ಅರ್ಜೆಂಟಿನಾದ ಕರೆನ್ಸಿಯ “ಡಾಲರೀಕರಣ”; ಆರ್ಥಿಕ ಬಿಕ್ಕಟ್ಟಿಗೆ ನವ-ಫ್ಯಾಸಿಸ್ಟ್ ‘ಪರಿಹಾರ’

ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಮುನ್ನೆಲೆಗೆ ಬರುತ್ತಿರುವ ನವ-ಫ್ಯಾಸಿಸ್ಟ್ ಆಡಳಿತಗಾರರ ಪಟ್ಟಿಗೆ ಅರ್ಜೆಂಟಿನಾದ ಜೇವಿಯರ್ ಮಿಲೀ ಇತ್ತೀಚಿನ ಸೇರ್ಪಡೆಯಾಗಿದ್ದಾರೆ. ನವ ಫ್ಯಾಸಿಸಂನ ಈ ಏರಿಕೆಯು ನವ-ಉದಾರವಾದದ ಬಿಕ್ಕಟ್ಟಿನ ಒಂದು ಪ್ರತಿಬಿಂಬವಾಗಿದೆ, ಇದು ಅರ್ಜೆಂಟೀನಾದ ಸಂದರ್ಭದಲ್ಲಿ ಸುಮಾರು 150% ಹಣದುಬ್ಬರದಲ್ಲಿ ಪ್ರಕಟವಾಗಿದ್ದು  ಅದಕ್ಕೆ ಪರಿಹಾರವಾಗಿ  ಮಿಲೀ ತನ್ನ ದೇಶದ ಕೇಂದ್ರೀಯ  ಬ್ಯಾಂಕನ್ನೇ ರದ್ದು  ಮಾಡಿ , ಡಾಲರನ್ನೇ ಅಲ್ಲಿಯ ಕರೆನ್ಸಿಯಾಗಿ ಮಾಡುವ ಪರಿಹಾರವನ್ನು ಮುಂದಿಟ್ಟಿದ್ದಾರೆ.  ಆದರೆ ಇಂತಹ ನವ-ಫ್ಯಾಸಿಸ್ಟ್ ಕಾರ್ಯತಂತ್ರ ದುಡಿಯುವ ಜನವರ್ಗಗಳ ಇಮ್ಮಡಿ ಹಿಂಡಿಕೆಗೆ  ಕಾರಣವಾಗಿ ಇನ್ನಷ್ಟು ಉಸಿರುಗಟ್ಟುವಂತಹ ಪರಿಸ್ಥಿತಿಯನ್ನೇ ತರುತ್ತದೆಯೇ ಹೊರತು ಬಿಕ್ಕಟ್ಟನ್ನು ಪರಿಹರಿಸಲಾರದು. ನಿಜವಾಗಿಯೂ ಬಿಕ್ಕಟ್ಟಿಗೆ ಇರುವ ಪರಿಹಾರ ಎಂದರೆ, ನವ-  ಉದಾರವಾದಿ  ವ್ಯವಸ್ಥೆಯನ್ನೇ  ಮೀರುವುದು. ಅರ್ಜೆಂಟಿನಾ

ಪ್ರತಿಯೊಂದು ದೇಶವೂ ಒಂದು ನಿರ್ದಿಷ್ಟ ಕರೆನ್ಸಿಯನ್ನು ರೂಪಿಸಿಕೊಂಡಿರುತ್ತದೆ ಮತ್ತು ಈ ಕರೆನ್ಸಿಯನ್ನು ಮುದ್ರಿಸುವ ಮತ್ತು ಅದರ ಚಲಾವಣೆಯ ಜವಾಬ್ದಾರಿಯನ್ನು ಆ ದೇಶದ ಕೇಂದ್ರ ಬ್ಯಾಂಕ್ ನಿರ್ವಹಿಸುತ್ತದೆ. ಈ ಕೇಂದ್ರ ಬ್ಯಾಂಕ್, ವಿದೇಶ ವ್ಯಾಪಾರ ಸಂಬಂಧವಾಗಿ ದೇಶದ ಕರೆನ್ಸಿಯ ಮೌಲ್ಯವನ್ನು ಮತ್ತೊಂದು ದೇಶದ ಕರೆನ್ಸಿಯ ಮೌಲ್ಯದೊಂದಿಗೆ ಸರಿದೂಗಿಸುವ ಪ್ರಮಾಣವನ್ನು ನಿಗದಿಪಡಿಸುತ್ತದೆ. ದೇಶ ದೇಶಗಳ ಕರೆನ್ಸಿಗಳು ಮತ್ತೊಂದು ದೇಶದ ಕರೆನ್ಸಿಯ ವಿರುದ್ಧವಾಗಿ, ಕೆಲವು ನಿರ್ದಿಷ್ಟ ಕಾರಣಗಳಿಂದಾಗಿ ಏರಿಳಿತಗಳಿಗೆ ಒಳಗಾಗುತ್ತವೆ. ಅಂತಹ ಸಂದರ್ಭಗಳಲ್ಲಿ ದೇಶೀಯ ಕರೆನ್ಸಿಗಳ ಮೌಲ್ಯವನ್ನು (ವಿನಿಮಯ ದರವನ್ನು) ಆಯಾ ದೇಶಗಳ ಕೇಂದ್ರ ಬ್ಯಾಂಕುಗಳು ಪರಿಷ್ಕರಿಸುತ್ತವೆ. ವಿಶ್ವದ ಎಲ್ಲ ದೇಶಗಳೂ ಈ ಕ್ರಮವನ್ನು ಅನುಸರಿಸುತ್ತವೆ. ಆದರೆ, ಅರ್ಜೆಂಟೀನಾದ ಹೊಸ ಅಧ್ಯಕ್ಷ ಜೇವಿಯರ್ ಮಿಲೀ ತನ್ನ ದೇಶದ ಕೇಂದ್ರ ಬ್ಯಾಂಕ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಮತ್ತು ಅರ್ಜೆಂಟೀನಾದ ಕರೆನ್ಸಿ ʼಪೆಸೊʼಅನ್ನು ಸಂಪೂರ್ಣವಾಗಿ ರದ್ದು ಮಾಡಿ ಅದರ ಸ್ಥಾನದಲ್ಲಿ ಅಮೆರಿಕಾದ ಡಾಲರ್‌ಗಳನ್ನೇ ಅರ್ಜೆಂಟೀನಾದ ಕರೆನ್ಸಿಯಾಗಿ ಬಳಸುವ ಪ್ರಸ್ತಾಪವನ್ನು ಮಾಡಿದ್ದಾರೆ. ಅರ್ಜೆಂಟಿನಾ

ಒಂದು ದೇಶವು ಹೊಂದಿರುವ ಕರೆನ್ಸಿಯನ್ನು ರದ್ದು ಮಾಡಿ ಅದರ ಸ್ಥಾನದಲ್ಲಿ ಅಮೆರಿಕಾದ ಡಾಲರ್‌ಗಳನ್ನೇ ತನ್ನ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದನ್ನು ಒಂದು ಉದಾಹರಣೆಯ  ಮೂಲಕ ಅರ್ಥಮಾಡಿಕೊಳ್ಳಬಹುದು. ಬೆಲೆಗಳು, ಬಡ್ಡಿ ದರ ಮತ್ತು ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಇವುಗಳು ಒಂದು ನಿರ್ದಿಷ್ಟ ಮಟ್ಟದಲ್ಲಿರುವ ಒಂದು ಅರ್ಥವ್ಯವಸ್ಥೆಯ ಸನ್ನಿವೇಶದಲ್ಲಿ, ಹಣದ ಒಟ್ಟು ಬೇಡಿಕೆಯು ದೇಶೀಯ ಕರೆನ್ಸಿಯ 100 ಯೂನಿಟ್‌ಗಳಷ್ಟು ಇದೆ ಎಂದು ಭಾವಿಸಿಕೊಳ್ಳೋಣ. ಆದರೆ, ಅಲ್ಲಿ ಹಣದ ಪೂರೈಕೆಯು 90 ಯೂನಿಟ್‌ಗಳಷ್ಟು ಮಾತ್ರ ಇದೆ ಎಂದುಕೊಳ್ಳೋಣ. ಆಗ, ಕಡಿಮೆ ಬಿದ್ದ ದೇಶೀಯ ಕರೆನ್ಸಿಯ 10 ಯೂನಿಟ್‌ಗಳನ್ನು ಆ ದೇಶದ ಕೇಂದ್ರ ಬ್ಯಾಂಕ್ ನಿರ್ಭಯವಾಗಿ ಮುದ್ರಿಸಬಹುದು. ಹೀಗೆ 10 ಕರೆನ್ಸಿ ಯೂನಿಟ್‌ಗಳನ್ನು ಹೆಚ್ಚುವರಿಯಾಗಿ ಮುದ್ರಿಸಿದಾಗ, ಡಾಲರ್ ಸಂಬಂಧವಾಗಿ ಆ ದೇಶವು ಹೊಂದಿರುವ ವಿನಿಮಯ ದರ ನಿಗದಿಯ ಕಾರಣದಿಂದಾಗಿ ವಿದೇಶಿ ವಿನಿಮಯ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ. ಆದರೆ, “ಡಾಲರ್”ಗಳನ್ನು ಮಾತ್ರವೇ ತನ್ನ ಕರೆನ್ಸಿಯಾಗಿ ಬಳಸುವ ಅರ್ಥವ್ಯವಸ್ಥೆಯ ಸಂದರ್ಭದಲ್ಲಿ, ಡಾಲರ್‌ಗಳ ಮೇಲಿನ ಬೇಡಿಕೆಯು ಬೆಲೆಗಳು, ಬಡ್ಡಿ ದರ ಮತ್ತು ಒಟ್ಟು ಜಿಡಿಪಿ ಇವುಗಳ ಒಂದು ನಿರ್ದಿಷ್ಟ ಮಟ್ಟದಲ್ಲಿ, ಪೂರೈಕೆಯ ಮಟ್ಟಕ್ಕಿಂತಲೂ ಅಧಿಕವಾಗಿದ್ದರೆ, ಆಗ ಕಡಿಮೆ ಬಿದ್ದ ಡಾಲರ್‌ಗಳನ್ನು ಮುದ್ರಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ, ಡಾಲರ್‌ಗಳನ್ನು ಮುದ್ರಿಸುವ ಅಧಿಕಾರವನ್ನು ಈ ಡಾಲರ್‌ಗಳನ್ನು ನೀಡಿಕೆ(issue) ಮಾಡಿದ ಅಮೆರಿಕದ ಕೇಂದ್ರ ಬ್ಯಾಂಕ್ ಮಾತ್ರ ಹೊಂದಿದೆಯಲ್ಲದೆ, ರದ್ದು ಮಾಡಿದ ತನ್ನ ಕರೆನ್ಸಿಯ ಸ್ಥಾನದಲ್ಲಿ ಅಮೆರಿಕಾದ ಡಾಲರ್‌ಗಳನ್ನೇ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಂಡ ದೇಶವು ಡಾಲರ್‌ಗಳನ್ನು ಮುದ್ರಿಸುವ ಅಧಿಕಾರವನ್ನು ಹೊಂದಿಲ್ಲ. ಅಷ್ಟಕ್ಕೂ ಈ ದೇಶವು ಅದಾಗಲೇ ತನ್ನ ಕೇಂದ್ರ ಬ್ಯಾಂಕನ್ನು ರದ್ದು ಮಾಡಿಯಾಗಿರುತ್ತದೆ. ಅಂತಹ ಒಂದು ಸಂದರ್ಭದಲ್ಲಿ, ಇಂಥಹ ಒಂದು ದೇಶಕ್ಕೆ ಲಭ್ಯವಿರುವ ಏಕೈಕ ಆಯ್ಕೆ ಎಂದರೆ:ಜಿಡಿಪಿಯ ಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ, ಸಾಧ್ಯವಿರುವ ಎಲ್ಲ ವಿಧಾನಗಳಿಂದ (ವಿದೇಶದಿಂದ ಸಾಲ ಪಡೆಯುವ ಮೂಲಕ ಅಥವಾ ದೇಶದ ಆಸ್ತಿಯನ್ನು ಮಾರಾಟ ಮಾಡುವ ಮೂಲಕ) ಡಾಲರ್‌ಗಳನ್ನು ಪಡೆದುಕೊಳ್ಳಬಹುದು. ಅಥವಾ ಡಾಲರ್‌ಗಳ ಮೇಲಿನ ಬೇಡಿಕೆಯು ಅದರ ಪೂರೈಕೆಗೆ ಸಮನಾಗುವವರೆಗೆ ಜಿಡಿಪಿಯನ್ನು ಮೊಟಕುಗೊಳಿಸಬಹುದು. ಅಥವಾ, ಈ ಎರಡು ಆಯ್ಕೆಗಳನ್ನೂ ಭಾಗಶಃ ಬೆರಸಿ ಬಳಕೆ ಮಾಡಿಕೊಳ್ಳಬಹುದು. ಆದರೆ, ಕೇಂದ್ರ ಬ್ಯಾಂಕನ್ನು ಬಳಸಿಕೊಂಡು ಕರೆನ್ಸಿಯ ದೊಡ್ಡ ಪ್ರಮಾಣದ ಪೂರೈಕೆಯನ್ನು ಹೊಂದುವ ಆಯ್ಕೆಯನ್ನು ಮಾತ್ರ ಮರೆಯಲೇಬೇಕಾಗುತ್ತದೆ. ಅರ್ಜೆಂಟಿನಾ

ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಆದಾಯಕ್ಕಿಂತ ಹೆಚ್ಚು ಖರ್ಚು (ಸಾಮಾನ್ಯ ಸಂದರ್ಭಗಳಲ್ಲಿ ಪಾವತಿ ಶೇಷದ ಅಂಶವು ಚಾಲ್ತಿ ಖಾತೆ ಕೊರತೆಯಲ್ಲಿ ವ್ಯಕ್ತವಾಗುತ್ತದೆ) ಮಾಡುವುದರಿಂದ ಮಾತ್ರವಲ್ಲ, ಚಲಾವಣೆಯ ಮಾಧ್ಯಮ ಅಥವಾ ಕರೆನ್ಸಿಯ ಮೇಲಿನ ಬೇಡಿಕೆಯು ಅದರ ಪೂರೈಕೆಗೆ ಹೋಲಿಸಿದರೆ ಹೆಚ್ಚಾದಾಗಲೂ ಸಹ ಒಂದು ದೇಶದ ಬಾಹ್ಯ ಋಣಭಾರ ಹೆಚ್ಚುತ್ತದೆ ಅಥವಾ ವಿದೇಶಿಯರಿಗೆ ಮಾರಾಟವಾಗುವುದರಿಂದ ದೇಶದ ಭೌತಿಕ ಸಂಪತ್ತು ಕಡಿಮೆಯಾಗುತ್ತದೆ. ಅರ್ಜೆಂಟಿನಾ

ಇದನ್ನು ಓದಿ :ಹೈದರಾಬಾದ್‌ | ಮೈಸೂರು ಸ್ಯಾಂಡಲ್ ಸೋಪ್ ನಕಲಿ ಘಟಕ ಬಯಲಿಗೆ; 2 ಕೋಟಿ ರೂ. ಸರಕು ವಶಕ್ಕೆ!

ಇಮ್ಮಡಿ ಹಿಂಡಿಕೆ

ಬಾಹ್ಯ ಸಾಲದ ಮಟ್ಟವು ಏರಿಕೆಯಾಗಬಾರದು ಎಂದಾದರೆ, ಅರ್ಥವ್ಯವಸ್ಥೆಯ ಕುಗ್ಗುವ ಗಾತ್ರವು ದುಪ್ಪಟ್ಟಾಗುತ್ತದೆ. ಅರ್ಥವ್ಯವಸ್ಥೆಯು ಸಮತೋಲದಲ್ಲಿದೆ ಎಂದು ಭಾವಿಸೋಣ. ನಂತರ, ಒಂದು ನಿರ್ದಿಷ್ಟ ಅವಧಿಯಲ್ಲಿ ಅದರ ರಫ್ತುಗಳು $10ರಷ್ಟು ಏರಿಕೆಯಾಗಿವೆ. ಅದರ ಆಮದುಗಳು ಜಿಡಿಪಿಯ ಶೇ. 10ರಷ್ಟಿದ್ದರೆ, ಬಾಹ್ಯ ಸಾಲದ ಹೆಚ್ಚಳದ ಅಗತ್ಯವಿಲ್ಲದೇ, ಅದರ ಜಿಡಿಪಿಯು $100ರಷ್ಟು ಮಾತ್ರ ಏರಿಕೆಯಾಗಬಹುದು. ಇದು ಅರ್ಥವ್ಯವಸ್ಥೆಯು ಕುಗ್ಗುವಲ್ಲಿ ಮೊದಲ ಒತ್ತಡವಾಗುತ್ತದೆ. ಅಂದರೆ, ದೇಶದ ಬಾಹ್ಯ ಖಾತೆಯನ್ನು ಸಮತೋಲದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಅದರ ಜಿಡಿಪಿಯ ಏರಿಕೆಯನ್ನು ಕುಂಠಿತಗೊಳಿಸಬೇಕಾಗುತ್ತದೆ. ಆದರೆ, ಜಿಡಿಪಿಯ ಪರಿಚಲನೆಗೆ ಬೇಕಾಗುವ ಕರೆನ್ಸಿಯ (ಇದನ್ನು ಮೀಸಲು ಹಣ ಎಂದು ಕರೆಯುತ್ತಾರೆ) ಅನುಪಾತವು ಒಂದು ವೇಳೆ ಜಿಡಿಪಿಯ ಶೇ. 10ರಷ್ಟಿದ್ದರೆ, 100ರಷ್ಟು ಜಿಡಿಪಿಯ ಹೆಚ್ಚಳವನ್ನು ಉಳಿಸಿಕೊಳ್ಳಲು, ಅಧಿಕವಾಗಿ 10 ಡಾಲರ್‌ಗಳ ಅಗತ್ಯವಿರುತ್ತದೆ. ಈ ಅಧಿಕ 10 ಡಾಲರ್‌ಗಳನ್ನು ದೇಶೀಯವಾಗಿ ಮುದ್ರಿಸಲಾಗದುದರಿಂದ, ಬಾಹ್ಯ ಸಾಲವನ್ನು ಹೆಚ್ಚಿಸಿಕೊಳ್ಳದೆ ಜಿಡಿಪಿಯಲ್ಲಿ $100ರ ಹೆಚ್ಚಳವನ್ನು ಉಳಿಸಿಕೊಳ್ಳಲಾಗದು. ಅರ್ಜೆಂಟಿನಾ

ಈ ಉದಾಹರಣೆಯಲ್ಲಿ ಜಿಡಿಪಿಯು ಐವತ್ತು ಡಾಲರ್‌ನಷ್ಟು ಮಾತ್ರ ಹೆಚ್ಚಬಹುದು. ಆಗ ಮಾತ್ರ ಅಧಿಕ ಡಾಲರ್‌ಗಳ ಬೇಡಿಕೆಯು, ಆಮದುಗಳಿಗೆ 5 ಮತ್ತು ಜಿಡಿಪಿಯ ಪರಿಚಲನೆಗಾಗಿ 5, ರಫ್ತುಗಳ ಮೂಲಕ ಗಳಿಸಿದ ಡಾಲರ್ ಮೊತ್ತಕ್ಕೆ ಸಮನಾಗಿರುತ್ತದೆ. ಇದು ಜಿಡಿಪಿಯ ಪರಿಚಲನಾ ಮಾಧ್ಯಮದ ಅಗತ್ಯದಿಂದಾಗಿ ಅರ್ಥವ್ಯವಸ್ಥೆಯು ಕುಗ್ಗುವಲ್ಲಿ ಉದ್ಭವಿಸಿದ ಎರಡನೆಯ ಒತ್ತಡವಾಗುತ್ತದೆ. ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ದೇಶದ ಡಾಲರ್ ಗಳಿಕೆಯು, ಈಗ ಅದರ ಆಮದುಗಳಿಗೆ ಮತ್ತು ಪರಿಚಲನಾ ಮಾಧ್ಯಮದ ಅಗತ್ಯಗಳು ಈ ಎರಡು ಪಾವತಿಗಳಿಗೂ ಬಳಕೆಯಾಗುತ್ತದೆ. ದೇಶೀಯ ಕರೆನ್ಸಿಯನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದರಿಂದಾಗಿ ಮತ್ತು ಚಲಾವಣಾ ಮಾಧ್ಯಮದ ಅಗತ್ಯದ ಪೂರೈಕೆಗಾಗಿ ಈ ದೇಶೀಯ ಕರೆನ್ಸಿಯನ್ನು ಕೇಂದ್ರ ಬ್ಯಾಂಕ್ ಮುದ್ರಿಸುವ ಸಾಧ್ಯತೆಯನ್ನು ರದ್ದುಪಡಿಸಿದ್ದರಿಂದಾಗಿ, ವಿದೇಶಿ ಕರೆನ್ಸಿಯನ್ನು ತನ್ನ ಚಲಾವಣೆಯ ಮಾಧ್ಯಮವಾಗಿ ಒಪ್ಪಿಕೊಂಡಿರುತ್ತದೆ. ಆದರೆ, ಚಲಾವಣಾ ಮಾಧ್ಯಮದ ಹೆಚ್ಚಿದ ಅಗತ್ಯವನ್ನು ಪೂರೈಸಲು ಬೇಕಾಗುವ ವಿದೇಶಿ ಕರೆನ್ಸಿಯನ್ನು ಮುದ್ರಿಸಲು ಈ ವಿದೇಶಿ ಕರೆನ್ಸಿಯನ್ನು ನೀಡಿಕೆ ಮಾಡಿದ ಕೆಂದ್ರ ಬ್ಯಾಂಕ್ ಬಾಧ್ಯವಲ್ಲ. ಹಾಗಾಗಿ, ನಾವು ದೇಶದ ಜಿಡಿಪಿಯ ಮೇಲಿನ ಹಿಂಡಿಕೆಯನ್ನು ದ್ವಿಗುಣಗೊಳಿಸಬೇಕಾಗುತ್ತದೆ. ಅರ್ಜೆಂಟಿನಾ

ಜಿಡಿಪಿಯ ಮೇಲಿನ ಈ ರೀತಿಯ ಇಮ್ಮಡಿ ಹಿಂಡಿಕೆಯನ್ನು ಕಲ್ಯಾಣ ವೆಚ್ಚಗಳ ಕಡಿತ, ಸರ್ಕಾರಿ ಅಧಿಕಾರಿಗಳ ಸಂಬಳ ಕಡಿತ, ಪಿಂಚಣಿಗಳ ಕಡಿತ, ಕಾರ್ಮಿಕರ ವೇತನದ ಕಡಿತ ಮತ್ತು ಉದ್ಯೋಗಗಳ ಸಹಜ ಕಡಿತ ಮುಂತಾದ ಕಡಿತಗಳ ಮೂಲಕ ಮಾಡಬೇಕಾಗುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ರಫ್ತುಗಳ ಮೂಲಕ ಮಾತ್ರವೇ (ಬಾಹ್ಯ ಸಾಲದ ಮಟ್ಟವು ಹೆಚ್ಚಾಗಬಾರದು ಅಥವಾ ದೇಶೀಯ ಆಸ್ತಿಗಳನ್ನು ವಿದೇಶಿಯರಿಗೆ ಮಾರಾಟ ಮಾಡಬಾರದು ಎಂದಾದರೆ) ಗಳಿಸುವ ಡಾಲರ್‌ಗಳನ್ನು ಹೊರತುಪಡಿಸಿ, ಡಾಲರ್‌ಗಳ ಪೂರೈಕೆಯ ಮೇಲೆ ನಿಯಂತ್ರಣವನ್ನು ಹೊಂದದ ಮತ್ತು ವಿದೇಶದಲ್ಲಿ ಮುದ್ರಿಸುವ ಡಾಲರ್‌ಅನ್ನು ದೇಶದ ಕರೆನ್ಸಿಯಾಗಿ ಅಳವಡಿಸಿಕೊಳ್ಳುವ ಕ್ರಮವು ಅಗತ್ಯವಾಗಿ ದೇಶದ ಜನತೆಗೆ ತೀವ್ರತರದ ದುಃಖವನ್ನು ತರುತ್ತದೆ. ಜನತೆಯ ಜೀವನದ ಮೇಲೆ ದಾಳಿ ಮಾಡುವ ಈ ಮಿತವ್ಯಯ ವಿಧಾನಗಳನ್ನು ತಕ್ಷಣವೇ ಜಾರಿ ಮಾಡದಿದ್ದರೆ ಡಾಲರ್‌ಗಳನ್ನು ವಿದೇಶದಿಂದ ಸಾಲ ಪಡೆಯಬೇಕಾಗುತ್ತದೆ. ಈ ಕ್ರಮವು ಜನತೆಯ ಮೇಲಿನ ದಾಳಿಯನ್ನು ಮುಂದೂಡುತ್ತದೆ; ಅದು ದಾಳಿಯನ್ನು ತಪ್ಪಿಸುವುದಿಲ್ಲ. ಅರ್ಜೆಂಟಿನಾ

ಇಂತಹ ಅಸಂಬದ್ಧ ಕ್ರಮ ಏಕೆ?

ಹಾಗಾದರೆ, ಒಂದು ಸರ್ಕಾರವು ತನ್ನದೇ ಸ್ವಂತ ದೇಶೀಯ ಕರೆನ್ಸಿಯನ್ನು ಅಮೆರಿಕಾದ ಡಾಲರ್‌ನೊಂದಿಗೆ ಬದಲಾಯಿಸುವ ಇಂತಹ ಅಸಂಬದ್ಧ ಕ್ರಮವನ್ನು ಅವಲಂಬಿಸುತ್ತದೆಯಾದರೂ ಏಕೆ? ಅರ್ಜೆಂಟೀನಾದ ಸಂದರ್ಭದಲ್ಲಿ ತೋರುವ ಕಾರಣವೆಂದರೆ , ಅತಿ ಹೆಚ್ಚಿನ ವಾರ್ಷಿಕ ಸುಮಾರು 150%  ಹಣದುಬ್ಬರವೇ.  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹಣದುಬ್ಬರಕ್ಕೆ ಲಭ್ಯವಿರುವ ಏಕೈಕ  ಮದ್ದು  ( ಅದನ್ನು ಒಪ್ಪುವ       ಅಥವಾ   ಒಪ್ಪದಿರುವ ವಿಷಯವೇ ಬೇರೆ )  ಎಂದರೆ, ನಿರುದ್ಯೋಗದ  ಸೃಷ್ಟಿ ಮತ್ತು ವೇತನ ಕಡಿತವೇ.  ಈ ಮದ್ದನ್ನು ಜೇವಿಯರ್ ಮಿಲೀ ಉಗ್ರ ರೀತಿಯಲ್ಲಿ  ಬಳಸುತ್ತಿದ್ದಾರೆ.  ಈ  ಕುತರ್ಕವನ್ನು  ಬಯಲುಗೊಳಿಸಬೇಕಿದೆ. ಅರ್ಜೆಂಟಿನಾ

ಹಿಂದಿನ ಬಲಪಂಥೀಯ ಅಧ್ಯಕ್ಷ ಮ್ಯಾಕ್ರಿ ಅರ್ಜೆಂಟೀನಾದ ಪಾವತಿ ಶೇಷದ ಸಮಸ್ಯೆಯನ್ನು ನಿರ್ವಹಿಸುವ ಸಲುವಾಗಿ ವಿದೇಶಿ ಸಾಲವನ್ನು ಒಂದು ಬೃಹತ್ ಪ್ರಮಾಣದಲ್ಲಿ ತೆಗೆದುಕೊಂಡಿದ್ದರು. ಅದರಲ್ಲಿ ಒಂದು ಬಹು ದೊಡ್ಡ ಭಾಗವು ಆ ದೇಶದಿಂದ ಹೊರ ಹೋದ ಖಾಸಗಿ ಬಂಡವಾಳಕ್ಕೆ ಹಣ ಒದಗಿಸಲು ಬಳಸಲ್ಪಟ್ಟಿತು. ವಿದೇಶಿ ಸಾಲವನ್ನು ತೀರಿಸುವ ಸಮಯ ಬಂದಾಗ, ಪಾವತಿ ಶೇಷದ ಸಮಸ್ಯೆಯು ಬಿಗಡಾಯಿಸಿತು. ಅರ್ಜೆಂಟೀನಾದ ಶ್ರೀಮಂತರು ಕೈಗೊಂಡ ಬಂಡವಾಳದ ಪಲಾಯನವು ಅದಾಗಲೇ ಬಿಗಡಾಯಿಸಿದ ಪಾವತಿ ಶೇಷದ ಸಮಸ್ಯೆಯನ್ನು ಉಲ್ಬಣಗೊಳಿಸಿತು. ಬಂಡವಾಳದ ಈ ಪಲಾಯನದ ಪರಿಣಾಮವಾಗಿ ಉಂಟಾದ ಕರೆನ್ಸಿಯ ಅಪ ಮೌಲ್ಯವು, ಆಮದುಗಳನ್ನು ವಿಪರೀತ ದುಬಾರಿಯಾಗಿಸಿತು ಮತ್ತು ಒಂದು ವೆಚ್ಚ-ತಳ್ಳಿಕೆಯ ಹಣದುಬ್ಬರವನ್ನು ಉಂಟುಮಾಡಿತು. ಅಂತಿಮವಾಗಿ ಇದು  ಸರಕುಗಳ  ಬೆಲೆಗಳಿಗೆ  ವರ್ಗಾಯಿಸಲ್ಪಟ್ಟಿತು. ಅರ್ಜೆಂಟಿನಾ

ಸಾಮಾನ್ಯವಾಗಿ ಸಂಘಗಳ ಮೂಲಕ ಬಲವಾಗಿ ಸಂಘಟಿತರಾಗುವ ಕಾರ್ಮಿಕರ ವೇತನವು ಬೆಲೆ ಸೂಚ್ಯಂಕದೊAದಿಗೆ ಜೋಡಣೆಯಾಗಿರುವ ಸಮಾಜದಲ್ಲಿ,ಆರ್ಥಿಕ ಸಂಕಷ್ಟಗಳನ್ನು ಕಡಿಮೆ ಮಾಡುವ ವ್ಯವಸ್ಥೆ ಇಲ್ಲದಿರುವ ಪರಿಸ್ಥಿತಿಯನ್ನು ಅಸಂಘಟಿತ ಕಾರ್ಮಿಕರ ವಿಶಾಲ ಪಡೆಯು ಒದಗಿಸುವ ಕಾರಣದಿಂದಾಗಿ, ಈಗ ಸಣ್ಣ ಪ್ರಮಾಣದ ಹಣದುಬ್ಬರ ಉಂಟಾದರೂ ಅದು ತಕ್ಷಣವೇ ಬೆಲೆಗಳ ತೀಕ್ಷ್ಣ ಏರಿಕೆಗೆ ಕಾರಣವಾಗುತ್ತದೆ. ಹಾಗಾಗಿ, ಒಂದು ಬಲು ಸಣ್ಣ ಕಾಲಾವಧಿಯಲ್ಲಿಯೇ ಹಣದುಬ್ಬರವು ಅರ್ಜೆಂಟೀನಾದಲ್ಲಿ ವೇಗ ಪಡೆದುದರಲ್ಲಿ ಆಶ್ಚರ್ಯವೇನಿಲ್ಲ. ಅರ್ಜೆಂಟಿನಾ

ಕಾರ್ಮಿಕ ವರ್ಗದ ಮೇಲೆ ಅತ್ಯಂತ ಕೆಟ್ಟ ದಾಳಿಯ ಸೂಚನೆ

ಈ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಬಂಡವಾಳದ ಪಲಾಯನದ ಮೇಲೆ ನಿರ್ಬಂಧಗಳನ್ನು ಹೇರುವ ಪ್ರಸ್ತಾಪವನ್ನು ಮಿಲೀ ಸರ್ಕಾರ ಮಾಡುವುದಿಲ್ಲ. ವಿದೇಶಿ ವಿನಿಮಯ ಕೊರತೆಯನ್ನು ನೀಗಿಸಿಕೊಳ್ಳುವ ಸಲುವಾಗಿ ಸೂಕ್ತ ವ್ಯಾಪಾರ ನಿಯಂತ್ರಣಗಳನ್ನು ಜಾರಿ ಮಾಡುವ ಮೂಲಕ ವಿನಿಮಯ ದರವನ್ನು ಸ್ಥಿರಗೊಳಿಸುವ ಪ್ರಸ್ತಾಪವನ್ನು ಮಿಲೀ ಸರ್ಕಾರ ಮಾಡುವುದಿಲ್ಲ. ಬೆಲೆಗಳನ್ನು ನೇರವಾಗಿ ನಿಯಂತ್ರಿಸುವ ಮೂಲಕವಾದರೂ ಹಣದುಬ್ಬರವನ್ನು ನಿಯಂತ್ರಿಸುವ ಕಾರ್ಯವನ್ನು ಮಿಲೀ ಸರ್ಕಾರ ಮಾಡುವುದಿಲ್ಲ. ಅರ್ಜೆಂಟೀನಾದ ಕಾರ್ಮಿಕ ವರ್ಗದ ಮೇಲೆ ಮತ್ತು ಅದರ ಕಾರ್ಮಿಕ ಸಂಘಗಳ ಮೇಲೆ ಬೃಹತ್ ದಾಳಿಯನ್ನು ಪ್ರಾರಂಭಿಸುವ ಮೂಲಕ ಮಿಲೀ ಸರ್ಕಾರವು ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮಿಲೀ ಸರ್ಕಾರದ ನೀತಿ-ಪ್ರಸ್ತಾಪವು ಆ ದೇಶದ ಕಾರ್ಮಿಕ ವರ್ಗದ ಮೇಲೆ ನಡೆಸುವ ಅತ್ಯಂತ ಕೆಟ್ಟ ರೂಪದ ದಾಳಿಯ ಸೂಚನೆಯಾಗಿದೆ. ಅರ್ಜೆಂಟೀನಾದ ಶ್ರೀಮಂತರು ಆ ದೇಶದಿಂದ ಮೆಟ್ರೋಪಾಲಿಟನ್ ಕೇಂದ್ರಗಳಿಗೆ ಸಂಪತ್ತನ್ನು ವರ್ಗಾಯಿಸಿದ ಹೊರೆಯನ್ನು ಕಾರ್ಮಿಕ ವರ್ಗವು ಹೊರುವಂತೆ ಮಾಡಲಾಗಿದೆ. ಅರ್ಜೆಂಟಿನಾ

ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಮುನ್ನೆಲೆಗೆ ಬರುತ್ತಿರುವ ನವ-ಫ್ಯಾಸಿಸ್ಟ್ ಆಡಳಿತಗಾರರ ಪಟ್ಟಿಗೆ ಜೇವಿಯರ್ ಮಿಲೀ ಇತ್ತೀಚಿನ ಸೇರ್ಪಡೆಯಾಗಿದ್ದಾರೆ. ನವ-ಫ್ಯಾಸಿಸಂನ ಈ ಏರಿಕೆಯು ನವ ಉದಾರವಾದದ ಬಿಕ್ಕಟ್ಟಿನ ಒಂದು ಪ್ರತಿಬಿಂಬವಾಗಿದೆ, ಈ ಸನ್ನಿವೇಶದಲ್ಲಿ ಹಿರಿಯ ಬೂರ್ಜ್ವಾಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮತ್ತು ಕಾರ್ಮಿಕ ವರ್ಗದ ಮೇಲೆ ತಮ್ಮ ದಾಳಿಯನ್ನು ಮುಂದುವರೆಸಲು ಫ್ಯಾಸಿಸ್ಟ್ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿವೆ. ನವ-ಫ್ಯಾಸಿಸ್ಟ್ ಆಡಳಿತಗಾರರು ಮೇಲೆ ಬರುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಅರ್ಜೆಂಟೀನಾದಲ್ಲಿ ಪ್ರಸ್ತಾಪವಾಗುತ್ತಿರುವ ರೀತಿಯಲ್ಲಿ, ಹಣದುಬ್ಬರದಿಂದ ಹಿಡಿದು ನಿರುದ್ಯೋಗದ ಹೇರಿಕೆ ಮತ್ತು ಕಾರ್ಮಿಕರ ಆದಾಯದ ಹಿಂಡುವಿಕೆಯವರೆಗೆ, ಬಿಕ್ಕಟ್ಟಿನ ಸ್ವರೂಪವನ್ನು ಬದಲಾಯಿಸಬಹುದೇ ವಿನಃ ಬಿಕ್ಕಟ್ಟನ್ನುಪರಿಹರಿಸುವುದು ಸಾಧ್ಯವಿಲ್ಲ.

ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಮತ್ತು ರಫ್ತು ಬೆಳವಣಿಗೆಯ ದರವು ಅರ್ಜೆಂಟೀನಾದAತಹ ದೇಶಗಳಿಗೆ ಇನ್ನಷ್ಟು ನಿಧಾನವಾಗುತ್ತಿದ್ದಂತೆ, ಅರ್ಜೆಂಟೀನಾದ ನವ ಫ್ಯಾಸಿಸ್ಟ್ ಕಾರ್ಯತಂತ್ರವು ಹೆಚ್ಚಿದ ನಿರುದ್ಯೋಗ ಮತ್ತು ಕುಗ್ಗಿದ ವರಮಾನದ ರೂಪದಲ್ಲಿ ಕಾರ್ಮಿಕರ ಮೇಲೆ ಹೊರೆಯನ್ನು ಹೆಚ್ಚಿಸುತ್ತದೆ: ಮೇಲೆ ಉಲ್ಲೇಖಿಸಿದ ಇಮ್ಮಡಿ ಹಿಂಡಿಕೆ ಜನರಿಗೆ ಇನ್ನಷ್ಟು ಉಸಿರುಗಟ್ಟುವಂತಹ ಪರಿಸ್ಥಿತಿಯನ್ನೇ ತರುತ್ತದೆ. ಆದ್ದರಿಂದ, ನಿಜವಾಗಿಯೂ ಬಿಕ್ಕಟ್ಟಿಗೆ ಇರುವ ಪರಿಹಾರ ಎಂದರೆ, ನವ-ಉದಾರವಾದಿ ವ್ಯವಸ್ಥೆಯನ್ನೇ ಮೀರುವುದು. ಅರ್ಜೆಂಟಿನಾ

ಇದನ್ನು ನೋಡಿ : ಮನೆ ಮನೆಗೆ ಬರುತ್ತಿರುವುದು ಮಂತ್ರಾಕ್ಷತೆಯೇ? ಬಿಜೆಪಿ ಪ್ರಣಾಳಿಕೆಯೇ? ಆರೆಸ್ಸೆಸ್ ಸಿದ್ಧಾಂತವೇ? Janashakthi Media

Donate Janashakthi Media

Leave a Reply

Your email address will not be published. Required fields are marked *