ಪ್ರಕಾಶ್ ಕಾರಟ್
ಕರ್ನಾಟಕದಲ್ಲಿ ಹಿಜಾಬ್ ಧರಿಸುವ ಹುಡುಗಿಯರನ್ನು ಶಿಕ್ಷಣದಿಂದ ವಂಚಿಸುವ ಯತ್ನಿಸುವುದರ ಹಿಂದೆ ಕರ್ನಾಟಕದಲ್ಲಿ ಮುಸ್ಲಿಮರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವ ಹುನ್ನಾರ ಅಡಗಿದೆ. ನಾಗರಿಕರ ಒಂದು ವಿಭಾಗದ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ ಮೂಲಭೂತ ಮಹತ್ವದ ವಿಚಾರ ಇದಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಒಟ್ಟಾರೆ ವಿದ್ಯಮಾನಗಳಿಂದ ಹಿಜಾಬ್ ಪ್ರಶ್ನೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. 2019ರಲ್ಲಿ ಕಾಂಗ್ರೆಸ್–ಜೆಡಿಎಸ್ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಮರಳಿದಾಗಿನಿಂದ ರಾಜ್ಯದ ಮೇಲೆ ಹಿಂದುತ್ವ ಅಜೆಂಡಾವನ್ನು ಹೇರಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್‌ಅನ್ನು ಕರ್ನಾಟಕದಲ್ಲಿ ವಿಭಜನಕಾರಿ ಹಾಗೂ ಮುಸ್ಲಿಂ-ವಿರೋಧಿ ಧೃವೀಕರಣಕ್ಕಾಗಿ ಬಳಸಲು ಬಿಜೆಪಿ ಮತ್ತು ಹಿಂದುತ್ವ ಶಕ್ತಿಗಳು ಧಾವಿಸಿವೆ.
ಉಡುಪಿಯ ಸರ್ಕಾರಿ ಪದವಿ-ಪೂರ್ವ ಕಾಲೇಜ್‌ನ ಆರು ವಿದ್ಯಾರ್ಥಿನೀಯರು ತಲೆ ವಸ್ತ್ರ (ಹಿಜಾಬ್) ಧರಿಸಲು ಪಟ್ಟು ಹಿಡಿದಿದ್ದನ್ನೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಹಿಂದೂ ಜಾಗರಣ ವೇದಿಕೆ ಬಳಸಿಕೊಂಡಿವೆ. ಕೆಲವು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಬಂದು ಗೇಟ್‌ನಲ್ಲಿ ಪ್ರತಿಭಟನೆ ನಡೆಸಲು ಅವು ಪ್ರಚೋದನೆ ನೀಡಿವೆ. ಕಳೆದ ವರ್ಷ (2021) ಡಿಸೆಂಬರ್ 29ರಂದು ಈ ಘಟನೆ ನಡೆದಿತ್ತು. ಅದಾದ ನಂತರ ಉಡುಪಿ ಜಿಲ್ಲೆಯ ಕುಂದಾಪುರದ ಎರಡು ಕಾಲೇಜ್‌ಗಳಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್‌ಗೆ ಬರುವ ಮೇಲೆ ನಿರ್ಬಂಧ ವಿಧಿಸಲಾಗಿದೆ. ಕೇಸರಿ ಶಾಲು ಧರಿಸಿ ಬರುವುದಾಗಿ ಇತರ ಕೆಲವು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆನ್ನುವುದು ವಿದ್ಯಾರ್ಥಿನೀಯರಿಗೆ ಪ್ರವೇಶ ನಿರಾಕರಿಸಲು ನೀಡಿದ ಕಾರಣವಾಗಿದೆ.
ಇದಕ್ಕೂ ಮೊದಲು ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅನುಮತಿಯಿದ್ದ ವಿದ್ಯಾರ್ಥಿನಿಯರು ಈಗ ಕಾಲೇಜ್ ಪ್ರವೇಶಿಸಲು ಪ್ರಯತ್ನಿಸಿದಾಗ ಕೇಸರಿ ಶಾಲು ಧರಿಸಿ ಬಂದ ಎಬಿವಿಪಿ ಮತ್ತು ಇತರ ಕೆಲವು ಹಿಂದುತ್ವ ಸಂಘಟನೆಯವರು ‘ಜೈ ಶ್ರೀ ರಾಮ್’ ಘೋಷಣೆ ಕೂಗಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅಡ್ಡಿಪಡಿಸಿದರು. ಸಮವಸ್ತ್ರ ನಿಯಮ ಜಾರಿಯಲ್ಲಿರುವ ಸರ್ಕಾರಿ ಪಿಯು ಕಾಲೇಜ್‌ಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಬಣ್ಣದ್ದೇ ಹಿಜಾಬ್ ಧರಿಸುತ್ತಿದ್ದಾರೆ. ಆದರೆ ಕೇಸರಿ ಪ್ರತಿಭಟನೆ ನಡೆದ ನಂತರ ಹಠಾತ್ತನೆ ಅದೆಲ್ಲ ಬದಲಾಗಿದೆ.
ಹಿಜಾಬ್ ಧರಿಸಿದ ಮುಸ್ಲಿಂ ಹುಡುಗಿಯರು ಕಾಲೇಜು ಆವರಣವನ್ನು ಪ್ರವೇಶಿಸುವುದನ್ನು ನಿರ್ಬಂಧಿಸಿರುವ ದೃಶ್ಯಗಳು ಕಲಿಯ ಬೇಕೆಂಬ ಆಸಕ್ತಿಯುಳ್ಳ ಬಾಲಕಿಯರನ್ನು ತಡೆಯುವ ಅನ್ಯಾಯವನ್ನು ಎತ್ತಿತೋರಿಸುತ್ತವೆ. ಹಿಂದುತ್ವ ಶಕ್ತಿಗಳ ಹುನ್ನಾರದ ಮೇರೆಗೆ ಕೇಸರಿ ಶಾಲು ಧರಿಸಿದವರು ಮುಸ್ಲಿಂ ಬಾಲಕಿಯರನ್ನು ತಡೆದ ನಂತರ, ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಘರ್ಷಣೆಗಳು ಉಂಟಾಗಿವೆ. ಇದರ ಪರಿಣಾಮವವಾಗಿ ಕರ್ನಾಟಕ ಸರ್ಕಾರ ಶಾಲಾ-ಕಾಲೇಜ್‌ಗಳಿಗೆ ಮೂರು ದಿನ ರಜೆ ಘೋಷಿಸಿದೆ.
ಎಲ್ಲ ಸರ್ಕಾರಿ ಶಾಲೆ ಮತ್ತು ಕಾಲೇಜ್‌ಗಳಲ್ಲಿ ಸಮವಸ್ತçಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಫೆಬ್ರವರಿ 5ರಂದು ಒಂದು ಆದೇಶ ಹೊರಡಿಸಿದೆ. ಖಾಸಗಿ ಸಂಸ್ಥೆಗಳು ತಮ್ಮದೇ ಆದ ಸಮವಸ್ತ್ರ ನಿಯಮ ಸೂಚಿಸಬಹುದು ಎಂದು ಅದು ತಿಳಿಸಿದೆ. “ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ’ ಭಂಗ ಬರುವಂಥ ಯಾವುದೇ ಬಟ್ಟೆಗಳನ್ನು ತೊಡಬಾರದೆಂದು ಸರ್ಕಾರಿ ಆದೇಶ ತಿಳಿಸಿದೆ. ಈ ಮೂಲಕ, ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರು ಸರ್ಕಾರಿ ಶಾಲೆ-ಕಾಲೇಜ್‌ಗಳಿಗೆ ಬರುವುದನ್ನು ನಿಷೇಧಿಸಬೇಕೆಂಬ ಹಿಂದುತ್ವ ಸಂಘಟನೆಗಳ ಬೇಡಿಕೆಗೆ ಕರ್ನಾಟಕದ ಬಿಜೆಪಿ ಸರ್ಕಾರ ತಲೆಬಾಗಿದೆ.
ಇದು ಅಲ್ಪಸಂಖ್ಯಾತರ ವಿರುದ್ಧ ರಾಜ್ಯ ಸರ್ಕಾರದ ಇತ್ತೀಚಿನ ನಡೆ. ವಿದ್ಯಾರ್ಥಿಗಳ ಉಡುಗೆಯಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗೆ ಅವಕಾಶ ನೀಡುವುದಿಲ್ಲ ಎಂಬ ಹೆಸರಿನಲ್ಲಿ ಮುಸ್ಲಿಂ ಹುಡುಗಿಯರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.
ಸಚಿವರು, ಮಂತ್ರಿಗಳು, ಸಂಸತ್ ಸದಸ್ಯರ ಸರಣಿ ಹೇಳಿಕೆಗಳು ಮುಸ್ಲಿಮರನ್ನು ಅವರ ಧಾರ್ಮಿಕ ಅಸ್ಮಿತೆಗಾಗಿ ಗುರಿ ಮಾಡುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಲಾಗುತ್ತಿದೆ ಹಾಗೂ ಸಂವಿಧಾನ ದತ್ತವಾದ ಸಮಾನ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎನ್ನುವುದನ್ನು ಸಂಸದ ಪ್ರತಾಪ್ ಸಿಂಹ ಹೇಳಿಕೆ ಸ್ಪಷ್ಟಪಡಿಸುತ್ತದೆ. ‘ನೀವು ಹಿಜಾಬ್, ಬುರ್ಖಾ ಧರಿಸಬಹುದು… ಮತ್ತು ಮದರಸಾಕ್ಕೆ ಹೋಗಿ’ ಎಂದವರು ಹೇಳಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಒಟ್ಟಾರೆ ವಿದ್ಯಮಾನಗಳಿಂದ ಹಿಜಾಬ್ ಪ್ರಶ್ನೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಮರಳಿದಾಗಿನಿಂದ ರಾಜ್ಯದ ಮೇಲೆ ಹಿಂದುತ್ವ ಅಜೆಂಡಾವನ್ನು ಹೇರಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಎಲ್ಲ ಬಗೆಯ ಜಾನುವಾರುಗಳ ವಧೆಯ ವಿರುದ್ಧದ ಕಠಿಣ ಕಾನೂನನ್ನು 2020ರಲ್ಲಿ ಅಂಗೀಕರಿಸಿದೆ. ಹಸುಗಳ ವ್ಯಾಪಾರ ಮತ್ತು ಗೋಮಾಂಸ ಮಾರಾಟದಲ್ಲಿ ತೊಡಗಿರುವವರು ಇರುವಂಥ ಮುಸ್ಲಿಂ ಸಮುದಾಯ ಇದರ ಪ್ರಮುಖ ಗುರಿ. ಅದಾದ ನಂತರ, ಬಲವಂತದ ಮತಾಂತರ ತಡೆಯುವ ಹೆಸರಿನಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿ ತಥಾಕಥಿತ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಮಸೂದೆ 2021ನ್ನು ಅಂಗೀಕರಿಸಲಾಯಿತು. ಅಂತರ್‌ಧರ್ಮೀಯ ಮದುವೆಗಳ ಮೇಲೆ ಕೂಡ ಅದು ಗುರಿಯಿಟ್ಟಿದೆ. ಬೇರೆ ಬೇರೆ ಧರ್ಮಗಳ ಪುರುಷರು ಮತ್ತು ಮಹಿಳೆಯರ ಸಾಮಾಜಿಕ ಸಮ್ಮಿಳನವನ್ನು ಗುರಿಯಾಗಿಸಿ ದಾಳಿ ಮಾಡುವ ಲಜ್ಜೆಗೇಡಿ ಘಟನೆಗಳು ಹೆಚ್ಚು ಹೆಚ್ಚಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿವೆ.
ಪಿಯು ಕಾಲೇಜ್‌ಗಳಲ್ಲಿ ಹಿಜಾಬ್ ಧರಿಸಬಾರದೆಂದು ಆದೇಶ ಹೊರಡಿಸಿದ ಇಲಾಖೆಯೇ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಕಾಲೇಜ್‌ಗಳಲ್ಲಿ ಒಂದು ವಾರ ಕಾಲ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಲು ಆದೇಶಿಸಿದ್ದು ದೊಡ್ಡ ವ್ಯಂಗ್ಯವಾಗಿದೆ.
ಕರ್ನಾಟಕ ಸರ್ಕಾರ ಮುಸ್ಲಿಂ ಹುಡುಗಿಯರು ಶಿಕ್ಷಣ ಪಡೆಯುವ ಮೂಲಭೂತ ಹಕ್ಕಿನ ವಿರುದ್ಧ ವರ್ತಿಸಿದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಧಾರ್ಮಿಕ ಅಸ್ಮಿತೆಯನ್ನು ಪ್ರದರ್ಶಿಸಬಾರದು ಎಂದಾದರೆ ಸಿಖ್ ಹುಡುಗರು ಮುಂಡಾಸು ಧರಿಸಿ ಶಾಲೆಗಳಿಗೆ ಹೋಗಬಾರದೆಂದು ಅರ್ಥವೇ?. ಮುಸ್ಲಿಂ ಹುಡುಗಿಯರು ಹಿಜಾಬ್ ಹಾಕಿಕೊಳ್ಳುವುದು ಅಥವಾ ಸಿಖ್ ಹುಡುಗರು ಮುಂಡಾಸು ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯಾಗಿದೆ.
ಕರ್ನಾಟಕದಲ್ಲಿ ಹಿಜಾಬ್ ಧರಿಸುವ ಹುಡುಗಿಯರನ್ನು ಶಿಕ್ಷಣದಿಂದ ವಂಚಿಸುವ ಯತ್ನಿಸುವುದರ ಹಿಂದೆ ಕರ್ನಾಟಕದಲ್ಲಿ ಮುಸ್ಲಿಮರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವ ಹುನ್ನಾರ ಅಡಗಿದೆ. ನಾಗರಿಕರ ಒಂದು ವಿಭಾಗದ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ ಮೂಲಭೂತ ಮಹತ್ವದ ವಿಚಾರ ಇದಾಗಿದೆ. ಕೆಲವು ಸಂತ್ರಸ್ತ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈ ಕೋರ್ಟ್ ಅದನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಿದೆ. ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಒದಗಿಸಿರುವ ಖಾತರಿಗಳಿಗೆ ಅನುಗುಣವಾಗಿ, ಕರ್ನಾಟಕ ಸಕಾರದ ಪಕ್ಷಪಾತಿ ಆದೇಶವನ್ನು ಕೋರ್ಟ್ ರದ್ದುಪಡಿಸೀತೆಂದು ನಿರೀಕ್ಷಿಸಬಹುದಾಗಿದೆ.
ಅನು: ವಿಶ್ವ