ಬೆಂಗಳೂರು: ದೇವಾಲಯ ವ್ಯಾಪ್ತಿಯಲ್ಲಿ, ಜಾತ್ರೆಗಳಲ್ಲಿ ಹಿಂದೂಯೇತರರಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಪ್ರಸ್ತಾಪ ಮಾಡಿ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಕರಾವಳಿ ಭಾಗದಲ್ಲಿ ಈ ಘಟನೆಯು ರಾಜ್ಯದಾದ್ಯಂತ ದೊಡ್ಡ ಚರ್ಚೆಯನ್ನು ಉಂಟು ಮಾಡಿದೆ.
ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನ ವ್ಯಾಪ್ತಿಯಲ್ಲಿ ನಿರ್ಬಂಧ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ, ಯು.ಟಿ. ಖಾದರ್ರಿಂದ ಚರ್ಚೆ ನಡೆದಿದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದ ಜಾಗಕ್ಕೆ ತೆರಳಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಯು.ಟಿ.ಖಾದರ್ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ ಕೆಲವರು ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸುವುದಕ್ಕೆ ಹಿಂದೂ ಸಂಘಟನೆಗಳು ವಿರೋಧಿಸಿರುವ ಕುರಿತು ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಕರಾವಳಿ ಭಾಗದ ಮುಲ್ಕಿ ಸೇರಿದಂತೆ ಹಲವೆಡೆ ಕೆಲವರು ಸ್ವಹಿತಾಸಕ್ತಿಗಾಗಿ ಭಿತ್ತಿಪತ್ರಗಳನ್ನು ಹಾಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದು ವಿವರಿಸಿದರು.
ಭಿತ್ತಿಪತ್ರಗಳನ್ನು ಹಾಕಿದವರು ಹೇಡಿಗಳು, ಕ್ರೂರಿಗಳು. ಹೆಸರು ಹಾಕದೆ ಕೆಲವರು ಭಿತ್ತಿಪತ್ರಗಳನ್ನು ಅಳವಡಿಸುತ್ತಿದ್ದಾರೆ. ಸಮಸ್ಯೆ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವುಗಳನ್ನು ಯಾರು ಅಳವಡಿಸುವುದು ಎಂದು ಪೊಲೀಸರಿಗೆ ಗೊತ್ತಿಲ್ಲವಾ? ಪೊಲೀಸರು ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಯುತ್ತೆ. ಸಮಾಜದಲ್ಲಿ ವೈಮನಸ್ಸು ಸೃಷ್ಟಿಗೆ ಅವಕಾಶ ನೀಡಬಾರದು. ಭಿತ್ತಿಪತ್ರ ಹಾಕಿದವರ ಉದ್ದೇಶವೇನೆಂದು ಬಯಲಾಗಬೇಕು. ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯು.ಟಿ. ಖಾದರ್ ಹೇಳಿದ್ದಾರೆ.
ಈ ನಡುವೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಅವಕಾಶ ನಿರಾಕರಣೆ ಕಾನೂನುಬಾಹಿರ: ಸಿದ್ದರಾಮಯ್ಯ
ಕರಾವಳಿ ಜಿಲ್ಲೆಗಳ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ರೀತಿ ಅವಕಾಶ ನಿರಾಕರಿಸುವುದು ತಪ್ಪು ಎಂದು ಹೇಳಿದ್ದಾರೆ.
ಅಂಗಡಿ ಟೆಂಡರ್ ನಿರಾಕರಿಸುವುದು, ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ ಎನಿಸಿಕೊಳ್ಳುತ್ತದೆ. ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ. ಇದು ಸಂಪೂರ್ಣ ಕಾನೂನುಬಾಹಿರ. ನಮ್ಮ ದೇಶದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಬಂದಾಗಲೇ ಈ ರೀತಿ: ಸಲೀಂ ಅಹ್ಮದ್
ಎಲ್ಲಿ ಬೇಕಾದರೂ ಹೋಗಿ ವ್ಯಾಪಾರ ಮಾಡಬಹುದು. ಹೀಗೆಂದು ಭಾರತದ ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಕೆಲ ಸಂಘಟನೆಗಳು ಭಿತ್ತಿಚಿತ್ರಗಳನ್ನು ಹಾಕಿದ್ದು ದುರ್ದೈವ. ಅದನ್ನು ಹಾಕಿದವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ತಕ್ಷಣ ಮಧ್ಯಪ್ರವೇಶ ಮಾಡಬೇಕು. ಬಿಜೆಪಿ ಸರ್ಕಾರ ಬಂದಾಗಲೇ ಈ ರೀತಿ ಆಗುವುದು ಏಕೆ? ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಪಾಲಿಸಬೇಕು. ಕೆಲವರು ಮನೆಯಲ್ಲಿದ್ದು ಅಸಮಾಧಾನ ಹೊರಹಾಕಿದ್ದಾರೆ. ಷಡ್ಯಂತ್ರ ಮಾಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದ್ದಾರೆ.
ಇತಿಹಾಸ ಗೊತ್ತಿಲ್ಲದವರಿಂದ ಕೃತ್ಯ
ಒಂದು ವರ್ಗದ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿದ್ದಾರೆ. ಇದು ಸಮಾಜಕ್ಕೆ ಆಘಾತಕಾರಿ. ಇತಿಹಾಸ ಗೊತ್ತಿಲ್ಲದವರು ಭಿತ್ತಿಪತ್ರಗಳನ್ನು ಹಾಕುತ್ತಿದ್ದಾರೆ. ಒಂದು ಸಮುದಾಯಕ್ಕೆ ಬಹಿಷ್ಕಾರ ಹಾಕುವುದು ಸರಿಯಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗುವುದಿಲ್ಲ. ನಮ್ಮ ಸಾಂವಿಧಾನಿಕ ಹಕ್ಕನ್ನು ನಮಗೆ ಕೊಡಿ ಎಂದು ವಿಧಾನಸಭೆಯಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ವಾತಾವರಣ ಮತ್ತೆ ಕೆಡಿಸಬಾರದು. ಸಾಮರಸ್ಯ ಪರಂಪರೆ ಇತಿಹಾಸ ಇದೆ. ಅದನ್ನು ಕಾಪಾಡದಿದಿದ್ದರೆ, ಮುಂದಿನ ಪೀಳಿಗೆಗೆ ಕಷ್ಟವಾಗಲಿದೆ. ಒಂದು ವರ್ಗದ ವ್ಯಾಪಾರಿಗಳು ಬರಬಾರದು ಅಂತ ಭಿತ್ತಿಚಿತ್ರಗಳನ್ನು ಹಾಕುವುದು ಸಮಾಜಕ್ಕೆ ಆಘಾತ. ಇದು ಜಾತ್ರೆ, ಉರೂಸ್ ಸಮಯ. ಯಾವ ಸಂಘಟನೆ ಮಾಡ್ತಿದೆಯೋ ಅವರಿಗೆ ಇತಿಹಾಸ ಗೊತ್ತಿಲ್ಲ. ಮಾರಿಗುಡಿ, ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನ ಸ್ಥಾಪಿಸಿರೋದು ಮುಸ್ಲಿಂ ಜನಾಂಗ. ಜಾನಪದ ಹಾಡುಗಳಲ್ಲಿ ಮುಸ್ಲಿಮರು ಹೇಗೆ ಜೊತೆಗಿದ್ದರು ಅನ್ನೋ ಇತಿಹಾಸ ಇದೆ. ನಾವು ಹಾಳು ಮಾಡಿದರೆ, ದ್ರೋಹವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವ್ಯಾಪಾರಕ್ಕೆ ಅವಕಾಶ ನೀಡಿ: ಡಿ.ಕೆ. ಶಿವಕುಮಾರ್
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದು ಸರಿಯಲ್ಲ. ಎಲ್ಲ ಕಡೆ ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಚರ್ಚ್, ಮಸೀದಿ ಮುಂದೆ ಹಿಂದೂಗಳಿಗೆ ಅವಕಾಶ ನೀಡದೇ ಹೋದರೆ ಏನಾಗುತ್ತದೆ? ಅನೇಕರು ಅನೇಕ ರೀತಿಯ ಕೆಲಸ ಮಾಡುತ್ತಿದ್ದಾರೆ. ಯಾರೂ ತೊಂದರೆ ಕೊಡುವ ಕೆಲಸವನ್ನು ಮಾಡಬಾರದು ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುತ್ತಿದ್ದಾರೆ: ಹೆಚ್ಡಿ ಕುಮಾರಸ್ವಾಮಿ
ಈ ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಂಡಿಸಿದ್ದು, ಇದು ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಮಾಡುತ್ತಿರುವ ಕೆಲಸ. ಭಾವನಾತ್ಮಕ ವಿಚಾರ ಸಾರ್ವಜನಿಕವಾಗಿ ಹೊರಗೆ ತಂದು ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಇದು ಆರಂಭವಷ್ಟೇ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅಭಿವೃದ್ಧಿ ವಿಚಾರ ಚರ್ಚೆಗೆ ಬಿಜೆಪಿಯ ಬಳಿ ಸರಕೇ ಇಲ್ಲ. ಉತ್ತರ ಭಾರತದ ಚುನಾವಣಾ ವಿಚಾರ ಪರಿಚಯಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ನನಗಂತೂ ಗೊತ್ತಿಲ್ಲ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದೀಗ ಅದಕ್ಕೆ ಬೆಂಕಿ ಇಡುವ ಕೆಲಸ ಆರಂಭವಾಗಿದೆ. ಕೋಮು ಸಂಘರ್ಷಕ್ಕೆ ಇದೆಲ್ಲ ಮಾಡುತ್ತಿದ್ದಾರೆ. ಕರಾವಳಿ ಸಂಘರ್ಷವನ್ನು ಇಡೀ ರಾಜ್ಯಕ್ಕೆ ಹಬ್ಬಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನು ಏನಿದೆ ಎಂದು ನಾವು ಪರಿಶೀಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನಿರ್ಬಂಧವನ್ನು ದುರುದ್ದೇಶದಿಂದ ಮಾಡಿದ್ದರೆ, ಸರ್ಕಾರ ಅದನ್ನ ತಡೆಯಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಕಾನೂನು ಏನಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆ ಎಂದು ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದಾರೆ.
ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಇಲ್ಲ: ಗೃಹ ಸಚಿವ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, “ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಇಲ್ಲ, ತರಿಸಿಕೊಳ್ಳುತ್ತೇನೆ. ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ವಿರೋಧಿಸಿ ಒಂದು ಕೋಮಿಗೆ ಸೇರಿದವರು ಬಂದ್ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಹೀಗಾಗುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆʼʼ ಎಂದರು.