ದೇಶದಲ್ಲಿ ಪ್ರತಿನಿತ್ಯ 90 ಅಪ್ರಾಪ್ತ ಬಾಲಕಿಯರ ಅತ್ಯಾಚಾರ: ಎನ್‌ಸಿಆರ್‌ಬಿ ವರದಿ

ಬೆಂಗಳೂರು: ಭಾರತ ದೇಶದಲ್ಲಿ 2021ರ ಸಾಲಿನ ಪ್ರತಿನಿತ್ಯ 90 ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಪ್ರಕರಣಗಳು ಸಂಭವಿಸಿವೆ ಎಂಬ ಅಂಕಿಅಂಶ ಬಿಡುಗಡೆಯಾಗಿದೆ. ಪ್ರತಿವರ್ಷ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವಿಭಾಗವಾರು ಪ್ರಕರಣಗಳ ವರದಿಯನ್ನು ಬಿಡುಗಡೆಗೊಳಿಸಲಿದ್ದು, 2021 ರಲ್ಲಿ ದೇಶಾದ್ಯಂತ 33,186 ಅಪ್ರಾಪ್ತ ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ವರದಿಯಂತೆ ಅತ್ಯಾಚಾರ ಪ್ರಕರಣಗಳು ಏರಿಕೆ ಕಂಡಿರುವುದು ಕಂಡುಬಂದಿದೆ.

ಇವುಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿಯಲ್ಲಿ ಸೆಕ್ಷನ್ 4 (ಸಾಮಾನ್ಯ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಮತ್ತು 6 (ಉಗ್ರವಾದ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳಾಗಿವೆ.

ಎನ್‌ಸಿಆರ್‌ಬಿ ಅಂಕಿಅಂಶದ ಪ್ರಕಾರ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು 3,522 ಪ್ರಕರಣಗಳು ವರದಿಯಾಗಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು (3,435), ಉತ್ತರ ಪ್ರದೇಶ (2,749) ಹಾಗೂ 2,093 ಪ್ರಕರಣಗಳೊಂದಿಗೆ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಕಳೆದ ವರ್ಷ ಪ್ರತಿದಿನ ಕನಿಷ್ಠ 5 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವರದಿಯಾಗಿದೆ. ದೇಶದಲ್ಲಿ ಕಳೆದ ವರ್ಷ ಒಟ್ಟು 312 ಅಪ್ರಾಪ್ತ ಬಾಲಕರ ಮೇಲೆ ಅತ್ಯಾಚಾರ ನಡೆದಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಉತ್ತರ ಪ್ರದೇಶ (96) ಮೊದಲ ಸ್ಥಾನದಲ್ಲಿದೆ ಹಾಗೂ  ಕೇರಳದಲ್ಲಿ (74), ಹರಿಯಾಣ (61), ತಮಿಳುನಾಡು (34), ಪಶ್ಚಿಮ ಬಂಗಾಳ (22) ಮತ್ತು ಉತ್ತರಾಖಂಡ್ (8) ಹೀಗೆ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

“ಪೋಕ್ಸೋ ಪ್ರಕರಣಗಳಲ್ಲಿ ದಾಖಲಾಗುವ ಶೇ. 99ಕ್ಕಿಂತ ಹೆಚ್ಚು ಆರೋಪಿಗಳು ಸಂತ್ರಸ್ತರಿಗೆ ಪರಿಚಯಿಸ್ಥರಿಂದಲೇ ಆಗಿರುವುದು ಕಂಡುಬಂದಿದೆ. ಸುಮಾರು 1.22% ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ಅಪರಿಚಿತರು. ಇನ್ನುಳಿದಂತೆ 99% ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ಪರಿಚಿತರಾಗಿದ್ದಾರೆ.

ಕರ್ನಾಟಕದಲ್ಲಿ ನಾಲ್ವರು ಬಾಲಕರ ಮೇಲೆ ಅತ್ಯಾಚಾರ ನಡೆದಿದೆ ಎಂದು ವರದಿ ಆಗಿದೆ. ಅಪ್ರಾಪ್ತ ಬಾಲಕಿಯರು ಮನೆ ಬಿಟ್ಟು ಓಡಿ ಹೋಗುವಿಕೆ ಮತ್ತು ಬಾಲ್ಯವಿವಾಹದ ಪ್ರಕರಣಗಳನ್ನು ಪೋಕ್ಸೋ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ.

ಈ ಮಧ್ಯೆ ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿತರಾದ ಸುಮಾರು 1% ಆರೋಪಿಗಳು ಸಂತ್ರಸ್ತರಿಗೆ ಪರಿಚಯವಿರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಆತ್ಯಾಚಾರ ಆರೋಪಿಗಳು ಕುಟುಂಬದ ಸದಸ್ಯರು, ಸ್ನೇಹಿತರು, ನೆರೆಹೊರೆ ಮತ್ತು ಸಂಬಂಧಿಕರೇ ಆಗಿರುತ್ತಾರೆ ಎಂದು ವರದಿಯಾಗಿದೆ.

ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇವೆ. 2019-20 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಗಂಟೆಯೊಂದಕ್ಕೆ 4 ಅತ್ಯಾಚಾರಗಳು ಭಾರತದಲ್ಲಿ ಜರುಗುತ್ತವೆ.

Donate Janashakthi Media

One thought on “ದೇಶದಲ್ಲಿ ಪ್ರತಿನಿತ್ಯ 90 ಅಪ್ರಾಪ್ತ ಬಾಲಕಿಯರ ಅತ್ಯಾಚಾರ: ಎನ್‌ಸಿಆರ್‌ಬಿ ವರದಿ

Leave a Reply

Your email address will not be published. Required fields are marked *