ನಮ್ಮ ಪ್ರಧಾನಿಗಳು ವಾಶಿಂಗ್ಟನ್ ಭೇಟಿ ಮುಗಿಸಿ ಮರಳಿದ್ದಾರೆ. ಬಹುಶಃ ಈ ಭೇಟಿಯ ಮುಖ್ಯ ಫಲಶೃತಿಯೆಂದರೆ, ಅವರು ತಮ್ಮ ‘ವಿಕಸಿತ ಭಾರತ’ವನ್ನು ಟ್ರಂಪ್‌ರವರ ‘ಮಗ’ಕ್ಕೆ ಲಗತ್ತಿಸಿ, ‘ಮಿಗ’, ಅಂದರೆ ‘ಮೇಕ್ ಇಂಡಿಯ ಗ್ರೇಟ್ ಅಗೇನ್’ ಎಂದು ಭಾಷಾಂತರಿಸಿರುವುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ವಿಕಸಿತ
ಇದೊಂದು ‘ಎಕ್ಸೆಲೆಂಟ್ ಮೀಟಿಂಗ್’ ಎಂದು ಪ್ರಧಾನಿಗಳು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ. “ಇದು ಭಾರತ-ಯುಎಸ್ ಸ್ನೇಹಕ್ಕೆ ಮಹತ್ವದ ಗತಿಶೀಲತೆ ನೀಡುತ್ತದೆ…. ಅಧ್ಯಕ್ಷ ಟ್ರಂಪ್ ತಮ್ಮ ಮಾತುಗಳಲ್ಲಿ ‘ಮಗ’ ಬಗ್ಗೆ ಹೇಳುತ್ತಿರುತ್ತಾರೆ…ಭಾರತದಲ್ಲಿ ನಾವು ವಿಕಸಿತ ಭಾರತದತ್ತ ಕೆಲಸ ಮಾಡುತ್ತಿದ್ದೇವೆ, ಇದು ಅಮೆರಿಕನ್ ಸಂದರ್ಭದಲ್ಲಿ ‘ಮಿಗ’ ಎಂದು ಭಾಷಾಂತರಗೊಳ್ಳುತ್ತದೆ. ಜೊತೆಯಾಗಿ ಭಾರತ-ಯುಎಸ್ ಸಮೃದ್ಧಿಗೆ ಒಂದು ಮೆಗಾ ಭಾಗೀದಾರಿಕೆ ಹೊಂದುತ್ತಾರೆ” ಎಂದು ಪ್ರಧಾನಿಗಳು ಬರೆದುಕೊಂಡಿದ್ದಾರೆ. MIGA+MAGA=MEGA ಇದೀಗ ಹೊಸ ಸಮೀಕರಣವಂತೆ!( ಇಲ್ಲಿ MEGA ಅಂದರೆ ಮೇಕ್ ಯುರೋಪ್ ಗ್ರೇಟ್ ಅಗೇನ್ ಎಂದು ತಪ್ಪು ತಿಳಿಯಬಾರದು!) ವಿಕಸಿತ
ಯುಎಸ್ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿಗಳ ಮಾತುಗಳಿಂದ ತಿಳಿದು ಬರುವಂತೆ ಈ ‘ಮೆಗಾ ಭಾಗೀದಾರಿಕೆ’ಯ ಮುಖ್ಯ ಅಂಶ, ನಿರೀಕ್ಷಿಸಿದಂತೆ, 2025ರಿಂದ ಭಾರತಕ್ಕೆ ಅಮೆರಿಕಾದ ಮಿಲಿಟರಿ ಮಾರಾಟಗಳಲ್ಲಿ ಹೆಚ್ಚಳ, ಅಂತಿಮವಾಗಿ ಎಫ್-35 ಫೈಟರ್ ಜೆಟ್‌ಗಳ ಮಾರಾಟ, ಮತ್ತು ಭಾರತಕ್ಕೆ ಅಮೆರಿಕಾದಿಂದ ತೈಲ ಮತ್ತು ಇಂಧನಗಳ ಆಮದು ಹೆಚ್ಚಿಸುವುದು! ವಿಕಸಿತ
ಇದನ್ನೂ ಓದಿ: ಬಸ್ ಚಾಲಕನಿಂದ ಮಹಿಳೆ ಮೇಲೆ ಅತ್ಯಾಚಾರ; ಕಂಡಕ್ಟರ್ ಸೇರಿ ಇಬ್ಬರ ಬಂಧನ
ಬಹುಶಃ ‘ವಿಕಸಿತ ಭಾರತ’ ಎಂಬುದು ‘ಮಿಗ’ ಆಗಿರುವುದು ಮತ್ತು ‘ಮೆಗಾ ಭಾಗೀದಾರಿಕೆ’ಯ ಸಾರಾಂಶ ಇದರಲ್ಲಿಯೇ ಅಡಗಿದೆ.
ನಮ್ಮ ಪ್ರಧಾನಿಗಳ ‘ತಾರೀಫ್ ಪೆ ತಾರೀಫ್’ ಅಲ್ಲಿಯೂ ಮುಂದುವರೆಯಿತು, ಅದರ ಹಿನ್ನೆಲೆಯಲ್ಲಿ ಯುಎಸ್ ಅಧ್ಯಕ್ಷರ ‘ಟ್ಯಾರಿಫ್-ಟ್ಯಾರಿಫ್’ ಗೆ ಏನಾಯ್ತು ಎಂದು ತಿಳಿದಿಲ್ಲ, ಮುಂದಿನ ದಿನಗಳಲ್ಲಿ ಬೆಳಕಿಗೆ ಬರಬಹುದು. ವಿಕಸಿತ
ಆದರೆ ಕೆಲವು ಸೂಚನೆಗಳು ಸಿಕ್ಕಿವೆ. ಭಾರತದ “ಅನ್ಯಾಯದ ಮತ್ತು ಬಹಳ ಜೋರಾದ ಟ್ಯಾರೀಫ್‍ಗಳು ಒಂದು ದೊಡ್ಡ ಸಮಸ್ಯೆ ಎಂದು ನಾನು ಹೇಳಲೇಬೇಕು” ಎನ್ನುತ್ತಲೇ, ಪ್ರಧಾನ ಮಂತ್ರಿ ಮೋದಿ “ಒಳ್ಳೆಯ ವಿಶ್ವಾಸ”ದಿಂದ ಅವನ್ನು ಕಡಿತ ಮಾಡುವುದಾಗಿ ಹೇಳಿದ್ದಾರೆ, ಯುಎಸ್ ತೈಲ ಮತ್ತು ಅನಿಲ ಮಾರಾಟ ವ್ಯಾಪಾರ ಕೊರತೆಯನ್ನು ತುಂಬುತ್ತದೆ ಎಂದು ಯುಎಸ್ ಅಧ್ಯಕ್ಷರು ಹೇಳಿರುವದಾಗಿ ವರದಿಯಾಗಿದೆ. ಈ ಮಾತುಗಳು ನಮ್ಮ ಪ್ರಧಾನಿಗಳ ತರಾತುರಿಯ ವಾಶಿಂಗ್ಟನ್ ಭೇಟಿ ನಿರ್ಧಾರದ ಹಿನ್ನೆಲೆಯಲ್ಲಿ ಎದ್ದಿದ್ದ ಆತಂಕಗಳತ್ತ ನಮ್ಮ ಗಮನ ಸೆಳೆಯುತ್ತವೆ. ವಿಕಸಿತ
“ಭಾರತಕ್ಕೆ ಅಮೆರಿಕಾವನ್ನು
ಮತ್ತೆ ಮಹಾನ್ ಗೊಳಿಸುವ
ಅಪಾರ ಸಾಮರ್ಥ್ಯವಿದೆ”
ವ್ಯಂಗ್ಯಚಿತ್ರ: ಆರ್.ಪ್ರಸಾದ್,
ಇಕನಾಮಿಕ್ ಟೈಮ್ಸ್
ತಮ್ಮ ಪರಮ ಗೆಳೆಯ ಮತ್ತೆ ಅಮೆರಿಕಾದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೂರೇ ವಾರದೊಳಗೆ ನಮ್ಮ ಪ್ರಧಾನಿಗಳು ವಾಶಿಂಗ್ಟನ್‌ಗೆ ಧಾವಿಸಿದ್ದರು.
ಒಂದು ವಾರದೊಳಗೇ, ಟ್ರಂಪ್‌ರೊಡನೆ ತಾನು ದೂರವಾಣಿ ಸಂವಾದ ನಡೆಸಿರುವುದಾಗಿ ಅವರು ಹೇಳಿದರು. ಮರುದಿನವೇ, ಯುಎಸ್ ಅಧ್ಯಕ್ಷರು ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳಲ್ಲಿ “ಅಮೆರಿಕಾ ಮೊದಲು’ ಧೋರಣೆಯನ್ನು ಅನುಸರಿಸಬೇಕು ಎಂದು ಕರೆ ನೀಡುತ್ತ ಆ ದೇಶಗಳ ಮೇಲೆ ‘ಟ್ಯಾರೀಫ್’(ಆಮದುಸುಂಕ)ಗಳನ್ನು ಹಾಕುತ್ತೇವೆ ಎಂದೂ ಬೆದರಿಸಿದರು. ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದ ದೇಶಗಳಲ್ಲಿ ಚೀನಾ, ಬ್ರೆಝಿಲ್
ಮಾತ್ರವಲ್ಲ, ಭಾರತವೂ ಇತ್ತು. ವಿಕಸಿತ
ಇದಕ್ಕೆ ತಮ್ಮ ವಾಶಿಂಗ್ಟನ್ ಭೇಟಿ ಕಾಲದಲ್ಲಿ ಅಕ್ರಮ ವಲಸೆ, ಸುಂಕದರಗಳು ಇತ್ಯಾದಿಗಳ ಬಗ್ಗೆ ನಮ್ಮ ಪ್ರಧಾನಿಗಳು ಟ್ರಂಪ್‌ರೊಡನೆ ಮಾತಾಡಲಿದ್ದಾರೆ ಎಂದು ಅವರ ಅನುಯಾಯಿಗಳು ಸಮಜಾಯಿಷಿ ನೀಡಿದರು. ಆದರೆ ಅದರ ಮೊದಲೇ ಭಾರತದ ಅಕ್ರಮ ವಲಸಿಗರು ಎಂಬವರನ್ನು ವಾಪಾಸು ಕಳಿಸಿದ್ದೇಕೆ, ಅವರ ಕೈಕಾಲುಗಳಿಗೆ ಕೋಳ ಹಾಕಿ ಮಿಲಿಟರಿ ವಿಮಾನದಲ್ಲಿ ಕ್ರಿಮಿನಲ್‌ಗಳಂತೆ ನಡೆಸಿಕೊಂಡದ್ದು ಏಕೆ ಎಂಬ ಪ್ರಶ್ನೆಗೆ ಭಾರತೀಯ ಅಧಿಕಾರಿಗಳು ಉತ್ತರಿಸಲು ನಿರಾಕರಿಸಿದರು ಎಂದೂ ವರದಿಯಾಯಿತು. ಪ್ರಧಾನಿಗಳಂತೂ ಈ ಬಗ್ಗೆ ಚಕಾರವೆತ್ತಲಿಲ್ಲ. ವಿಕಸಿತ
ವ್ಯಂಗ್ಯಚಿತ್ರ: ಪಿ.ಮಹಮ್ಮದ್
ವಾರ್ತಾಭಾರತಿ
ನಂತರ ಫೆಬ್ರುವರಿ 7ರಂದು ಅಧ್ಯಕ್ಷ ಟ್ರಂಪ್ ಇರಾನಿನ ಹಣಕಾಸು ಜೀವನಾಡಿಗಳಾದ ತೈಲ ರಫ್ತು ಮತ್ತು ಬಂದರು ನಿರ್ವಹಣೆಗಳ ಮೇಲೆ ಪ್ರತಿಬಂಧಕಗಳನ್ನು ಹೇರುವ ‘ರಾಷ್ಟ್ರೀಯ-ಭದ್ರತಾ ಮೆಮೊರಂಡಂ’ಗೆ ಸಹಿ ಹಾಕಿದರು. ಇದು ಅದರ ಚಬಹಾರ್ ಬಂದರಿಗೂ ಅನ್ವಯವಾಗುತ್ತದೆ. ಇದರಲ್ಲಿ ಭಾರತ 37 ಕೋಟಿ ಡಾಲರುಗಳ ಹೂಡಿಕೆ ಮಾಡಿದೆ. ಮುಂದೆ ಇದರ ಗತಿಯೇನು, ಇರಾನಿನ ಮೇಲೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಅಮೆರಿಕ ಕೊಟ್ಟ’’ರಿಯಾಯ್ತಿ”ಯನ್ನು ಟ್ರಂಪ್ ಬಿಡುತ್ತಾರೆಯೇ ಎಂಬ ಪ್ರಶ್ನೆಗಳೂ ಭಾರತ ಸರಕಾರದ ಮುಂದೆ ಎದ್ದಿದೆ. ವಿಕಸಿತ
ಟ್ರಂಪ್ ಅಲ್ಲಿಗೇ ನಿಲ್ಲಲಿಲ್ಲ. ನಮ್ಮ ಪ್ರಧಾನಿಗಳು ಇನ್ನೇನು ವಾಶಿಂಗ್ಟನ್ ಭೇಟಿಗೆ ಹೊರಡುತ್ತಾರೆ ಎಂದಿದ್ದಾಗಲೇ ಯುಎಸ್ ಆಮದು ಮಾಡಿಕೊಳ್ಳುವ ಎಲ್ಲ ಉಕ್ಕು ಮತ್ತು ಅಲ್ಯುಮಿನಿಯಂ ಸಾಮಗ್ರಿಗಳ ಮೇಲೆ 25% ಸುಂಕ ಹಾಕುವುದಾಗಿ ಗುಡುಗಿದರು. ಇದು ಭಾರತಕ್ಕೂ ತಟ್ಟುವ ಕ್ರಮ. ಆದರೆ ಈ ಬಗ್ಗೆಯೂ ಭಾರತದ ಕಡೆಯಿಂದ ದಿವ್ಯ ಮೌನ! ಯುಎಸ್‌ಗೆ ಭಾರತದ ಉಕ್ಕು ಮತ್ತು ಅಲ್ಯುನಿಯಂ ರಫ್ತು ಬಹಳೇನೂ ಇಲ್ಲ ಎಂದೊಬ್ಬ ವಕ್ತಾರರು ಗೊಣಗಿದರಂತೆ. ಆದರೆ ಈಗಾಗಲೇ ಕಳೆದ 12 ತಿಂಗಳಿಂದ ಉಕ್ಕು ರಫ್ತು ಮಂದಗೊಂಡಿರುವಾಗ, ಈ ಸುಂಕದಿಂದ ಭಾರತದ ಉಕ್ಕು ರಫ್ತುದಾರರ ಮುಂದೆ ಹೊಸ ಸವಾಲುಗಳು ಬಂದು ನಿಂತಿವೆ ಎಂದು ಮಾರುಕಟ್ಟೆ ವೀಕ್ಷಕರು ಹೇಳುತ್ತಿದ್ದಾರೆ. ವಿಕಸಿತ
ಟ್ರಂಪ್‌ರವರ ಟಾರೀಫ್ ಸಮರ ಭಾರತದ ಮಾಹಿತಿ ತಂತ್ರಜ್ಞಾನ, ಜವಳಿ ಮತ್ತು ಔಷಧಿ ವಲಯಕ್ಕೂ ಸಂಚಕಾರ ತರುವ ಸಂಭವವಿದೆ ಎಂದೂ ಹೇಳಲಾಗುತ್ತಿದೆ.
ಎಲ್ಲವೂ ಟ್ರಂಪ್ ಪ್ರೀತ್ಯರ್ಥ!
ಹಣಕಾಸು ಮಂತ್ರಿಗಳು ಬಜೆಟಿನಲ್ಲಿ ಪರಮಾಣು ಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿಗೆ ನಾಗರಿಕ ಬಾಧ್ಯತೆ ಕಾಯ್ದೆ (ಸಿಎಲ್‌ಎನ್‌ಡಿಎ)ಗೆ ತಿದ್ದುಪಡಿಗಳನ್ನು ತರುವುದಾಗಿ ಸಾರಿದ್ದರು. ಇದು ನಮ್ಮ ಪ್ರಧಾನಿಗಳ ಫ್ರಾನ್ಸಿನ ಮತ್ತು ಯುಎಸ್‌ನ ಮಿತ್ರರ ಪ್ರೀತ್ಯರ್ಥ ಎಂದು ಆಗಲೇ ವಿಶ್ಲೇಷಕರು ಹೇಳಿದ್ದರು. ಯುಎಸ್ ಅಧ್ಯಕ್ಷರನ್ನು ಮತ್ತು ಅದಕ್ಕೆ ಮೊದಲು ಪ್ರಧಾನಿಗಳ ಮತ್ತೊಬ್ಬ ಗೆಳೆಯರಾದ ಫ್ರಾನ್ಸಿನ ಅಧ್ಯಕ್ಷರ ಭೇಟಿಗೆ ಇದು ಪೂರ್ವ ಸಿದ್ಧತೆ ಎಂದು ಅವರು
ಹೇಳಿದ್ದರೆ, ಅತ್ತ ‘ಯುಎಸ್-ಭಾರತ ಆಯಕಟ್ಟಿನ ಭಾಗೀದಾರಿಕೆ ವೇದಿಕೆ’(ಯುಎಸ್‌ಐಎಸ್‌ಪಿಎಫ್)ಯ ಅಧ್ಯಕ್ಷ ಮುಕೇಶ್ ಅಘಿ, ಅಮೆರಿಕನ್ ರಕ್ಷಣಾ ಉಪಕರಣಗಳನ್ನು ಮತ್ತು ಇಂಧನವನ್ನು ಭಾರತ ಖರೀದಿಸಬೇಕೆಂಬುದು ಯುಎಸ್ ಅಧ್ಯಕ್ಷರ ಆದ್ಯತೆ ಎಂದು ಹೇಳಿದ್ದಾರೆ. ವಿಕಸಿತ
ಈಗ ಟ್ರಂಪ್ ಪ್ರೀತ್ಯರ್ಥ ಮೋದಿ ಸರಕಾರ ಅಮೆರಿಕಾ ಭಾರತಕ್ಕೆ ರಫ್ತು ಮಾಡುವ ಪೆಕನ್(ಕ್ಯಾಲಿಫೊರ್ನಿಯ ವಾಲ್‌ನಟ್- ಭಾರತದಲ್ಲಿ ಇದನ್ನು ಶಿಮ್ಲಾ ಆಖ್ರೋಟ್ ಎನ್ನುತ್ತಾರೆ) ಮೇಲಿನ ಆಮದು ಸುಂಕವನ್ನು ಇಳಿಸುವುದಾಗಿ ಹೇಳಿದೆ ಎಂದೂ ವರದಿಯಾಗಿದೆ( ದಿ ಹಿಂದು, ಫೆ.11). “ಕೈಗಾರಿಕಾ ಸಾಮಾನುಗಳಿಗೆ ಸಂಬಂಧಪಟ್ಟಂತೆ ಭಾರತ ಈಗ ಬಹಳ ಸ್ನೇಹಪರವಾಗಿದೆ. ಕೃಷಿಯಲ್ಲಿ ಕೆಲವು ಇಕ್ಕಟ್ಟುಗಳಿರಬಹುದು, ಆದರೆ ನಾವು ಈಗಾಗಲೇ ಬಾದಾಮಿ ಮುಂತಾದ ಐಟಂಗಳ ಮೇಲೆ ಸುಂಕಗಳನ್ನು ಇಳಿಸಿದ್ದೇವೆ. ಪೆಕನ್ ನಟ್ ಮೇಲೆ ಕ್ರಮೇಣ ಸುಂಕ ಇಳಿಸುತ್ತೇವೆ” ಎಂದೊಬ್ಬ ಉನ್ನತ ಸರಕಾರೀ ಅಧಿಕಾರಿ ಹೇಳಿರುವುದಾಗಿ ಈ ವರದಿ ಹೇಳುತ್ತದೆ.
2023ರ ವರೆಗೆ, ನಮ್ಮ ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದ ಸಮಶೀತೋಷ್ಣ ವಾತಾವಾರಣದಲ್ಲಿಯೂ ಬೆಳೆಸುವ ಈ ಪೆಕನ್ ನಟ್ ಮೇಲೆ 100% ಸುಂಕ ಹಾಕಲಾಗಿತ್ತು, 2023ರಲ್ಲಿ ಅದನ್ನು 30%ಕ್ಕೆ ಇಳಿಸಲಾಗಿತ್ತು, ಈಗ ಟ್ರಂಪ್‌ರ ಟಾರಿಫ್-ಟಾರಿಫ್ ರಂಪಾಟವನ್ನು ಶಮನ ಮಾಡಲು, ಮತ್ತಷ್ಟು ಇಳಿಸುವ ಆಶ್ವಾಸನೆಯೊಂದಿಗೆ, ಈಗಾಗಲೇ ಅತಿ ಕಡಿಮೆ ಅಥವ ಸೊನ್ನೆ ಸುಂಕ ಹಾಕಿರುವ ಯುಎಸ್‌ನಿಂದ ಆಮದು ಮಾಡುವ ಹಲವಾರು ಕೈಗಾರಿಕಾ ಸರಕುಗಳ
ಒಂದು ಪಟ್ಟಯನ್ನೂ ಮುಂದಿಟ್ಟು ಭಾರತವೇನೂ ಸುಂಕ ಪಟ್ಟಿಗಳ ದುರುಪಯೋಗ ಮಾಡುವ ದೇಶವಲ್ಲ ಎಂದು ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಲಾಗವುದಂತೆ. ವಿಕಸಿತ
“ಇಷ್ಟೊಂದು ಹಲ್ಲು ಗಿಂಜಬೇಕೇ?”
ಸಹಜವಾಗಿಯೇ, ಭಾರತದಂತಹ, ಮೂರನೇ ಜಗತ್ತಿನ ಮುಖಂಡನಾಗಿರುವಂತಹ ದೊಡ್ಡ ದೇಶ ಯುಎಸ್ ಅಧ್ಯಕ್ಷರ ರಂಪಾಟಗಳ ಎದುರು ಇಷ್ಟೊಂದು ಹಲ್ಲು ಗಿಂಜಬೇಕೇ ಎಂದು ಈಗ ಹಲವಾರು ವಿಶ್ಲೇಷಕರು ಕೇಳಲಾರಂಭಿಸಿದ್ದಾರೆ.
ನಮ್ಮ ಪ್ರಧಾನಿಗಳು ಅಧ್ಯಕ್ಷ ಟ್ರಂಪ್‌ರ 2ನೇ ಅಧಿಕಾರಾವಧಿಯಲ್ಲಿ ಅವರನ್ನು ಭೇಟಿಯಾಗುತ್ತಿರುವ ಮೂರನೇ ಜಾಗತಿಕ ಮುಖಂಡರು. ಅವರಿಗೆ ಮೊದಲು ಇಸ್ರೇಲಿನ ಪ್ರಧಾನಿ ನೆತನ್ಯಾಹು ಮತ್ತು ಜಪಾನಿನ ಪ್ರಧಾನಿ ಇಶಿಬ ಭೇಟಿಯಾಗಿದ್ದರು. ಇಸ್ರೇಲ್ ಅಂತೂ ಯುಎಸ್‌ನ ಬಾಲಬಡುಕ ದೇಶ, ಜಪಾನಿನ ಪ್ರಧಾನಿಗೆ ಟ್ರಂಪ್ ಚೀನಾದ ಅಧ್ಯಕ್ಷರಿಗೆ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದರಿಂದ ನಡುಕ ಉಂಟಾಗಿರಬಹುದು.
ಆದರೆ ಭಾರತದ ಪ್ರಧಾನಿ ಇಷ್ಟೊಂದು ತರಾತುರಿಯಲ್ಲಿ ಟ್ರಂಪ್ ಬಗ್ಗೆ ಪ್ರೀತಿಯನ್ನು ಸಾರುವ ಅಗತ್ಯವಾದರೂ ಏನಿದೆ, ಎಂದು ಪ್ರಶ್ನಿಸುತ್ತಾರೆ ಅರ್ಥಶಾಸ್ತ್ರಜ್ಞ, ಪತ್ರಿಕಾ ಸಂಪಾದಕ ಹಾಗೂ ಲೇಖಕರೂ ಆಗಿರುವ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರು ಸಲಹಾಗಾರರೂ ಆಗಿದ್ದ ಸಂಜಯ ಬರು (ದಿ ವೈರ್, ಫೆ.10). ಈಗ ಎಬ್ಬಿಸಿರುವ ರಾಜತಾಂತ್ರಿಕ ಧೂಳು ತಿಳಿಯಾಗುವ ವರೆಗೆ ಕಾದಿದ್ದರೆ ಭಾರತಕ್ಕೆ ತೊಂದರೆಯೇನೂ ಆಗುತ್ತಿರಲಿಲ್ಲ ಎನ್ನುತ್ತಾರೆ ಅವರು.
ವ್ಯಂಗ್ಯಚಿತ್ರ:
ಸತೀಶ ಆಚಾರ್ಯ,
ಫೇಸ್‍ಬುಕ್
ಇಸ್ರೇಲ್ ಮತ್ತು ಜಪಾನ್ ಟ್ರಂಪ್‌ರವರ ಬಗ್ಗೆ ಅಧೀರರಾಗಲು ಕಾರಣಗಳಿವೆ. ಅವು ಬಹಳ ವರ್ಷಗಳಿಂದಲೂ ತಾವು ಯುಎಸ್ ನ ಅಡಿಯಾಳು ಪ್ರಭುತ್ವಗಳು ಎಂಬಂತೆ ವರ್ತಿಸುತ್ತ ಬಂದಿವೆ, ಅವುಗಳ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ ಅಮೆರಿಕಾದೊಂದಿಗೆ ಅವರ ಸಂಬಂಧಗಳನ್ನು ಅವಲಂಬಿಸಿದೆ. ಆದರೆ ಭಾರತ ಹಾಗಲ್ಲವಲ್ಲ. ಅಧ್ತಕ್ಷ ಟ್ರಂಪ್‌ರ ಬಗ್ಗೆ ನಾವೂ ನಮ್ಮ ಅಧೀರತೆಯನ್ನು ಪ್ರದರ್ಶಿಸುತ್ತಿರುವದೇಕೆ, ಇದು ಭಾರತದ ಜಾಗತಿಕ ಸ್ಥಾನಮಾನಕ್ಕೆ ತಕ್ಕುದಾದುದಲ್ಲ ಎನ್ನುತ್ತಾರೆ ಸಂಜಯ್ ಬರು.
“ಪ್ರಧಾನ ಮಂತ್ರಿಗಳು ಒಬ್ಬ ಬಲಿಷ್ಟ ಜಾಗತಿಕ ಮುಖಂಡನೆಂಬ ಇಮೇಜ್ ತೋರ್ಪಡಿಸುತ್ತಾರೆ. ಅದರೆ ಪರಮಾಣು ಬಾಧ್ಯತಾ ಕಾಯ್ದೆಯ ಬಗ್ಗೆ ಸರಕಾರದ ಪ್ರಕಟಣೆ ಆ ಇಮೇಜಿನ ಬಗ್ಗೆ ಬಹಳಷ್ಟು ದೊಡ್ಡ ಟಿಪ್ಪಣಿ. ಯುಎಸ್‌ನ ಕಾರ್ಪೊರೇಟ್‌ಗಳ ಲಾಭವೇ ಎಲ್ಲಕ್ಕೂ ಮಿಗಿಲಾಗಿರುವ ಯುಎಸ್ ಸರಕಾರದ ಒತ್ತಡ ಎದುರಾದಾಗ ಮೋದಿಯವರ ಸರಕಾರ ಭಾರತೀಯರ ಸುರಕ್ಷತೆಯ ಮೂಲಭೂತ ಹುಕ್ಕುಗಳ ಪರವಾಗಿ ನಿಲ್ಲಲು ಅಸಮರ್ಥವಾಗುವಂತೆ ಕಾಣುತ್ತದೆ” ಎಂದಿದ್ದಾರೆ ‘ಪರಮಾಣು ನಿಶ್ಶಸ್ತ್ರೀಕರಣ ಮತ್ತು ಶಾಂತಿ ಮೈತ್ರಿಕೂಟ’(ಸಿಎನ್‌ಡಿಪಿ)ದೊಡನೆ ಕೆಲಸ ಮಾಡುವ ಭೌತಶಾಸ್ತ್ರಜ್ಞರಾದ ಎಂ.ವಿ.ರಮಣ ಮತ್ತು ಸುವ್ರತ ರಾಜು(ದಿ ಹಿಂದು, ಫೆ.13).
ಟ್ರಂಪ್ ರವರ ಅರಚಾಟ, ರಂಪಾಟಗಳು ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’(‘ಮಗ’) ಎಂಬುದರ ನಿಜ ಅರ್ಥ ಏನು ಎಂದು ಸ್ಪಷ್ಟವಾಗಿ ತೋರಿಸಿವೆ ಮತ್ತು ಇವಕ್ಕೆ ಚೀನಾ ಮತ್ತು ಕ್ಯೂಬಾ ಮಾತ್ರವಲ್ಲ ಕೊಲಂಬಿಯ, ಪೆರು, ಮೆಕ್ಸಿಕೊ, ಪನಾಮಾ, ಗ್ರೀನ್‌ಲ್ಯಾಂಡ್ ಮತ್ತು ಗಾಝಾ ಕೂಡ ತಕ್ಕ ಉತ್ತರ ನೀಡಲು ಹಿಂಜರಿದಿಲ್ಲ, 56 ಅಂಗುಲ ಎದೆಯ ಪ್ರಧಾನಿಯನ್ನು ಹೊಂದಿರುವ ಭಾರತ ಮಾತ್ರವೇ ಏಕೆ ಅಧೀರಗೊಳ್ಳಬೇಕು ಎಂಬ ಪ್ರಶ್ನೆ ನಮ್ಮ ಪ್ರಧಾನಿಗಳ ವಾಶಿಂಗ್ಟನ್ ಭೇಟಿಯ ನಂತರವೂ ಹಾಗೆಯೇ ಉಳಿದಿದೆ.
ಇದನ್ನೂ ನೋಡಿ: ಡಾ. ಬಂಜಗೆರೆಯವರ ಸಾಂಸ್ಕೃತಿಕ ಅಧ್ಯಯನದಲ್ಲಿ ಜನರ ದನಿ ಕಾಣುತ್ತದೆ – ಡಾ. ರವಿಕುಮಾರ್ ಬಾಗಿ Janashakthi Media