ಬೆಂಗಳೂರು: ರಾಜ್ಯ ರಾಜಧಾನಿಗೆ ಹೊಸ ರೂಪ ನೀಡುವ ಕಾರ್ಯಕ್ಕೆ ರಾಜ್ಯ ಸರ್ಕಾರವೂ ಪಣತೊಟ್ಟಿದೆ. ಈ ಕಾರಣಕ್ಕೆ ಸಭೆಗಳ ಮೇಲೆ ಸಭೆ ನಡೆಸಿ ಹಲವು ನಿರ್ಧಾರ ಕೈಗೊಳ್ಳುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಇಂದು ಪ್ರಮುಖ ಸಭೆ ನಡೆಸಿದ್ದಾರೆ.
ಬೆಂಗಳೂರಿಗೆ ಹೊಸ ರೂಪ ನೀಡಿ ಸಮಗ್ರ ಅಭಿವೃದ್ಧಿ, ಬ್ರ್ಯಾಂಡ್ ಬೆಂಗಳೂರು ಬಗ್ಗೆ ಇಂದು ಬೆಂಗಳೂರಿನ 42 ಪ್ರಮುಖ ವ್ಯಕ್ತಿಗಳ ಜತೆ ಡಿಸಿಎಂ ಸಭೆ ನಡೆಸಿದರು. ಇದು ಮೊದಲ ಹಂತದ ಸಭೆ. ಈ ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆ ಬಂದಿದೆ. ಎಲ್ಲರ ಅನುಭವ ಅಭಿಪ್ರಾಯ ಪಡೆಯುತ್ತಿದ್ದೇನೆ. ಮೊದಲು ಎಲ್ಲ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ವಿಕಾಸ ಸೌಧದಲ್ಲಿ ಇಂದು ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಅಧಿಕೃತ ವೆಬ್‌ಸೈಟ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಇಂದು ಇಡೀ ವಿಶ್ವವು ಬೆಂಗಳೂರಿನ ಪ್ರಗತಿಯ ಬಗ್ಗೆ ಗಮನಿಸುತ್ತಿದೆ. ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ http://brandbengaluru.karnataka.gov.in ಎನ್ನುವ ವೆಬ್ ಪೋರ್ಟಲ್ ಅನ್ನು ಆರಂಭಿಸಲಾಗಿದೆ.
ಇದನ್ನೂ ಓದಿ:ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್ಸ್: ಹೆಬ್ಬಾಳ ಜಂಕ್ಷನ್ ವೀಕ್ಷಣೆ
ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಾರ್ವಜನಿಕರು, ಬೆಂಗಳೂರಿನ ನಿವಾಸಿಗಳು, ಎನ್‌ಆರ್‌ಐಗಳು ತಮ್ಮ ಅಭಿಪ್ರಾಯಗಳನ್ನು ಈ ಪೋರ್ಟಲ್ ಮೂಲಕ ಹಂಚಿಕೊಳ್ಳಬಹುದಾಗಿದೆ. ಇಲ್ಲಿ ದಾಖಲಾಗುವ ಅಭಿಪ್ರಾಯಗಳ ಕುರಿತು ಪರಾಮರ್ಶೆ ನಡೆಸಿ ಸೂಕ್ತ ಸಲಹೆಗಳನ್ನು ಪರಿಗಣಿಸಲಾಗುವುದು.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ರಸ್ತೆಗುಂಡಿಗಳ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ನಿವಾಸಿಗಳು, ಬೆಂಗಳೂರಿನಿಂದ ವಿದೇಶಕ್ಕೆ ತೆರಳಿ ನೆಲೆಸಿರುವವರೂ ಕೂಡ ಗಂಭೀರವಾಗಿ ನೋಡುತ್ತಿದ್ದಾರೆ. ಬೆಂಗಳೂರು ವಿಶ್ವದರ್ಜೆಯ ನಗರಗಳಿಗೆ ಸ್ಪರ್ಧೆಯೊಡ್ಡುವಂತೆ ಮಾಡಬೇಕು. ಇದಕ್ಕಾಗಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ.
ಕೆಲವು ನಿವೃತ್ತ ಅಧಿಕಾರಿಗಳು, ಉದ್ಯಮಿಗಳು, ನಿವಾಸಿಗಳು, ಸ್ಥಳೀಯ ಶಾಸಕರು, ಮಾಜಿ ಕಾರ್ಪೊರೇಟರ್‌ಗಳ ಅಭಿಪ್ರಾಯಗಳನ್ನು ಪಡೆದಿದ್ದೇನೆ. ನಿನ್ನೆಯಷ್ಟೇ ಘನತ್ಯಾಜ್ಯ ನಿರ್ವಹಣಾ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬೆಂಗಳೂರಿನ ವಿವಿಧ ಜಂಕ್ಷನ್‌ಗಳಿಗೆ ಭೇಟಿ ನೀಡಿ ಅಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಕಣ್ಣಾರೆ ನೋಡಿದ್ದೇನೆ. ದಿಲ್ಲಿ, ಮುಂಬೈನಲ್ಲಿ ಬೆಂಗಳೂರಿಗಿಂತ ಹೆಚ್ಚು ಟ್ರಾಫಿಕ್ ಸಮಸ್ಯೆ ಇದೆ. ಆದರೆ ಎಲ್ಲರೂ ಬೆಂಗಳೂರಿನ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಏಕೆಂದರೆ ಬೆಂಗಳೂರು ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ. ಈಗ ಬಿಡುಗಡೆಗೊಳಿಸಿರುವ ಪೋರ್ಟಲ್‌ನಲ್ಲಿ ಹಳ್ಳಿಯಲ್ಲಿ ನೆಲೆಸಿರುವವರಿಂದ ಹಿಡಿದು ವಿದೇಶದಲ್ಲಿ ನೆಲೆಸಿರುವವರೂ ಸಲಹೆ ನೀಡಬಹುದಾಗಿದೆ ಎಂದರು.