ನವದೆಹಲಿ: ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಬಗ್ಗೆ ಇರುವ ”ಪ್ರಜಾಪ್ರಭುತ್ವ ವಿರೋಧಿ ಒಕ್ಕೂಟ” ಮನಸ್ಥಿತಿಯಿಂದ ರಾಜ್ಯಗಳ ಒಕ್ಕೂಟವಾಗಿ ರೂಪಿಸಲಾಗಿರುವ ಪ್ರಜಾಪ್ರಭುತ್ವವು “ಕುಸಿತಗೊಳ್ಳುತ್ತಿದೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಮಾಡುತ್ತಿರುವ ತಾರತಮ್ಯ ಮತ್ತು ರಾಜ್ಯ ಸರ್ಕಾರದ ಮೇಲೆ ಪ್ರಾಬಲ್ಯ ಸ್ಥಾಪಿಸುವ ನಡೆಯ ವಿರುದ್ಧ ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ಆಡಳಿತಾರೂಢ ಎಡಪಕ್ಷಗಳ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಿಣರಾಯಿ ವಿಜಯನ್, ಕೇಂದ್ರ ಸರ್ಕಾರದ ‘ಯುನಿಯನ್ ಓವರ್ ಸ್ಟೇಟ್ಸ್’ ಮನಸ್ಥಿತಿಯನ್ನು ಟೀಕಿಸಿದ್ದು, “ಇಂತಹ ಮನಸ್ಥಿತಿಯ ಕಾರಣಕ್ಕೆ ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸುತ್ತದೆ” ಎಂದು ಹೇಳಿದ್ದಾರೆ. ಇದು ಕೇವಲ ಹಣಕಾಸಿನ ವಿಷಯಗಳಲ್ಲಿ ಮಾತ್ರವಲ್ಲ, ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯಪಾಲರ ಕಾರ್ಯನಿರ್ವಹಣೆಯಲ್ಲಿ ಕೂಡಾ ಇದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢ | ಹಸ್‌ದೇವ್ ಅರಣ್ಯದಲ್ಲಿ ಗಣಿಗಾರಿಕೆಗೆ ವಿರೋಧ; 30 ಕಾಂಗ್ರೆಸ್ ಶಾಸಕರ ಅಮಾನತು
ಎಲ್‌ಡಿಎಫ್ ಸಂಸದರು, ಶಾಸಕರು, ಎಡರಂಗದ ಹಿರಿಯ ನಾಯಕರಾದ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಪಳನಿವೇಲ್ ತ್ಯಾಗರಾಜನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಒಳಗೊಂಡ ಸಭೆಯನ್ನುದ್ದೇಶಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿದರು. ಎಲ್ ಡಿಎಫ್ ಪ್ರತಿಭಟನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಬೆಂಬಲ ನೀಡಿದ್ದರು. ಆದರೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರ ಗೈರು ಎದ್ದು ಕಾಣುತ್ತಿತ್ತು.
ಕೇಂದ್ರ ಸರ್ಕಾರದ ಮನಸ್ಥಿತಿಯ ಮತ್ತೊಂದು ಉದಾಹರಣೆ ಎಂದರೆ ಹಲವಾರು ಕ್ಷೇತ್ರಗಳಲ್ಲಿ ರಾಜ್ಯಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ಅತಿಕ್ರಮಿಸುವ ಕಾನೂನುಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ “ಸಂವಿಧಾನದಲ್ಲಿ ಸಂಪೂರ್ಣವಾಗಿ ರಾಜ್ಯಗಳ ಪಟ್ಟಿ”ಯಲ್ಲಿ ನೀಡಲಾಗಿದೆ. ಅದಾಗ್ಯೂ ಅದರ ಮೇಲೆ ಕೂಡಾ ಕಾನೂನು ಮಾಡುತ್ತಿರೆ ಎಂದು ಅವರು ಹೇಳಿದ್ದಾರೆ.
‘‘ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಚಾರಗಳಲ್ಲಿ ರಾಜ್ಯಗಳ ಅಭಿಪ್ರಾಯ ಪಡೆಯದೆ, ಅವರ ಒಪ್ಪಿಗೆ ಪಡೆಯದೆ ಬಹುರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಜ್ಯಗಳ ಹಕ್ಕುಗಳನ್ನು ತುಳಿಯಲಾಗುತ್ತಿದ್ದು, ಭಾರತವನ್ನು ಪ್ರಜಾಪ್ರಭುತ್ವ ವಿರೋಧಿ ‘ಯುನಿಯನ್ ಓವರ್ ಸ್ಟೇಟ್ಸ್’ ಆಗಿ ಬದಲಾಯಿಸಲಾಗುತ್ತಿದೆ ಎಂಬುದಕ್ಕೆ ಇವೆಲ್ಲ ಉದಾಹರಣೆಗಳಾಗಿವೆ” ಎಂದು ಕೇರಳ ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: 2022ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದ 777 ಕೋಟಿ ರೂ. ವೆಚ್ಚದ ಸುರಂಗ ದುರಸ್ತಿ ಸಾಧ್ಯವಿಲ್ಲ ಎಂದ ಪಿಡಬ್ಲ್ಯೂಡಿ!
ಅಲ್ಲದೆ, ತಮ್ಮ ರಾಜ್ಯದ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ವಿರೋಧಿಸಿ ನಡೆಸಿದ ಪ್ರತಿಭಟನೆಗೆ ಬೆಂಬಲ ನೀಡಿದ ಎಲ್ಲಾ ನಾಯಕರಿಗೆ ಮುಖ್ಯಮಂತ್ರಿ ಧನ್ಯವಾದ ಸಲ್ಲಿಸಿದ್ದಾರೆ.
Immense gratitude to everyone who stood shoulder to shoulder with Kerala in Delhi today, rallying for our endeavour to protect federalism and the state's rights. The protest has echoed the essence of our nation's secular and democratic values. Our voices have surged in unison,… pic.twitter.com/NvKriZQkh1
— Pinarayi Vijayan (@pinarayivijayan) February 8, 2024
ಕೆಲವು ದಿನಗಳ ಹಿಂದೆ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆ ನೀಡುತ್ತಿದ್ದ ಸಾಲವನ್ನು ಕಡಿತಗೊಳಿಸಿರುವುದರಿಂದ ರಾಜ್ಯಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿವೆ ಎಂದು ಸಿಎಂ ಹೇಳಿದ್ದಾರೆ. ಸೆಸ್ ಮತ್ತು ಸರ್‌ಚಾರ್ಜ್ ಮೂಲಕ ಗಳಿಸಿದ ಕೇಂದ್ರ ಸರ್ಕಾರದ ಆದಾಯದಲ್ಲಿ “ಕ್ಷಿಪ್ರ ಏರಿಕೆ” ಕಂಡುಬಂದರೂ, “ಅದರಲ್ಲಿ ಒಂದು ಪೈಸೆಯನ್ನೂ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿಲ್ಲ” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಸೊರೆನ್ ಮತ್ತು ಆದಿವಾಸಿ ಜನಾಂಗದ ವಿರುದ್ಧ ಕೀಳು ಮಟ್ಟ ದ ಹೇಳಿಕೆ | ನಿರೂಪಕ ಸುಧೀರ್ ಚೌಧರಿ ಭಾಷಣ ಕೈಬಿಟ್ಟ ಐಐಟಿ ಬಾಂಬೆ
“ರಾಜ್ಯಗಳ ಮೇಲಿನ ರಾಜಕೀಯ ತಾರತಮ್ಯದ ವಿರುದ್ಧ ಕೇರಳ ಮಾತ್ರವಲ್ಲದೆ, ಕರ್ನಾಟಕವೂ ಪ್ರತಿಭಟನೆಗೆ ಇಳಿದಿದೆ. ಅವರು 1,87,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿದ್ದಾರೆ ಎಂದು ಅವರು ಹೇಳುತ್ತಾರೆ. ಅದರಿಗೆ ಕೂಡಾ ಕೇರಳದಂತೆಯೇ ನಷ್ಟವಾಗಿದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಗವರ್ನರ್ ಅವರ ಅಧಿಕಾರದ ಮಿತಿಮೀರಿದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಸಾಂವಿಧಾನಿಕವಾಗಿ ರಾಜ್ಯ ಸಚಿವ ಸಂಪುಟಗಳ ಸಲಹೆಯ ಮೇರೆಗೆ ರಾಜ್ಯಪಾಲರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ.
“ಆದಾಗ್ಯೂ, ವಿರೋಧ ಪಕ್ಷದ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಗವರ್ನರ್‌ಗಳು ತಮ್ಮನ್ನು ನೇಮಿಸಿದ ಕೇಂದ್ರ ಸರ್ಕಾರದ ಆದೇಶದಂತೆ ವರ್ತಿಸುವ ಈ ವಿದ್ಯಮಾನವನ್ನು ನಾವು ನೋಡುತ್ತಿದ್ದೇವೆ” ಎಂದು ಪಿಣರಾಯಿ ಅವರು ಹೇಳಿದ್ದು, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡಿನಲ್ಲಿ ಗವರ್ನರ್‌ಗಳ ನಡೆಗಳನ್ನು ಉಲ್ಲೇಖಿಸಿದ್ದಾರೆ.
ಪ್ರತಿಭಟನಾ ಸಭೆಗೂ ಮುನ್ನ ಕೇರಳ ಸಿಎಂ, ಎಲ್‌ಡಿಎಫ್ ಸಂಸದರು, ಶಾಸಕರು ಮತ್ತು ಎಡರಂಗದ ಹಿರಿಯ ನಾಯಕರು ಚಳಿಗಾಲದ ಚಳಿಯನ್ನು ಲೆಕ್ಕಿಸದೆ ನವದೆಹಲಿಯ ಹೃದಯಭಾಗದಲ್ಲಿರುವ ಕೇರಳ ಹೌಸ್‌ನಿಂದ ಜಂತರ್ ಮಂತರ್‌ಗೆ ಮೆರವಣಿಗೆ ನಡೆಸಿದ್ದಾರೆ.
ಕರ್ನಾಟಕದಲ್ಲೂ ಪ್ರತಿಭಟನೆ : ಕೇರಳ ಸರ್ಕಾರದ ಹೋರಾಟವನ್ನು ಬೆಂಬಲಿಸಿ ಕರ್ನಾಟಕದಲ್ಲಿ ಸಿಪಿಐಎಂ ಹೋರಾಟ ನಡೆಸಿದೆ. ಬೆಂಗಳೂರು, ಹಾಸನ, ಕೊಪ್ಪಳ, ವಿಜಯನಗರ, ಬಳ್ಳಾರಿ, ಕಲಬುರ್ಗಿ, ಮಂಡ್ಯ, ತುಮಕೂರು, ಮೈಸೂರು ಸೇರಿದಂತೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆ.
ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಕೆ.ಎನ್ ಉಮೇಶ್ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಕೇಂದ್ರ ಸರ್ಕಾರ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್ ವರಲಕ್ಷ್ಮಿ, ಬೆಂಗಳೂರು ಉತ್ತರ ಕಾರ್ಯದರ್ಶಿ ಎನ್ ಪ್ರತಾಪ ಸಿಂಹ, ದಕ್ಷಿಣ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಸೇರಿದಂತೆ ಅನೇಕರಿದ್ದರು. ಕಲಬುರ್ಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಸೇರಿದಂತೆ ಅನೇಕರಿದ್ದರು. ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೆ.ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಕೊಪ್ಪಳದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಚಂದ್ರಪ್ಪ ಹೋಸ್ಕೇರಾ, ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಪುಟ್ಟಮಾಧು, ಸಿ. ಕುಮಾರ್, ಹನುಮೇಶ್, ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಹಗರಿ ಬೊಮ್ಮನಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಸಮಿತಿ ಸದಸ್ಯೆ ಬಿ. ಮಾಳಮ್ಮ, ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕ ಮುಖಂಡರು ಹಾಜರಿದ್ದರು.
ತೆರಿಗೆಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ಸರ್ಕಾರ ನಿನ್ನೆ ಹೋರಾಟವನ್ನು ನಡೆಸಿತ್ತು, ಆದರೆ ಇಂದು ನಡೆದ ಪ್ರತಿಭಟನೆಗೆ ಕೇರಳದ ಕಾಂಗ್ರೆಸ್ ಶಾಸಕರು ಗೈರಾಗಿದ್ದರು, ಆಹ್ವಾನವಿದ್ದರೂ ಕೇರಳದ ಕಾಂಗ್ರೆಸ್ ಶಾಸಕರು ಭಾಗವಹಿಸದಿರುವುದು ಒಕ್ಕೂಟ ವ್ಯವಸ್ಥೆಯಲ್ಲಿನ ಐಕ್ಯತೆಗೆ ಹಿನ್ನಡೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ವಿಡಿಯೊ ನೋಡಿ: ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media