ಬೆಂಗಳೂರು: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ ಹಿನ್ನೆಲೆ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಎಡೆ ಮಾಡಿತ್ತು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ರಾಮನ ಪಾರ್ಟಿಯಲ್ಲಿ ರಾಮಾಯಣ ನಡೆಯುತ್ತಿದೆ, ಮಹಾಭಾರತವೂ ನಡೆಯುತ್ತಿದೆ. ಬಿಜೆಪಿ ಯುದ್ಧಕಾಂಡ ಜನಸಾಮಾನ್ಯರ ಕರ್ಮಕಾಂಡವಾಗಿದೆ. ರಾಜ್ಯ ಹೆಲ್ತ್ ಟೂರಿಸಂಗೆ ಪ್ರಸಿದ್ಧಿ ಆದರೆ ಈಗ ಇಲ್ಲಿ ಹೆಲಿ ಟೂರಿಸಂ ಪ್ರಾರಂಭವಾಗಿದೆ ಎಂದು ಬಿಜೆಪಿ ಶಾಸಕರ ದೆಹಲಿ ಭೇಟಿ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು.
ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಮಾಡಿರುವ ಭದ್ರಾ ಮೇಲ್ದಂಡೆ ಯೋಜನೆ ಅಕ್ರಮ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ಯಾವ್ಯಾವ ಕೋಡ್ ಗಳಲ್ಲಿ ಬಿಲ್ ಪಾಸ್ ಆಗ್ತಿದೆ. ಯಾವ್ಯಾವ ಎಂಜಿನಿಯರ್ ಏನ್ಮಾಡುತ್ತಿದ್ದಾರೆ ಗೊತ್ತಿದೆ. ೧೦ ಕೋಟಿಗೆ ಒಂದೊಂದು ಟೆಂಡರ್ ಆಗ್ತಿದೆ. ಪೋರ್ಟ್ ಪೊಲಿಯೋ ಸಿಎಂ ಬಳಿಯಿದೆ. ಬಿಜೆಪಿ ಪರಿಷತ್ ಸದಸ್ಯರೇ ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕಿತ್ತು. ಯಾರೋ ಎಂಡಿ ಕೈಯಲ್ಲಿ ಉತ್ತರ ಕೊಡಿಸಿದ್ದಾರೆ. ಇದನ್ನ ತನಿಖೆಗೊಳಪಡಿಸಬೇಕು. ಜಂಟಿ ಸದನ ಸಮಿತಿ ಮೂಲಕ ತನಿಖೆ ಮಾಡಿ ಎಂದು ಆಗ್ರಹಿಸಿದರು. ಎಲ್ಲಾ ಪಕ್ಷಗಳ ನಾಯಕರ ವರ್ಚುವಲ್ ಮೀಟಿಂಗ್ ಮಾಡಿ, ಇದಕ್ಕೆ ಎಷ್ಟು ಪರ್ಸೆಂಟ್ ಕಮೀಷನ್ ತೆಗೆದುಕೊಂಡಿದ್ದಾರೆ ಎಂದು ಎಲ್ಲವೂ ತನಿಖೆಯಾಗಬೇಕಲ್ಲ. ಜಂಟಿ ಕಲಾಪ ಕರೆಯಬೇಕು, ಭ್ರಷ್ಟಾಚಾರದ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು. ನಿಮ್ಮ ಶಾಸಕರೇ ಇದನ್ನ ಎತ್ತಿಹಿಡಿದಿದ್ದಾರೆ, ಹಾಗಾಗಿ ಇದನ್ನ ಗಂಭೀರವಾಗಿ ಚರ್ಚೆಯಾಗಬೇಕು ಎಂದು ಕಲಾಪ ಕರೆಯಲು ಡಿಕೆಶಿ ಒತ್ತಾಯಿಸಿದರು.
ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ತಮ್ಮ ಟೆಲಿಪೋನ್ ಟ್ಯಾಪ್ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮೇಲೂ ಈ ಆರೋಪ ಬಂತು, ಆಗ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಈಗ ಅವರ ಪಕ್ಷದ ಶಾಸಕರೇ ಹೇಳ್ತಿದ್ದಾರೆ, ಯಾಕೆ ಸಿಬಿಐಗೆ ಇದನ್ನ ಕೊಡ್ತಿಲ್ಲ. ಕಮೀಷನರ್ ಕೈಯಲ್ಲಿ ಯಾಕೆ ಇದನ್ನ ತನಿಖೆ ಮಾಡಿಸ್ತಿರೋದು ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು. ನನ್ನ ಫೋನ್ ಟ್ಯಾಪ್ ಆಗ್ತಿದೆ ಗೊತ್ತಿಲ್ಲ, ಎರಡು ನಿಮಿಷ ಫೋನ್ ವರ್ಕೇ ಆಗಲ್ಲ. ನನ್ನ ಹಿಂದೆ ಎಷ್ಟು ಏಜೆನ್ಸಿ ಬಿಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಇನ್ನು ತಮ್ಮ ಪಕ್ಷದ ಆತಂರಿಕ ವಿಷಯದ ಬಗ್ಗೆಯೂ ಡಿಕೆಶಿ ಪ್ರತಿಕ್ರಿಯಿಸಿದರು. ಶಾಸಕ ಜಮೀರ್ ಅಹಮ್ಮದ್ ಪದೇ ಪದೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎನ್ನುತ್ತಿರುವುದಕ್ಕೆ ಡಿಕೆಶಿ ತಿರುಗೇಟು ಕೊಟ್ಟರು. ಕಾಂಗ್ರೆಸ್ ಸಂಘಟಿತ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೆ. ಯಾರೇ ಲೀಡರ್ ಗೂ ಆಸೆ ಆಕಾಂಕ್ಷೆಗಳು ಇರಬಹುದು. ನಮ್ಮ ಡ್ಯೂಟಿ ಚೀಫ್ ಮಿನಿಸ್ಟರ್ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಡ್ಯೂಟಿ. ಯಾರೂ ಹದ್ದು ಮೀರಿ ಹೋಗಬಾರದು ಅಂತ ಈಗಾಗಲೇ ಹೇಳಿದ್ದೇವೆ, ಹೈಕಮಾಂಡ್ ಕೂಡ ಹೇಳಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಲ್ಲಿ ಇದ್ದೀನಿ. ಜಮೀರ್ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಎಂದು ಜಮೀರ್ ಅಹಮದ್ ಗೆ ನೇರವಾಗಿ ಎಚ್ಚರಿಕೆ ಕೊಟ್ಟರು.
ಇನ್ನು ಬಡ ಕೊರೊನಾ ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿರುವ ಹಿನ್ನೆಲೆ ಕೋವಿಡ್ ಸಾವುಗಳ ಆಡಿಟ್ ಆಗಬೇಕು ಎಂದು ಡಿಕೆಶಿ ಒತ್ತಾಯಿಸಿದರು. ಮೃತಪಟ್ಟವರೆಲ್ಲರಿಗೂ ಪರಿಹಾರ ಸಿಗಬೇಕು, ಕೆಲವರು ಕೋವಿಡ್ ನಿಂದ ಮನೆಯಲ್ಲೇ ಸತ್ತಿದ್ದಾರೆ. ಸತ್ತವರ ಕುಟುಂಬದವರು ಒಂದು ಅರ್ಜಿ ಸಲ್ಲಿಸಬೇಕು, ಇದನ್ನ ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ. ಪ್ರತಿಪಕ್ಷಗಳನ್ನ ಮುಚ್ಚಿಟ್ಟು ಡೆತ್ ಆಡಿಟ್ ಮಾಡ್ತಿದ್ದಾರೆ. ಡೆತ್ ಅಡಿಟ್ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. ಸತ್ತಿದ್ದನ್ನ ಮುಚ್ಚಿಡಲು ಸಾಧ್ಯವಿಲ್ಲ, ಅವರು ಮುಚ್ಚಿರೋದನ್ನ ನಾವು ಬಿಚ್ಚಿಡ್ತೇವೆ ಎಂದು ಸವಾಲು ಹಾಕಿದರು.