ಬಿ.ವಿ. ರಾಘವಲು
(ವರದಿ/ಅನುವಾದ : ಸಿ ಸಿದ್ದಯ್ಯ)
ಕರ್ನಾಟಕ ಸರಕಾರದ ಪಂಚ ಗ್ಯಾರಂಟಿಗಳು ಮತ್ತು ನವ-ಉದಾರವಾದಿ ಸಂದರ್ಭದಲ್ಲಿ ನೇರ ನಗದು ವರ್ಗಾವಣೆ ಯೋಜನೆಗಳ ಬಗ್ಗೆ ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ಸದಸ್ಯರಾದ ಬಿ.ವಿ. ರಾಘವಲು ಜುಲೈ 25ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡಿದರು. ಇದು ಅವರ ಉಪನ್ಯಾಸದ ಭಾವಾನುವಾದ ಮತ್ತು ವರದಿ. ಎಲ್ಲ ನೇರ ನಗದು ವರ್ಗಾವಣೆ ಯೋಜನೆಗಳು ಜನಪರವೇ? ಸರ್ಕಾರಗಳು ಇಂತಹ ‘ನೇರ ನಗದು ವರ್ಗಾವಣೆ ಯೋಜನೆ ಗಳಿಗೆ ಯಾಕಿಷ್ಟು ಮಹತ್ವ ಕೊಡುತ್ತಿವೆ? ಇದರರ್ಥ ಈ ಸರಕಾರಗಳು ನವ-ಉದಾರವಾದಿ ನೀತಿ ಬಿಟ್ಟು ಕಲ್ಯಾಣ ರಾಜ್ಯದ ನೀತಿಗಳತ್ತ ಹೋಗುತ್ತಿವೆ ಎಂದೇ? ಸಬ್ಸಿಡಿ, ನೇರ ನಗದು ವರ್ಗಾವಣೆ ಅಭಿವೃದ್ಧಿ-ವಿರೋಧಿಯೇ ? ಅದರಿಂದ ಜನ ಸೋಮಾರಿಗಳಾಗುತ್ತಾರೆಯೇ? – ಈ ಪ್ರಶ್ನೆಗಳನ್ನು ಹಾಕಿಕೊಂಡು ರಾಘವುಲು ತಮ್ಮ ಉಪನ್ಯಾಸದಲ್ಲಿ ಅವುಗಳಿಗೆ ಉತ್ತರಿಸುತ್ತಾರೆ.
ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ತಾನು ನೀಡಿದ ಐದು ಗ್ಯಾರಂಟಿಗಳ ಈಡೇರಿಕೆಗೆ ಮುಂದಾಗಿದೆ. ಅದರಲ್ಲಿ ಬಿಪಿಎಲ್ ಕುಟುಂಬದ ಸದಸ್ಯರಿಗೆ ಹತ್ತು ಕೆಜಿ ಉಚಿತ ಅಕ್ಕಿ ನೀಡುವ ಭರವಸೆಯೂ ಒಂದು. ರಾಜ್ಯ ಸರ್ಕಾರ ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡುವ ಬದಲಿಗೆ 170 ರೂ. ನಗದನ್ನು ಡಿಬಿಟಿ (Direct Benefit Transfer – DBT) ಮೂಲಕ ವರ್ಗಾವಣೆ ಮಾಡತೊಡಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳಲ್ಲಿ ಸರಕುಗಳ ಬದಲಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಡಿಬಿಟಿ ಜನರಿಗೆ ಅನುಕೂಲಕರವೋ ಅನಾನುಕೂಲವೋ? ಸರ್ಕಾರಗಳು ಇಂತಹ ‘ನೇರ ನಗದು ವರ್ಗಾವಣೆ ಯೋಜನೆ ಗಳಿಗೆ ಯಾಕಿಷ್ಟು ಮಹತ್ವ ಕೊಡುತ್ತಿವೆ? ಒಂದು ಕಡೆ ನವ-ಉದಾರವಾದಿ ನೀತಿಗಳು ಎಲ್ಲಾ ಸಬ್ಸಿಡಿಗಳನ್ನು, ಕಲ್ಯಾಣ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಹೇಳುತ್ತವೆ. ಆದರೆ ನವ-ಉದಾರವಾದಿ ನೀತಿಗನ್ನು ಅಪ್ಪಿಕೊಂಡಿರುವ ಕರ್ನಾಟಕ ಮಾತ್ರವಲ್ಲ, ಹಲವು ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಸಹ ಇಂತಹ ಹೆಚ್ಚೆಚ್ಚು ಯೋಜನೆಗಳನ್ನು ಪ್ರಕಟಿಸುತ್ತಿವೆ. ಇದರರ್ಥ ಈ ಸರಕಾರಗಳು ನವ-ಉದಾರವಾದಿ ನೀತಿ ಬಿಟ್ಟು ಕಲ್ಯಾಣ ರಾಜ್ಯದ ನೀತಿಗಳತ್ತ ಹೋಗುತ್ತಿವೆ ಎಂದೇ? ಎಂಬ ಪ್ರಶ‍್ನೆಯನ್ನು ವಿವರವಾಗಿ ಪರಿಶೀಲಿಸಬೇಕು.
ಕರ್ನಾಟಕ ಸರ್ಕಾರ ತಾನು ಚುನಾವಣೆ ಸಂದರ್ಭದಲ್ಲಿ ಘೊಷಿಸಲಾದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದು ಇಡೀ ದೇಶದ ಗಮನ ಸೆಳೆದಿದೆ. ಇತರೆ ರಾಜ್ಯಗಳಲ್ಲಿ ಮುಂದೆ ನಡೆಯುವ ಚುನಾವಣೆಗಳಲ್ಲಿ ಇಂಥದೇ ಗ್ಯಾರಂಟಿ ಘೋಷಣೆಗಳು ರಾಜಕೀಯ ಪಕ್ಷಗಳಿಂದ ಬರುವ ಸಾಧ್ಯತೆ ಇದೆ. ರಾಜ್ಯದ ಹಣಕಾಸಿನ ಕೊರತೆ ಇರುವಾಗ ಇವುಗಳ ಜಾರಿ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ಸರ್ಕಾರದ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ, 200 ಯೂನಿಟ್ ವರೆಗಿನ ಗೃಹ ಬಳಕೆ ವಿದ್ಯುತ್ ಉಚಿತ ಎಂಬ ಗೃಹ ಜ್ಯೋತಿ ಯೋಜನೆ, ಕುಟುಂಬದ ಹಿರಿಯ ಮಹಿಳೆಗೆ 2,000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಕೆಜಿ ಉಚಿತ ಅಕ್ಕಿ ವಿತರಣೆ, ನಿರುದ್ಯೋಗ ಪದವೀದರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆ. ಈ ಎಲ್ಲಾ ಯೋಜನೆಗಳ ಜಾರಿಗೆ ವರ್ಷಕ್ಕೆ 52,000 ಕೋಟಿ ರೂ.ಗಳ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರ ಅಂದಾಜು ಮಾಡಿದೆ. ಈ ವರ್ಷದ ಬಜೆಟ್ ನಲ್ಲಿ 36,000 ಕೋಟಿ ರೂ.ಗಳನ್ನು ಮಾತ್ರ ಮೀಸಲಿಟ್ಟಿದೆ. ಈ ಯೋಜನೆಗಳಿಗೆ ಮುಂದಿನ ಬಜೆಟ್ ವರೆಗಿನ 9 ತಿಂಗಳ ಅವಧಿಗೆ 40 ಸಾವಿರ ಕೋಟಿಗೂ ಹೆಚ್ಚು ಹಣದ ಅಗತ್ಯವಿದೆ. ಈ ಎಲ್ಲಾ ಹಣವನ್ನು ಸರ್ಕಾರ ಹೇಗೆ ತುಂಬಿಕೊಳ್ಳುತ್ತದೆ ಎಂಬುದನ್ನು ಪರಿಶೀಲಿಸಬೇಕಿದೆ.
ರಾಜಕೀಯ ಲಾಭ ತಂದ ಗ್ಯಾರಂಟಿಗಳು
ಇಂತಹ ಗ್ಯಾರಂಟಿ ಯೋಜನೆಗಳಿಂದ ಯಾರಿಗೆಲ್ಲಾ ಅನುಕೂಲವಾಗಿದೆ ಎಂಬುದನ್ನು ನಾವು ನೋಡಬೇಕು. ಮೊದಲನೆಯಾಗಿ ಇಲ್ಲಿನ ಕಾಂಗ್ರೆಸ್ ಗೆ ಇದು ರಾಜಕೀಯ ಲಾಭ ತಂದುಕೊಟ್ಟಿದೆ. ಸಿದ್ದರಾಮಯ್ಯ ಮುಂಖ್ಯಮಂತ್ರಿಯಾಗಿದ್ದಾರೆ. ದೇಶದ ಜಾತ್ಯಾತೀತ ಪಕ್ಷಗಳಿಗೆ ಪುಷ್ಠಿ ನೀಡಿದೆ. ಬಿನ್ನ ನಿಲುವುಗಳನ್ನು ಹೊಂದಿರುವ ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಸಭೆ ಸೇರಲು ಇದು ಪ್ರೇರಕವಾಗಿದೆ.
ಎರಡನೆಯದಾಗಿ, ರಾಜ್ಯದ ಕೋಟ್ಯಾಂತರ ಜನತೆಗೆ ಹಣ ವರ್ಗಾವಣೆ ಆಗುತ್ತದೆ. ಇವೆಲ್ಲವೂ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಲಾಭವಾಗುತ್ತದೆ. ಶ್ರೀಮಂತರಿಗೆ ಈ ಯೋಜನೆಗಳಿಂದ ಲಾಭವಿಲ್ಲ. ಇದನ್ನು ನಾವು ಹೇಗೆ ನೋಡಬೇಕೆಂದರೆ, ಸಾಮಾನ್ಯ ಬಸ್ಸುಗಳಲ್ಲಿ ಮಾತ್ರ ಉಚಿತ ಪ್ರಯಾಣ ಸೌಲಭ್ಯ ಇದೆ. ಐಶಾರಾಮಿ ಬಸ್ಸುಗಳಿಗೆ ಈ ಸೌಲಭ್ಯ ಇಲ್ಲ. ಅಂದರೆ, ಸಾಮಾನ್ಯ ಬಸ್ಸುಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಮಾತ್ರ ದೊಡ್ಡ ಪ್ರಮಾಣದಲ್ಲಿ ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಾರೆ. ಸಿರಿವಂತ ಮಹಿಳೆಯರು ಎಂದೂ ಸಾಮಾನ್ಯ ಬಸ್ಸುಗಳಲ್ಲಿ ಪ್ರಯಾಣ ಮಾಡುವುದಿಲ್ಲ. ಮುಖ್ಯವಾಗಿ, ಮಹಿಳೆಯರು ಉದ್ಯೋಗದ ಸ್ಥಳಗಳಿಗೆ ಪ್ರಯಾಣಿಸುವ ಮೂಲಕ ಆರ್ಥಿಕದಲ್ಲಿ, ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಇದರಿಂದ ಹೆಚ್ಚಿನ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಮೊದಲ ಹಂತದಲ್ಲಿ ದೇವಸ್ಥಾನಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದೆ. ಆದರೆ ಈ ಯೋಜನೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಇತರೆ ಕಾರ್ಮಿಕರ ಹೋರಾಟಗಳಿಗೆ ಹೆಚ್ಚು ಮಹಿಳೆಯರನ್ನು ಸೇರಿಸಲು ಅನುಕೂಲ ಸಹ ಆಗಬಹುದು.
ಬಿಪಿಎಲ್ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಉಚಿತ ಅಕ್ಕಿ ವಿತರಣೆ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಶ್ರೀಮಂತ ಕುಟುಂಬಗಳಿಗೆ ಇದರ ಲಾಭ ಸಿಗುವುದಿಲ್ಲ. 200 ಯೂನಿಟ್ ವರೆಗಿನ ಗೃಹ ಬಳಕೆಯ ವಿದ್ಯತ್ ಉಚಿತ ಯೋಜನೆಯೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಲಾಭವಾಗುತ್ತದೆ. ಸ್ಥೂಲವಾಗಿ ಇವು ಜನಪಪರವಾಗಿದ್ದು ಇವು ಸ್ವಾಗತಾರ್ಹ.
ನೇರ ನಗದು ವರ್ಗಾವಣೆಯ ಉದ್ದೇಶವೇನು?
ಭಾರತಕ್ಕೆ ಡಿಬಿಟಿ (ನೇರ ನಗದು ವರ್ಗಾವಣೆ) ಹೊಸದೇನಲ್ಲ. ಅಥವಾ ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಹಲವು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಹಲವು ಬಗೆಯಲ್ಲಿ ಉಚಿತ ಘೋಷಣೆ ಮಾಡುತ್ತವೆ. ಹಲವು ರಾಜ್ಯಗಳಲ್ಲಿ ಹಣ ವರ್ಗಾವಣೆ ಯೋಜನೆಗಳಿವೆ. ಉದಾಹರಣೆಗೆ ಆಂಧ‍್ರ ಪ್ರದೇಶದಲ್ಲಿ 78 ಇಂತಹ ಯೋಜನೆಗಳಿವೆ. ಮೋದಿ ಸರಕಾರವೂ ಉಚಿತ ಮತ್ತು ಡಿಬಿಟಿ ಯೋಜನೆ ಜಾರಿಗೆ ತಂದಿದೆ. ಡಿಬಿಟಿ ಯೋಜನೆಗಳು ಮತ್ತು ನವ ಉದಾರವಾದಿ ನೀತಿಗಳ ಸಂಬಂಧಗಳನ್ನು ನೋಡಿದರೆ ಅವುಗಳ ನಡುವೆ. ಪರಸ್ಪರ ವಿರೋಧವಿಲ್ಲ. ಬದಲಾಗಿ ಒಂದಕ್ಕೊಂದು ಪೂರಕವಾಗಿವೆ ಎಂದು ಕಂಡು ಬರುತ್ತದೆ. ನವ ಉದಾರವಾದಿ ಭಾಗವಾಗಿಯೇ ಡಿಬಿಟಿ ಯೋಜನೆ ಜಾರಿಗೆ ತರಲಾಗುತ್ತಿದೆ. ಅದು ಹೇಗೆ ಎಂದು ಮುಂದೆ ನೋಡೋಣ.
ಮೊದಲನೆಯದಾಗಿ ವಸ್ತು (ಸರಕು/ಸೇವೆ) ರೂಪದಲ್ಲಿ ಸವಲತ್ತು ಗಳನ್ನು ಒದಗಿಸುವುದು, ನಗದು ರೂಪದ ಸಹಾಯಕ್ಕಿಂತ ಒಳ್ಳೆಯದೆಂದು ಅರ್ಥ ಮಾಡಿಕೊಳ್ಳಬೇಕು. ನಗದು ಸಹಾಯ ಸೂಕ್ತವೆನಿಸಿದಾಗ, ಮೊದಲು, ನೇರ ನಗದು ವರ್ಗಾವಣೆ ಬಡವರಿಗೆ, ಸಾಮಾಜಿಕವಾಗಿ ಹಿಂದುಳಿದವರಿಗೆ ಅನುಕೂಲ ಆಗುತ್ತದೆಯೇ ಎಂಬುವುದನ್ನು ನಾವು ನೋಡಬೇಕು. ಆದೇ ಸಂದರ್ಭದಲ್ಲಿ ಕೆಲವೊಮ್ಮೆ ಅದು ಕಾರ್ಪೊರೇಟ್ ಕಂಪನಿಗಳ ಲಾಭಕ್ಕೆ, ಕೆಲವೊಂದು ಯೋಜನೆಗಳು ಕೋಮುವಾದಿಗಳ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತವೆ ಎಂಬುದನ್ನು ಗಮನಿಸಬೇಕು.
ಉದಾಹರಣೆಗೆ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ ಕೃಷಿ ಭೂಮಿ ಹೊಂದಿರುವ ರೈತರಿಗೆ 6,000 ರೂ. ಗಳನ್ನು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಕೆಲವು ರಾಜ್ಯ ಸರ್ಕಾರಗಳೂ (ಉದಾ: ತೆಲಂಗಾಣ) 4,000 ರೂ ಕೊಡುತ್ತಿವೆ. ಇದು ಸ್ವಂತ ಭೂಮಿ ಹೊಂದಿರುವ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಹತ್ತಾರು ಎಕರೆ ಕೃಷಿ ಭೂಮಿ ಹೊಂದಿರುವ ಶ್ರೀಮಂತ ರೈತರಿಗೆ ಹೆಚ್ಚಿನ ಹಣ ಹೋಗುತ್ತದೆ. ಸ್ವಂತ ಕೃಷಿ ಭೂಮಿ ಇಲ್ಲದ ರೈತರಿಗೆ ಇದರ ಅನುಕೂಲ ಸಿಗುವುದಿಲ್ಲ. ದೇಶದಲ್ಲಿ ಶೇ. 60 ರಷ್ಟು ರೈತರಿಗೆ ಸ್ವಂತ ಜಮೀನು ಇಲ್ಲ. ಶೇಕಡ 40 ರಷ್ಟು ಭೂಮಿ ಕೇವಲ ಶೇಕಡ ಎರಡರಷ್ಟು ಭೂಮಾಲೀಕರ ಬಳಿ ಇದೆ. ಇದರರ್ಥ, ಕಿಸಾನ್ ಸಮ್ಮಾನ್ ಯೋಜನೆಯ ದೊಡ್ಡ ಮೊತ್ತ ದೊಡ್ಡ ಭೂಮಾಲೀಕರಿಗೆ ಹೋಗುತ್ತಿದೆ. ಈ ಯೋಜನೆ ಭೂಮಾಲೀಕರಿಗೆ ಅನುಕೂಲಕರವಾಗಿದೆ. ಬಡವರಿಗೆ ಅಲ್ಲ. ಈ ಯೋಜನೆ ಮೂಲಕ ಬಡ ರೈತರಿಗೆ ಮಾತ್ರ ನೆರವು ನೀಡಬೇಕು. ಗರಿಷ್ಠ ಭೂಮಿಯನ್ನು 2.5 ಎಕ್ಟೇರ್ ಎಂದು ನಿಗದಿ ಮಾಡಬೇಕು ಎಂಬುದು ನಮ್ಮ ನಿಲುವು.
ಇನ್ನು ಮಕ್ಕಳ ಶಾಲಾ ಶಿಕ್ಷಣಕ್ಕೆಂದು ಕೆಲವು ರಾಜ್ಯ ಸರ್ಕಾರಗಳು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುತ್ತವೆ. ಆ ಹಣ ಪೋಷಕರ ಹೊರೆಗೆ ಸ್ವಲ್ಪ ಪರಿಹಾರ ಕೊಡುತ್ತಲೇ, ಉಚಿತ ಶಿಕ್ಷಣ ಕೊಡಬಹುದಾದ ಸರಕಾರಿ ಶಾಲಾ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ಕೊಡುತ್ತವೆ. ಇದೇ ರೀತಿ ಹಲವು ಹೆಸರಿನ ಆರೋಗ್ಯ ಯೋಜನೆಗಳಿಗೆ ಸರ್ಕಾರ ಕೊಡುತ್ತಿರುವ ಹಣ ನೇರವಾಗಿ ಖಾಸಗಿ ಆಸ್ಪತ್ರೆಗಳ ಖಾತೆಗೆ ಹೋಗುತ್ತವೆ. ಈ ಯೋಜನೆಗಳು ಜನಪರ ಎನಿಸಿದರೂ, ಈ ಯೋಜನೆಗಳು ಖಾಸಗಿ ಆಸ್ಪತ್ರೆಗಳನ್ನು ಕೊಬ್ಬಿಸುತ್ತಾ ಉಚಿತ ಅಥವಾ ಅಗ್ದದ ಚಿಕಿತ್ಸೆ ನೀಡಬಹುಧಾಗಿದ್ದ ಸರಕಾರಿ ಆಸ್ಪತ್ರೆ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ.
ಪಡಿತರ ಸಾರ್ವತ್ರಿಕವಾಗಿರಬೇಕು
ಸಾರ್ವತ್ರಿಕವಾಗಿ ಅನುಕೂಲ ಇರುವುದನ್ನು ನಾವು ಬೆಂಬಲಿಸಬೇಕು. ಪಡಿತರ ವ್ಯವಸ್ಥೆ ಸಾರ್ವತ್ರಿಕವಾಗಿ ಇರಬೇಕೆಂದು ನಾವು ಒತ್ತಾಯಿಸುತ್ತೇವೆ. ಅವರು ಸಿರಿವಂತರೇ ಇರಲಿ, ಕಡು ಬಡವರೇ ಇರಲಿ, ಯಾರು ಪಡಿತರ ಅಕ್ಕಿ ಪಡೆಯಲು ನ್ಯಾಯಬೆಲೆ ಅಂಗಡಿ ಬಳಿ ಬರುತ್ತಾರೋ ಅವೆರೆಲ್ಲರಿಗೂ ಉಚಿತ ಅಕ್ಕಿ ಕೊಡಬೇಕು. ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಮಾತ್ರ ಪಡಿತರ ಆಹಾರ ಧಾನ್ಯಗಳು ಎನ್ನುತ್ತಾ, ನಿಜವಾದ ಬಡವರೂ ಇದರಿಂದ ವಂಚಿತರಾಗುವಂತೆ ಮಾಡುವ ಇಂದಿನ ವ್ಯವಸ್ಥೆ ಬದಲಾಗಬೇಕು. ಆಹಾರ ಭದ್ರತೆ ಹಣದ ರೂಪದಲ್ಲಿ ಇರಬಾರದು. ವಸ್ತುವಿನ ರೂಪದಲ್ಲಿ ಇರಬೇಕು. ಆದರೆ, ಸರ್ಕಾರಗಳು ವಸ್ತುಗಳ ಬದಲಿಗೆ ನಗದು ನೀಡತೊಡಗಿವೆ. ಇದು ಸರಿಯಲ್ಲ. ಆದಷ್ಟು ಮಟ್ಟಿಗೆ ಸರಕಾರ ಬಡವರಿಗೆ ಕೊಡುವ ಸವಲತ್ತುಗಳು ವಸ್ತು ರೂಪದಲ್ಲಿ ಇರಬೇಕು, ಹಣದ ರೂಪದಲ್ಲಿ ಅಲ್ಲ ಎಂಬುದು ನಮ್ಮ ನಿಲುವು.
ಇದನ್ನೂ ಓದಿ:ವಿದೇಶಿ ಸಾಲಗಳ ಸರಳ ಅರ್ಥಶಾಸ್ತ್ರ ಮತ್ತು ಮೂರನೇ ಜಗತ್ತಿನ ದೇಶಗಳು
ಕರ್ನಾಟಕದ ರಾಜ್ಯ ಸರ್ಕಾರವೂ ತಾನು ನೀಡಿದ್ದ ಭರವಸೆಯಂತೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು, ಡಿಬಿಟಿ ಮೂಲಕ ನಗದು ನೀಡುವುದಾಗಿ ಹೇಳಿದೆ. ಪಡಿತರ ವ್ಯವಸ್ಥೆಯನ್ನು ನಾಶ ಮಾಡುವ ಗುರಿಯೊಂದಿಗೆ ಇವೆಲ್ಲವನ್ನು ಮಾಡಲಾಗುತ್ತಿದೆ. ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಗೆ ಡಿಬಿಟಿ ವ್ಯವಸ್ಥೆ ತಂದು ನಂತರ ಏನಾಯಿತು ಎಂಬುದು ನಮಗೆ ಗೊತ್ತಿದೆ. ಧಾನ್ಯಗಳ ಬದಲಿಗೆ ಕೂಪನ್ ಕೊಡುವ ಪದ್ದತಿ ಬಗ್ಗೆ ಕೆಲವು ರಾಜ್ಯಗಳು ಚಿಂತಿಸುತ್ತಿವೆ. ಅಂದರೆ, ಸರ್ಕಾರ ಕೊಡುವ ಕೂಪನ್ ಪಡೆದು, ಮುಕ್ತ ಮಾರುಕಟ್ಟೆ ದರದಲ್ಲಿ ಧಾನ್ಯಗಳನ್ನು ಕೊಳ್ಳಬೇಕು. ಇದು ಖಾಸಗಿ ವ್ಯಾಪಾರಸ್ಥರಿಗೆ ಲಾಭವಾಗುತ್ತದೆ. ಆ ಕೂಪನ್ ಗಳು ಮದ್ಯದ ಅಂಗಡಿಗಳಿಗೂ ಹೋಗಬಹುದು. ನೇರ ನಗದು ಯೋಜನೆ ಅಥವಾ ಕೂಪನ್ ವಿತರಣೆ ವ್ಯವಸ್ಥೆ ಬಂದರೆ, ಪಡಿತರ ವಿತರಣೆಯ ಅಂಗಡಿಗಳ ಅವಶ್ಯಕತೆಯೂ ಇರುವುದಿಲ್ಲ, ಸರ್ಕಾರಿ ಗೋದಾಮುಗಳ ಅವಶ್ಯಕತೆಯೂ ಇರುವುದಿಲ್ಲ. ನವ-ಉದಾರವಾದಿ ಎಲ್ಲ ರೀತಿಯ ಸಬ್ಸಿಡಿಯ ಖರ್ಚುಗಳನ್ನು ಕಡಿತ ಮಾಡಬಯಸುತ್ತದೆ. ಮೊದಲು ವಸ್ತು ರೂಪದಿಂದ ನಗದು ವರ್ಗಾವಣೆಗೆ ಬದಲಾಯಿಸುವ ಮೂಲಕ ಆ ಮೇಲೆ ಅದನ್ನು ಕ್ರಮೇಣ ಕೈಬಿಡುವ ರೀತಿಯಲ್ಲಿ ಹಲವು ನೇರ ನಗದು ವರ್ಗಾವಣೆ ಯೋಜನೆಗಳು ನವ-ಉದಾರವಾದಿ ನೀತಿಗಳಿಗೆ ಪೂರಕವಾಗಿರುತ್ತದೆ.
ವಿದ್ಯುತ್ ಸಬ್ಸಿಡಿ, ಖಾಸಗೀಕರಣ
ಸರ್ಕಾರ ವಿದ್ಯುತ್ ದರ ನಿಗದಿಮಾಡುವ ಅಧಿಕಾರವನ್ನು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ನೀಡಿದೆ. ಆಯೋಗ ಬೇರೆ ಬೇರೆ ಹಂತದ ವಿದ್ಯುತ್ ಗೆ ಬೇರೆ ಬೇರೆ ದರ ನಿಗಧಿ ಮಾಡುತ್ತದೆ. ವಿದ್ಯುತ್ ಬಳಕೆದಾರರು ಉತ್ಪಾದನಾ ವೆಚ್ಚ ಪಾವತಿಸಬೇಕು ಎನ್ನುತ್ತಾರೆ. ಅದಕ್ಕಾಗಿ ವಿದ್ಯುತ್ ದರವನ್ನು ಹೆಚ್ಚಿಸುತ್ತಾರೆ. ವಿದ್ಯುತ್ ವಿತರಣೆಯ ವ್ಯವಸ್ಥೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸರ್ಕಾರಗಳು ಮುಂದಾಗಿವೆ. ಇಂದಿನ ವಿತರಣೆಯ ವ್ಯವಸ್ಥೆಯಿಂದಾಗಿ ಮತ್ತು ಸರ್ಕಾರಗಳು ವಿವಿದ ಹೆಸರುಗಳಲ್ಲಿ ಬಡವರ ಮನೆಗಳಿಗಳಿಗೆ, ಕೃಷಿ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದನ್ನು ನಿಲ್ಲಿಸಬೇಕು. ಜೊತೆಗೆ ರಿಯಾಯಿತಿ ದರದ ವಿದ್ಯುತ್ ಪೂರೈಕೆ ಎಂಬುದು ಇರಬಾರದು. ಶ್ರೀಮಂತರಿಗೆ ಹೆಚ್ಚು ದರ, ಬಡವರಿಗೆ ಕಡಿಮೆ ದರ ಅಥವಾ ಉಚಿತ ವಾಗಿ ಕೊಡುವ ಕ್ರಾಸ್-ಸಬ್ಸಿಡಿ ವ್ಯವಸ್ಥೆ ಹೋಗಬೇಕು. ಇದರಿಂದಾಗಿ ಕಂಪನಿಗಳಿಗೆ ನಷ್ಟವಾಗುತ್ತದೆ ಎಂಬುದು ಖಾಸಗಿ ಕಂಫನಿಗಳ ವಾದ. ಈ ಕಾರಣದಿಂದ ಸರ್ಕಾರದ ವಿದ್ಯುತ್ ವಿತರಣಾ ಕಂಪನಿಗಳನ್ನು ಖರೀದಿಸಲು ಖಾಸಗಿ ಸಂಸ್ಥೆಗಳು ಮುಂದೆ ಬರುತ್ತಿಲ್ಲ. ವಿದ್ಯುತ್ ಕಂಪನಿಗಳ ನಷ್ಟ ತಪ್ಪಿಸಬೇಕೆಂದರೆ, ವಿದ್ಯುತ್ ಗೆ ನೀಡುತ್ತಿರುವ ಎಲ್ಲಾ ರೀತಿಯ ಸಬ್ಸಿಡಿ ರದ್ದು ಮಾಡಬೇಕು. ಎಲ್ಲಾ ಗ್ರಾಹಕರಿಗೂ ಸ್ಮಾರ್ಟ್ ಮೀಟರ್ ಅಳವಡಿಸಬೇಕು.
ಹೆಚ್ಚು ಮತ್ತು ಕಡಿಮೆ ಬೇಡಿಕೆ ಆದಾರಿತವಾಗಿ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ದರ ನಿಗದಿಗೆ ಅವಕಾಶ ಇರಬೇಕು. ಓಲಾ ಕಂಪನಿ ಟ್ಯಾಕ್ಸಿ ಪ್ರಯಾಣ ದರವನ್ನು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ನಿಗದಿ ಮಾಡುತ್ತಿದೆಯಲ್ಲಾ ಹಾಗೆ. ವಿದ್ಯುತ್ ಗೆ ಹಗಲು ಮತ್ತು ರಾತ್ರಿ ಬೇರೆ ಬೇರೆ ದರ ನಿಗದಿಗೆ ಚಿಂತನೆಯೂ ನಡೆದಿದೆ. ಇದರಿಂದ ಡೈನಾಮಿಕ್ ರೇಟ್ ನಿರ್ಧಾರಕ್ಕೆ ಅನುಕೂಲವಾಗುತ್ತದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಗುರಿಯೊಂದಿಗೆ, ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒತ್ತಡ ಹೇರುತ್ತಿದೆ, ರಾಜ್ಯಗಳು ಇದನ್ನು ಪಾಲಿಸುತ್ತಿವೆ.
ರಾಜ್ಯ ಸರ್ಕಾರಗಳು ವಿದ್ಯುತ್ ಬಳಕೆದಾರರಿಗೆ ಸರ್ಕಾರ ಕೊಡಬಯಸುವ ಸಬ್ಸಿಡಿ ಹಣವನ್ನು ಡಿಬಿಟಿ ಮೂಲಕ ನಗದು ವರ್ಗಾವಣೆ ಮಾಡಲು ಮುಂದಾಗುತ್ತಿವೆ. ಎಲ್ಲ ಗ್ರಾಹಕರು ಮೀಟರ್ ಪ್ರಕಾರ ಬಿಲ್ ಪಾವತಿ ಮಾಡಬೇಕು. ಸರಕಾರ ಸಬ್ಸಿಡಿಯನ್ನು ಗ್ರಾಹಕರಿಗೆ ನೇರ ನಗದು ವರ್ಗಾವಣೆ ಮೂಲಕ ಕೊಡುತ್ತದೆ. ಒಂದು ಬಾರಿ ಸರಕು/ಸೇವೆಯ ಬೆಲೆ ಮತ್ತು ಸಬ್ಸಿಡಿ ಮೊತ್ತದ ನಡುವಿನ ಸಂಬಂಧ ಕಡಿತವಾದ ಮೇಲೆ ಕ್ರಮೇಣ ಅಡಿಗೆ ಗ್ಯಾಸ್ ತರಹ ಸಬ್ಸಿಡಿಯನ್ನು ಕಡಿಮೆ ಮಾಡುತ್ತಾ ಒಮ್ಮೆ ನಿಲ್ಲಿಸಿ ಬಿಡಬಹುದು. ಕಂಪನಿಗಳು ತಮಗೆ ಇಷ್ಟ ಬಂದಂತೆ ಬೆಲೆ ಹೆಚ್ಚಳ ಮಾಡುತ್ತವೆ. ಸರ್ಕಾರ ನಿಧಾನವಾಗಿ ಸಬ್ಸಿಡಿ ಮೊತ್ತ ಕಡಿತ ಮಾಡುತ್ತಾ, ಕಡೆಗೊಮ್ಮೆ ಸಂಪೂರ್ಣ ಸ್ಥಗಿತ ಮಾಡುತ್ತದೆ. ಗ್ರಾಹಕರು ಅನಿವಾರ್ಯವಾಗಿ ಖಾಸಗಿ ಕಂಪನಿಗಳು ನಿಗದಿ ಪಡಿಸಿದ ದರದಲ್ಲಿ ವಿದ್ಯುತ್ ಖರೀದಿಸಬೇಕಾದ ಅನಿವಾರ್ಯತೆ ಬರುತ್ತದೆ. ಹೀಗೆ ವಿದ್ಯುತ್ ಸಬ್ಸಿಡಿ ಮತ್ತು ವಿದ್ಯುತ್ ಖಾಸಗೀಕರಣ ಪರಸ್ಪರ ಪೂರಕವಾಗಿದ್ದು, ಅದನ್ನು ಜಾರಿ ಮಾಡುವ ಒಂದು ಹಂತವಾಗಿ ಯೋಜಿಸಲಾಗಿದೆ.
ಬಂಡವಾಳಶಾಹಿ ಉಳಿವಿಗಾಗಿ ನೇರ ನಗದು ವರ್ಗಾವಣೆ
ಹೀಗೆ ಎಲ್ಲ ಸರಕು-ಸೇವೆಗಳ ಖಾಸಗೀಕರಣದತ್ತ ಮತ್ತು ಎಲ್ಲ ವಸ್ತುಗಳ ಮೇಲಿನ ಸಬ್ಸಿಡಿ ಕಿತ್ತು ಹಾಕುವ ಮೊದಲ ಹಂತವಾಗಿ ನೇರ ನಗದು ವರ್ಗಾವಣೆ ಸಹಾಯಕವಾಗುತ್ತದೆ. ಆದರೆ ನವ-ಉದಾರವಾದಿ ನೀತಿಗಳ ಭಾಗವಾಗಿ ನೇರ ನಗದು ವರ್ಗಾವಣೆ ಮಾಡಲು ಇನ್ನೂ ಮೂಲಭೂತವಾದ ಬಲವಾದ ಇನ್ನೊಂದು ಕಾರಣವಿದೆ. ಜೊಸೆಫ್ ಸ್ಟಿಗ್ಲಿಟ್ಝ, ಥಾಮಸ್ ಪಿಕೆಟ್ಟಿ ಯಂತಹ ಅರ್ಥಶಾಸ್ತ್ರಜ್ಞರು ನವ-ಉದಾರವಾದಿ ನೀತಿಗಳಿಂದಾಗಿ ಭಾರಿ ಅಸಮಾನತೆ ಉಂಟಾಗಿದೆ ಮತ್ತು ಅದು ಭೀಕರವಾಗಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಆಕ್ಸ್ ಫಾಮ್, ಐಎಂಎಫ್, ವಿಶ್ವಬ್ಯಾಂಕ್ ಗಳು ಸಹ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಭಾರಿ ಅಸಮಾನತೆಯ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿವೆ.
ಅಮೆರಿಕಾ ಸೇರಿದಂತೆ ಜಗತ್ತಿನಲ್ಲಿ ನಿರುದ್ಯೋಗ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿದೆ. ಜನರ ಆದಾಯ ಕುಸಿತವಾಗಿದೆ. ಇದರಿಂದ ಉತ್ಪಾದನಾ ಸರಕುಗಳ ಮಾರಾಟ ಕುಸಿದಿದೆ. ಕೆಲವರ ಬಳಿ ಹಣವಿದೆ. ಬಹಳಷ್ಟು ಜನರ ಬಳಿ ಹಣವಿಲ್ಲ. ಜನರ ಆದಾಯ ಕುಸಿದರೆ, ಅವರ ಖರೀದಿ ಸಾಮರ್ಥ್ಯ ಕುಸಿದರೆ ಬಂಡವಾಳದಾರರಿಗೂ ನಷ್ಟ. ಬಂಡವಾಳ ವ್ಯವಸ್ಥೆಯೇ ಕುಸಿಯುವ ಕಾಲ ಬರಬಹುದು. ಸಾಮಾಜಿಕ-ರಾಜಕೀಯ ಕ್ರಾಂತಿಗೆ ಅದು ಕಾರಣವಾಗಬಹುದು. ತೀವ್ರ ಅಸಮಾನತೆ ತರುವ ಸಾಮಾಜಿಕ ಸಂರಚನೆ ಬದಲಾಯಿಸದೆ, (ಅಂದರೆ ಬಂಡವಾಳಶಾಹಿ ವ್ಯವಸ್ಥೆ ಕಾಪಿಟ್ಟುಕೊಂಡು) ಬಡವರಿಗೆ ಹಣ ವರ್ಗಾವಣೆಯಿಂದ ಜನರ ಕೊಳ್ಳುವ ಶಕ್ತಿ ಹೆಚ್ಚು ಮಾಡುವುದು ಇದಕ್ಕೆ ತಾತ್ಕಾಲಿಕ ಪರಿಹಾರ. ಇಂದಿನ ಪರಿಸ್ಥಿತಿಯಲ್ಲಿ ಬಂಡವಾಳಶಾಹಿ ಉಳಿವಿಗಾಗಿ, ಸರಕುಗಳ ಮಾರಾಟಕ್ಕೆ ಜನರ ಕೈಗೆ ಹಣ ಕೊಡುವುದು ಬಂಡವಾಳಶಾಹಿ ಸರ್ಕಾರಗಳಿಗೆ ಅನಿವಾರ್ಯವಾಗಿದೆ.
ಜನರು ಸೋಮಾರಿಯಾಗುತ್ತಾರೆಯೇ?
ಸಬ್ಸಿಡಿ ಯೋಜನೆಗಳಿಂದ ಮತ್ತು ಸರ್ಕಾರ ಹಣ ಕೊಡುವುದರಿಂದ ಜನರು ಸೋಮಾರಿಯಾಗುತ್ತಾರೆ ಎಂಬ ಟೀಕೆ ಇದೆ. ಇದು ಸ್ವತಃ ಸಂಪತ್ತನ್ನು ಸೃಷ್ಟಿಸದವರು ಮತ್ತು ಶ್ರೀಮಂತ ಸೋಮಾರಿಗಳು ಹೇಳುವ ಮಾತು. ಸೋಮಾರಿಗಳಾಗಿರುವವರು ಸೋಮಾರಿತನದ ಬಗ್ಗೆ ಮಾತಾಡುತ್ತಾರೆ. ನಿರುದ್ಯೋಗ ಮತ್ತು ಅರೆ ಉದ್ಯೋಗದಿಂದಾಗಿ ಜನರಿಗೆ ತಮ್ಮ ಜೀವನಕ್ಕೆ ಅವಶ್ಯಕವಾದಷ್ಟು ಆದಾಯ ಬರುತ್ತಿಲ್ಲ. ಉದ್ಯೋಗ ಮತ್ತು ಆದಾಯ ಇದ್ದರೆ ಸಬ್ಸಿಡಿ, ನಗದು ವರ್ಗಾವಣೆಯ ಪ್ರಶ್ನೆಯೇ ಬರುವುದಿಲ್ಲ. ಆಹಾರ ಭದ್ರತೆ, ವೃದ್ಧಾಪ್ಯ ವೇತನ, ಕಿಸಾನ್ ಸಮ್ಮಾನ್ ಯೋಜನೆಗಳಿಂದ ಯಾರೂ ಸೋಮಾರಿಗಳಾಗುವುದಿಲ್ಲ.
ಸಬ್ಸಿಡಿ, ನೇರ ನಗದು ವರ್ಗಾವಣೆ ಅಭಿವೃದ್ಧಿ-ವಿರೋಧಿಯೇ ?
ಅಭಿವೃದ್ಧಿ ಎಂದರೆ ಪ್ಲೈ ಓವರ್ ನಿರ್ಮಾಣ, ಸುರಂಗ ಮಾರ್ಗ ನಿರ್ಮಾಣ, ಎತ್ತರದ ಪ್ರತಿಮೆಗಳ ನಿರ್ಮಾಣವಲ್ಲ. ಅಭಿವೃದ್ಧಿ ಎಂದರೆ, ಬಡವರಿಗೆ ಶಿಕ್ಷಣ, ವಸತಿ, ಉದ್ಯೋಗ, ಆರೋಗ್ಯ ಸೌಲಭ್ಯ ಇವೆಲ್ಲವುಗಳನ್ನು ಒದಗಿಸುತ್ತ ಅವರ ಜೀವನ ಉತ್ತಮ ಪಡಿಸುವ ಯೋಜನೆಗಳನ್ನು ಜಾರಿಗೆ ತರುವುದು. ಇದಕ್ಕಾಗಿ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಪರಿಶೀಲಿಸುವುದು ಒಂದು ನೇರ ನಗದು ವರ್ಗಾವಣೆ ಜನಪರವೋ ಅಲ್ಲವೋ ಎಂದು ನಿರ್ಧರಿಸಲು ಮುಖ್ಯ ಮಾನದಂಡ. ಕರ್ನಾಟಕದ ಗ್ಯಾರಂಟಿಗಳಿಗೆ ಮದ್ಯದ ಮೇಲಿನ, ಆಸ್ತಿ ನೊಂದಣಿಯ ಮೇಲಿನ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಅದು ಸರಿಯಾಗಿದೆ. ಆದರೆ ಈಗಿರುವ ಅಥವಾ ಮುಂದೆ ಹೆಚ್ಚಿಸಬೇಕಾಗಿದ್ದ ಶಿಕ್ಷಣ, ಆರೋಗ್ಯ, ಉದ್ಯೋಗ ಖಾತ್ರಿ, ಇತರ ಸಮಾಜ ಕಲ್ಯಾಣದ ಯೋಜನೆಗಳ ಅನುದಾನಗಳನ್ನು ಕಡಿತ ಮಾಡಿ ಈ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿರುವಂತಿದೆ. ಬಜೆಟನ್ನು ಈ ನಿಟ್ಟಿನಿಂದ ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ. ಗ್ಯಾರಂಟಿಗಳಿಗೆ ಹಣ ಒದಗಿಸಲು. ಶ್ರೀಮಂತರಿಗೆ, ಭೂ ಮಾಲಕರಿಗೆ, ಐಟಿ ಕಂಪನಿಗಳಿಗೆ, ರಿಯಲ್ ಎಸ್ಟೇಟ್ ದಂಧೆ ಮಾಡುವವ ರಿಂದ ತೆರಿಗೆ ವಿಧಿಸಿ ಹಣ ಸಂಗ್ರಹಿಸುವ ಸಾಧ‍್ಯತೆಯಿದೆ. ಅದನ್ನು ಮಾಡಲಾಗುತ್ತಿಲ್ಲ.
ಕರ್ನಾಟಕ ಸರಕಾರದ ಎಲ್ಲ, ಸಬ್ಸಿಡಿ, ನೇರ ನಗದು ವರ್ಗಾವಣೆ, ಕಲ್ಯಾಣ ಕ್ರಮದ ಯೋಜನೆಗಳನ್ನು ಮೇಲೆ ಹೇಳಿದ ವರ್ಗ ದೃಷ್ಟಿಯಿಂದ ನೋಡಬೇಕಾಗಿದೆ. ಕೊರೋನಾ ಸಂದರ್ಭದಲ್ಲಿ ಜನ ಚಳುವಳಿಗಳು ಸರ್ಕಾರದ ಮುಂದೆ ಮಂಡಿಸಿದ ಹಲವು ಗ್ಯಾರೆಂಟಿಗಳ ಯೋಜನೆಯ ಆಗ್ರಹವೇ ಈಗ ಜಾರಿ ಮಾಡುತ್ತಿರುವ ಸರ್ಕಾರದ ಯೋಜನೆಗಳು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ರಾಘವಲು ಅವರು ಸಭೆಗೆ ವಿವರಿಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹಾಗೂ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಪ್ರಕಾಶ್ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಕಾರ್ಯದರ್ಶಿಗಳಾದ ಪ್ರತಾಪ್ ಸಿಂಹ ಹಾಗೂ ಮಂಜುನಾಥ್ ಭಾಗವಹಿಸಿದ್ದರು.