ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯ ದಿನೇಶ್ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಂಘ ಪರಿವಾರದ ಕಾರ್ಯಕರ್ತ, ಬಿಜೆಪಿ ಮುಖಂಡ ಡಿ. ಕೃಷ್ಣನಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ಕನ್ಯಾಡಿ ರಾಮಮಂದಿರದ ಬಳಿ ವ್ಯಾಪಾರ ಮಾಡುತ್ತಿದ್ದ ದಿನೇಶ್ ಜಾಗದ ನೋಂದಣಿ ವಿಚಾರವಾಗಿ ಅಲ್ಲಿನ ಮತ್ತೊಬ್ಬ ವ್ಯಾಪಾರಿಯಾಗಿರುವ ಭಜರಂಗದಳ ಸಹಸಂಚಾಲಕ ಭಾಸ್ಕರ್ ಧರ್ಮಸ್ಥಳ ಅವರ ತಮ್ಮ ಕೃಷ್ಣ ಫೆಬ್ರವರಿ 23ರಂದು ದಿನೇಶ್ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿತ್ತು.
ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಹಲ್ಲೆಗೆ ಒಳಗಾಗಿದ್ದ ದಿನೇಶ್ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ದಿನೇಶ್ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಮರುದಿನ ದಿನೇಶ್ ತಾಯಿ ಪದ್ಮಾವತಿ ಮಗನದ್ದು ಕೊಲೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಯಲ್ಲಿ ಹಲ್ಲೆ ನಡೆಸಿದ ಡಿ.ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದರು.