ನವದೆಹಲಿ : ಮೋದಿ ಉಪ ಕುರಿತ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿ, ಸಂಸತ್ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿದ್ದಾರೆ.
ದೆಹಲಿಯ ಲುಟೆನ್ಸ್‌ನಲ್ಲಿರುವ ನಂ. 12, ತುಘಲಕ್ ಲೇನ್‌ನಲ್ಲಿ ಸರ್ಕಾರ ನೀಡಿದ್ದ ಬಂಗಲೆಯನ್ನು ತೊರೆಯುವಂತೆ ಲೋಕಸಭಾ ವಸತಿ ಸಮಿತಿಯು ಇತ್ತೀಚೆಗೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿತ್ತು.ಈ ಹಿನ್ನೆಲೆಯಲ್ಲಿ ಅವರು ಬಂಗಲೆಯಲ್ಲಿನ ತಮ್ಮ ಪರಿಕರಗಳನ್ನು ಬೇರೆಡೆಗೆ ಸಾಗಿಸಲಾರಂಭಿಸಿದ್ದಾರೆ. ಪರಿಕರಗಳನ್ನು ತುಂಬಿದ್ದ ಟ್ರಕ್‌ವೊಂದು ಬಂಗಲೆಯಿಂದ ಹೊರ ಬರುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
2019ರಲ್ಲಿ ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಮಾರ್ಚ್ 23ರಂದು ಗುಜರಾತ್‌ನ ಸೂರತ್ ನ್ಯಾಯಾಲಯ ತೀರ್ಪು ನೀಡಿತ್ತು. ಅಲ್ಲದೆ, 2 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನೂ ವಿಧಿಸಿತ್ತು.
ಇದನ್ನೂ ಓದಿ : ಬಂಗಲೆ ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ನೋಟಿಸ್
ಇದರ ಬೆನ್ನಲ್ಲೇ ಲೋಕಸಭಾ ಸದಸ್ಯತ್ವದಿಂದ ರಾಹುಲ್ ಅವರನ್ನು ಅನರ್ಹಗೊಳಿಸಿ ಲೋಕಸಭಾ ಕಾರ್ಯಾಲಯ ಆದೇಶ ಮಾಡಿತ್ತು. ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ತಿಂಗಳೊಳಗೆ ಅಧಿಕೃತ ಬಂಗಲೆ ಖಾಲಿ ಮಾಡಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ತಮ್ಮ ವಿರುದ್ಧದ ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದ ಆದೇಶ ಇದೇ 20ರಂದು ಹೊರಬೀಳಲಿದೆ.