ನವದೆಹಲಿ: ವಾರಣಾಸಿಯ ಗ್ಯಾನವ್ಯಾಪಿ ಮಸೀದಿಯಲ್ಲಿ ಪತ್ತೆಯಾದ ‘ಶಿವಲಿಂಗ’ದ ಬಗ್ಗೆ ವಿವರವಾದ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂಬ ಆರೋಪದಲ್ಲಿ ಬಂಧನಕ್ಕೊಳಗಾದ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ರತನ್ ಲಾಲ್‌ಗೆ ನ್ಯಾಯಾಲಯವು ಜಾಮೀನು ನೀಡಿದೆ.
ಉತ್ತರ ದೆಹಲಿಯ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ರತನ್ ಲಾಲ್ ಅವರನ್ನು ಶುಕ್ರವಾರ (ಮೇ 20) ಸಂಜೆ ಬಂಧಿಸಿದ್ದರು. ಇಂದು(ಮೇ 21) ಮಧ್ಯಾಹ್ನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು.
ಇದನ್ನು ಓದಿ: ವಾರಣಾಸಿ ಗ್ಯಾನವಾಪಿ ಕುರಿತು ಸಂದೇಶ: ಪ್ರೊಫೆಸರ್ ಡಾ. ರತನ್‌ಲಾಲ್ ಬಂಧನ
ಭಾರತದ ನಾಗರಿಕತೆಯು ಎಲ್ಲಾ ಧರ್ಮಗಳನ್ನು ಒಪ್ಪಿಕೊಳ್ಳುತ್ತದೆ ಮತ್ತು ಈ ದೇಶದ ಯಾವುದೇ ವಿಷಯವು 130 ಕೋಟಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದೆ ಎಂಬುದನ್ನು ಗಮನಿಸಿದ ದೆಹಲಿ ನ್ಯಾಯಾಲಯವು ಪ್ರಾಧ್ಯಾಪಕ ರತನ್ ಲಾಲ್‌ಗೆ ಜಾಮೀನು ನೀಡಿದೆ.
ದೆಹಲಿ ಮೂಲದ ವಕೀಲರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮಂಗಳವಾರ ರಾತ್ರಿ ರತನ್ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ವಕೀಲ ವಿನೀತ್ ಜಿಂದಾಲ್ ಅವರ ದೂರಿನಲ್ಲಿ, ಲಾಲ್ ಇತ್ತೀಚೆಗೆ “ಶಿವಲಿಂಗದ ವಿರುದ್ಧ ಅವಹೇಳನಕಾರಿ, ಮತ್ತು ಪ್ರಚೋದನಕಾರಿ ಟ್ವೀಟ್” ಅನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದರು.
ಪ್ರಾಧ್ಯಾಪಕ ರತನ್ ಲಾಲ್ ಬಂಧನವನ್ನು ಖಂಡಿಸಿ ವಿವಿ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು. ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಹೊರಗೆ ಹಲವು ವಿದ್ಯಾರ್ಥಿಗಳು ಸೇರಿ ರತನ್ ಲಾಲ್ ಬಂಧನವನ್ನು ಬಲವಾಗಿ ಖಂಡಿಸಿದರು.