ಬೆರಳೆಣಿಕೆ ಸಂಖ್ಯೆಯ ಬ್ರಾಹ್ಮಣಶಾಹಿ ಚಿಂತನೆ ಇಂದು ಬಹುಸಂಖ್ಯಾತರನ್ನು ಆಳುತ್ತಿದೆ, ಇದರ ವಿರುದ್ಧ ಹೋರಾಡಬೇಕಿದೆ – ಕೆ.ರಾಧಾಕೃಷ್ಣನ್ ಕರೆ

ಹೊಸಪೇಟೆ : ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಬ್ರಾಹ್ಮಣಶಾಹಿ ಚಿಂತನೆ ಇಂದು ಬಹುಸಂಖ್ಯಾತರನ್ನು ಆಳುತ್ತಿದೆ ಇದರ ವಿರುದ್ಧ ಪ್ರಭಲ ಹೋರಾಟ ರೂಪಗೊಳ್ಳಬೇಕು ಎಂದು ಕೇರಳದ ಮುಜರಾಯಿ ಸಚಿವ ಕೆ.ರಾಧಾಕೃಷ್ಣನ್ ಕರೆ ನೀಡಿದರು.

ಹೊಸಪೇಟೆಯಲ್ಲಿ ನಡೆದ ದಲಿತ ಹಕ್ಕುಗಳ ಸಮಿತಿಯ 3 ನೇ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ದೇಶದ ಜನಸಂಖ್ಯೆಯಲ್ಲಿ ನಾಲ್ಕನೇ ಒಂದು ಭಾಗದಷ್ಟಿರುವ ದಲಿತರು ಆದಿವಾಸಿಗಳ ಸ್ಥಿತಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಬದಲಾಗಲಿಲ್ಲ. ಇದುವರೆಗು ಅಧಿಕಾರಕ್ಕೆ ಬಂದವರು ದಲಿತರ ಬದುಕನ್ನ ಉತ್ತಮಪಡಿಸಲು ಬೇಕಾದ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಹಾಗಾಗಿ ದಲಿತರು ತಮ್ಮ ಹಕ್ಕುಗಳಿಗಾಗಿ ಸಂಘಟನೆಗಳನ್ನು ಕಟ್ಟಿಕೊಳ್ಳಬೇಕಿದೆ ಎಂದರು.

ಕೇಂದ್ರದಲ್ಲಿ ಹಿಂದುತ್ವದ ಪರವಾದ ಸರ್ಕಾರ ಅಧಿಕಾರದಲ್ಲಿದೆ. ಅರ್ ಎಸ್ ಎಸ್ ನ ನೇತೃತ್ವದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅವಧಿಯಲ್ಲಿ ಬಡತನ ಹೆಚ್ಚಾಗಿದೆ. ಇದರಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಘಪರಿವಾರ ಜನರನ್ನು ಜಾತಿ ಧರ್ಮಗಳ ಆಧಾರದಲ್ಲಿ ವಿಭಜನೆ ಮಾಡುತ್ತಿದೆ ಎಂದು ಖೇಧ ವ್ಯಕ್ತಪಡಿಸಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸಿ ವರ್ಣಾಶ್ರಮ ಪದ್ದತಿಯನ್ನು ಸಮರ್ಥಿಸುವ ಮನುಸ್ಮೃತಿಯನ್ನು ತರಲು ಕೇಂದ್ರ ಸರ್ಕಾರ ಹೊರಟಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದಲಿತರು ನೆಮ್ಮದಿಯಿಂದ ಬದಕಲು ಸಾಧ್ಯವಿಲ್ಲ. ಅದಕ್ಕಾಗಿ ದಲಿತ ಸಂಘಟನೆಗಳು ಶಕ್ತಿ ಮೀರಿ ಚಳುವಳಿಯನ್ನು ಸಂಘಟಿಸಬೇಕಿದೆ ಎಂದರು.

ಕರ್ನಾಟಕದಲ್ಲಿ ದಲಿತ ದೌರ್ಜನ್ಯದ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಈ ಚಳುವಳಿಗಳು ದಲಿತರ ಪರವಾದ ರಾಜಕೀಯ ಶಕ್ತಿಯಾಗಿ ಬೆಳೆದರೆ ಮಾತ್ರ ದಲಿತರಿಗೆ ನ್ಯಾಯ ಕೊಡಿಸಲು ಸಾಧ್ಯ. ಅದಕ್ಕೆ ಉತ್ತಮ ಉದಾಹರಣೆ ಕೇರಳದ ಎಡರಂಗ ಸರ್ಕಾರ. ಕೇರಳದಲ್ಲಿ ಕಮ್ಯೂನಿಸ್ಟರ ನೇತೃತ್ವದಲ್ಲಿ ಎಡರಂಗದ ಸರ್ಕಾರ ದಲಿತ ಆದಿವಾಸಿಗಳ ಸರಕಾರವಾಗಿ ಕೆಲಸ ಮಾಡುತ್ತಿದೆ ಎಂದರು.

ಕೇರಳದ ಗುರುವಾಯೂರು ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕಾಗಿ ಕಮ್ಯೂನಿಸ್ಟ್ ನಾಯಕರಾದ ಕೃಷ್ಣಪಿಳ್ಳೆ ಪ್ರಭಲ ಹೋರಾಟವನ್ನು ನಡೆಸಿದವರು. ಜಾತಿ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಿಗೆ ನಿರ್ಭಂದ ವಿದಿಸಬಾರದು. ನಾನು ದೇವಸ್ಥಾನ ಪ್ರವೇಶಕ್ಕಾಗಿ ಹೋರಾಟ ಮಾಡಿ ಪೋಲೀಸರಿಂದ ಲಾಠಿ ಏಟು ತಿಂದವನು ಈಗ ನಾನೇ ಎಡರಂಗ ಸರ್ಕಾರದ ದೇವಸ್ಥಾನಗಳ ಮುಜರಾಯಿ ಮಂತ್ರಿಯಾಗಿದ್ದೇನೆ. ಆ ಎಲ್ಲಾ ದೇವಸ್ಥಾನಗಳಿಗೂ ನಾನು ಹೋಗುತ್ತೇನೆ ಎಂದರು.

ಎಡರಂಗ ಸರ್ಕಾರ ಅಧಿಕಾರಕ್ಕೆ ಬಂದಾಗ 1958 ರಲ್ಲಿ ಇಎಂಎಸ್ ನೇತೃತ್ವದಲ್ಲಿ ಭೂಮಿಯನ್ನು ಹಂಚಲಾಗಿದೆ. ಅದರಲ್ಲಿ ಭೂಹೀನ ದಲಿತರಿಗೆ ದೊಡ್ಡ ಸಂಖ್ಯೆಯಲ್ಲಿ ಭೂಮಿ ಸಿಕ್ಕಿದೆ. ಎಲ್ಲಾ ಮನುಷ್ಯರೂ ಸಮಾನವಾಗಿ ಬದುಕುವುದು ನಮ್ಮೆಲ್ಲರ ಕನಸು, ಆ ಕನಸನ್ನು ನನಸು ಮಾಡುವುದಕ್ಕಾಇ ನಮ್ಮ ಹೋರಾಟ ನಡೆಯುತ್ತಿದೆ ಎಂದರು.

ಎಲ್ಲರಿಗೂ ಶಿಕ್ಷಣ ಪಡೆಯುವ ಹಕ್ಕನ್ನು ಎಡರಂಗ ಸರ್ಕಾರ ಖಾತ್ರಿಪಡಿಸಿದೆ. ಇದಕ್ಕಾಗಿಯೇ ದೇಶದಲ್ಲಿ ಕೇರಳದ ಸಾಕ್ಷರತೆ ಮೊದಲ ಸ್ಥಾನದಲ್ಲಿದೆ. ಇಲ್ಲಿ ಎಲ್ಲರೂ ಸಾಕ್ಷರರಾಗಿರಲು ಕಮ್ಯೂನಿಸ್ಟರ ಕೊಡುಗೆ ಅಪಾರ. ಕೇರಳದ ಎಡರಂಗ ಸರ್ಕಾರದ ಸಾಧನೆಗಳು ಜನಪರವಾದ ಸಾಧನೆಗಳು ಮಾನವ ಅಭಿವೃದ್ಧಗಾಗಿ ಬೇಕಾದ ಎಲ್ಲಾ ನೀತಿಗಳನ್ನು ಎಡರಂಗ ಸರ್ಕಾರ ಜಾರಿಗೆ ತಂದಿದೆ. ಮೊದಲ ಬಾರಿಗೆ ವೃದ್ಧಾಪ್ಯ ವೇತನವನ್ನು ಜಾರಿಗೆ ತಂದ ಕೀರ್ತಿ ಕೇರಳದ್ದು. ಮನೆ ಇಲ್ಲದವರಿಗೆ ಮನೆ, ಭೂಮಿ ಇಲ್ಲದವರಿಗೆ ಭೂಮಿ, ಯುವಜನರಿಗೆ ಕೆಲಸ, ಮನೆ ಎಂದರೆ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಸುಸಜ್ಜಿತ‌ ಮನೆಗಳನ್ನು ಬಡವರಿಗೆ ಕಟ್ಟಿಕೊಡಲಾಗಿದೆ ಎಂದರು.

ಕೇರಳದಲ್ಲಿ ಯಾರು ಹಸಿವಿನಿಂದ ಇರಬಾರದೆಂದು ಎಡರಂಗ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. 2024 ರ ಒಳಗೆ ರಾಜ್ಯದಲ್ಲಿ ವಸತಿ ರಹಿತರು ಇಲ್ಲದಂತೆ ಮಾಡುವುದೆ ಎಡರಂಗ ಸರ್ಕಾರದ ಗುರಿ. ಮಾವಳ್ಳಿ ಸ್ಟೋರ್ ಮೂಲಕ ಎಲ್ಲಾ ಅಗತ್ಯವಿರುವ ವಸ್ತುಗಳನ್ನು ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಕೊಡಲಾಗುತ್ತಿದೆ ಎಂದರು.

ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಮಾನಾಡಿ, ನಾವು ಶ್ರಮ ಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾದ್ಯವಾಗುತ್ತದೆಯಾ ಎಂಬ ಅನುಮಾನ ಪ್ರಸಕ್ತ ರಾಜಕೀಯ ಸಂದರ್ಭದಲ್ಲಿ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಧರ್ಮವನ್ನು ರಾಜಕೀಯದಿಂದ ದೂರ ಇಡುವುದೇ ನಿಜವಾದ ಜಾತ್ಯಾತೀತತೆ, ಆರೋಗ್ಯ, ಶಿಕ್ಷಣ ಸಂಪೂರ್ಣ ಖಾಸಗೀಕರಣವಾಗುತ್ತಿದೆ. ದೇಶದ ಸಂಪತ್ತನ್ನ ಅದಾನಿ ಅಂಬಾನಿಯ ಕಂಪನಿಗಳಿಗೆ ದಾರೆಯರೆಯಲಾಗುತ್ತಿದೆ.

ಆದಿವಾಸಿ ಮಹಿಳೆಯೊಬ್ಬರು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಯಾಗಿರಲು ಅವಕಾಶ ಕೊಟ್ಟಿದ್ದು ದೇಶದ ಸಂವಿಧಾನ. ಸಂಸತ್ತನ್ನು ಪುರೋಹಿತರಿಂದ ಉಧ್ಘಾಟಿಸಲಾಗಿದೆ. ದೇಶವನ್ನ ಸಾವಿರಾರು ವರ್ಷಗಳ ಹಿಂದೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ವರ್ಣಾಶ್ರಮ ಪದ್ದತಿ ಆಳವಾಗಿ ಬೇರೂರಿದೆ. ಅಂದು ಒಂದು ದಿನ ಘೋಷಿತ ತುರ್ತುಪರಿಸ್ಥಿತಿ ಇತ್ತು ಇಂದು ಅಘೋಷಿತ ತುರ್ತುಪರಿಸ್ಥಿತಿ ಇದೆ. ಅದು ಜರ್ಮನಿಯ ಫ್ಯಾಸಿಸಮ್ ಕಡೆಗೆ ಹೊರಳುತ್ತಿದೆ ಎಂದರು.

ಭಾರತ ಶಿಲಾಯುಗಕ್ಕೆ ಹೋಗುತ್ತಿದೆ. ಇಂದು ನಮ್ಮ ಮುಂದಿರುವ ಸವಾಲು ಪ್ರಜಾಪ್ರಭುತ್ವವನ್ನು ಉಳಿಸುವುದು, ಸಂವಿಧಾನವನ್ನು ಉಳಿಸುವಯದು ನಮ್ಮ ಆದ್ಯ ಕರ್ತವ್ಯ, ಜನರನ್ನು ದೇವರು ಧರ್ಮಗಳ ಹೆಸರಿನಲ್ಲಿ ಒಡೆಯಲಾಗುತ್ತಿದೆ. ಉಳಿಗಮಾನ್ಯ ಪದ್ದತಿಯನ್ನು ಮತ್ತೆ ಜಾರಿಗೆ ತರಲು ಪಿತೂರಿ ನಡೆಯುತ್ತಿದೆ ಎಂದರು.

ಬಡವರು ದಿನನಿತ್ಯ ಬಡವರಾಗುತ್ತಿದ್ದಾರೆ, ಕೆಲವೇ ಕಲವರು ಶ್ರೀಮಂತರಾಗುತ್ತಿದ್ದಾರೆ. ದೇಶದ ಎಲ್ಲಾ ಸಾರ್ವಜನಿಕ ಸಂಪತ್ತುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಎಡಪಕ್ಷಗಳು ಬಡವರು ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತವೆ ಆದರೆ ಚುನಾವಣೆಗಳಲ್ಲಿ ಎಡಪಕ್ಷಗಳಿಗೆ ಜನ ಮತ ಹಾಕುವುದಿಲ್ಲ ಇದು ದುರಂತ ಸಂಗತಿ. ಭಾರತದ ಸಂವಿಧಾನ ಅಪಾಯದಲ್ಲಿದೆ. ಚರಿತ್ರೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ ಆಗ ಮಾತ್ರ ಸರಿಯಾದ ಚರಿತ್ರೆಯನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು, ರಾಜ್ಯ ಸಂಚಲಕ ಗೋಪಾಲಕೃಷ್ಣ ಹರಳಹಳ್ಳಿ ವಹಿಸಿದ್ದರು. ಸಮಾವೇಶದಲ್ಲಿ ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ, ದೇವದಾಸಿ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ, ದಲಿತ ಹಕ್ಕುಗಳ ಸಮಿತಿಯ ಗುರುಶಾಂತ್, ಮುಖಂಡರಾದ, ತಾಯಪ್ಪ ನಾಯಕ, ಕೆ. ನಾಗರತ್ನ, ಭಾಸ್ಕರ್ ರೆಡ್ಡಿ, ಚಂದ್ರಪ್ಪ ಹೊಸ್ಕೇರಾ, ಆರ್ ಎಸ್. ಬಸವರಾಜ, ಜಂಬಯ್ಯ ನಾಯಕ್ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಇದ್ದರು.

Donate Janashakthi Media

Leave a Reply

Your email address will not be published. Required fields are marked *