ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ: ಸೀತಾರಾಮ್‌ ಯೆಚೂರಿ

ಬೆಂಗಳೂರು: ದೇಶದಲ್ಲಿ ಜನ ಸಾಮಾನ್ಯರಿಗೆ ಭಯದ ವಾತಾವರಣವಿದೆ. ಜನಪರವಾಗಿ ಮಾತಾಡಿದರೆ ದೇಶದ್ರೋಹದ ಕೇಸು ದಾಖಲಾಗುತ್ತಿದೆ. ದೇಶದ ಸಾರ್ವಭೌಮತೆಯೇ ಅಪಾಯದಲ್ಲಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಹೇಳಿದರು.

ರಾಷ್ಟ್ರೀಯ ನವ ನಿರ್ಮಾಣ ವೇದಿಕೆ, ಬೆಂಗಳೂರು ಇವರ ವತಿಯಿಂದ ಇಂದು (ಆಗಸ್ಟ್‌ 29) ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ-96 ಕಾರ್ಯಕ್ರಮದಲ್ಲಿ ಸೀತಾರಾಮ್‌ ಯೆಚೂರಿ ಅವರು ಉಪನ್ಯಾಸ ನೀಡಿದರು.

ಮುಂದುವರೆದು ಮಾತನಾಡಿದ ಅವರು, ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಜೈಲಿಗೆ ಹೋದವರು ಇದುವರೆಗೆ ದೋಷಾರೋಪ ಪಟ್ಟಿ ಸಿದ್ದಪಡಿಸದೆಯೇ ಕೊಳೆಸಲಾಗುತ್ತಿದೆ. ಹತ್ರಾಸ್ ದಲಿತ ಯುವತಿಯ ಕಗ್ಗೋಲೆ ವರದಿ ಮಾಡಲು ಉತ್ತರ ಪ್ರದೇಶಕ್ಕೆ ಹೋದ ಪತ್ರಕರ್ತ ಕಪ್ಪನ್ ಕಾರಣವೇ ಇಲ್ಲದೆ ಜೈಲಿನಲ್ಲಿದ್ದಾನೆ. ಇಂತಹ ವಿಷಮ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.

ದೇಶದ ಸಂಪದ್ಭರಿತ ಅಸ್ತಿಗಳೆಲ್ಲ ಖಾಸಗಿಯವರ ಪಾಲಾಗುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ಕಾಪಾಡಬೇಕಾದ ಸರಕಾರವೇ ಅದನ್ನು ಪರಭಾರೆ ಮಾಡುತ್ತಿದೆ. ಆಡಳಿತದಲ್ಲಿ ಯಾವುದೇ ಸರಕಾರವಿರಲಿ ದೇಶದ ಸಂಪತ್ತನ್ನು ಕಾಪಾಡಬೇಕು ಪ್ರಸ್ತುತ ಈಗ ವಿರುದ್ದವಾಗುತ್ತಿದೆ. ಸಂಸತ್ತಿನಲ್ಲಿ ಯಾವ ಚರ್ಚೆಯೂ ಇಲ್ಲದೆ ಎಲ್ಲವೂ ಅಂಗೀಕಾರವಾಗುತ್ತಿದೆ. ನಾನು ಸರಿಯಾದ ‌ಹೊತ್ತಿನಲ್ಲಿ ಅಲ್ಲಿಂದ ಹೊರಬಿದ್ದೆ ಎಂದು ತಿಳಿಸಿದರು.

ನಮ್ಮ ಸಂವಿಧಾನ ಭಾರತದ ಜನತೆಯಾದ ನಾವು ಎಂದು ಪ್ರಾರಂಭವಾಗುತ್ತದೆ. ಶಾಸಕಾಂಗ ಕುಂಟಿದರೆ ಕಾರ್ಯಾಂಗವೂ ಕ್ರಿಯಾಹೀನವಾಗುತ್ತದೆ. ಜಾತ್ಯಾತೀತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡದಿದ್ದರೆ ದೇಶದ ಭವಿಷ್ಯಕ್ಕೆ ಮಾರಕ. ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಜನರ ಪೌರತ್ವದ ಮೇಲೆ ಪ್ರಹಾರವಾಗಲಿದೆ. ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭಗಳೂ ಇವೆ ಎಂದು ವಿವರಿಸಿದರು.

ಚುನಾವಣಾ ಆಯೋಗದ ಪರಮಾಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಳುವ ಸರ್ಕಾರಗಳು ಅದರ ಮೂಲಕ ದಾಳಿಗೆ ಇಳಿದಿದೆ. ಸರಕಾರದ ನೀತಿಯ ವಿರುದ್ದ ಮಾತಾಡಿದರೆ ಜಾರಿ ನಿರ್ದೇಶನಾಯಲಯ(ಇಡಿ) ದಾಳಿ ಮಾಡಲಾಗುತ್ತಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅಪೌಷ್ಟಿಕತೆ ಬಗ್ಗೆ ಮಾತನಾಡಿದ್ದಾರೆ. ಅದರ ವಿರುದ್ಧ ಸಮರ‌ ಸಾರಬೇಕಂತೆ.‌ಇದೇ ಸರಕಾರ ಪಡಿತರ ಪಡೆಯಲು ಆಧಾರ್ ಕಾರ್ಡ್‌ ಜೋಡಣೆ ಮಾಡುವುದು ಕಡ್ಡಾಯ ಎನ್ನುತ್ತಿದೆ. ‌ಮಕ್ಕಳಿಗೆ ಆಧಾರ್‌ ಕಡ್ಡಾಯ ಎಂದರೆ ಅವರಿಗೆ ಆಹಾರದ ಅಲಭ್ಯತೆ. ಇದು ಅಪೌಷ್ಟಿಕತೆಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ರಾಮಕೃಷ್ಣ ಹೆಗಡೆಯವರ ಕನಸು ಭಾರತ ಒಂದಾಗಿ ಇರುವುದು‌ ಎಂದಾಗಿತ್ತು. ‌ಈ ಮಾದರಿಯ ಆಡಳಿತ ಅದಕ್ಕೆ ಅವಕಾಶ‌ ನೀಡದು. ನಮ್ಮ ದೇಶದಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ಇತರ ಹಲವು ದೇಶಗಳಿಗಿಂತ‌ ಮೊದಲೇ ಬಂತು. ಒಂದು ಮತ ಒಂದು ಮೌಲ್ಯ ದೇಶದಲ್ಲಿದೆ. ಆದರೆ, ಎಲ್ಲರ ಬದುಕಿಗೆ ಒಂದೇ ಮೌಲ್ಯ ಎಂಬುದನ್ನು ತರಲಾಗಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಬಹುತ್ವ ಭಾರತವನ್ನು ಉಳಿಸುವುದೇ ರಾಮಕೃಷ್ಣ ಹೆಗಡೆಯವರಿಗೆ ಗೌರವ ಸಲ್ಲಿಸುವುದಾಗುತ್ತದೆ. ಐಕ್ಯ ಭಾರತವನ್ನು ಉಳಿಸುವ‌ ಮೂಲಕ ಅದನ್ನು ಸಾಧಿಸಬೇಕು. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮಾದರಿ ಇದೆ. ಗೆಲ್ಲುವವರು ಯಾರೋ, ಅಧಿಕಾರ ನಡೆಸುವವರು ಯಾರೊ ಎಂಬಂತಿದೆ, ಅದು ಬದಲಾಗಬೇಕು.

ಭಾರತವನ್ನು ಕಾಪಾಡುವ ಜವಾಬ್ದಾರಿ ನಮ್ಮ‌ ಮೇಲಿದೆ. ಭಾರತದ 75ರ ಸವಾಲು ಹಿಂದಿನ ಕಾರ್ಗತ್ತಲನ್ನು ನೆನಪಿಸಿಕೊಳ್ಳುತ್ತಿರುವುದೋ ಅಥವಾ ಭವಿಷ್ಯವನ್ನು ಬೆಳಗಿಸುವುದೋ ನಾವು ತೀರ್ಮಾನ ಮಾಡಬೇಕು. ರಾಮಕೃಷ್ಣ ಹೆಗಡೆಯವರ ನೆನಪಿನಲ್ಲಿ ನಾವು ಭವಿಷ್ಯವನ್ನು ಬೆಳಗಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಮಮತ ನಿಚ್ಚಾನಿ ವಹಿಸಿದ್ದರು. ಗೌರ ಸಮರ್ಪಣೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾಡಿದರು. ಅಭಿನಂದನಾ ನುಡಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ. ಬಿ.ಎಲ್.‌ ಶಂಕರ್‌ ನೆರವೇರಿಸಿದರು. ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಡಾ. ಎಂ ಪಿ ನಾಡಗೌಡ ಇದ್ದರು.

Donate Janashakthi Media

Leave a Reply

Your email address will not be published. Required fields are marked *