ಬೆಳಗಾವಿ: ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಎಂಬವರು, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳಲ್ಲಿ ಅಳವಡಿಸಿದ ಕಾನೂನುಬಾಹಿರ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ಒತ್ತಾಯಿಸಿ ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಟ್ರ್ಯಾಕ್ಟರ್ ಸೇರಿ ಮತ್ತಿತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಧ್ವನಿವರ್ಧಕಗಳನ್ನು ಅಳವಡಿಸಿ, ಜೋರಾದ ಕರ್ಕಶ ಶಬ್ದವನ್ನು ಇಟ್ಟುಕೊಂಡು ವಾಹನ ಚಲಾಯಿಸುವುದರಿಂದ ಶಬ್ದ ಮಾಲಿನ್ಯ ಉಂಟಾಗಿ ಚಿಕ್ಕ ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಬಹಳಷ್ಟು ಕಿರಿಕಿರಿಯಾಗುತ್ತಿದೆ. ಅಶ್ಲೀಲ ಹಾಡುಗಳನ್ನು ಪ್ರಸಾರ ಮಾಡುವುದರಿಂದ ಮಹಿಳೆಯರಿಗೆ ಮುಜುಗರವೂ ಉಂಟಾಗುತ್ತದೆ.
ಅಲ್ಲದೆ, ಹಾಡಿನ ಲೋಕದಲ್ಲಿರುವ ಚಾಲಕರಿಗೆ ಹಿಂದೆ, ಮುಂದೆ ಬರುವ ವಾಹನಗಳು ಕಾಣುವುದೇ ಇಲ್ಲ. ಕಿವಿಗಡಚಿಕ್ಕುವ ಹಾಡುಗಳಿಂದ ಅಪಘಾತವು ಸಂಭವಿಸಿ, ಅನೇಕರು ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಿಮವಾಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದೇನೆ ಎಂದು ಶ್ರೀನಿವಾಸಗೌಡ ಪಾಟೀಲ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಲೂರು | ಪ್ರಸ್ತುತ ಶಾಸನ ಸಭೆಯಲ್ಲಿ ಗೌರವಯುತ ವಾತಾವರಣ ಇಲ್ಲದಿರುವುದು ಆತಂಕ
ನಿಯಮ ಬಾಹಿರವಾಗಿ ಅಳವಡಿಸಿದ ಧ್ವನಿವರ್ಧಕಗಳಲ್ಲಿ, ರಾಜಾರೋಷವಾಗಿ ಅಶ್ಲೀಲ ಹಾಡುಗಳನ್ನು ಹಚ್ಚಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಮೇಲಧಿಕಾರಿಗಳು ಆದೇಶ ಹೊರಡಿಸಿದ್ದರೂ ಕೂಡ ಸಾರಿಗೆ ಅಧಿಕಾರಿಗಳು ಮೌನಕ್ಕೆ ಜಾರಿ ಕತ್ಯವ್ಯಲೋಪ ಎಸಗಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಿಗೂ ಮನವಿ ಸಲ್ಲಿಸಿದ್ದೇವೆ. ಆದರೂ, ಕೂಡ ಸಾರಿಗೆ ಆಯುಕ್ತರು ಈ ಬಗ್ಗೆ ಗಮನಹರಿಸುತ್ತಿಲ್ಲ. ಆದ್ದರಿಂದ ಕೇವಲ ನೀರು ಮಾತ್ರ ಕುಡಿದು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ. ನಮ್ಮ ಬೇಡಿಕೆ ಈಡೇರುವವರೆಗೂ ಇದು ಮುಂದುವರಿಯುತ್ತದೆ ಎಂದು ಉಪವಾಸನಿರತ ಶ್ರೀನಿವಾಸಗೌಡ ಪಾಟೀಲ.
ಶ್ರೀನಿವಾಸಗೌಡ ಪಾಟೀಲ ಅವರ ಹೋರಾಟಕ್ಕೆ ದೇವಪ್ಪ ಮಾದರ, ಮಾರುತಿ ಕೆಳಗೇರಿ, ಡಾ.ಬಸವರಾಜ ಸವಣೂರ, ಮಹೇಶಕುಮಾರ ನಾಯ್ಕರ, ಶ್ರೀಶೈಲ ಬರಗುಂಡಿ ಸೇರಿ ರೈತ ಸಂಘಟನೆಯ ಕೆಲ ಮುಖಂಡರು ಸಾಥ್ ಕೊಟ್ಟಿದ್ದಾರೆ.
ಇದನ್ನೂ ನೋಡಿ: ಮುಚ್ಚುವ ಅಂಚಿನಿಂದ.. ನೂರರ ಸಂಭ್ರಮದವರೆಗೆ – ಸರಕಾರಿ ಶಾಲೆಯ ಕಥೆ Janashakthi Media
