥವ್ಯವಸ್ಥೆಯ ಲಂಗುಲಗಾಮಿಲ್ಲದ ಕೇಂದ್ರೀಕರಣ ಮತ್ತು  ಹಾಗೂ ವಿತ್ತೀಕರಣಗಳೇ ಹೊರತು, ಕಾರ್ಮಿಕ ಸಂಘಗಳ ಕೈಗಾರಿಕಾ ವಿವಾದಗಳಲ್ಲ. ಆಳುವ ವ್ಯವಸ್ಥೆಯ ಧೋರಣೆಗಳ   ಹಾಗೂ ಆರ್ಥಿಕ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಅತಾರ್ಕಿಕ ದಾವೆಗಳ ಮೂಲಕ ಕಾರ್ಮಿಕ ಸಂಘಗಳನ್ನು ಯಾವುದೇ ರೀತಿಯಲ್ಲಿ ಬಲಿಪಶು ಮಾಡುವುದು ಸರಿಯಲ್ಲ; ದುರದೃಷ್ಟವಶಾತ್, ಮುಖ್ಯ ನ್ಯಾಯಮೂರ್ತಿಗಳ  ಮಾತುಗಳು ಈಗಾಗಲೇ ವಿಫಲವಾಗಿರುವ ನವ-ಉದಾರವಾದಿ ನೀತಿಗಳ ಪ್ರತಿಪಾದಕರ ಮಾತುಗಳನ್ನೇ ಹೋಲುವಂತೆ ಕಾಣುತ್ತಿದೆ. ಇನ್ನಷ್ಟು ಮುಜುಗರದ ಸಂಗತಿಯೆಂದರೆ, ಆ ಹೇಳಿಕೆಯಲ್ಲಿ ಮುಂದಿಟ್ಟ ತರ್ಕಕ್ಕೆ ಗಟ್ಟಿ ಸೈದ್ಧಾಂತಿಕ ನೆಲೆಯೂ ಇಲ್ಲ, ಪ್ರಾಯೋಗಿಕ ಮಾನ್ಯತೆಯೂ ಇಲ್ಲ ಎಂದು ಈ ಅಂಕಿ-ಅಂಶಗಳ ಆಧಾರದಲ್ಲಿ ಸಿಐಟಿಯು ತನ್ನ ಪ್ರತ್ಯುತ್ತರದಲ್ಲಿ ಹೇಳಿದೆ.

ಫೆಬ್ರುವರಿ 12ರ ಸಾರ್ವತ್ರಿಕ ಮುಷ್ಕರದ ಸಂದರ್ಭದಲ್ಲಿ…

ಗಮನಾರ್ಹ ಸಂಗತಿಯೆಂದರೆ, ನಾಲ್ಕು ಕಾರ್ಮಿಕ ಸಂಹಿತೆಗಳ ಹೇರಿಕೆಗೆ ವಿರೋಧವಾಗಿ, ಬಹುತೇಕ ಸಂಪೂರ್ಣ ಕಾರ್ಮಿಕ ಚಳವಳಿಯ ಸಂಯುಕ್ತ ವೇದಿಕೆ ಕರೆ ನೀಡಿರುವ ಫೆಬ್ರವರಿ 12ರ ಸಾರ್ವತ್ರಿಕ ಮುಷ್ಕರದತ್ತ ದೇಶ ಸಾಗುತ್ತಿರುವ ಸಮಯದಲ್ಲಿಯೇ ಈ ಹೇಳಿಕೆ ಬಂದಿದೆ. ಈ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕರ ಸಂಘ ರಚಿಸುವ ಇರುವ ಹಕ್ಕನ್ನು ದುರ್ಬಲಗೊಳಿಸುವುದು ಹಾಗೂ ಉದ್ಯೋಗದಾತ ವರ್ಗದ ದಾಳಿಗಳ ಎದುರು ಕಾರ್ಮಿಕರನ್ನು ರಕ್ಷಣೆ ಇಲ್ಲದವರಾಗಿಸುವುದೇ ‘ಸುಗಮ ವ್ಯವಹಾರ‘ (Ease of Doing Business)ದತ್ತ  ಇರುವ ಏಕೈಕ ಮಾರ್ಗ ಎಂಬ ದೃಷ್ಟಿಕೋಣದಿಂದಲೇ ವಿನ್ಯಾಸಗೊಳಿಸಲಾಗಿದೆ. ಇದು ಅನುಚಿತವಾದ ಸಿದ್ಧಾಂತ ಎಂಬುದನ್ನು  ಭಾರತೀಯ ಕಾರ್ಮಿಕ ವರ್ಗ ದೃಢವಾಗಿ ಸ್ಥಾಪಿಸಿದೆ. ಸಿಜೆಐ ರವರ ಹೇಳಿಕೆ ಮೋದಿ ಸರ್ಕಾರದ ರಾಜಕೀಯ–ಆರ್ಥಿಕ ಅತಾರ್ಕಿಕತೆಯನ್ನೇ ಬಿಂಬಿಸಿರುವುದು ಬಹಳ ದುಃಖದ ಸಂಗತಿ ಎಂದು ಸಿಐಟಿಯು ಖೇದ ವ್ಯಕ್ತಪಡಿಸಿದೆ.

ವಿಶೇಷವಾಗಿ, ಸಂವಿಧಾನದ ಸಂರಕ್ಷಕರಾಗಿರಬೇಕಾದವರಿಂದ  ಇಂತಹ ಹೇಳಿಕೆ ಬಂದಿರುವುದು ಸಂಘಟನೆಯ ಮೂಲಭೂತ ಸಂವಿಧಾನಾತ್ಮಕ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ಸಿಐಟಿಯು ಬೊಟ್ಟುಮಾಡಿ ಹೇಳಿದೆ . ದೇಶದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು  ನಿಲ್ಲಿಸಲು ಕಾರ್ಮಿಕ ಸಂಘಗಳ ನಾಯಕರು ಬಹುಮಟ್ಟಿಗೆ ಹೊಣೆಗಾರರು ಎಂದು ದೂಷಿಸುವ ಹೇಳಿಕೆಯನ್ನು ನೆಲಮಟ್ಟದ ವಾಸ್ತವಾಂಶಗಳು ಯಾವುದೇ ರೀತಿಯಲ್ಲೂ ಸಮರ್ಥಿಸುವುದಿಲ್ಲ. ಭಾರತೀಯ ಕಾರ್ಮಿಕರಿಗೆ ಸಂಘಟನೆಯ ಹಕ್ಕು ಭಾರತೀಯ ಸಂವಿಧಾನದ ವಿಧಿ 19(1)(c) ಅಡಿಯಲ್ಲಿ ಭರವಸೆ ನೀಡಲ್ಪಟ್ಟ ಮೂಲಭೂತ ಹಕ್ಕಾಗಿದೆ. ಈ ಹಕ್ಕು 1926ರ ಕಾರ್ಮಿಕ ಸಂಘಗಳ ಕಾಯ್ದೆ (ಮತ್ತು ನಂತರದ ತಿದ್ದುಪಡಿಗಳು) ಮೂಲಕ ನಿಯಂತ್ರಿಸಲ್ಪಡುತ್ತದೆ; ಈ ಕಾಯ್ದೆ ಸಂಘಗಳ ನೋಂದಣಿ ಹಾಗೂ ಸಂಘಗಳ ಚಟುವಟಿಕೆಗಳಿಗೆ ಕಾನೂನು ರಕ್ಷಣೆಯನ್ನು ಒದಗಿಸುತ್ತದೆ. ಇದು ಸಾಮೂಹಿಕ ಚೌಕಾಶಿ ಹಾಗೂ ಕಾರ್ಮಿಕರ ಹಿತಾಸಕ್ತಿಗಳ ಪ್ರಾತಿನಿಧ್ಯಕ್ಕೆ ಅನುವು ಮಾಡಿಕೊಡುತ್ತದೆ.

ಮುಂಬರುವ ಫೆಬ್ರವರಿ 12ರ ಸಾರ್ವತ್ರಿಕ ಮುಷ್ಕರವು, ಭಾರತೀಯ ಜನತೆ ಕಷ್ಟಪಟ್ಟು ಗಳಿಸಿರುವ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಮಾತ್ರವಲ್ಲ, ವಿಕೃತ ಆರ್ಥಿಕ ವ್ಯವಸ್ಥೆ ಮತ್ತು ಆಡಳಿತದಿಂದ ರಾಷ್ಟ್ರೀಯ ಅರ್ಥವ್ಯವಸ್ಥೆಯನ್ನು ರಕ್ಷಿಸಿ ಉಳಿಸುವುದಕ್ಕೂ ಆಗಿದೆ. ಕಾರ್ಮಿಕ ವರ್ಗಕ್ಕೆ ಸಂಸ್ಥೆಗಳ ಅಥವಾ ಸರ್ಕಾರಗಳ ದಯೆಯಿಂದ ಎಂದೂ ಏನೂ ದೊರಕಿಲ್ಲ; ಕೇವಲ ಕಾರ್ಮಿಕರಿಗಾಗಿ ಮಾತ್ರವಲ್ಲ, ಸಮಗ್ರ ಜನತೆ ಮತ್ತು ಸಮಾಜದ ಹಿತಕ್ಕಾಗಿ ಹೋರಾಟಗಳು ಮತ್ತು ತ್ಯಾಗಗಳ ಮೂಲಕವೇ ಹಕ್ಕುಗಳನ್ನು ಗಳಿಸಿರುವುದು ಮತ್ತು ರಕ್ಷಿಸಿಕೊಂಡಿರುವುದು.

ಬದಲಾಗುತ್ತಿರುವ ಪ್ರಭುತ್ವ ಸ್ವರೂಪ

ನಾಲ್ಕು ಕಾರ್ಮಿಕ ಸಂಹಿತೆಗಳಾಗಲಿ, ಶ್ರಮ ಶಕ್ತಿ ನೀತಿಯಾಗಲಿ, MGNREGA ಯನ್ನು ಕಳಚಿ ಹಾಕಿದ್ದಾಗಲೀ, ಖಾಸಗಿ ಲಾಭಕ್ಕಾಗಿ ದೇಶದ ಸಂಪನ್ಮೂಲಗಳನ್ನು ಕಿತ್ತುಕೊಳ್ಳುವುದನ್ನು ತ್ವರಿತಗೊಳಿಸುವ ವಿವಿಧ ಪ್ರೋತ್ಸಾಹಕ ಕಾರ್ಯಕ್ರಮಗಳಾಗಲಿ, ಶಾಸನಗಳಾಗಲಿ — ಇವೆಲ್ಲವೂ ಬಂಡವಾಳದ ಪರವಾಗಿ ಭಾರತೀಯ ಪ್ರಭುತ್ವವನ್ನು ಆಕ್ರಾಮಕವಾಗಿ ಪುನರ್ರಚಿಸುವ ಹಾಗೂ ಭಾರತೀಯ ಸಂವಿಧಾನದಲ್ಲಿ ಕಂಡರಿಸಿದ ಕಲ್ಯಾಣ ಪ್ರಭುತ್ವ ತ್ವರಿತವಾಗಿ  ಕ್ಷಯಗೊಳ್ಳುತ್ತಿರುವುದರ  ಭಾಗಗಳಾಗಿವೆ. ಈ ಹೇಳಿಕೆ ಭಾರತೀಯ ಪ್ರಭುತ್ವದ ಬದಲಾಗುತ್ತಿರುವ ಸ್ವರೂಪವನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಬಯಲಿಗೆ ತರುತ್ತಿದೆ ಎಂದು ಸಿಐಟಿಯು ವಿಶ್ಲೇಷಿಸಿದೆ.

“ಗೌರವಾನ್ವಿತ ಮುಖ್ಯ ನ್ಯಾಯಾಧೀಶರು, ಮನೆಕೆಲಸ ಮಾಡುವವರಿಗೆ ಕನಿಷ್ಠ ಸಂಬಳದ ಕೋರಿಕೆಯನ್ನು  ಕೂಡ ಲೇವಡಿ ಮಾಡಿದ್ದಾರೆ. ಆದರೆ, ಅನೇಕ ರಾಜ್ಯಗಳಲ್ಲಿ ಮನೆಕೆಲಸ ಮಾಡುವವರಿಗೆ ಕನಿಷ್ಠ ವೇತನಗಳನ್ನು ನಿಗದಿ ಮಾಡಿ  ಈಗಾಗಲೇ ಜಾರಿಯಲ್ಲಿರುವಾಗ, ಅವರು ತಮ್ಮ ಹೇಳಿಕೆಯನ್ನು ಪರಾಮರ್ಶಿಸಬೇಕು ಮತ್ತು ಮರುಆಲೋಚನೆಗೆ ಒಳಪಡಿಸಬೇಕುಎಂದೂ ಸಿಐಟಿಯು ಆಗ್ರಹಿಸಿದೆ.

ಕೇಂದ್ರ ಕಾರ್ಮಿಕ ಸಂಘಗಳು ಕರೆ ನೀಡಿರುವ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ವೇದಿಕೆ ಬೆಂಬಲಿಸಿರುವ ಮುಂಬರುವ ಫೆಬ್ರವರಿ 12ರ ಸಾರ್ವತ್ರಿಕ ಮುಷ್ಕರವು, ಭಾರತೀಯ ಜನತೆ ಕಷ್ಟಪಟ್ಟು ಗಳಿಸಿರುವ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಮಾತ್ರವಲ್ಲ, ವಿಕೃತ ಆರ್ಥಿಕ ವ್ಯವಸ್ಥೆ ಮತ್ತು ಆಡಳಿತದಿಂದ ರಾಷ್ಟ್ರೀಯ ಅರ್ಥವ್ಯವಸ್ಥೆಯನ್ನು ರಕ್ಷಿಸಿ ಉಳಿಸುವುದಕ್ಕೂ ಆಗಿದೆ ಎಂದು ಪುನರುಚ್ಛರಿಸುವುದಾಗಿ ಸಿಐಟಿಯು ಈ ಸಂದರ್ಭದಲ್ಲಿ ಹೇಳಿದೆ. ಕಾರ್ಮಿಕ ವರ್ಗಕ್ಕೆ ಸಂಸ್ಥೆಗಳ ಅಥವಾ ಸರ್ಕಾರಗಳ ದಯೆಯಿಂದ ಎಂದೂ ಏನೂ ದೊರಕಿಲ್ಲ; ಕೇವಲ ಕಾರ್ಮಿಕರಿಗಾಗಿ ಮಾತ್ರವಲ್ಲ, ಸಮಗ್ರ ಜನತೆ ಮತ್ತು ಸಮಾಜದ ಹಿತಕ್ಕಾಗಿ.ಹೋರಾಟಗಳು ಮತ್ತು ತ್ಯಾಗಗಳ ಮೂಲಕವೇ ಹಕ್ಕುಗಳನ್ನು ಗಳಿಸಿರುವುದು ಮತ್ತು ರಕ್ಷಿಸಿಕೊಂಡಿರುವುದು ಎಂದು ಸಿಐಟಿಯು ದೇಶದ ಮುಖ್ಯ ನ್ಯಾಯಾಧೀಶರ ಹೇಳಿಕೆಯ ಹಿನ್ನೆಲೆಯಲ್ಲಿ ಒತ್ತಿ ಹೇಳಿದೆ.

ಇದನ್ನೂ ನೋಡಿ : ಗೋಡ್ಸೆಯ 8 ಪುಟದ ಹೇಳಿಕೆ 200 ಪುಟ ಮೀರಿದ್ದು ಹೇಗೆ? ನವ ಹಿಂದುತ್ವದ ಅಂಗಡಿ ಬಂದ್ ಮಾಡುವುದು ಹೇಗೆ?

 

Donate Janashakthi Media

Leave a Reply

Your email address will not be published. Required fields are marked *