ಮಧ್ಯಪ್ರದೇಶ ಬಿಜೆಪಿಯಲ್ಲಿ ಅಸಮಾಧಾನ, ಪಕ್ಷ ತೊರೆಯುತ್ತಿರುವ ಪ್ರಮುಖ ಬಿಜೆಪಿ ನಾಯಕರು..!

ಐದು ತಿಂಗಳಲ್ಲಿ ನಾಲ್ವರು ನಾಯಕರು ಪಕ್ಷಕ್ಕೆ ಗುಡ್ ಬೈ!

ಭೋಪಾಲ್: ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಪ್ರಮುಖ ನಾಯಕರು ಪಕ್ಷವನ್ನು ತೊರೆಯುತ್ತಿರುವುದು ರಾಜಕೀಯ ಸಂಚಲನವನ್ನು ಸೃಷ್ಟಿಸಿದೆ.

ಮಾಜಿ ಶಾಸಕ ಗಿರಿಜಾ ಶಂಕರ್ ಶರ್ಮಾ ಶುಕ್ರವಾರ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಕಳೆದ ಐದು ತಿಂಗಳಲ್ಲಿ ಆಡಳಿತಾರೂಢ ಬಿಜೆಪಿ ತೊರೆದಿರುವ ನಾಲ್ಕನೇ ಬಿಜೆಪಿ ನಾಯಕ ಇವರಾಗಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಆಪ್ತ ಉದ್ಯಮಿ ಅದಾನಿಯ ಮತ್ತೊಂದು ಮೋಸ ಬಹಿರಂಗ | ಸ್ವಂತ ಷೇರುಗಳ ಮೇಲೆಯೆ ರಹಸ್ಯ ಹೂಡಿಕೆ!

ಅಂಕಿ ಅಂಶಗಳ ಪ್ರಕಾರ ಕಳೆದ ಐದು ತಿಂಗಳಲ್ಲಿ ನಾಲ್ಕಕ್ಕೂ ಹೆಚ್ಚು ನಾಯಕರು  ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಟ್ಟಿ ಇನ್ನಷ್ಟು ಬೆಳೆಯುವ ಸಾಧ್ಯತೆ ಇದ್ದು ಬಿಜೆಪಿಯ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿ ಪರಣಮಿಸಿದೆ.

ಗಿರಿಜಾ ಶಂಕರ್ ಶರ್ಮಾ ಪ್ರಬಲ ಬ್ರಾಹ್ಮಣ ನಾಯಕರಾಗಿದ್ದು,  ನರ್ಮದಾಪುರಂ ಜಿಲ್ಲೆಯಲ್ಲಿ ಶರ್ಮಾ ಕುಟುಂಬದ ಇಬ್ಬರು ನಾಯಕರು ಸತತ ಏಳು ಬಾರಿ ಅಂದ್ರೆ 1990, 1993, 1998, 2013 ಮತ್ತು 2018ರ ನಡುವೆ ಹೊಶಂಗಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಹಾಲಿ ಶಾಸಕ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಡಾ. ಸೀತಾಸರಣ್ ಶರ್ಮಾ ಅವರು ಕೂಡ ಐದು ಬಾರಿ ಅಂದ್ರೆ, 1990, 1993, 1998, 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಇತ್ತೀಚೆಗೆ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ನಾಥ್‌ ಹಾಗೂ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ದಿಗ್ವಿಜಯಸಿಂಗ್‌ ಅವರನ್ನು ಭೇಟಿಯಾಗಿದ್ದನ್ನು ಗಿರಿಜಾ ಶಂಕರ್ ಶರ್ಮಾ ಒಪ್ಪಿಕೊಂಡಿದ್ದು, ಅತ್ಯುತ್ತಮ ವಿರೋಧ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡುತ್ತೇನೆ. ಆದರೆ ಅದು ಕಾಂಗ್ರೆಸ್ ಸೇರುವ ಅಥವಾ ಅದಕ್ಕೆ ಬಾಹ್ಯ ಬೆಂಬಲ ನೀಡುವ  ಮೂಲಕ ಮಾಡಬಹುದೇ ಎಂಬುದನ್ನು ನೋಡಬೇಕಾಗಿದೆ. ಚುನಾವಣೆಗೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ಯಾವ ಪಕ್ಷಕ್ಕೆ ಸೇರಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಮುಖವಾಗಿ, ಜ್ಯೋತಿರಾದಿತ್ಯ ಸಿಂಧಿಯಾ ಆಪ್ತ ಶಿವಪುರಿ ಜಿಲ್ಲೆಯ ಕೋಲಾರಸ್ ಕ್ಷೇತ್ರದ ಬಿಜೆಪಿ ಶಾಸಕ ವೀರೇಂದ್ರ ರಘುವಂಶಿ ಬಿಜೆಪಿ ತೊರೆದ ಕೇವಲ ಒಂದು ದಿನದ ನಂತರ ಹಿರಿಯ ನಾಯಕರಾಗಿದ್ದ ಶರ್ಮಾ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರಘುವಂಶಿ ಶನಿವಾರ ಭೋಪಾಲ್‌ನಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ಕೇವಲ ಇವರು ಮಾತ್ರವಲ್ಲದೇ ಇನ್ನೂ ಹಲವು ಹಿರಿಯ ನಾಯಕರುಗಳು ಬಿಜೆಪಿಯನ್ನು ತೊರೆಯುವ ಸಾಧ್ಯತೆಗಳು ಇದೀಗ ಮಧ್ಯಪ್ರದೇಶ ಬಿಜೆಪಿಯಲ್ಲಿ ದಟ್ಟವಾಗಿ ಕಾಣಿಸುತ್ತಿದೆ. ಇದರ ನಡುವೆ ರಾಜ್ಯದಲ್ಲಿ ಎದ್ದಿರುವ ಬಿಜೆಪಿ ಆಡಳಿತ ವಿರೋಧಿ ಅಲೆ ಇದೀಗ ಮಧ್ಯಪ್ರದೇಶ ಬಿಜೆಪಿಯನ್ನು ನುಂಗಿ ಹಾಕುತ್ತಿದೆ.

 

 

Donate Janashakthi Media

Leave a Reply

Your email address will not be published. Required fields are marked *