- 2 ಕೆಜಿಯ ಗೃಹಬಳಕೆ ಸಿಲಿಂಡರ್ 3.5 ರುಪಾಯಿ ಏರಿಕೆ
- ವಾಣಿಜ್ಯ ಸಿಲಿಂಡರ್ ದರ 50 ರೂ ಹೆಚ್ಚಳ
ನವದೆಹಲಿ: ದೇಶಾದ್ಯಂತ ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 3.5 ರೂಪಾಯಿ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 8 ರೂಪಾಯಿ ಹೆಚ್ಚಿಸಲಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ.
14.2 ಕೆಜಿಯ ಅಡುಗೆ ಅನಿಲ 3.5 ರೂಪಾಯಿ ಏರಿಕೆಯೊಂದಿಗೆ 1003 ರೂಪಾಯಿ ಆಗಿದೆ. ಈ ಮೊದಲು 999.50 ರೂಪಾಯಿಯಷ್ಟಿತ್ತು. ಒಂದೇ ತಿಂಗಳಲ್ಲಿ ಎರಡು ಬಾರಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆ ಏರಿಕೆಮಾಡಲಾಗಿದೆ. ಈ ಹಿಂದೆ ಮೇ 8 ರಂದು ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮೇ 7 ರಂದು ಪ್ರತಿ ಸಿಲಿಂಡರ್‌ಗೆ 10 ರೂಪಾಯಿ ಹೆಚ್ಚಿಸಲಾಗಿತ್ತು. ವಿವಿಧ ರಾಜ್ಯಗಳಲ್ಲಿ 14.2 ಕೆಜಿ LPG ಸಿಲಿಂಡರ್ ದರ ಈ ಕೆಳಗಿನಂತಿದೆ.
ದೆಹಲಿಯಲ್ಲಿ 1003 ರೂ,
ಕೋಲ್ಕತ್ತಾದಲ್ಲಿ 1029 ರೂಪಾಯಿ,
ಚೆನ್ನೈನಲ್ಲಿ 1018.5 ರೂಪಾಯಿ
ಮುಂಬೈನಲ್ಲಿ 1003 ರೂಪಾಯಿ
ಬೆಂಗಳೂರಿನಲ್ಲಿ 1006
ಹಲವು ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ಗಳಿಗೆ ಯಾವುದೇ ಸಬ್ಸಿಡಿ ಸಿಗುತ್ತಿಲ್ಲ. ಬಹುಚರ್ಚಿತ ಉಜ್ವಲ ಯೋಜನೆಯ ಫಲಾನುಭವಿಗಳು ಎಲ್‌ಪಿಜಿ ಬಳಕೆಯಿಂದ ದೂರ ಸರಿಯುತ್ತಿದ್ದಾರೆ. ಸಬ್ಸಿಡಿ ಕಡಿತದ ನಂತರ ವಿಶ್ವಮಾರುಕಟ್ಟೆಯ ಬೆಲೆ ಏರಿಕೆಯ ಪರಿಣಾಮ ನೇರವಾಗಿ ಗ್ರಾಹಕರಿಗೆ ವರ್ಗಾವಣೆಯಾಗುತ್ತಿದೆ. ಹೊಟೆಲ್, ರೆಸ್ಟೊರೆಂಟ್ಗಳಲ್ಲಿ ಬಳಕೆಯಾಗುವ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮೇ 1ರಂದು ₹ 102.50 ಹೆಚ್ಚಿಸಲಾಗಿತ್ತು. ಪ್ರಸ್ತುತ ವಾಣಿಜ್ಯ ಬಳಕೆ ಸಿಲಿಂಡರ್ಗಳು ₹ 2,355.50 ಗೆ ಮಾರಾಟವಾಗುತ್ತಿವೆ.
ರಷ್ಯಾ ಉಕ್ರೇನ್ ಯುದ್ಧದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಒಂದೇ ಸಮನೆ ಹೆಚ್ಚಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ತೈಲೋತ್ಪನ್ನಗಳ ಬೆಲೆ 13 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಭಾರತದ ಕರೆನ್ಸಿ ರೂಪಾಯಿ ಡಾಲರ್ ಎದುರು ಮೌಲ್ಯ ಕಳೆದುಕೊಂಡಿದ್ದು ಬಿಕ್ಕಟ್ಟು ಉಲ್ಬಣಿಸಲು ಮತ್ತೊಂದು ಮುಖ್ಯ ಕಾರಣ. ಪ್ರಸ್ತುತ ಒಂದು ಅಮೆರಿಕನ್ ಡಾಲರ್ಗೆ ₹ 77 ಇದೆ.
ಈಗಾಗಲೇ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನತೆಗೆ ದರ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಭಾರತ ಮತ್ತೊಂದು ಶ್ರೀಲಂಕಾ ಆದರೂ ಅಚ್ಚರಿ ಪಡಬೇಕಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸರಕಾರ ನಡೆಯನ್ನು ಟ್ರೋಲ್ ಮಾಡಲಾಗುತ್ತಿದೆ.