ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ನಿನ್ನೆ ಸಂಜೆ ನಿಧಾನವಾಗಿ ಆರಂಭವಾದ ಮಳೆ ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮ ಬೆಂಗಳೂರಿನ ರಸ್ತೆಗಳು ನದಿಯಂತಾಗಿದ್ದವು.
ರಾತ್ರಿ 7.30ಕ್ಕೆ ಶುರುವಾದ ಮಳೆ ಮಿಂಚು ಗುಡುಗು ಸಿಡಿಲು ಅಬ್ಬರದೊಂದಿಗೆ ರಾತ್ರಿ 10 ಗಂಟೆವರೆಗೂ ಸುರಿದಿದೆ. ಕೆಲವೆಡೆಗಳಲ್ಲಿ 1೦ ಸೆಂಟಿಮೀಟರ್‌ಗೂ ಅಧಿಕ ಮಳೆಯಾಗಿದೆ. ಇದರಿಂದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ವಾಹನ ಸವಾರರು ಸರಕಾರ ಕಟ್ಟಿಸಿದ ‘ಸ್ವಿಮ್ಮಿಂಗ್ ಫೂಲ್ ‘ ಎಂದು ಟ್ರೋಲ್ ಮಾಡಿದ್ದಾರೆ.
ರಾತ್ರಿ 10 ಕ್ಕೆ ಕೊಂಚ ವಿರಾಮ ಪಡೆದ ಮಳೆ, ಮತ್ತೆ ಜಿಟಿ ಜಿಟಿಯಾಗಿ ಮತ್ತೆ ಆರಂಭಿಸಿತು. ಬೆಳಗಿನ ಜಾವ 7 ಗಂಟೆ ವರೆಗೂ ಮಳೆ ಸುರಿದಿದೆ. ಪರಿಣಾಮವಾಗಿ ಬಸವೇಶ್ವರನಗರ, ಕುರುಬರಹಳ್ಳಿ, ಜಯನಗರ 3ನೇ ಹಂತ, ಶಿವಾಜಿನಗರದ ಶಿವಾಜಿ ರಸ್ತೆ, ಜೆ.ಸಿ.ನಗರ ಹಾಗೂ ಜಗಜೀವನ್‌ರಾಮ್ ನಗರದ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸಿದರು.
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮೇ 18 ರಿಂದ ಮೇ 21ರವರೆಗೆ ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಕೆಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿವೆ 10,282 ರಸ್ತೆಗುಂಡಿ : ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳಿಂದ ಅಪಪಘಾತಗಳು ಸಂಭವಿಸುವುದು ಹೊಸದಲ್ಲ, ಅದರಲ್ಲೂ ಮಳೆಗಾಲದಲ್ಲಿ ಈ ರಸ್ತೆಗುಂಡಿಗಳಿಂದ ಸಂಭವಿಸುವ ದುರಂತಗಳು ಕಡಿಮೆ ಇಲ್ಲ. ಹೀಗಿರುವಾಗ ಈ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡುವುದಾಗಿ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ. 10,282 ರಸ್ತೆ ಗುಂಡಿಗಳನ್ನ ಗುರುತಿಸಲಾಗಿದೆ. 202 ರಸ್ತೆ ಗುಂಡಿ ಮುಚ್ಚಲು ದೀರ್ಘ ಅವಧಿಯ ಯೋಜನೆ ಬೇಕು ಇವು ಗಂಭೀರ ಸ್ವರೂಪವಾದ ಗುಂಡಿಗಳೆಂದು ಗುರುತಿಸಲಾಗಿದೆ. ರಸ್ತೆ ಗುಂಡಿ ನಿರ್ವಹಣೆಗೆ ಎಇ, ಎಇಇ ಮೇಲ್ವಿಚಾರಣೆ ಮಾಡ್ತಿದ್ದಾರೆ ಎಂದು ತಿಳಿಸಿದರು.