ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಅಂತ್ಯಕ್ರಿಯೆ: ಅಂತಿಮ ವಿದಾಯ ಹೇಳಿದ ಗಣ್ಯರು

ಮುಂಬಯಿ: ಭಾರತೀಯ ಸಿನಿ ಸಂಗೀತಕ್ಕೆ ಕೊಡುಗೆ ನೀಡಿದ ಬಪ್ಪಿ ಲಹರಿ ಅವರಿಗೆ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಬಪ್ಪಿ ಅವರಿಗೆ ಕಣ್ಣೀರಿನ ವಿದಾಯ ಹೇಳಿದರು.

69 ವರ್ಷದ ಬಪ್ಪಿ ಲಹರಿ ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದ್ದರು. ಇಂದು ಮಧ್ಯಾಹ್ನ ಹೂವಿನಿಂದ ಅಲಂಕರಿಸಿದ್ದ ಟ್ರಕ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಮುಂಬೈನ ಪವನ್ ಹನ್ಸ್ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.

ಅಂತಿಮ ವಿಧಿವಿಧಾನಗಳನ್ನು ನೇರವೇರಿಸಿದ ನಂತರ ಗಾಯಕ ಬಪ್ಪಾ ಲಹಿರಿ(ಬಪ್ಪಿ ಪುತ್ರ) ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ವಿದ್ಯಾ ಬಾಲನ್, ಅಲ್ಕಾ ಯಾಗ್ನಿಕ್, ಶಾನ್, ಇಲಾ ಅರುಣ್, ಲಲಿತ್ ಪಂಡಿತ್ ಹಾಗೂ ರೂಪಾಲಿ ಗಂಗೂಲಿ ಸೇರಿದಂತೆ ಹಲವು ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಡಿಸ್ಕೋ ಸಂಗೀತಕ್ಕೆ ಹೊಸ ಮೆರುಗು ನೀಡಿದ ಬಪ್ಪಿ ಲಹರಿ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ 500ಕ್ಕೂ ಹೆಚ್ಚಿನ ಸಿನಿಮಾಗಳಿಗೆ 5000ಕ್ಕೂ ಅಧಿಕ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ನವೆಂಬರ್ 27, 1952 ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದ್ದ ಬಪ್ಪಿ ಲಹರಿ(ಅಲೋಕೇಶ್ ಲಹರಿ). ಸಂಗೀತದ ಕುಟುಂಬದಲ್ಲೇ ಹುಟ್ಟಿ ಬೆಳೆದವರು. ತಮ್ಮ ಮೂರನೇ ವಯಸ್ಸಿಗೇ ತಬಲ ಬಾರಿಸುವುದನ್ನು ಕಲಿತಿದ್ದ ಇವರು, ಚಿಕ್ಕ ವಯಸ್ಸಿಗೇ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಕೊಂಡಿದ್ದರು.

70, 80 ಮತ್ತು 90ರ ದಶಕದಲ್ಲಿ ಡಿಸ್ಕೋ ಸಾಂಗ್ಸ್ ಮತ್ತು ಡ್ಯಾನ್ಸ್ ನಂಬರ್‌ಗಳನ್ನು ನೀಡಿ ಜನರ ಮನ ಗೆದ್ದಿದ್ದರು. ಬರೀ ಬಾಲಿವುಡ್‌ನಲ್ಲಿ ಮಾತ್ರವಲ್ಲದೆ, ಬೆಂಗಾಲಿ, ತಮಿಳು, ತೆಲುಗು, ಗುಜರಾತಿ ಮತ್ತು ಕನ್ನಡ ಚಿತ್ರಗಳಿಗೂ ಬಪ್ಪಿ ಲಹರಿ ಸಂಗೀತ ಸಂಯೋಜನೆ ಮಾಡಿದ್ದರು.

2021ರಲ್ಲಿ ಬಪ್ಪಿ ಲಹರಿ ಅವರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು. ಕೊರೊನಾ ವೈರಸ್ ಸೋಂಕು ತಗುಲಿದ ಬಳಿಕ ಅವರು ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಕಳೆದ ಒಂದು ತಿಂಗಳಿನಿಂದ ಬಪ್ಪಿ ಲಹರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಆದರೆ, ಮಂಗಳವಾರ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಗುರುವಾರ ಮರಣ ಹೊಂದಿದರು.

ರಾಜಕೀಯ ರಂಗವನ್ನು ಪ್ರವೇಶಿಸಿದ್ದ ಬಪ್ಪಿ ಲಹರಿ, 2014ರಲ್ಲಿ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದು ಸೋಲು ಕಂಡಿದ್ದರು. ಬಪ್ಪಿ ಲಹರಿ ಚಿನ್ನಾಭರಣ ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದರು. 2014ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ 967 ಗ್ರಾಂ ಚಿನ್ನ, 8.9 ಕೆ. ಜಿ. ಬೆಳ್ಳಿ, 4 ಕೋಟಿ ರೂ. ಮೌಲ್ಯದ ವಜ್ರವಿದೆ ಎಂದು ಹೇಳಿದ್ದರು.

ಶೋ ಆಗಿರಲಿ, ಕಾರ್ಯಕ್ರಮ ಎಲ್ಲಿಯೇ ಇರಲಿ, ಅದಕ್ಕೆ ತಕ್ಕಂತೆ ಅವರು ಚಿನ್ನಾಭರಣಗಳನ್ನು ಧರಿಸುತ್ತಿದ್ದರು. ರಿಯಾಲಿಟಿ ಶೋಗಳಲ್ಲಿ ತಮಗೆ ಕಾಡಿದ ಹಾಡುಗಾರನಿಗೆ ಅವರು ಸಾಕಷ್ಟು ಭಾರಿ ತಮ್ಮ ಮೈಮೇಲಿನ ಆಭರಣವನ್ನು ಬಿಚ್ಚಿಕೊಟ್ಟಿದ್ದೂ ಇದೆ.

ಏಳು ದೊಡ್ಡ ಸರಗಳು, ಎಂಟು ಚಿಕ್ಕ ಸರ ಹಾಗೂ ದೊಡ್ಡದಾಗಿ ಲಾಕೆಟ್ ಹೊಂದಿರುವ ಎರಡು ಸರಗಳನ್ನು ಕೊರಳಿಗೆ ಹಾಕಿದರೆ, ಒಟ್ಟು ಹನ್ನೊಂದು ಉಂಗುರಗಳನ್ನು ಅವರು ಧರಿಸುತ್ತಿದ್ದರು. ಒಂದೊಂದು ಬಾರಿ ಚಿನ್ನ ಲೇಪಿತ ಬಟ್ಟೆಯನ್ನೇ ಹಾಕಿಕೊಂಡು ಬಂದು ಅಚ್ಚರಿ ಮೂಡಿಸುತ್ತಿದ್ದರು. ಇವುಗಳನ್ನು ಕಾಯಲೆಂದೇ ಅವರು ಇಬ್ಬರು ಅಂಗರಕ್ಷಕರನ್ನೂ ಇಟ್ಟುಕೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *