ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ಅಕ್ರಮ ಸಂಬಂಧ ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಅವರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಟರ್ಮಿನಲ್ ವತಿಯಿಂದ 2021 ರಿಂದ 2023ರ ನಡುವೆ 821 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 9.18 ಕೋಟಿ ರೂ. ವೆಚ್ಚದ 153 ಕಾಮಗಾರಿಗಳನ್ನಷ್ಟೇ ನಿರ್ವಹಿಸಲಾಗಿತ್ತು. ಉಳಿದ 668 ಕಾಮಗಾರಿಗಳನ್ನು ಕೈಗೊಳ್ಳದೆಯೇ ನಕಲಿ ಬಿಲ್ ಸೃಷ್ಟಿಸಿ 39.42 ಕೋಟಿ ರೂ.ಗಳನ್ನು ಮೂರು ಗುತ್ತಿಗೆ ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಲಾಗಿತ್ತು.
ಮೆಸರ್ಸ್ ಎಸ್.ಎಸ್.ಎಂಟರ್‌ಪ್ರೈಸಸ್, ವೆನಿಶಾ ಎಂಟರ್‌ಪ್ರೈಸಸ್, ಮಯೂರ್ ಅಡ್ವರ್ಟೈಸ್‌ಮೆಂಟ್ ಹೆಸರಿನ ಗುತ್ತಿಗೆ ಏಜೆನ್ಸಿಗಳಿಗೆ 39.42 ಕೋಟಿ ರೂ.ಪಾವತಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರರು ವರ್ತಕರ ಖಾತೆಗಳಿಗೆ ಹಣ ಜಮಾ ಮಾಡಿದ್ದರು. ಸುಮಾರು 10 ವರ್ತಕ ಬ್ಯಾಂಕ್ ಖಾತೆಗಳಿಂದ ಅಂದಿನ ಅಧ್ಯಕ್ಷರಾದ ಡಿ.ಎಸ್. ವೀರಯ್ಯ ಅವರ ಬ್ಯಾಂಕ್ ಖಾತೆಗೆ ಹಂತ- ಹಂತವಾಗಿ ಮೂರು ಕೋಟಿ ರೂ. ವರ್ಗಾವಣೆ ಆಗಿರುವುದಕ್ಕೆ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ.