ಗಾಜಿಯಾಬಾದ್: ಕೇಂದ್ರದ ಬಿಜೆಪಿ ಸರ್ಕಾರವು ಜಾರಗೊಳಿಸಲು ಹೊರಟಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕಳೆದ 11 ತಿಂಗಳಿಂದ ನಿರಂತರವಾಗಿ ರೈತರು ಪ್ರತಿಭಟನೆ ನಡೆಯುತ್ತಿವೆ.
ರೈತ ಹೋರಾಟವನ್ನು ಸದೆಬಡೆಯಲು ಮುಂದಾಗಿದ್ದ ಸರ್ಕಾರ ದೆಹಲಿ– ಉತ್ತರ ಪ್ರದೇಶ ಗಡಿಭಾಗ ಗಾಜಿಪುರದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಮತ್ತು ಸುರುಳಿಯಾಕಾರದ ಮುಳ್ಳು ತಂತಿಗಳನ್ನು ಹಾಕಿದ್ದವು. ಅವುಗಳನ್ನು ಇಂದು ದೆಹಲಿ ಪೋಲಿಸರು ತೆರವುಗೊಳಿಸಲು ಆರಂಭಿಸಿದ್ದಾರೆ.
ಇದನ್ನು ಓದಿ: ಬಿಜೆಪಿ ನಾಯಕರ ನಿವಾಸದ ಬಳಿ ಕೃಷಿ ಕಾಯ್ದೆ ಪ್ರತಿಗಳನ್ನು ಸುಟ್ಟು ದೇಶವ್ಯಾಪಿ ಹೋರಾಟ ನಡೆಸಿದ ರೈತರು
ಇದೇ ರಸ್ತೆಯಲ್ಲಿ ರೈತರು 2020ರ ನವೆಂಬರ್ನಿಂದ, ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಭಾರತೀಯ ಕಿಸಾನ್ ಮೋರ್ಚಾ(ಎಸ್ಕೆಎಂ)ದ ನೇತೃತ್ವದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದೇ ವೇಳೆ ಗಾಜಿಪುರದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಹಾಕಲಾಗಿದ್ದ ಕಬ್ಬಿಣದ ಮೊಳೆಗಳನ್ನು ಸಹ ತೆಗೆದುಹಾಕುತ್ತಿರುವುದು ಕಂಡು ಬಂದಿದೆ.
ʻಗಾಜಿಪುರ ಗಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಠಿಯಿಂದ ನಾವು ಹಾಕಲಾಗಿರುವ ತಡೆಬೇಲಿಗಳನ್ನು ತೆಗೆಯುತ್ತಿದ್ದೇವೆ. ಈ ಹೆದ್ದಾರಿಯನ್ನು ಜನರಿಗೆ ಮುಕ್ತಗೊಳಿಸುವಂತೆ ರೈತರಲ್ಲಿ ಮನವಿ ಮಾಡುತ್ತೇವೆ. ನಮ್ಮ ಇಂಗಿತವನ್ನು ಅವರು ಸ್ವೀಕರಿಸುವರು ಎಂದು ಭಾವಿಸುತ್ತೇವೆʼ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ದೇವೇಂದ್ರ ಪಾಠಕ್ ಹೇಳಿದರು.
ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಗಡಿ ಭಾಗಗಳಾದ ಸಿಂಘು, ಟಿಕ್ರಿ, ಗಾಜಿಪುರದಲ್ಲಿ ಪ್ರತಿಭಟನಾ ಸ್ಥಳ ಹೊರತುಪಡಿಸಿ ರಸ್ತೆಗಳಿಗೆ ಅಡ್ಡಲಾಗಿ ಹಾಕಿರುವ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಅಕ್ಟೋಬರ್ 21ರಂದು ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಬ್ಯಾರಿಕೇಡ್ಗಳನ್ನು ತೆಗೆಯಲು ಮುಂದಾಗಿದ್ದಾರೆ.
2021ರ ಜನವರಿ 26ರಂದು ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದ ನಂತರ, ರೈತರು ಪ್ರತಿಭಟನೆ ನಡೆಸುತ್ತಿದ್ದ ದೆಹಲಿಯ ಗಡಿ ಭಾಗಗಳ ಹೆದ್ದಾರಿಗಳಲ್ಲಿ ಕಬ್ಬಿಣ ಮತ್ತು ಸಿಮೆಂಟ್ಗಳ ಬ್ಯಾರಿಕೇಡ್ ಹಾಕಲಾಗಿತ್ತು. ಇದರ ಜೊತೆಗೆ ಐದಾರು ಸಾಲುಗಳಲ್ಲಿ ಸುರುಳಿಯಾಕಾರ ಮುಳ್ಳುತಂತಿಗಳನ್ನು ಜೋಡಿಸಲಾಗಿತ್ತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಕೆಎಂ ನಾಯಕ ರಾಕೇಶ್ ಟಿಕಾಯತ್ ʻರೈತರು ಎಲ್ಲಿ ಬೇಕಾದರೂ ತಮ್ಮ ಫಸಲನ್ನು ಮಾರಾಟ ಮಾಡಬಹುದು ಎಂದು ಪ್ರಧಾನಿ ಹೇಳಿದ್ದರು. ರಸ್ತೆಗಳು ತೆರೆದರೆ, ನಾವು ನಮ್ಮ ಫಸಲನ್ನು ಮಾರಾಟ ಮಾಡಲು ಸಂಸತ್ತಿಗೆ ಹೋಗುತ್ತೇವೆ. ಮೊದಲು ನಮ್ಮ ಟ್ರ್ಯಾಕ್ಟರ್ಗಳು ದೆಹಲಿಗೆ ಹೋಗುತ್ತವೆ. ನಾವು ದಾರಿಯನ್ನು ತಡೆದಿಲ್ಲ. ರಸ್ತೆ ತಡೆ ನಮ್ಮ ಪ್ರತಿಭಟನೆಯ ಭಾಗವಲ್ಲ ಎಂದು ಹೇಳಿದರು.