ದೊಡ್ಡಬಳ್ಳಾಪುರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ ಉದ್ಘಾಟನೆ

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಖಾಸಗಿ ಸಹಭಾಗಿತ್ವದ 70 ಹಾಸಿಗೆಗಳ ಸಾಮರ್ಥ್ಯದ ಮೇಕ್‍ಶಿಫ್ಟ್ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಉದ್ಘಾಟಿಸಿದರು.

ಬಿ.ಎಸ್‌ ಯಡಿಯೂರಪ್ಪ ಅವರು ಮಾತನಾಡಿ ʻʻದೇಶದ ಆರು ರಾಜ್ಯಗಳಲ್ಲಿ ಇಂತಹ ಮೇಕ್‍ಶಿಫ್ಟ್ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿಯೂ 4 ಕೋಟಿ ರೂ. ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆʼʼ ಎಂದರು.

ಕೋವಿಡ್ ಮೂರನೆ ಅಲೆ ತಡೆಯುವಲ್ಲಿ ರಾಜ್ಯ ಸರಕಾರವು ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿ ಎಲ್ಲ ಚಟುವಟಿಕೆಗಳಿಗೂ 15 ದಿನಗಳ ವಿನಾಯಿತಿ ನೀಡಲಾಗಿದೆ. ಜನರು ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಜರ್ ಬಳಸಿ ಅಂತರ ಕಾಪಾಡರೆ ಮಾತ್ರ ಮೂರನೇ ಅಲೆಯನ್ನು ತಡೆಯಬಹುದಾಗಿದೆ. ಇಲ್ಲದಿದ್ದರೆ ಮೊದಲ ಸ್ಥಿತಿಗೆ ತರಬೇಕಾದ ಅನಿವಾರ್ಯ ಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಇದನ್ನು ಓದಿ: ಅಂಗನವಾಡಿಗಳಿಗೆ ಕೂಡಲೇ ವಿದ್ಯುತ್, ಶೌಚಾಲಯ ಒದಗಿಸಲು ಕರ್ನಾಟಕ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಭಾರತ ಸರ್ಕಾರ, ಅಮೆರಿಕನ್ ಇಂಡಿಯನ್ ಫೌಂಡೇಷನ್ ಮತ್ತು ವಿಶ್ವಸಂಸ್ಥೆಯ ಯು ಎನ್ ಡಿ ಪಿ ಅಡಿಯಲ್ಲಿ ನಿರ್ಮಿಸಿದ್ದ ನೂತನ ಆಸ್ಪತ್ರೆಯು ಕೋವಿಡ್- 19ರ ಮೂರನೆ ಅಲೆ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ನಿರ್ಮಿಸಲಾಗಿದೆ. ರಾಜ್ಯದಲ್ಲಿ ವೈದ್ಯಕೀಯ ಮೂಲ ಸೌಲಭ್ಯ ಹೆಚ್ಚಿಸಲಾಗಿದೆ. ಇಂದು ಉದ್ಘಾಟನೆಯಾದ ಮೇಕ್‍ಶಿಫ್ಟ್ ಆಸ್ಪತ್ರೆಯು ದೊಡ್ಡಬಳ್ಳಾಪುರ ಮತ್ತು ಸುತ್ತಮುತ್ತಲ ಜನರ ಆರೋಗ್ಯ ಸೇವೆಗೆ ಸಹಕಾರಿಯಾಗಲಿದೆ. ಕೋವಿಡ್ ನಂತರವೂ ಈ ಆಸ್ಪತ್ರೆ ಜನರ ಉಪಯೋಗಕ್ಕೆ ಬರಲಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಡೆಯಲು ರಾಜ್ಯ ಸರಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವೈದ್ಯರು, ನರ್ಸ್‍ಗಳು ಹಾಗೂ ಸ್ವಾಬ್ ಕಲೆಕ್ಟರ್‌ಗಳನ್ನೊಳಗೊಂಡ ತಂಡ ಪ್ರತಿ ಹಳ್ಳಿಯ ಜನರ ಮನೆ ಬಾಗಿಲಿಗೆ ತೆರಳಿ ಸ್ಥಳದಲ್ಲೇ ಪರೀಕ್ಷೆ ನಡೆಸಿ ಕೋವಿಡ್ ಔಷಧವುಳ್ಳ ಮೆಡಿಕಲ್ ಕಿಟ್ ನೀಡಲಾಗುತ್ತಿದೆ.

ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ ಸಚಿವ ಎಂ.ಟಿ.ಬಿ.ನಾಗರಾಜ್, ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್‍ರಾಜ್ ಸಿಂಗ್, ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *