ಬ್ಲ್ಯಾಕ್‌ಮೇಲ್‌ಗಳಿಗೆ ಹೆದರಲ್ಲ,ಕೆಲಸ ಮಾಡಿದವರ ಬಿಲ್‌ ಪಾವತಿ ಆಗಲಿದೆ:ಡಿ.ಕೆ.ಶಿವಕುಮಾರ್‌

ಬೆಂಗಳೂರು: ಸರಿಯಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಆಗಲಿದೆ. ಯಾವ ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಎಂದೂ ನನಗೆ ಗೊತ್ತಿದೆ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಬ್ಲ್ಯಾಕ್‌ ಮೇಲ್‌ಗಳಿಗೆಲ್ಲ ಈ ಡಿ.ಕೆ.ಶಿವಕುಮಾರ್‌ ಹೆದರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬಿಲ್‌ ಹಣ ಬಿಡುಗಡೆಗೆ ಡಿ.ಕೆ.ಶಿವಕುಮಾರ್‌ ದುಡ್ಡು ಕೇಳಿದ್ದಾರೆ, ಈ ಬಗ್ಗೆ ಅವರು ನಂಬಿರುವ ಅಜ್ಜನ ಮೇಲೆ ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರರು ಹೇಳಿದ್ದಾರಲ್ಲ ಎಂಬ ಬಗ್ಗೆ ಸುದ್ದಿಗಾರರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ಪ್ರಜ್ಞೆ ಇದೆ, ರಾಜಕೀಯ ಗೊತ್ತಿದೆ. ಗುತ್ತಿಗೆದಾರರೂ ಗೊತ್ತಿದ್ದಾರೆ. ಅವರ ಹಿಂದೆ ಯಾರಿದ್ದಾರೆ,ಯಾರು ಇದನ್ನು ಹೇಳಿಸುತ್ತಿದ್ದಾರೆ ಎಂದೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರು ಏನು ಬೇಕಾದರೂ ಮಾಡಿಕೊಳ್ಳಲಿ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಈ ರೀತಿಯ ಬೆದರಿಕೆ,ಬ್ಲ್ಯಾಕ್‌ಮೇಲ್‌ಗಳಿಗೆ ಜಗ್ಗುವುದಿಲ್ಲ ಎಂದರು. ರಾಜ್ಯಪಾಲರಿಗೆ ಪತ್ರ ಕೊಡುವುದು, ರಾಷ್ಟ್ರಪತಿಗೆ ಪತ್ರ ಕೊಡುವುದು,ಪ್ರಧಾನಿಯವರನ್ನು ಭೇಟಿ ಆಗುವುದು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು. ನಿಮ್ಮ ಮೇಲೆ ಒತ್ತಡ ಹಾಕಲು ಈ ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ನನಗೆ ಯಾವ ಒತ್ತಡ ಇದೆ, ಯಾರು ಒತ್ತಡ ಹಾಕುತ್ತಾರೆ, ಯಾರು ಹೆದರಿಸುತ್ತಾರೆ. ನನಗೇ ಹೆದರಿಸಲು ಆಗುತ್ತದೆಯೇ? ಯಾವುದೇ ಒತ್ತಡ ಬರಲಿ, ಅದನ್ನು ತಡೆದುಕೊಳ್ಳುವ ಶಕ್ತಿ ನನಗಿದೆ. ಈ ಗುತ್ತಿಗೆದಾರರ ವಿಚಾರಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ರೈತರ ಬೇಡಿಕೆ ಮೇರೆಗೆ ತುಂಗಭದ್ರಾದಿಂದ 5,575 ಕ್ಯೂಸೆಕ್ಸ್‌ ನೀರು ಹರಿಸಲು ಒಪ್ಪಿಗೆ :ಡಿ.ಕೆ.ಶಿವಕುಮಾರ್

ಕುಮಾರಸ್ವಾಮಿ ಅವರನ್ನು ಗುತ್ತಿಗೆದಾರರು ಯಾವ ಕಾರಣಕ್ಕೆ ಭೇಟಿ ಮಾಡಿದ್ದರು ಎಂಬ ಪ್ರಶ್ನೆಗೆ, ಮಾಡಲಿ ಬಿಡಿ, ನಾವು ವಿರೋಧ ಪಕ್ಷದಲ್ಲಿ ಇದ್ದಿದ್ದರೆ, ನಮ್ಮನ್ನೂ ಕೂಡ ಭೇಟಿ ಮಾಡುತ್ತಿರಲಿಲ್ಲವೇ? ಇದನ್ನು ತಪ್ಪು ಎಂದು ಹೇಳಲಿ ಆಗುತ್ತದೆಯೇ? ಇದು ಅತ್ಯಂತ ಸಾಮಾನ್ಯ ಸಂಗತಿ.ರಾಜಕಾರಣಿಗಳು, ವಿರೋಧ ಪಕ್ಷಗಳು ಇರುವುದೇ ಇಂತಹ ಕೆಲಸ ಮಾಡಲು. ಮಾಡಲಿ ಬಿಡಿ ಎಂದು ಉತ್ತರಿಸಿದರು.

ಒಂದಷ್ಟು ಜನ ಗುತ್ತಿಗೆದಾರರು ಗುಂಪು ಕಟ್ಟಿಕೊಂಡು ಸರ್ಕಾರದ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಏನಾದರೂ ಎತ್ತಿಕಟ್ಟಲಿ,ಏನು ಬೇಕಾದರೂ ಮಾಡಲಿ,ನಾನು ಯಾರಿಗೂ ಪ್ರಮಾಣ ಮಾಡಬೇಕಾಗಿಲ್ಲ. ಕಾನೂನು ಏನು ಹೇಳಿದೆಯೋ ಅದೇ ಉತ್ತರ. ಕೆಲಸ ಮಾಡಿದ್ದರೆ ಬಿಲ್‌ ಕೊಡುತ್ತೇವೆ,ಕೆಲಸ ಮಾಡಲಿಲ್ಲವೆಂದರೆ ಬಿಲ್‌ ಕೊಡುವುದಿಲ್ಲ. ಇವತ್ತು ಅರ್ಜಿ ಕೊಟ್ಟರು, ನಾಳೆ ಟೆಂಡರ್‌ ಆಯಿತು,ಒಂದು ತಿಂಗಳಲ್ಲಿ ₹1 ಸಾವಿರ ಕೋಟಿ ಕೆಲಸ ಮಾಡಲು ಆಗುತ್ತಾ ನೀವೇ ಹೇಳಿ. ಅಧಿಕಾರಿಗಳಿಗೆ ಹೇಳಿದ್ದೇವೆ, ಮೌಲ್ಯಮಾಪನ ಮಾಡಿ,ಕೆಲಸ ಆಗಿದ್ದರೆ ಬಿಲ್‌ ಮಾಡಿ ಎಂದು. ಅವರು ಆ ಕೆಲಸ ನೋಡಿಕೊಳ್ಳುತ್ತಾರೆ. ಸರ್ಕಾರ ಇರುವುದು ನೀತಿ ರೂಪಿಸಲು. ಹೀಗಾಗಿ ನಾವು ಬಿಲ್‌ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಹಿಂದೆ ನೀವು ಶೇ 40 ಕಮಿಷನ್‌ ಆರೋಪ ಮಾಡಿದ್ದೀರಲ್ಲ ಅದರ ಬಗ್ಗೆ ಏನು ಹೇಳುವಿರಿ ಎನ್ನುವ ಪ್ರಶ್ನೆಗೆ, ಹೌದು ನಾವು ಆರೋಪ ಮಾಡಿದ್ದು ಸತ್ಯ, ತನಿಖೆಗೆ ಪತ್ರ ಕೊಟ್ಟಿದ್ದು, ತನಿಖೆ ಮಾಡುತ್ತಿರುವುದು, ಅಶ್ವತ್ಥನಾರಯಣ್‌ ತನಿಖೆ ಮಾಡಿ ಎಂದು ಹೇಳಿದ್ದು, ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಬೊಮ್ಮಾಯಿ ಅವರು ತನಿಖೆ ಮಾಡುತ್ತೇವೆ ಎಂದು ಹೇಳಿದ್ದು, ಲೋಕಯುಕ್ತ ಅವರು ₹130 ಕೋಟಿಯನ್ನು ಬಿಲ್‌ ಇಲ್ಲದೆ ಹಣ ಕೊಟ್ಟಿದ್ದಾರೆ ಎಂದು ವರದಿ ನೀಡಿರುವುದು, ಅಧಿಕಾರಿಗಳನ್ನು ಅಮಾನತು ಮಾಡಿರುವುದು ಎಲ್ಲವೂ ಸತ್ಯ, ಸತ್ಯ ಎಂದು ಹೇಳಿದರು.

ಗುತ್ತಿಗೆದಾರರು ಬಿಜೆಪಿ ಮೇಲೆ ಆರೋಪ ಮಾಡಿದ್ದರು, ಈಗ ನಿಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಅಲ್ಲವೇ ಎಂಬ ಪ್ರಶ್ನೆಗೆ, ಗುತ್ತಿಗೆದಾರರು ನನ್ನ ಬಳಿಯೂ ಬಂದಿದ್ದರು, ಕೆಲಸ ಮಾಡಿದ್ದರೆ ನಿಮಗೆ ಹಣ ಸಿಗುತ್ತದೆ ಎಂದು ಅವರಿಗೆ ಹೇಳಿದೆ. ಬಿಲ್‌ ಕೊಡುವುದಕ್ಕೂ ಒಂದು ಪ್ರಕ್ರಿಯೆ ಇದೆ. ಎರಡು,ಮೂರು ವರ್ಷ ಕಾದಿಲ್ಲವೇ ಅವರು? ಜಲಸಂಪನ್ಮೂಲ ಇಲಾಖೆಯಲ್ಲಿ ಇರುವುದು ₹600 ಕೋಟಿ, ಆದರೆ ₹25 ಸಾವಿರ ಕೋಟಿ ಬಿಲ್‌ ಇದೆ. ಎಲ್ಲಿಂದ ಕೊಡುವುದು? ಕೆಲಸ ಮಾಡದವರಿಗೆಲ್ಲ ದುಡ್ಡು ಕೊಡಲು ಆಗುತ್ತದೆಯೇ? ಎಂದು ಮರು ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *