ನವದೆಹಲಿ: ಬಿಜೆಪಿಯಿಂದ ‘ಪ್ರಜಾಪ್ರಭುತ್ವವು ಆಕ್ರಮಣಕ್ಕೆ ಸಿಲುಕಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ‘ತ್ರಿವರ್ಣ ಧ್ವಜ’ ಹಿಡಿದು ಸಂಸತ್ ಭವನದಿಂದ ವಿಜಯ ಚೌಕದವರೆಗೆ ಗುರುವಾರ ಮೆರವಣಿಗೆ ನಡೆಸಿದರು.
ಕಾಂಗ್ರೆಸ್ ಜೊತೆಗೆ ಡಿಎಂಕೆ, ಸಮಾಜವಾದಿ ಪಕ್ಷ, ಆರ್ಜೆಡಿ, ಶಿವಸೇನೆ, ಎಎಪಿ ಮತ್ತು ಎಡಪಕ್ಷಗಳ ಸಂಸದರು ಈ ಮೆರವಣಿಗೆಯಲ್ಲಿ ಇದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಮೆರವಣಿಗೆ ಆರಂಭಕ್ಕೂ ಮುನ್ನ ಎಲ್ಲ ಪಕ್ಷಗಳ ಸಂಸದರು ಸೇರಿದ್ದ ಸಂಸತ್ತಿನ ಗೇಟ್ ಸಂಖ್ಯೆ 1ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಹ ರಾಷ್ಟ್ರಧ್ವಜವನ್ನು ಹಿಡಿದು ನಿಂತಿದ್ದರು. ಸಂಸತ್ತಿನ ಬಜೆಟ್ ಅಧಿವೇಶನ ಮುಗಿದ ಬಳಿಕ ಲೋಕಸಭೆ ಸ್ಪೀಕರ್ ಆಯೋಜಿಸಿದ್ದ ಸಂಪ್ರಾದಾಯಿಕ ಚಹಾಕೂಟವನ್ನು ವಿರೋಧ ಪಕ್ಷದ ನಾಯಕರು ಬಹಿಷ್ಕರಿಸಿದರು.
ಇದನ್ನೂ ಓದಿ : ಸಂಸತ್ ಸ್ಥಾನದಿಂದ ಅನರ್ಹ: ರಾಹುಲ್ಗೆ ಒಂದು ನ್ಯಾಯ ಬಿಜೆಪಿಗೆ ಒಂದು ನ್ಯಾಯ: ಖರ್ಗೆ ಆರೋಪ
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸಮನ್ವಯತೆಯನ್ನು ಪ್ರದರ್ಶಿಸುವ ಮೂಲಕ ಮಾರ್ಚ್ 13ರಿಂದಲೂ ಪ್ರತಿಭಟನೆಯನ್ನು ನಡೆಸುತ್ತಿವೆ. ಅದಾನಿ ಸಮೂಹ ಸಂಸ್ಥೆಗಳ ಮೇಲಿನ ಆರೋಪ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಒತ್ತಾಯಿಸಿದ್ದು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದವು.
ರಾಹುಲ್ ಸದಸ್ಯತ್ವ ಅನರ್ಹತೆಗೆ ಖಂಡನೆ :
‘ಮೋದಿ ಉಪನಾಮ’ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದ ಬಳಿಕ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಇದನ್ನೂ ಖಂಡಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದವು.