ಪ್ಯಾಂಟ್ ಕಳಚಿ, ಹಳ್ಳದಾಟಿ ಶಾಲೆಗೆ ಹೋಗುವ ಮಕ್ಕಳು

ರಾಯಚೂರು : ಈ ಮಕ್ಕಳು ಶಾಲೆಗೆ ಹೋಗಬೇಕಂದರೆ ಹಳ್ಳದಾಟಬೇಕು, ಅದಕ್ಕಾಗಿ ಅವರು ಪ್ಯಾಂಟ್ ಕಳಚಬೇಕು. ಒಂದರ್ಥದಲ್ಲಿ ಅರೆಬೆತ್ತಲೆಯಾಗಿ ಹಳ್ಳ ದಾಟುವ ದಾರುಣ ಸ್ಥಿತಿ ಈ ಬಾಲಕರದ್ದು.

ಹೌದು, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ಪ್ರತಿದಿನ ಕಂಡುಬರುವ ದೃಶ್ಯವಿದು. ಕೈಯಲ್ಲಿ ಬ್ಯಾಗ್​,ಚಪ್ಪಲಿ ಹಾಗೂ ಧರಿಸಿದ್ದ ಪ್ಯಾಂಟ್​​ ಅನ್ನೇ ಕಳಚಿ ತಲೆಮೇಲೆ ಹೊತ್ತು ಹಳ್ಳದಾಟಿ ಶಾಲೆಗೆ ಹೋಗುವ ದೃಶ್ಯ ಮನಕಲಕುವಂತಿದೆ.

ಅರೆಬೆತ್ತಲೆಯಾಗಿ ಹಳ್ಳ ದಾಟಿ ಶಾಲೆಗಳಿಗೆ ತೆರಳುವ ದುಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದು, ಈ ಕಾರಣಕ್ಕಾಗಿಯೇ ಶಾಲೆ ತೊರೆದವರ ಸಂಖ್ಯೆ ಹೆಚ್ಚು. ಅದರಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಿದೆ. “ನಮ್ಮ ಮನೆಯ ಹೆಣ್ಣು‌ ಮಕ್ಕಳು ಶ್ಯಾಲೀ ಕಲೀಬೇಕು ಅಂತಾ ಆಸೇರಿ, ಇಂತಹ ದುಸ್ಥಿತಿ ಇರೋದ್ರಿಂದ್ ಹೆಂಗ್ ಕಳಸಬೇಕ್ರಿ, ರಾಜಕೀಯ ಮಾಡೋರ್ನ ಕೇಳಿ ಕೇಳಿ ಸಾಕಾತ್ರಿ, ಇನ್ನೂ ಸಮಸ್ಯೆ ಹಂಗೆ ಐತ್ರಿ” ಎಂದು ಹೇಸರು ಹೇಳಲಿಚ್ಚಿಸದ ಪೋಷಕರೊಬ್ಬರು ಅಳಲು ತೋಡಿಕೊಂಡರು.

ಪಟ್ಟಣಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಹಳ್ಳವನ್ನೂ ದಾಟಿಗೆ ಶಾಲೆ-ಕಾಲೇಜುಗಳಿಗೆ ತೆರಳಬೇಕು. ಶಾಸಕರು ಇತ್ತ ಗಮನ ಹರಿಸುತ್ತಿಲ್ಲ, ಅವರಿಗೆ ಜನರ ಕಾಳಜಿ, ಶಿಕ್ಷಣದ ಕಾಳಜಿ ಇಲ್ಲದಾಗಿದೆ. ಅವರ ವಿರುದ್ಧ ಪ್ರತಿಭಟನೆ ರೂಪಿಸಲಾಗುವುದು ಎಂದು SFI ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ ಎಚ್ಚರಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ರಸ್ತೆ ಸಂಪರ್ಕ ಆಗದಿರುವುದು ಸರಕಾರಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಈ ಗ್ರಾಮಕ್ಕೆ ಬಂದು ಮತ ಕೇಳುವ ರಾಜಕಾರಣಿಗಳು ನೈತಿಕತೆಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇಂತಹವುಗಳಿಗೆ ಹಣ ಖರ್ಚು ಮಾಡುತ್ತಿಲ್ಲ. ಬದಲಾಗಿ ಚನ್ನಾಗಿರುವ ರಸ್ತೆ ಅಗೆದು ಹಣ ಪೋಲು ಮಾಡುತ್ತಿದ್ದಾರೆ.ಇನ್ನಾದರೂ ಸರಕಾರ, ಜಿಲ್ಲಾಡಳಿತ, ತಾಲ್ಲೂಕಾಡಳಿತ ಈ ಗ್ರಾಮಕ್ಕೆ ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆಯನ್ನು ಮಾಡಿ ಮಕ್ಕಳ ಶಿಕ್ಷಣವನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.

Donate Janashakthi Media

Leave a Reply

Your email address will not be published. Required fields are marked *