ಆದರ್ಶ ಆರ್ ಅಯ್ಯರ್
ಗುರುತರವಾದ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಮಠದ ಸ್ವಾಮೀಜಿ ಬಂಧನಕ್ಕೆ ಒಳಗಾಗಲು ಪ್ರಮುಖ ಕಾರಣ ಪತ್ರಿಕೋದ್ಯಮದ ಹಾಗೂ ಪ್ರಜ್ಞಾವಂತ ಸಮಾಜದ ನಿರಂತರ ಪ್ರಯತ್ನವಾಗಿದೆ ಅದರಲ್ಲೂ ಪತ್ರಿಕೋದ್ಯಮದಲ್ಲಿ ನಾನು ಗಮನಿಸಿದ ಡಿಜಿಟಲ್ ಮೀಡಿಯಾಗಳಲ್ಲಿ ಎಡೆಬಿಡದೆ ವರದಿಯನ್ನು ಮಾಡಿದ ದಿ ಫೈಲ್.ಕಾಂ,(http://thefile.in) ಈದಿನ.ಕಾಂ,(http://eedina.com) ಮತ್ತು ಜನಶಕ್ತಿಮೀಡಿಯಾ.ಕಾಂ (https://janashakthimedia.com) ಗಮನಾರ್ಹ ಹಾಗೂ ಶ್ಲಾಘನೀಯ.
ಆರು ದಿನಗಳ ಸತತ ಒತ್ತಡದಿಂದ ಚಿತ್ರದುರ್ಗದಲ್ಲಿರುವ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣದ ಆರೋಪಿ ಮುರುಘಾ ಮಠದ ಸ್ವಾಮೀಜಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಪೋಲಿಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಈ ಮೂರು ಡಿಜಿಟಲ್ ಮೀಡಿಯಾಗಳ ಸರಣಿ ವರದಿಗಳು ಬಹಳ ಪರಿಣಾಮಕಾರಿಯಾಗಿದ್ದು, ಪೋಲಿಸ್ ವ್ಯವಸ್ಥೆ ಹಾಗೂ ಅಧಿಕಾರಿಶಾಹಿ ವರ್ಗ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ದಾರಿ ತಪ್ಪುವುದನ್ನು ತಡೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.
ಡಿಜಿಟಲ್ ಮೀಡಿಯಾದ ಈ ತ್ರಿಮೂರ್ತಿಗಳು ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾರ್ಯಗತ ಆಗಿರುವುದು ಈ ಮೇಲಿನ ಗುರುತರವಾದ ಪ್ರಕರಣಗಳ ಸಂದರ್ಭಗಳಲ್ಲಿ ಸೂಕ್ತ ತಾರ್ಕಿಕ ಅಂತ್ಯದ ಕಡೆಗೆ ದಾರಿದೀಪ ಆಗಿವೆ. ಪ್ರಕರಣಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಹಿಂದೆ ಸಮಾನ ರೂಪದ ಪ್ರಕರಣಗಳನ್ನು ಉಲ್ಲೇಖಿಸಿ, ಈ ಹಿಂದಿನ ಪ್ರಕರಣಗಳಲ್ಲಿ ನಡೆದಿರುವ ತಪ್ಪುಗಳನ್ನು ಜನಮಾನಸದ ಮುಂದಿಟ್ಟು, ಆ ತಪ್ಪುಗಳು ಮರುಕಳಿಸದ ಹಾಗೆ ಪೊಲೀಸ್ ಅಧಿಕಾರಶಾಹಿಗಳಿಗೆ ಪಾಠವಾಗಿ, ನಿವೃತ್ತ ನ್ಯಾಯಾಧೀಶರ, ಕಾನೂನು ತಜ್ಞರ ಹಾಗೂ ಸಾಮಾಜಿಕ ಹೋರಾಟಗಾರರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪ್ರಕಟಿಸಿದ ಡಿಜಿಟಲ್ ಮೀಡಿಯಾದ ಈ ತ್ರಿಮೂರ್ತಿಗಳ ನಿರಂತರ ಹಾಗೂ ಜವಾಬ್ದಾರಿಯುತ ಸರಣಿ ವರದಿಗಳನ್ನು ಜನಸಾಮಾನ್ಯರು ಮೆಚ್ಚಲೇಬೇಕು.
ಪಕ್ಷಪಾತದ, ಆಳುವ ಪಕ್ಷದ ಪರ ಮಾತನಾಡುವ ಮಾಧ್ಯಮ ಹಾಗೂ ಪತ್ರಿಕೋದ್ಯಮಗಳಿಂದ ರೋಸೆತ್ತು ಹೋಗಿರುವ ಪ್ರಸ್ತುತ ಕಾಲದಲ್ಲಿ ಡಿಜಿಟಲ್ ಮೀಡಿಯಾದ ತ್ರಿಮೂರ್ತಿಗಳ ಪತ್ರಿಕೋದ್ಯಮ ಪ್ರಜಾಪ್ರಭುತ್ವಕ್ಕೆ ಒಂದು ಆಶಾಕಿರಣವಾಗಿ ಹೊರಹೊಮ್ಮಿದೆ.
ಇದೇ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಉದ್ದೇಶಪೂರ್ವಕ ಮೌನ ಜನಸಾಮಾನ್ಯರ ಕಿವಿಗಳನ್ನು ಈಗಲೂ ಸಹ ಅಪ್ಪಳಿಸುತ್ತಿದೆ. ಬೆರಳೆಣಿಕೆಯ ರಾಜಕಾರಣಿಗಳನ್ನು ಹೊರತುಪಡಿಸಿ ಕರ್ನಾಟಕ ರಾಜ್ಯದ ಹೆಸರಾಂತ ರಾಜಕಾರಣಿಗಳು ತಮ್ಮ ತಮ್ಮ ಮನೆಗಳಲ್ಲಿ ಅವಿತಿಕೊಂಡು ಕುಳಿತಂತೆ ಇದೆ. ರಾಜಕಾರಣಿಗಳು ಚುನಾವಣೆ ಗೆಲ್ಲುವುದೇ ತಮ್ಮ ಏಕೈಕ ಗುರಿ; ನೈತಿಕತೆ, ಸಮಾಜಮುಖಿ ನಿಲುವು, ಕಾನೂನುಪರ ನಿಲುವು, ದೌರ್ಜನ್ಯಗಳ ವಿರುದ್ಧದ ನಿಲುವು, ಇನ್ನೂ ಹಲವಾರು ನಡೆ, ನುಡಿಗಳನ್ನು ಅಳವಡಿಸಿಕೊಳ್ಳುವುದನ್ನು ಮರೆತು ಕುಳಿತಿರುವುದೆ ನಮ್ಮ ರಾಜಕೀಯ ಧುರೀಣರ ಘನತೆ ಪಾತಾಳಕ್ಕೆ ಇಳಿದಿರುವ ಕಾರಣ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಈ ಪ್ರಕರಣದಲ್ಲಿ ಸೂಕ್ತವಾದ ನಿಲುವನ್ನು ಪ್ರದರ್ಶಿಸದೆ ಮೌನವಾಗಿರುವ ಆರೋಪಗಳಿಗೆ ಕೇವಲ ಹಳೆಯ ರಾಜಕೀಯ ಪಕ್ಷಗಳ ಮಾತ್ರವೇ ಹೊರತಾಗಿಲ್ಲ, ನವ ಯುಗದ, ಪರ್ಯಾಯ ಪಕ್ಷ ಕಟ್ಟುವೆವು ಎಂದು ಪ್ರಚಾರ ನಡೆಸುತ್ತ ಬರುತ್ತಿರುವ ಎ.ಎ.ಪಿ., ಕೆ.ಆರ್.ಎಸ್ ಇತ್ಯಾದಿ ಪಕ್ಷಗಳು ಸಹ ತಮ್ಮ ಸಮಾಜಮುಖಿ ಹೊಣೆಯನ್ನು ಮರೆತಿವೆ ಎಂದರೆ ತಪ್ಪಾಗಲಾರದು.
ಬಿಜೆಪಿಯ ಜಾತಿ, ಮತ, ಧರ್ಮಗಳ ರಾಜಕಾರಣವೇ ತನ್ನ ರಾಜಕೀಯ ಶಕ್ತಿಯ ಜೀವಾಳ ಎನ್ನುವ ಹಾಗೆ ನಡೆದುಕೊಳ್ಳುವುದು ನಮ್ಮ ರಾಜ್ಯದ ಹಾಗೂ ನಮ್ಮ ದೇಶದ ದುರಂತವೇ ಸರಿ. ಜನಸಾಮಾನ್ಯರು ಎಲ್ಲಿಯ ತನಕ ಈ ಜಾತಿ, ಮತ, ಧರ್ಮದ ಆಧಾರಿತ ರಾಜಕೀಯವನ್ನು ಬೆಂಬಲಿಸುತ್ತಾರೆ, ಪೋಷಿಸುತ್ತಾರೆ, ಅಲ್ಲಿಯವರೆಗೆ ಇಂತಹ ರಾಜಕೀಯ ಪಕ್ಷಗಳನ್ನು ಬಹುತೇಕ ಜನಸಾಮಾನ್ಯರು ಪ್ರಶ್ನಿಸುವುದು ಕೊಂಚ ದೂರದ ಮಾತು.
ಇನ್ನೂ ಕಾಂಗ್ರೆಸ್ ಮುಖಂಡರಲ್ಲಿ ಮುರುಘಾ ಮಠದ ಸ್ವಾಮೀಜಿಯ ಬಂಧನದ ಮುನ್ನ ಒಬ್ಬರೂ ಸಹ ತಮ್ಮ ತುಟಿ ಬಿಚ್ಚಲಿಲ್ಲ. ಸಿದ್ದರಾಮಯ್ಯನವರು ತಮ್ಮನ್ನು ಅಹಿಂದಾ ಮುಖಂಡರೆಂದು ಹೇಳಿಕೊಂಡು ಪ್ರಚಾರ ಗಿಟ್ಟಿಸುವಾಗ ಲೈಂಗಿಕ ದೌರ್ಜನ್ಯದ ಸಂತ್ರಸ್ತ ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ತಿಳಿದಿದ್ದರೂ ಸಹ ಬಂಧನದ ಮುನ್ನ ಮೌನವಾಗಿರುವುದು ಶೋಚನೀಯ ಹಾಗೂ ಖಂಡನಾರ್ಹ. ಬಂಧನದ ನಂತರ ಸಿದ್ದರಾಮಯ್ಯನವರು ಒಂದೆರಡು ಟ್ವೀಟ್‌ಗಳ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಆದರೆ ಇದೇ ಟ್ವೀಟ್‌ಗಳು ಬಂಧನದ ಮುನ್ನ ಬರೆದಿದ್ದಲ್ಲಿ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು ಎಂದು ಅನಿಸುತ್ತದೆ. ಕೆಪಿಸಿಸಿ ಅಧ್ಯಕ್ಷರಿಂದ ಇಲ್ಲಿಯ ತನಕ ಯಾವುದೇ ಟೀಕೆ, ಟಿಪ್ಪಣಿ, ಹೇಳಿಕೆ ಅಥವಾ ಖಂಡನೆಯು ಕೇಳಿ ಬಂದಿಲ್ಲ.
ಜೆಡಿಎಸ್ ಧುರೀಣ ಎಚ್ ಡಿ ಕುಮಾರಸ್ವಾಮಿಯವರು ಎಲ್ಲಾ ವಿವಾದಿತ ಪ್ರಕರಣಗಳಲ್ಲಿ ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಿರುವಾಗ ಇಂತಹ ಒಂದು ಗಂಭೀರವಾದ ಮಕ್ಕಳ ಲೈಂಗಿಕ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಾಗ ಇದರ ಬಗ್ಗೆ ಯಾವುದೇ ನಿಲುವು ಕಂಡುಬಂದಿಲ್ಲ.
ನವ ಯುಗದ, ಪರ್ಯಾಯ ಪಕ್ಷಗಳೆಂದು ಹೇಳಿಕೊಳ್ಳುವ ಎ.ಎ.ಪಿ. ಅಥವಾ ಕೆ.ಆರ್.ಎಸ್. ಪಕ್ಷಗಳು ತಮ್ಮ ಅಜೆಂಡಾ ಕೇವಲ ಹಣಕಾಸಿನ ಭ್ರಷ್ಟಾಚಾರ ಎಂದು ಹೇಳಿಕೊಂಡು ಸೀಮಿತವಾದ ರಾಜಕೀಯ ನಡೆಸುತ್ತಿವೆ. ಆದರೆ ಈ ನವಯುಗದ ಪಕ್ಷಗಳ ಮುಖಂಡರಿಗೆ ಸಮಾಜದಲ್ಲಿ ಎದ್ದು ಕಾಣುವ ಸಾಮಾಜಿಕ ಪಿಡುಗುಗಳಾದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅತ್ಯಾಚಾರಗಳು ಹಾಗೂ ಇನ್ನೂ ಹಲವಾರು ಮಾನಸಿಕ ಮತ್ತು ಮೌಲ್ಯಗಳ ಭ್ರಷ್ಟಾಚಾರಗಳ ಹಾಗೂ ಮತ್ತಿತರ ಬಗ್ಗೆ ಯಾವುದೇ ಸ್ಪಷ್ಟ ನಿಲುವುಗಳನ್ನು ರೂಪಿಸಿ, ಜನಸಾಮಾನ್ಯರ ಮುಂದೆ ಮಂಡಿಸಿ, ಪ್ರತಿಪಾದಿಸದೇ ಇರುವುದು ಪರ್ಯಾಯ ರಾಜಕೀಯದ ಕುರುಹುಗಳಲ್ಲ. ಪರ್ಯಾಯ ರಾಜಕೀಯವೆಂದರೆ ಒಟ್ಟಾರೆ ಸಮಾಜದ ಸಮಸ್ಯೆಗಳ ಉದ್ದ-ಅಗಲವನ್ನು ಅರಿತು ಪರ್ಯಾಯ ಸಮಾಜವನ್ನು ಕಟ್ಟುವುದೇ ಉದ್ದೇಶವಾಗಿರಬೇಕು. ಕೇವಲ ಮೇಲ್ನೋಟದ ಬದಲಾವಣೆಗಳನ್ನು ಪ್ರತಿಪಾದಿಸುವುದು ಪರ್ಯಾಯ ರಾಜಕೀಯ ಎಂದು ಹೇಳಲು ಅಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಮಕ್ಕಳ ಲೈಂಗಿಕ ದೌರ್ಜನ್ಯದ ಪ್ರಕರಣದ ಬಗ್ಗೆ ಕರ್ನಾಟಕದ ಎ.ಎ.ಪಿ. ಪಕ್ಷ ಯಾವುದೇ ನಿಲುವನ್ನು ಹೊಂದಿಲ್ಲದಿರುವುದು ದುರದೃಷ್ಟಕರವೇ ಸರಿ. ಕೆ.ಆರ್.ಎಸ್. ಪಕ್ಷದ ಅಧ್ಯಕ್ಷರು ಮುರುಘ ಮಠದ ಸ್ವಾಮೀಜಿಯ ಬಂಧನದ ನಂತರ ಸುದೀರ್ಘ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇದು ಸ್ವಾಗತಾರ್ಹ, ಆದರೆ ಈ ಹೇಳಿಕೆ ಬಂಧನದ ಮುನ್ನವೇ ಬಿಡುಗಡೆಯಾಗಿದ್ದಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು ಹಾಗೂ ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಿತ್ತು.
ಅಂತಿಮವಾಗಿ ನಮ್ಮ ಕರ್ನಾಟಕ ರಾಜ್ಯವು ಉತ್ತರ ಪ್ರದೇಶ ಅಥವಾ ಬಿಹಾರ ಆಗದೇ ಇರಲಿಕ್ಕೆ ಕಾರಣ ಪ್ರಜ್ಞಾವಂತ ಸಮಾಜ, ಸಕಾರಾತ್ಮಕವಾಗಿ ಸಕ್ರಿಯವಾಗಿರುವ ಡಿಜಿಟಲ್ ಮೀಡಿಯಾದ ತ್ರಿಮೂರ್ತಿಗಳು ಮೂಲ ಹಾಗೂ ಈ ಸಕಾರಾತ್ಮಕ ಶಕ್ತಿಗಳಿಗೆ ರಾಜಕಾರಣಿಗಳು ತಮ್ಮ ಕೊಡುಗೆಯನ್ನು ನೀಡಿದ್ದಲ್ಲಿ ನಮ್ಮ ರಾಜ್ಯದ ಜನತೆಯ ಜೀವನ ಸುರಕ್ಷಿತವಾಗಿರುತ್ತದೆ.