ಹಾಸನ: ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ತಿರುಪತಿ ದೇವಸ್ಥಾನ ಬಳಿ ಹಿಂದೂ ದೇವರ ವಿಗ್ರಹಗಳ ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ತಿರುಪತಿ ವಸ್ತು ಸಂಗ್ರಹಾಲಯದಲ್ಲಿ ನಿರ್ಮಾಣ ಹಂತದಲ್ಲಿದ್ದ ದೇವರ ವಿಗ್ರಹಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚಿಗೆ ಕೆಲ ದಿನಗಳಿಂದ ಧರ್ಮಗಳ ನಡುವೆ ಮತೀಯವಾದ ಶುರುವಾಗಿದ್ದು, ಹಿಜಾಬ್ ನಿಂದ ಆರಂಭಗೊಂಡ ಹಿಂದೂ ಮುಸ್ಲಿಂ ನಡುವಿನ ವಿವಾದ ಹಲಾಲ್ ಕಟ್, ಜಟ್ಕಾ ಕಟ್. ಅಜಾನ್ ವಿವಾದ, ಮಸೀದಿ ವಿವಾದ ಒಂದೊಂದಾಗಿ ಜರುಗುತ್ತಿವೆ. ಇದೀಗ ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದೂ ದೇವರ ವಿಗ್ರಹಗಳನ್ನ ಕಿಡಿಗೇಡಿಗಳು ಹಾನಿಮಾಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಘಟನೆ ಎರಡು ಕೋಮಿನ ನಡುವೆ ಘರ್ಷಣೆಗೆ ಕಾರಣವಾಗುವ ಸಾಧ್ಯತೆ ಇತ್ತು. ಜಿಹಾದಿ ಮನಸ್ಥಿತಿಯುಳ್ಳ ಮತಾಂಧರು ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್-ಭಜರಂಗದಳದ ಕಾರ್ಯಕರ್ತರು ಶನಿವಾರ (ಜೂನ್ 04) ಅರಸೀಕೆರೆ ಬಂದ್ಗೆ ಕರೆ ಕೊಟ್ಟಿದ್ದರು.
ಆದರೆ, ಬಜರಂಗದಳ ಆರೋಪವನ್ನು ಪೊಲೀಸರು ಒಪ್ಪಿರಲಿಲ್ಲ. ಅದು ಅನ್ಯ ಕೋಮಿನವರು ಮಾಡಿದ ಕೆಲಸವಲ್ಲ ಯಾರೋ ಕಿಡಿಗೇಡಿಗಳು ಮಾಡಿದ ಕೆಲಸ ಎಂದು ಸ್ಪಷ್ಟಪಡಿಸಿದ್ದರು. ದೇವರ ಶಿಲ್ಪ ಕೆತ್ತನೆ ಕೆಲಸಗಾರರು ಊಟಕ್ಕೆ ಹೋಗಿದ್ದ ವೇಳೆ, ಯಾರೂ ಇಲ್ಲದ ಸಂದರ್ಭದಲ್ಲಿ ಒಟ್ಟು 13 ಮೂರ್ತಿ ಭಗ್ನಗೊಳಿಸಿದ್ದಾರೆ. ಅದರಂತೆ ತನಿಖೆ ನಡೆಸಿದ ಪೋಲಿಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾನೂನಿನ ಜೊತೆ ಸಂಘರ್ಷಕ್ಕೊಳಗಾದ ಮೂವರು ಬಾಲಕರು ಸೇರಿ ಒಟ್ಟು ನಾಲ್ವರಿಂದ ಮೇ 30 ರಂದು ಈ ಕೃತ್ಯ ಜರುಗಿದ್ದು, ಸದ್ಯ ಅಭಿಷೇಕ್ ನಾಯ್ಕ (20) ಸೇರಿ ಮೂವರನ್ನು ಬಂಧಿಸಿರುವ ಪೊಲೀಸರು ನಾಲ್ಕನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ದೇವಸ್ಥಾನದ ಬಳಿ ಇರುವ ಕಲ್ಯಾಣಿಯಲ್ಲಿ ಈ ಹುಡುಗರು ಈಜಲು ಬರುತ್ತಿದ್ದರು. ಈಜಾಡಿ ಸಿಗರೇಟ್ ಸೇದುತ್ತಿದ್ದ ಇವರನ್ನು ವಿಗ್ರಹ ಕೆತ್ತನೆ ಮಾಡುತ್ತಿದ್ದ ಕೆಲಸಗಾರರು ಪ್ರಶ್ನೆ ಮಾಡಿದ್ದರು. ಅಲ್ಲದೆ ಕಲ್ಯಾಣಿಯಲ್ಲಿ ಈಜಾಡಬೇಡಿ ಎಂದಿದ್ದಕ್ಕೆ ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ನಿತ್ಯ ಕೋಮುಗಲಭೆಗಳು ನಡೆಯುತ್ತಿವೆ. ಪೊಲೀಸರು ಜಾಗೃತರಾಗಿ ಅಪರಾಧಿಗಳನ್ನು ಪತ್ತೆ ಹಚ್ಚಿದ್ದು ಕೋಮು ದ್ವೇಷಕ್ಕೆ ತಿರುಗಬಹುದಾದ ಅನಾಹುತವನ್ನು ತಪ್ಪಿಸಿದಂತಾಗಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.