ಬೆಂಗಳೂರು ಫೆ 20 : ಟೂಲ್ ಕಿಟ್ ಪ್ರಕರಣದಡಿ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ಅಕ್ರಮ ಬಂಧನ ಹಾಗೂ ದಿಶಾ ಕೊಲೆಗೆ ಟ್ವಿಟರ್ ಮೂಲಕ ಕರೆ ಕೊಟ್ಟ ಹರಿಯಾಣ ಸಚಿವ ಅನಿಲ್ ವಿಜ್ ವಿರುದ್ದ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿ ಹಲವು ಸಂಘಟನೆಗಳ ನಿಯೋಗ ಶುಕ್ರವಾರ (ಫೆ.19) ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.
ದೆಹಲಿಯ ಪೊಲೀಸರು ನಮ್ಮ ರಾಜ್ಯದ ಪೊಲೀಸರಿಗೆ ತಿಳಿಸದೆ ದಿಶಾ ಅವರ ಬಂಧನ ಮಾಡಿದೆ. ಅವರ ವಕೀಲರ ಜತೆ ಸಮಾಲೋಚಿಸಲು ಅವಕಾಶ ನೀಡದೆ, ಇಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸದಿರುವುದು ಖಂಡನೀಯ. ದಿಶಾ ರವಿ ಬಂಧನ ಖಂಡಿಸಿ ಸಾರ್ವಜನಿಕರು ಫೆ. 15 ರಂದು ಬೆಂಗಳೂರು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಆದರೆ ಇಲ್ಲಿಯ ತನಕ ಯಾವುದೆ ಕ್ರಮ ತೆಗೆದುಕೊಂಡಿಲ್ಲ ಎಂದು ನಿಯೋಗದಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಮನವಿ ಸ್ವೀಕರಿಸಿದ ಗೃಹ ಸಚಿವರು, ಎರಡು ದಿನಗಳಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಹಾಗು ಪೊಲೀಸ್ ಇಲಾಖೆಯ ಸಭೆ ಕರೆದು ಈ ವಿಷಯ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇನ್ನು ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ನಮ್ಮೂರ ಭೂಮಿ ನಮಗಿರಲಿ ವೇದಿಕೆ, ಅಖಿಲ ಭಾರತ ವಿಧ್ಯಾರ್ಥಿ ಸಂಘಟನೆ , ಅಖಿಲಾ ಭಾರತ ಪ್ರಗತಿಪರ ಮಹಿಳಾ ಸಂಘಟನೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕ, ದ್ವೇಷದ ಮಾತಿನ ವಿರುದ್ದ ಜನಾಂದೋಲನ, ಆಲ್ ಇಂಡಿಯ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಹಾಗು ವಕೀಲರಿದ್ದರು.