ಡೋಂಗಿ ಭಕ್ತರ ರಾಷ್ಟ್ರವಾದ ಹಾಗು ತಿರಂಗಾ ಪ್ರೀತಿ

ಎಸ್ ಎಸ್ ಹದ್ಲಿ

ಯಾವ ಸಂವಿಧಾನ ಅಡಿಯಲ್ಲಿ ಚುನಾವಣೆ ಗೆದ್ದಿದ್ದಾರೋ, ಯಾವ ಸಂವಿಧಾನ ರಕ್ಷಿಸುವ ಪ್ರಮಾಣ ಸ್ವಿಕರಿಸಿದ್ದಾರೊ, ಅದೇ ಸಂವಿಧಾನವನ್ನು ಇಂದು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಸಂವಿಧಾನ ಸುಟ್ಟು, ಅಂಬೇಡ್ಕರ್ ಮುರ್ದಾಬಾದ್ ಎಂದು ಹೇಳುವ ಭಕ್ತರು ಯಾವ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಾರೆ? ಒಂದು ದೇಶ – ಒಂದು ಧರ್ಮ, ಒಂದು ದೇಶ – ಒಂದು ಸಂಸ್ಕೃತಿ, ಒಂದು ದೇಶ – ಒಂದು ಭಾಷೆ,   ಹೀಗೆ ಎಲ್ಲವನ್ನು ಒಂದೀಕರಿಸಿದರೆ ಹಲವಾರು ಭಾಷೆ, ಸಂಸ್ಕೃತಿ, ಪ್ರಾದೇಶಿಕ ಅಸ್ಮಿತೆ, ಅನೇಕ ಧರ್ಮ, ಜಾತಿ – ಮತ, ಮೂಲನಿವಾಸಿಗಳನ್ನು ಹೊಂದಿರುವ ಗಣರಾಜ್ಯ ಭಾರತದ ಬಹುತ್ವಕ್ಕೆ, ಏಕತೆಗೆ, ಸ್ವಾಯತ್ತತೆಗೆ ಧಕ್ಕೆ ತರುವ ರಾಷ್ಟ್ರನೀತಿ ಯಾವ ರಾಷ್ಟ್ರವಾದ?

ಭಾರತ ತನ್ನ 75ನೆಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವುದು ಎಲ್ಲ ಭಾರತಿಯರಿಗೆ ಹೆಮ್ಮೆಯ ಸಮಯ. ಈ ಒಂದು ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಲಕ್ಷಾಂತರ ಹಿರಿಯರಿಗೆ ನಮ್ಮದೊಂದು ಸಲಾಮ್‌. ಸ್ವಾತಂತ್ರ್ಯ  ಸಂಗ್ರಾಮದಲ್ಲಿ ಭಾರತದ ಜನತೆ ತಮ್ಮ ಜಾತಿ-ಮತ,  ಧರ್ಮ, ಪ್ರಾದೇಶಿಕತೆ, ಭಾಷೆ, ರಾಜಕೀಯ ಸಿದ್ಧಾಂತ ಮುಂತಾದ ಎಲ್ಲ ಅಸ್ಮಿತೆಗಳನ್ನು ಮೀರಿನಿಂತು ಭಾರತದ ಒಗ್ಗಟ್ಟಿನ ಕ್ರಾಂತಿಕಾರಿ ಹೋರಾಟಗಳಿಂದಾಗಿ ಬ್ರೀಟಿಷರನ್ನು ಈ  ದೇಶದಿಂದ ಹೊರಹಾಕಲು ಸಾಧ್ಯವಾಯಿತು. ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಕಾಂಗ್ರೆಸ್, ಕಮ್ಯೂನಿಸ್ಟರು, ಲೋಹಿಯಾ ವಾದಿಗಳು, ಕಾರ್ಮಿಕರು, ರೈತರು, ದಲಿತರು ಹಾಗು ಅನೇಕ ಜನಪರ ಸಂಘಟನೆಗಳು, ನಾಯಕರು, ಅಸಂಖ್ಯಾತ ಮಂದಿ ಭಾಗವಹಿಸಿದ್ದರು.

ಆದರೆ, ಅಂದಿನ ಸನಾತನಿ ಹಿಂದುತ್ವದ ಸಂಘಿ ನಾಯಕರು, ಬ್ರೀಟಿಷರೊಂದಿಗೆ ಕೈಜೋಡಿಸಿ ಜಾಸೂಸಿ ಕೆಲಸದಲ್ಲಿ ತೊಡಗಿ, ಬ್ರೀಟಿಷರಿಗೆ ಬೆಂಬಲದ ಭರವಸೆ ನೀಡಿದ್ದರು. ದೇಶದ ವೈವಿದ್ಯತೆಯ ಜನರನ್ನು ಇಬ್ಬಾಗ ಮಾಡುವ ಕೆಲಸದಲ್ಲಿ ತೊಡಗಿಕೊಂಡರು. ಹಿಂದು ರಾಷ್ಟ್ರ ಹಾಗು ಮುಸ್ಲಿಂ ರಾಷ್ಟ್ರ ಎಂಬ ವಾದಗಳು ಆರಂಭವಾದವು. ಸಂಘೀಗಳ ಗುರುಗಳಾದ, ಗೋಳ್ವಾಲ್ಕರ್, ಕೆ ಬಿ ಹೆಡಗೆವಾರ, ವಿ ಡಿ ಸಾವರ್ಕರ್‌, ನಾಥೂರಾಮ್‌ ಗೋಡ್ಸೆಗಳ ಕನಸಿನ ಹಿಂದೂ ರಾಷ್ಟ್ರ ಮಾಡುವುದು, ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುವುದು, ಮನುಸ್ಮೃತಿಯ ಹಿಂದೂ ರಾಷ್ಟ್ರ ಕಟ್ಟುವುದು ಅವರ ಕನಸ್ಸಾಗಿತ್ತು. ಆದರೆ, ಇವೆಲ್ಲವೂ ಜನತೆ ತಿರಸ್ಕರಿಸುತ್ತಾ ಬಂದರು. ಆದರೂ ಸಹ ದೇಶ ವಿಭಜನೆಗೆ ಮಹಾತ್ಮ ಗಾಂಧಿಜೀ ಕಾರಣವೆಂದು, ಕೊಲೆಗೆ ಸಂಚು ರೂಪಿಸಿ ನಾಥೂರಾಮ್‌ ಗೋಡ್ಸೆ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದನು. ಸ್ವತಂತ್ರ ಭಾರತದ, ಜಾತ್ಯತೀತತೆ ಹಾಗು ಸಮಾನತೆಯ ಆಶಯದ ಸಂವಿಧಾನ ಹಾಗು ತಿರಂಗಾ ದ್ವಜವನ್ನೇ ಒಪ್ಪದೇ ಇರುವ ಭಗವಾದ್ವಜದ ಹಿಂದುತ್ವದ ಸಂಘಿಗಳು, ದೇಶಕ್ಕೆ ಇಂದು, ತಮ್ಮದೇ ಡೋಂಗಿ ರಾಷ್ಟ್ರವಾದ ಹಾಗು ತಿರಂಗಾ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇವರ, ಈ ಡೋಂಗಿತನವನ್ನು ಬಯಲುಗೊಳಿಸಬೇಕಿದೆ.

ಹಲವು ದಶಕಗಳ ಕಾಲ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಮುಖ್ಯಾಲಯದ ಕಚೇರಿಯ ಮೇಲೆ ಭಗವಾದ್ವಜ ಮಾತ್ರ ಹಾರುತ್ತಿತ್ತು.  ರಾಷ್ಟ್ರದ ತಿರಂಗಾ ದ್ವಜ ಒಪ್ಪದ ಇವರ ನಡೆಯನ್ನು ಬಯಲಿಗೆ ಎಳೆಯಲು, ಕೆಲವು ಯುವ ದೇಶಭಕ್ತರು ಆರ್‌ಎಸ್‌ಎಸ್‌ ನವರ ದೇಶ ಭಕ್ತಿ ಪರಿಕ್ಷಿಸಲು ಆರ್‌ಎಸ್‌ಎಸ್‌ ಕಛೇರಿಯಲ್ಲೂ ರಾಷ್ಟ್ರಧ್ವಜ ಹಾರಿಸಲು ಮುಂದಾದರು. ತಿರಂಗಾ ದ್ವಜ ಹಾರಿಸಿದ 3 ಯುವ ದೇಶಭಕ್ತರ ಮೇಲೆ, ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. (176/ 2001, Nagpur Session Court). ರಾಷ್ಟ್ರ ಭಕ್ತಿಯ ತೋರಿದ ಮೂವರು ಯುವಕರನ್ನು ನ್ಯಾಯಾಲಯ ಬಿಡುಗಡೆ ಮಾಡಿತು . ವಾಟ್ಸಾಪ್  ಗುಂಪಿನಲ್ಲಿ ಭಾರತದ ನಕಾಶ ಹಾಕಿ,  ಅದರಲ್ಲಿ ಸಂಘಿಗಳ ಏಕೈಕ ಭಗವಾದ್ವಜವನ್ನು  ನೆಟ್ಟ, ವಿಡಿಯೋ ಹರಿಬಿಡಲಾಗಿತ್ತು. ಅದು, ಆರ್‌ಎಸ್‌ಎಸ್‌ ನ ಮುಂದಿನ ಅಜೆಂಡಾ ಸೂಚಿಸುವ ಚಿತ್ರವಾಗಿತ್ತು. ಇದು ಭಾರತದ ತಿರಂಗಾ ದ್ವಜದ ಅಪಮಾನವೂ ಆಗಿತ್ತು. ಬ್ರಿಟೀಷರ ಚಾಕರಿ ಮಾಡಿದವರು, ರಾಷ್ಟ್ರ ವಿಭಜಿಸುವ ಸಂಚಿನವರು, ಹಿಂದೂ ರಾಷ್ಟ್ರದ ಪ್ರತಿಪಾದಕರು, ಭಾರತದ ಸ್ವಾತಂತ್ರ್ಯ, ಸಂವಿಧಾನ ಹಾಗು ತಿರಂಗಾ ಒಪ್ಪದವರು. ಇಂದು ದೇಶಪ್ರೇಮಿ ಜನಸಮುದಾಯಕ್ಕೆ  ಯಾವ ರಾಷ್ಟ್ರವಾದ  ಹೇಳುತ್ತಿದ್ದಾರೆ?

ಸಂವಿಧಾನ ವಿರೋಧವಾಗಿ ಒಂದು ದೇಶ – ಒಂದು ಧರ್ಮ, ಒಂದು ದೇಶ – ಒಂದು ಸಂಸ್ಕೃತಿ, ಒಂದು ದೇಶ – ಒಂದು ಭಾಷೆ,   ಹೀಗೆ ಎಲ್ಲವನ್ನು ಒಂದೀಕರಿಸಿದರೆ ಹಲವಾರು ಭಾಷೆ, ಸಂಸ್ಕೃತಿ, ಪ್ರಾದೇಶಿಕ ಅಸ್ಮಿತೆ, ಅನೇಕ ಧರ್ಮ, ಜಾತಿ – ಮತ, ಮೂಲನಿವಾಸಿಗಳನ್ನು ಹೊಂದಿರುವ ಗಣರಾಜ್ಯ ಭಾರತದ ಬಹುತ್ವಕ್ಕೆ, ಏಕತೆಗೆ, ಸ್ವಾಯತ್ತತೆಗೆ ಧಕ್ಕೆ ತರುವ ರಾಷ್ಟ್ರನೀತಿ ಯಾವ ರಾಷ್ಟ್ರವಾದ?

ಹಿಂದೂ ಒಂದು ಎಂಬ ಘೋಷಣೆ ಕೊಡುವವರು, ಹಿಂದು ರಾಷ್ಟ್ರ ಕಟ್ಟುವುದು ಹಾಗೂ ಕೊಳೆತು ನಾರುತ್ತಿರುವ ಮೇಲು ಕೀಳಿನ  ವರ್ಣಾಶ್ರಮದ, ಮನುಸ್ಮೃತಿ ಸಂಸ್ಕೃತಿಯ ಧರ್ಮ ಸಂಸದ್ದನ್ನು, ಎತ್ತಕಟ್ಟಿ, ದೇಶದ ಸಂವಿಧಾನಕ್ಕೆ ಪರ್ಯಾಯವಾಗಿ ನಿಲ್ಲಿಸುವ, ಹಿಂದುತ್ವದ ನಡೆಯು, ರಾಷ್ಟ್ರನೀತಿ ಹಾಗು ರಾಷ್ಟ್ರವಾದವಾಗಲು ಸಾಧ್ಯವೆ ?

ಯಾವ ಸಂವಿಧಾನ ಅಡಿಯಲ್ಲಿ ಚುನಾವಣೆ ಗೆದ್ದಿದ್ದಾರೋ, ಯಾವ ಸಂವಿಧಾನ ರಕ್ಷಿಸುವ ಪ್ರಮಾಣ ಸ್ವಿಕರಿಸಿದ್ದಾರೊ, ಅದೇ ಸಂವಿಧಾನವನ್ನು ಇಂದು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಸಂವಿಧಾನ ಸುಟ್ಟು, ಅಂಬೇಡ್ಕರ್ ಮುರ್ದಾಬಾದ್ ಎಂದು ಹೇಳುವ ಭಕ್ತರು ಯಾವ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಾರೆ?

ಚುನಾಯಿತ ರಾಜ್ಯ ಸರ್ಕಾರಗಳನ್ನು ಆಪರೇಷನ್‌ ಕಮಲ ಮಾಡಿ, ಸರಕಾರಗಳನ್ನು ಉರುಳಿಸಿ, ಬಿಜೆಪಿ ಸರ್ಕಾರ ನಿಲ್ಲಿಸುವುದು ಯಾರ ಮಾನ್ಯತೆಯಿಂದ? ಗಡಿಯಲ್ಲಿ ಹುತಾತ್ಮರಾದ ಸೈನಿಕರ ಫೋಟೊ ಹಾಕಿಕೊಂಡು, ಹಿಂದು – ಮುಸ್ಲಿಂ ಕೋಮುವಾದಿ  ಭಾವನೆಗಳ ಮೇಲೆ ಆಟವಾಡುತ್ತ, ಚುನಾವಣೆ ಗೆಲ್ಲುವುದು , ಯಾವ ರಾಷ್ಟ್ರವಾದವಾಗಲು ಸಾಧ್ಯ?

ಜನರಿಂದ ಆಯ್ಕೆಯಾದವರು ಇಂದು ತಮಗೆ ದೇಶದ ಎಲ್ಲ ಸಾರ್ವಜನಿಕ ಸಂಪತ್ತನ್ನು ಜಾಗತಿಕ ಬಂಡವಾಳಗಾರರಿಗೆ, ಕಾರ್ಪೊರೇಟ್‌ ಶಕ್ತಿಗಳಿಗೆ ಮಾರಲು ಪರವಾನಿಗೆ  ಸಿಕ್ಕಿದೆ ಎಂದು ಭಾವಿಸುವುದು ರಾಷ್ಟ್ರವಾದವಾಗಲು ಸಾಧ್ಯವೆ?

ಮನೆಯ ಆಸ್ತಿಯನ್ನು ಲಪಟಾಯಿಸಲು, ಕವಡೆ ಕಾಸಿನ ಕಿಮ್ಮತ್ತಿಗೆ ಮಾರಾಟ ಮಾಡಲು ಮುಂದಾಗುವ ಮಗ, ತನ್ನ ಇಡೀ ಕುಟುಂಬವನ್ನು ಬೀದಿಗೆ ತಳ್ಳಿದರೆ, ಆತನಿಗೆ “ಮನೆ ಹಾಳ” ಎಂದು ಕರೆಯುತ್ತಾರೆ. ದೇಶ ಮಾರುವುದೂ ಮನೆ ಹಾಳರ ಸಂಸ್ಕೃತಿಯೇ.  ಇದನ್ನು ಬೆಂಬಲಿಸುವ , ಕುಂತು ತುಪ್ಪ ತಿನ್ನುವ  ಭಕ್ತರು, ಮನೆಹಾಳ ಕೆಲಸವನ್ನೂ ರಾಷ್ಟ್ರವಾದ ಎಂದರೆ ಹೇಗೆ?

ಅಂಬಾನಿ – ಅದಾನಿಯಂತಹ ಬಂಡವಾಳದಾರರನ್ನು ಬೆಳೆಸುವುದು ರಾಷ್ಟ್ರವಾದವೆಂದು ಹೇಳುವ ಭಕ್ತರೂ ಇದ್ದಾರೆ. ಮೇಡ್ ಇನ್ ಇಂಡಿಯಾ ತೆಗೆದು, ಮೇಕ್‌ ಇನ್ ಇಂಡಿಯಾಕ್ಕೆ, ಜಾಗತಿಕ ಬಂಡವಾಳಗಾರರಿಗೆ ಕೈ ಮಾಡಿ ಕರೆದು, ದೇಶದ ಸಾರ್ವಜನಿಕ ಸಂಪತ್ತನ್ನು ಮಾರುವುದು ಹಾಗು ದೇಶ ಲೂಟಿಗೆ ಅವಕಾಶ ಹೆಚ್ಚಿಸುವುದು ಯಾವ ರಾಷ್ಟ್ರವಾದ?

ಹಿಂದುಳಿದವರ ಏಳಿಗೆಗಾಗಿ ಕೊಡುಗೆ ನೀಡಿದ ಹಿಂದುಳಿದವರಿಗೆ ಲೇಸನ್ನು ಬಯಸಿದ ಶಿವಾಜಿ ಮಹಾರಾಜನ ಇತಿಹಾಸವನ್ನು ಬರೆದು ಜನರಿಗೆ ಸತ್ಯವನ್ನು ತಿಳಿಸಿದ ಚಿಂತಕ ಹಾಗು ಜನಪ್ರಿಯ ಕಮ್ಯುನಿಸ್ಟ್‌ ನಾಯಕ ಗೋವಿಂದ ಪನ್ಸಾರೆ ಯವರನ್ನು   ಗುಂಡು ಹೊಡೆದು ಕೊಲ್ಲಲಾಯಿತು. ಇದೇ ರೀತಿ, ಡಾ. ನರೇಂದ್ರ ದಾಬೋಲ್ಕರ್ ಎಂಬ ಸಾಮಾಜಿಕ ಚಿಂತಕ, ಹಾಗು ಬ್ರಾಹ್ಮಣ್ಯದ ಪುರೋಹಿತಶಾಹಿ  ಬಿತ್ತಿದ  ಅಂಧ ಶ್ರದ್ಧೆಗಳ ವಿರೋಧವಾಗಿ,  ಅನೇಕ ವೈಜ್ಞಾನಿಕ ತಿಳುವಳಿಕೆ ನೀಡುವ ಬೃಹತ್  ಚಳುವಳಿಯ ಮುಖಂಡರಾಗಿದ್ದರು. ಇವರನ್ನೂ ಗುಂಡು ಹೊಡೆದು ಕೊಲ್ಲಲಾಯಿತು. ಕರ್ನಾಟಕದಲ್ಲಿ ಬಸವಾದಿ ಶರಣ ಚಳುವಳಿಯ ಸಂಶೋಧಕರಾದ ಡಾ. ಎಮ್ ಎಮ್ ಕಲಬುರ್ಗಿ ಬಸವಾದಿ ಶರಣರ ಲಿಂಗಾಯತ ಧರ್ಮ ಹಾಗು ಬ್ರಾಹ್ಮಣಿಕೃತ ವೀರಶೈವ ಇವೆರಡು ಬೇರೆ ಬೇರೆ ಎಂಬುದನ್ನು ತಮ್ಮ ಸಂಶೋಧನೆಗಳ ಮೂಲಕ ತೋರಿಸಿದ್ದರು. ಇವರನ್ನು ಸಹ ಧಾರವಾಡದ ಅವರ ನಿವಾಸದಲ್ಲಿಯೇ ಗುಂಡು ಹೊಡೆದು ಕೊಲ್ಲಲಾಯಿತು. ಬಿಜೆಪಿ –ಆರ್‌ಎಸ್‌ಎಸ್‌ನ ಹಿಂದುತ್ವವನ್ನು ವಿರೋಧಿಸುತ್ತಾ ಬಂದಿದ್ದ “ಲಂಕೇಶ್‌” ಪತ್ರಿಕೆಯ ದಿಟ್ಟ ಹಾಗು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಗೌರಿ ಲಂಕೇಶರನ್ನೂ  ಬೆಂಗಳೂರಿನಲ್ಲಿ ಕೊಲೆ ಮಾಡಲಾಯಿತು. ಈ ಎಲ್ಲ ಕೊಲೆಗಳ ಹಿಂದೆ ಹಿಂದುತ್ವದ ಸನಾತನಿಗಳ ಕೈವಾಡವಿದೆ. ಗೌರಿ ಕೊಲೆಯಾದಾಗ ಹಾಗು ಯು.ಆರ್‌. ಅನಂತಮೂರ್ತಿಯವರ ಸಾವಾದಾಗ, ಗಿರಿಶ ಕಾರ್ನಾಡ್‌ ನಿಧನರಾದಾಗ ಇದೇ ಹಿಂದುತ್ವವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ  ಸಂಭ್ರಮಿಸಿದ್ದನ್ನು ಜಗತ್ತು ನೋಡಿದೆ. ಈ ಕೊಲೆಗಳಲ್ಲಿ ಹಾಗು ಸಾವುಗಳಲ್ಲಿಯೂ,  ಈ ಅಂಧ ಭಕ್ತರು ರಾಷ್ಟ್ರವಾದವನ್ನು ಕಾಣುವಂತವರಾಗಿದ್ದಾರೆ.  ಇವರಂತಹ ಕೊಳೆತು ನಾರುವ ನೀಚ ಸಂಸ್ಕೃತಿಯ ಮನುಷ್ಯತ್ವವಿಲ್ಲದ ಜನರು ಈ ಭೂಮಿಯ ಮೇಲೆ ಕಾಣಸಿಗರು.

ಮಂದಿರ – ಮಸೀದಿ, ಹಿಂದು – ಮುಸ್ಲಿಂ, ಕೊಲೆ,  ಹಿಜಾಬ್‌ – ಕೇಸರಿ ಶಾಲು , ಹಲಾಲ್‌ ಕಟ್‌ – ಜಟಕಾ ಕಟ್‌, ಆಜಾನ್‌ – ಸುಪ್ರಭಾತ / ಹನುಮಾನ ಚಾಲೀಸಾ, ಲವ್ ಜಿಹಾದ್‌ – ಘರವಾಪ್ಸಿ ಎಂಬ ಸಾಮಾಜಿಕ ಒಡಕಿನ ಪೊಳ್ಳು ಸಮಸ್ಯೆಗಳು, ಪ್ರಜಾಪ್ರಭುತ್ವ ಹಾಗು ರಾಷ್ಟ್ರವಾದದ ಸಮಸ್ಯೆಗಳಾಗಲು ಸಾಧ್ಯವೇ? ಕ್ರಿಕೆಟ್ ಹಾಗು ಕ್ರೀಡಾ ಸ್ಪರ್ಧೆಗಳನ್ನೂ ದ್ವೇಷ ಹೆಚ್ಚಿಸುವ ರಾಷ್ಟ್ರವಾದ ಬೆಳೆಸಲು ಉಪಯೋಗಿಸುತ್ತಿರುವುದು ನಾಚಿಕೆಗೇಡು.

ನಿರುದ್ಯೋಗ, ಬೆಲೆ ಏರಿಕೆ, ಶೋಷಣೆ, ಅತ್ಯಾಚಾರ, ಅಸ್ಪೃಷ್ಯತೆ, ಬಡತನ, ಖಾಸಗೀಕರಣ ವಿರೋಧವಾಗಿ ಹಾಗೂ ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕು, ಉದ್ಯೋಗದ ಭದ್ರತೆ, ಸಾಮಾಜಿಕ ಭದ್ರತೆ, ಪಿಂಚಣಿ, ಗೌರವಯುತ ಬದುಕಿಗೆ ಕನಿಷ್ಟ ವೇತನ, ದುಡಿಯುವ ಜನರ ಹಕ್ಕುಗಳು, ಆಹಾರ ಭದ್ರತೆ, ಸೌಹಾರ್ಧತೆ, ಸಾಮಾಜಿಕ ನ್ಯಾಯ ಮುಂತಾದವುಗಳಿಗಾಗಿ ಹೋರಾಡಬೇಕಾದ ಯುವಜನತೆ ಮತಾಂಧ ಶಕ್ತಿಗಳ ಕಪಿಮುಷ್ಟಿಯ ಕುರುಡು ಭಕ್ತರಾಗಿ ಧರ್ಮಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನೇ ರಾಷ್ಟ್ರವಾದವೆಂದು ಕರೆದು, ರಾಷ್ಟ್ರವಾದಿ ಪಕ್ಷ ಹಾಗು ಪ್ರಭುತ್ವವೂ ಸೇರಿ ಧರ್ಮದ ಕೋಮಿಗಳಿಗೆ ಬೆಂಬಲ ನೀಡುವುದು  ರಾಷ್ಟ್ರವಾದ ವಾಗಲು ಸಾಧ್ಯವೇ?

ರೈತರ ಜಮೀನು, ಅವರ ಮಾರುಕಟ್ಟೆ ಹಾಗು ಅವರ ಬದುಕನ್ನು ಕಾರ್ಪೋರೇಟಿಕರಣಕ್ಕೆ ವಹಿಸಿ, ಇಡೀ ರೈತಾಪಿಯನ್ನೇ ನಾಶ ಮಾಡುವುದನ್ನು ಬೆಂಬಲಿಸುವ ಭಕ್ತರು, ಯಾವ ರಾಷ್ಟ್ರವಾದ ಪ್ರತಿಪಾದಿಸುತ್ತಿದ್ದಾರೆ? ದೇಶದ ನೂರಾರು ಕೋಟಿ ದುಡಿಯುವ ಜನರ ಬದುಕಿನ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರ ಈವರೆಗೆ ತಮ್ಮ ಹಕ್ಕುಗಳಾಗಿ ಪಡೆದುಕೊಂಡ ದುಡಿಮೆಯ ಎಲ್ಲ ಹಕ್ಕುಗಳನ್ನು ಕಸಿದು, ಜಾಗತಿಕ ಬಂಡವಾಳಗಾರರ  ಪರವಾಗಿ ಕಾನೂನು ತಿದ್ದುಪಡಿ ಮಾಡಿ ಗುಲಾಮಗಿರಿಗೆ ತಳ್ಳುವುದನ್ನು ಭಕ್ತರು ಯಾರ ರಾಷ್ಟ್ರವಾದ ಹೇಳುತ್ತಿದ್ದಾರೆ?

ಸಂಘಿಗಳ ಅಜೆಂಡಾದಂತೆ, ಕೆಟ್ಟ ರಾಜನೀತಿಯನ್ನು ಬಿತ್ತುವ ಮೂಲಕ ಕೋಮು ಗಲಭೆ ಗಳನ್ನು ಎಬ್ಬಿಸುವುದನ್ನೂ ರಾಷ್ಟ್ರವಾದ  ಎಂದು ಕರೆದರೆ ಹೇಗೆ? ಇಂತಹ ಕೋಮು ಗಲಭೆಗಳು ಧರ್ಮಾಂಧಿತರ ನಡುವಿನ ಒಳ ಒಪ್ಪಂದದ ಆಟವಾದರೆ, ಅದನ್ನೂ ರಾಷ್ಟ್ರವಾದವೆಂದು ಹೇಳಲೂ ಈ ಭಕ್ತರು ನಾಚುವುದಿಲ್ಲ. ಯಾಕೆಂದರೆ ಇವರ ಮುಂದಿನ ನಡೆಯ , ಅಜೆಂಡಾವೂ ಕೋಮುಗಲಭೆಗಳನ್ನು ಎಬ್ಬಿಸಿ ಜನರ ದಾರಿ ತಪ್ಪಿಸುವ  ಹೊಂಚು ಇದೆ. ಇದರಲ್ಲೇ , ರಾಷ್ಟ್ರವಾದ ತೋರಿಸುವ ಸಂತತಿಯವರಾಗಿದ್ದಾರೆ.

ಕಾರ್ಪೋರೇಟ್ ಬಂಡವಾಳ ರಾಜಕೀಯದ ಪ್ರಭುತ್ವದ ಹಿಡಿತದೊಂದಿಗೆ ಜಾತಿ, ಮತ, ಧರ್ಮಗಳ ವ್ಯವಸ್ಥೆಯ ಸಮ್ಮಿಲನದಲ್ಲಿ, ಪ್ರಭುತ್ವದಲ್ಲಿನ ಅಧಿಕಾರಸ್ಥರು ಫಾಸಿವಾದಿಗಳಾಗುತ್ತಿದ್ದಾರೆ. ಈ ವಿಪರ್ಯಾಸ ನೋಡುತ್ತಿರುವ, ದೇಶಪ್ರೇಮಿಗಳು ಇಂದು ತಲೆತಗ್ಗಿಸುವಂತಾಗಿದೆ. ನಕಲಿ ರಾಷ್ಟ್ರ ಭಕ್ತರು, ಇದನ್ನೇ  ರಾಷ್ಟ್ರವಾದ ಎಂದು ಬಿಂಬಿಸುತ್ತಿರುವುದು ಶೋಚನೀಯ.

ಆಂತರಿಕ, ಗಣರಾಜ್ಯ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವ ನಾಶ ಮಾಡುವುದು, ಸಮಾಜದ ಬಹುತ್ವವನ್ನು ಒಪ್ಪದಿರುವುದು ರಾಷ್ಟ್ರವಾದವಾಗಲು ಸಾಧ್ಯವೆ?  ಸ್ವಾತಂತ್ರ್ಯ, ಏಕತೆ, ಸ್ವಾಯತ್ತತೆ, ಬಹುತ್ವ, ಗಣತಂತ್ರ, ಪ್ರಜಾಪ್ರಭುತ್ವ, ಸಮಾನತೆಯ ಆಶಯ ಹೊಂದಿದ ದೇಶದ ಸಂವಿಧಾನ ಒಪ್ಪುವವರೇ ನಿಜವಾದ ದೇಶ ಭಕ್ತರು.

Donate Janashakthi Media

Leave a Reply

Your email address will not be published. Required fields are marked *