ಸುಕೇತ್ ಶೆಟ್ಟಿ
ಮುಂಡಾಸುಧಾರಿಯ, ಮುಂಡಸಿನ ಕುಟುಂಬದ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತುತ್ತಿದ್ದ ದೇವಾನಂದ್ ಹೇಗೆ ಕಾಣೆಯಾದರು. ಪದ್ಮಲತಾ, ಸೌಜನ್ಯ, ರವೀಂದ್ರ, ನಾರಾಯಣ, ಯಮುನ ಕೊಲೆಯಾದದ್ದು ಹೇಗೆ……. ಮುಂದೆ ಓದಿ.
ಲಕ್ಷಾಂತರ ಜನರು ತಾನು ಮಾಡಿದ ತಪ್ಪಿಗೆ ನಾನಾ ರೀತಿಯ ಪೂಜೆ ಪುನಸ್ಕಾರಗಳು, ಕಾಣಿಕೆಗಳನ್ನು ಹಾಕುತ್ತಾ ಇಲ್ಲಿ ನ್ಯಾಯ- ಧರ್ಮ ಇದೆ ಎಂದು ನಂಬಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ನಮ್ಮ ತುಳುನಾಡಿನಲ್ಲಿ ದೈವಗಳಿಗೆ ಕೋಲ (ನೇಮ) ಕಟ್ಟುವವರು ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ ಧರ್ಮಸ್ಥಳ ನೇತ್ರಾವತಿಯಲ್ಲಿ ಸ್ಥಾನ ಮಾಡಿ ಅಲ್ಲಿ ಒಂದು ಪೂಜೆ, ಹೋಮ ಮಾಡಿಕೊಂಡು ಬನ್ನಿ ಎಲ್ಲಾ ಸರಿ ಹೋಗುತ್ತೆ ಅಂತ ನುಡಿ ಹೇಳುತ್ತಾರೆ ಮತ್ತು ಮನೆಯಲ್ಲಿ ದೈವಗಳಿಗೆ ವರ್ಷದ ಪೂಜೆ ಮಾಡುವಾಗ ಧರ್ಮಸ್ಥಳಕ್ಕೆ, ಸುಬ್ರಹ್ಮಣ್ಯಕ್ಕೆ ಅಂತ ಹಣವನ್ನು ತೆಗೆದಿಡುವ ಸಂಪ್ರದಾಯ ತುಳುನಾಡಿನವರ ಹೆಚ್ಚಿನ ಮನೆಯಲ್ಲಿದೆ. ನಮ್ಮ ಮನೆಯಲ್ಲಿ ಕೂಡ ಇದೆ.
ಅಷ್ಟು ಶ್ರದ್ಧೆಯಿಂದ ಮಂಜುನಾಥನನ್ನು ಮತ್ತು ಅಣ್ಣಪ್ಪನನ್ನು ಕರಾವಳಿ ಭಾಗದ ಜನರು ನಂಬುತ್ತಾರೆ. ಆದರೆ ಈಗ ಅಲ್ಲಿ ನಡೆದಿರುವ ಘಟನೆಗಳನ್ನು ಎಲ್ಲಾ ಗಮನಿಸಿದಾಗ ಇಷ್ಟೆಲ್ಲ ಅಧರ್ಮ ನಡೆಯುತ್ತಿರುವಾಗಲೂ ಇಲ್ಲಿಯ ತನಕ (ಈಗ ಎದ್ದ ಹಾಗೆ ಕಾಣುತ್ತಿದೆ) ಮಂಜುನಾಥ, ಅಣ್ಣಪ್ಪ ಮೌನವಾಗಿರುವುದು ಯಾಕೆ…..??
ತನ್ನ ಕ್ಷೇತ್ರದಲ್ಲಿಯೇ ಇಷ್ಟೆಲ್ಲ ಅನಾಚಾರಗಳು ಆಗುತ್ತಿರುವಾಗಳೂ ಮಂಜುನಾಥ, ಅಣ್ಣಪ್ಪ ಸ್ವಾಮಿ ಸುಮ್ಮನೆ ಮೂರ್ತಿಯಾಗಿಯೇ ಕೂತಿರುವಾಗ… ಇನ್ನು ಎಲ್ಲಿಯಾ ನಮ್ಮನೆಯ, ನಿಮ್ಮನೆಯ ಸಮಸ್ಯೆಯನ್ನು ಬಗೆಹರಿಸುವನೇ….!? ಎಂಬುದು ಪ್ರಶ್ನಾರ್ಥಕ…!
ಈಗ ಅಧರ್ಮ ತಾಂಡವಾಡುತ್ತಿರುವಾಗ ಜನಸಾಮಾನ್ಯರಾದ ನಾವು ಅದನ್ನು ತಡೆದು ನಿಲ್ಲಬೇಕಾದ ಅವಶ್ಯಕತೆ ಇದೆ. ಇನ್ನು ಅಲ್ಲಿ ಕೇವಲ ಸೌಜನ್ಯ ಸಾವಿಗೆ ಅಷ್ಟೇ ಅಲ್ಲ, ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಎಲ್ಲಾ ಅಸಹಜ ಸಾವುಗಳ ಬಗ್ಗೆ ಕೇಂದ್ರ ತನಿಖಾ ದಳದಿಂದ ತನಿಖೆಗೆ ಒತ್ತಾಯಿಸಿ ನಾವೆಲ್ಲರೂ ಹೋರಾಟ ಮಾಡಬೇಕು. ಇನ್ನು ನನ್ನ ಗಮನಕ್ಕೆ ಬಂದಿರುವ ಕೆಲವು ಅಸಹಜ ಸಾವುಗಳ ಬಗ್ಗೆ ಹೇಳುತ್ತೇನೆ.
ಮುಂದಾಸುಧಾರಿಯ, ಮುಂಡಸಿನ ಕುಟುಂಬದ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತುತ್ತಿದ್ದ, ಇವರ ಯಾವುದೇ ಬೆದರಿಕೆಗಳಿಗೆ ಬಗ್ಗದ ವ್ಯಕ್ತಿ ಈ ದೇವಾನಂದ್.
1. ದೇವಾನಂದ್ ಅವರ 17 ವರ್ಷದ ಮಗಳು ಪದ್ಮಲತಳನ್ನು 1987ರಲ್ಲಿ ಆಕೆಯನ್ನು ಅಪಹರಿಸಿ, 15 ದಿನಗಳ ಕಾಲಕೂಡಿ ಹಾಕಿ ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. 40ನೇ ದಿನಗಳ ಆಕೆಯ ಮೃತದೇಹ ನೇತ್ರಾವತಿಯಲ್ಲಿ ಪತ್ತೆಯಾಗಿತ್ತು. ಈ ಕೃತ್ಯದ ವಿರುದ್ಧ ಹೋರಾಟಗಳು ನಡೆದವಾದರೂ, ಅಪರಾಧಿಗಳು ಪತ್ತೆಯಾಗಲಿಲ್ಲ. ದಿನ ಕಳೆದಂತೆ ಸಾಕ್ಷಾಧಾರಗಳು ಇಲ್ಲದೆಯೂ ಅಥವಾ ನಾಶ ಮಾಡಿಯೋ ಪ್ರಕರಣ ಮುಚ್ಚಿಯೇ ಹೋಯಿತು. ಈ ಪ್ರಕರಣವೂ ಮರು ತನಿಖೆಯಾಗಬೇಕು..
2. ಇದೇ ಪದ್ಮಲತಾ ಅಣ್ಣ ರವೀಂದ್ರ ಧರ್ಮಸ್ಥಳ ಸಹಕಾರಿ ಬ್ಯಾಂಕಿನ ಮ್ಯಾನೇಜರ್ ಆಗಿದ್ದರು. 2021 ರ ಅದೊಂದು ದಿನ ಬ್ಯಾಂಕಿನ ಸಭಾಭವನದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗುತ್ತಾರೆ. ಆತ್ಮಹತ್ಯೆ ಅಥವಾ ಕೊಲೆಯ…? ಆತ್ಮಹತ್ಯೆಯಾದರೆ ಆತ್ಮಹತ್ಯೆ ಕಾರಣಗಳೇನು ..? ಕೊಲೆಯಾದರೆ ಕೊಲ್ಲಿಸಿದವರು ಯಾರು? ಯಾವುದಕ್ಕೂ ಉತ್ತರಸಿಗಲಾರವು.
3. ದಿನಾಂಕ 21-09-2012 ರಂದು ರಾತ್ರಿ ಕೆ.ಎಸ್.ಆರ್.ಡಿ.ಪಿ. ಬಸ್ಸು ನಿಲ್ದಾಣದಲ್ಲಿ ಗಣೇಶೋತ್ಸವ ಪ್ರಯುಕ್ತ ನಾಟಕ ವೀಕ್ಷಿಸಿ ಆನೆ ಮಾವುತ ನಾರಾಯಣ (65) ಮತ್ತು ಅವರ ಸಹೋದರಿ ಯಮುನಾ (45) ಧರ್ಮಸ್ಥಳ ಗ್ರಾಮದ ಬೂಜೆ ಮನೆಗೆ ತೆರಳಿದ್ದರು.
ಮಾರನೇ ದಿನ ಮಧ್ಯಾಹ್ನ 12 ಗಂಟೆಯ ಸಮಯ ಮನೆಯ ಬಾಗಿಲು ತೆರೆಯದಿರುವುದನ್ನು ಅರಿತ ಸ್ಥಳೀಯರು ಗಮನಿಸಿದಾಗ ಆನೆ ಮಾವುತ ತಲೆಗೆ ಸೈಜು ಕಲ್ಲು ಮತ್ತು ಅವರ ತಂಗಿ ಯಮುನಾ ರವರ ತಲೆಗೆ ಗುಲ್ಲುವ ಕಲ್ಲನ್ನು ಹೊತ್ತು ಹಾಕಿ ಕೊಲೆ ಮಾಡಲಾಗಿರುವುದು ತಿಳಿದು ಬರುತ್ತದೆ. ಅವರ ಹೆಂಡತಿ ಸುಂದರಿ ಪೊಲೀಸರಿಗೆ ದೂರಿನ ಮೂಲಕ ಹೇಳಿರುವ ಹಾಗೆ ಆನೆ ಮಾವುತ ನಾರಾಯಣರ ಬಳಿ ಯಾವುದೇ ಸಂಪತ್ತು, ಹಣ ಆಭರಣಗಳು ಇದ್ದಿರಲಿಲ್ಲ ಮತ್ತು ಇದ್ದಂತಹಾ ಅಲ್ಪ ಸ್ವಲ್ಪ ಹಣ ಮತ್ತು ಆಭರಣಗಳನ್ನು ಸಹಾ ದೋಚಿರುವುದಿಲ್ಲ. ನನ್ನ ಗಂಡನಿಗೆ ಯಾರೂ ವಿರೋಧಿಗಳದ್ದಿರಲಿಲ್ಲ. ಕೇವಲ ನನ್ನ ಗಂಡ ವಾಸವಾಗಿದ್ದ ಮನೆ ಮತ್ತು ಅಡಿ ಸ್ಥಳವನ್ನು ಸ್ವಾಧೀನ ಪಡಿಸುವ ಉದ್ದೇಶಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಹೆಂಡತಿ ಸುಂದರಿ ಆರೋಪಿಸುತ್ತಾರೆ.
ಇದನ್ನೂ ಓದಿ:ಸೌಜನ್ಯ ಕುಟುಂಬದ ಮೇಲೆ ಹೆಗ್ಗಡೆ ಬೆಂಬಲಿಗರಿಂದ ಹಲ್ಲೆ – ಮಹಿಳಾ ಸಂಘಟನೆ ಖಂಡನೆ
ಅದಕ್ಕೆ ಕಾರಣ ದಿನಾಂಕ 20-09-2012 ರಂದು ಸಂಜೆ ಹರ್ಷೇಂದ್ರ ಕುಮಾರ್‌ರವರು ನನ್ನ ಗಂಡ (ನಾರಾಯಣ)ವಾಸವಾಗಿದ್ದ ಮನೆಗೆ ಭೇಟಿ ನೀಡಿ ಮನೆಯನ್ನು ಕೂಡಲೇ ತೆರವುಗೊಸುವಂತೆಯೂ ತಪ್ಪಿದರೆ ಸ್ಥಿತಿ ನೆಟ್ಟಗಿರುವುದಿಲ್ಲ ಎಂದು ನನ್ನ ಗಂಡನಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಸುಂದರಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಿಷಯವನ್ನು ಮೂರು ದಿನಗಳ ನಂತರ ಖಾವಂದರನ್ನು (ವೀರೇಂದ್ರ ಹೆಗ್ಗಡೆಯವರು) ಖುದ್ದು ಭೇಟಿಯಾಗಿ ತಿಳಿಸಿದಾಗ ಆಗುವುದು ಆಗಿ ಹೋಯ್ತು ಆ ವಿಷಯವನ್ನು ಬಿಟ್ಟು ಬಿಡಿ ಎಂದು ತಿಳಿಸಿರುತ್ತಾರೆ. ನನ್ನ ಗಂಡನ ಮನೆಗೆ ಹರ್ಷೇಂದ್ರ ಕುಮಾರ್ ರವರು ಬೀಗ ಜಡಿದು ಮನೆಯಲ್ಲಿದ್ಧ ಯಾವುದೇ ವಸ್ತುಗಳನ್ನು ನನಗೆ ತರಲು ಬಿಡುವುದಿಲ್ಲ ಮತ್ತು ಮನೆಗೆ ಪ್ರವೇಶಿಸದಂತೆ ಬೆದರಿಸಿರುತ್ತಾರೆ. ನನ್ನ ಗಂಡ ವಾಸ ಮಾಡಿಕೊಂಡಿದ್ದ ಮನೆಯ ಚಾವಿಯನ್ನು ನನಗೆ ತೆಗೆಸಿಕೊಟ್ಟು ನನಗೆ ಸದ್ರಿ ಮನೆಯಲ್ಲಿ ವಾಸ ಮಾಡಲು ಅನುವು ಮಾಡಿಕೊಟ್ಟು, ನನ್ನ ಗಂಡ ಮತ್ತು ಅವರ ಸಹೋದರಿಯ ಜೋಡಿ ಕೊಲೆಯ ಪ್ರಕರಣವನ್ನು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ನನಗೆ ನ್ಯಾಯ ಒದಗಿಸಿಕೊಡಬೇಕಾಗಿ ನಾರಾಯಣ್ ಅವರ ಹೆಂಡತಿ ಸುಂದರಿಯರು ಮಂಗಳೂರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿರುತ್ತಾರೆ.
4. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2012ರ ಅಕ್ಟೋಬರ್ 9ರಂದು ಚಂದಪ್ಪ ಗೌಡ ಎಂಬುವವರು ತಮ್ಮ ಮಗಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 19 ವರ್ಷದ ಸೌಜನ್ಯ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಅಕ್ಟೋಬರ್ 10ರಂದು ಅರೆನಗ್ನ ಸ್ಥಿತಿಯಲ್ಲಿದ್ದ ಸೌಜನ್ಯ ಮೃತದೇಹ ಮಣ್ಣಸಂಕ ಬಳಿಯ ಪೊದೆಯಲ್ಲಿ ಪತ್ತೆಯಾಗುತ್ತದೆ. ದೇಹದ ಎಡಗೈಯನ್ನು ಆಕೆಯ ಶಾಲು ಬಳಸಿ ಮರವೊಂದಕ್ಕೆ ಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲಿ ಸೌಜನ್ಯ ಸಂಬಂಧಿ ಜಗದೀಶ್ ಎಂಬುವವರು ‘ಯಾರೋ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ’ ಎಂದು ದೂರು ನೀಡಿದ್ದರು.
ಮುಂದೆ ಏನಾಗಿದೆ, ಈಗ ಏನಾಗುತ್ತಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಇಷ್ಟೇ ಅಲ್ಲ ಇನ್ನು ಹಲವಾರು ಘಟನೆಗಳು ಅಲ್ಲಿ ಹೋದರೆ ಇವರ ದಬ್ಬಾಳಿಕೆಗೆ, ದೌರ್ಜನಕ್ಕೆ ಒಳಗಾದ ನೊಂದ ಕುಟುಂಬಗಳು ಹೇಳಬಲ್ಲರೇನೋ…!!
ಇನ್ನು ಇವರ ಮೈಕ್ರೋ ಫೈನಾನ್ಸ್ ಅಂದರೆ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅವ್ಯವಹಾರ, ಅತಿಯಾದ ಬಡ್ಡಿ ವ್ಯವಹಾರ ಮಾಡದೇ ಇದ್ದರೆ. ರಂಜನ್ ರಾವ್ ಅವರು ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಹಾಕಿರೋ ಕೇಸಿಗೆ ಕೋರ್ಟಿನಿಂದ ತಡೆಯಾಜ್ಞೆ ತಂದಿರುವುದು ಯಾಕೆ…? ದೇವರು ಹೆಸರಿನಲ್ಲಿ ಮುಂಡಾಸುಧಾರಿಯ ಅವ್ಯವಹಾರಗಳು, ದಬ್ಬಾಳಿಕೆಗಳು, ದೌರ್ಜನ್ಯಗಳು ಇಂದಿಗೆ ಕೊನೆಯಾಗಿ, ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ನಿವಾರಣೆಯಾಗಲಿ.
(ನಾಳೆಗೆ ಧರ್ಮಸ್ಥಳ ಮಂಜುನಾಥ್ ಮೈಕ್ರೋ ಫೈನಾನ್ಸ್ ಲೋಟಿಕೋರದ ಬಗ್ಗೆ ಬರೆಯಲಿದ್ದಾರೆ.)