ನವದೆಹಲಿ: ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ)ವು ಸರಕಾರಿ ಜಾಹೀರಾತುಗಳ ಸೋಗಿನಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳ ಮೊತ್ತ 97 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸ್ಥಾಪಿಸಿದ ಸರ್ಕಾರಿ ಜಾಹೀರಾತಿನಲ್ಲಿ ವಿಷಯ ನಿಯಂತ್ರಣ ಸಮಿತಿಯ 2016ರ ನಿರ್ದೇಶನದ ಮೇರೆಗೆ ದೆಹಲಿ ಸರ್ಕಾರದ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ 97.14 ಕೋಟಿ ರೂಪಾಯಿ (97,14,69,137 ರೂಪಾಯಿ) “ಅನುರೂಪವಲ್ಲದ ಜಾಹೀರಾತುಗಳ” ಖಾತೆಯಲ್ಲಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದೆ.
ದೆಹಲಿ ಸರಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಮತ್ತೊಂದು ಸುತ್ತಿನ ವಿವಾದವೊಂದು ಉದ್ಭವವಾಗಿದ್ದು, ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ವಿ ಪಕ್ಷ(ಎಎಪಿ) ಚುನಾವಣಾ ಪ್ರಚಾರವನ್ನು ನಡೆಸಿದ ಕೆಲವು ದಿನಗಳ ನಂತರ ಲೆಫ್ಟಿನೆಂಟ್ ಗವರ್ನರ್ ಈ ಆದೇಶ ನೀಡಿದ್ದಾರೆ.
2015 ರಲ್ಲಿ, ಸುಪ್ರೀಂ ಕೋರ್ಟ್ ಸರ್ಕಾರಿ ಜಾಹೀರಾತನ್ನು ನಿಯಂತ್ರಿಸಲು ಮತ್ತು ಅನುತ್ಪಾದಕ ವೆಚ್ಚಗಳನ್ನು ತೊಡೆದುಹಾಕಲು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2016 ರಲ್ಲಿ ಸರ್ಕಾರಿ ಜಾಹೀರಾತಿನಲ್ಲಿ ವಿಷಯ ನಿಯಂತ್ರಣದ ಮೂರು ಸದಸ್ಯರ ಸಮಿತಿಯನ್ನು ರಚಿಸಿತು. ಸರ್ಕಾರಿ ಜಾಹೀರಾತಿನಲ್ಲಿ ವಿಷಯ ನಿಯಂತ್ರಣ, ಡಿಐಪಿ ಪ್ರಕಟಿಸಿದ ಜಾಹೀರಾತುಗಳನ್ನು ತನಿಖೆ ಮಾಡಿ ಸೆಪ್ಟೆಂಬರ್ 2016 ರಲ್ಲಿ ಆದೇಶವನ್ನು ಹೊರಡಿಸಿದ್ದು, ಸುಪ್ರೀಂ ಕೋರ್ಟ್ ನಿಗದಿಪಡಿಸಿದ “ಮಾರ್ಗಸೂಚಿಗಳ ಸಂಪೂರ್ಣ ಉಲ್ಲಂಘನೆ” ಎಂದು ಹೇಳಿದೆ.
ಆದರೆ, ಐದು ವರ್ಷ ಎಂಟು ತಿಂಗಳು ಕಳೆದರೂ ಎಎಪಿ ಡಿಐಪಿ ಆದೇಶವನ್ನು ಪಾಲಿಸಿಲ್ಲ. ನಿರ್ದಿಷ್ಟ ಆದೇಶದ ಹೊರತಾಗಿಯೂ ಸಾರ್ವಜನಿಕ ಹಣವನ್ನು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಎಎಪಿ ಪಕ್ಷದಿಂದ ಹಣ ಪಾವತಿ ಮಾಡದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು, ಇದೊಂದು ಹೊಸ ಪ್ರೇಮ ಪತ್ರ ಎಂದು ಬಣ್ಣಿಸಿದ್ದಾರೆ. ನಮ್ಮ ಪಕ್ಷ ಇದೀಗ ರಾಷ್ಟ್ರೀಯ ಪಕ್ಷವಾಗಿ ಮಾರ್ಪಟ್ಟಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿದ್ದೇವೆ ಇದು ಅವರನ್ನು ಗಲಿಬಿಲಿಗೊಳಿಸಿದೆ. ಲೆಫ್ಟಿನೆಂಟ್ ಗವರ್ನರ್ ಸಾಹಬ್ ಅವರು ಬಿಜೆಪಿಯ ನಿರ್ದೇಶನಗಳಿಗೆ ಅನುಗುಣವಾಗಿ ಮಾಡುತ್ತಿದ್ದಾರೆ ಎಂದರು.
ಇಂತಹ ಆದೇಶ ನೀಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್’ಗೆ ಇಲ್ಲ. ಅವರ ನಿರ್ದೇಶನಗಳು ಕಾನೂನಿನ ರೀತಿ ಇಲ್ಲ. ಇತರ ರಾಜ್ಯ ಸರ್ಕಾರಗಳು ಕೂಡ ಜಾಹೀರಾತುಗಳನ್ನು ನೀಡುತ್ತವೆ. ಬಿಜೆಪಿ ಆಡಳಿತ ನಡೆಸುತ್ತಿರುವ ವಿವಿಧ ರಾಜ್ಯ ಸರ್ಕಾರಗಳು ನಮ್ಮಂತೆಯೇ ಜಾಹೀರಾತುಗಳನ್ನು ನೀಡಿವೆ. ಜಾಹೀರಾತಿಗಾಗಿ ಅವರು ವ್ಯಯಿಸಿರುವ 22,000 ಕೋಟಿ ರೂ.ಗಳನ್ನು ವಸೂಲಿ ಮಾಡುವುದು ಯಾವಾಗ? ಅವರಿಂದ ಹಣ ವಸೂಲಿ ಮಾಡಿದ ದಿನ ನಾವೂ 97 ಕೋಟಿ ರೂ.ಗಳನ್ನು ಪಾವತಿ ಮಾಡುತ್ತೇವೆಂದು ತಿಳಿಸಿದ್ದಾರೆ.