ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೊಮೆನಿಕಾದಲ್ಲಿ ಬಂಧನವಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು 48 ಗಂಟೆಗಳಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಆ್ಯಂಟಿಗುವಾ ಪ್ರಧಾನಿ ಗಸ್ಟನ್ ಬ್ರೌನೇ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಅತ್ತ ಡೊಮೆನಿಕಾದಲ್ಲಿ ಮೆಹುಲ್ ಚೋಕ್ಸಿ ಬಂಧನವಾಗುತ್ತಿದ್ದಂತೆಯೇ ಇತ್ತ WION ನ ಪ್ರಧಾನ ರಾಜತಾಂತ್ರಿಕ ವರದಿಗಾರ ಸಿಧಾಂತ್ ಸಿಬಲ್ ರೊಂದಿಗೆ ವರ್ಚುವಲ್ ಮೀಟಿಂಗ್ ನಲ್ಲಿ ಪಾಲ್ಗೊಂಡು ಹೇಳಿಕೆ ನೀಡಿರುವ ಪ್ರಧಾನಿ ಗಸ್ಟನ್ ಬ್ರೌನೇ, ‘ಯಾವುದೇ ಕಾನೂನು ತೊಡಕುಗಳಿಲ್ಲದಿದ್ದರೆ ಮುಂದಿನ 48 ಗಂಟೆಗಳಲ್ಲಿ ಚೋಕ್ಸಿಯನ್ನು ಖಾಸಗಿ ಜೆಟ್‌ನಲ್ಲಿ ಭಾರತಕ್ಕೆ ವಾಪಾಸು ಕಳುಹಿಸಲಾಗುದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ತಾವು ಡೊಮೆನಿಕಾ ಪ್ರಧಾನಿ ರೂಸ್ವೆಲ್ಟ್ ಸ್ಕೆರ್ರಿಟ್ ರೊಂದಿಗೆ ಚರ್ಚೆ ನಡೆಸಿದ್ದು, ಚೋಕ್ಸಿಯನ್ನು ಆ್ಯಂಟಿಗುವಾ ಮರಳಿಸದಂತೆ ಮನವಿ ಮಾಡಲಾಗಿದೆ. ಆ್ಯಂಟುಗುವಾದಲ್ಲಿ ಮೆಹುಲ್ ಚೋಕ್ಸಿ ಎಲ್ಲ ರೀತಿಯ ನಾಗರಿಕ ಹಕ್ಕುಗಳನ್ನು ಹೊಂದಿದ್ದು, ಅವರನ್ನು ಆ್ಯಂಟಿಗುವಾಗೆ ಕರೆತಂದರೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ನೇರವಾಗಿ ಅವರನ್ನು ಭಾರತಕ್ಕೆ ರವಾನಿಸಲು ಕೋರಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಭ್ರಷ್ಟಾಚಾರಿ ಮೆಹುಲ್ ಚೋಕ್ಸಿ ನಾಪತ್ತೆ: ಯಾವುದೇ ಮಾಹಿತಿ ಲಭ್ಯವಿಲ್ಲವೆಂದ ಆ್ಯಂಟಿಗುವಾ ಪೊಲೀಸರು
ಡೊಮೆನಿಕಾದಲ್ಲಿ ಚೋಕ್ಸಿಯನ್ನು ಬಂಧಿಸಲಾಗಿದ್ದು, ಆ್ಯಂಟಿಗುವಾ ಪೊಲೀಸರು ಕೂಡ ಡೊಮೆನಿಕಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ, ಶೀಘ್ರದಲ್ಲೇ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಡೊಮೆನಿಕಾದಿಂದಲೇ ನೇರವಾಗಿ ಭಾರತಕ್ಕೆ ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.