ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಕಾನೂನು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೂವರು ನ್ಯಾಯಾಧೀಶರ ಪೀಠವು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.
ಪಕ್ಷಕಾರರ ವಾದಗಳನ್ನು ನಾವು ಆಲಿಸಿದ್ದೇವೆ. 239ಎಎ ವಿಧಿಯ ವ್ಯಾಖ್ಯಾನ ಪ್ರಮುಖ ವಿಚಾರವಾಗಿದೆ. ಎಲ್ಲಾ ವಿಚಾರಗಳನ್ನು ವಿಸ್ತೃತವಾಗಿ ವಿಶ್ಲೇಷಿಸಲಾಗಿದೆ. ಹಿಂದಿನ ಸಾಂವಿಧಾನಿಕ ಪೀಠವು ಇತ್ಯರ್ಥಪಡಿಸಿರುವ ವಿಚಾರಗಳನ್ನು ಮರುಪರಿಶೀಲಿಸಲು ಹೋಗುವುದಿಲ್ಲ. ಇನ್ನು ಆಡಳಿತ ಸೇವೆಗಳಿಗೆ ಸಂಬಂಧಿಸಿದ ವಿಚಾರವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ನಾವು ಭಾವಿಸಿದ್ದೇವೆ ಎಂದು ತ್ರಿಸದಸ್ಯ ಪೀಠವು ತಿಳಿಸಿದೆ.
ದೆಹಲಿಯು ದೇಶದ ರಾಜಧಾನಿಯಾಗಿರುವುದರಿಂದ ಇಲ್ಲಿನ ಆಡಳಿತಾತ್ಮಕ ಸೇವೆಗಳ ಮೇಲೆ ತಾವೇ ನಿಯಂತ್ರಣ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರದ ವಾದವಾಗಿದೆ.
ಪ್ರಮುಖ ಅಧಿಕಾರಿಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಆಡಳಿತಾತ್ಮಕ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರವು ದೆಹಲಿ ಸರ್ಕಾರವನ್ನು ಹೊರಗಿಟ್ಟಿದೆ. ಹೀಗಾಗಿ, ಅಧಿಕಾರಿಗಳು ಲೆಫ್ಟಿನೆಂಟ್ ಗವರ್ನರ್ ಆದೇಶದ ಅನ್ವಯ ಕೇಂದ್ರ ಸರ್ಕಾರದ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೆಹಲಿ ಸರ್ಕಾರ ವಾದಿಸಿದೆ.
ಇದಕ್ಕೆ ಸಂಬಂಧ ಪಟ್ಟ ಹಾಗೆ ಐವರು ನ್ಯಾಯಮೂರ್ತಿಗಳು ಮೇ 11 ರಂದು ವಿಚಾರಣೆ ನಡೆಸಿ ಒಂದು ಸರಿಯಾದ ಕ್ರಮಕೈಗೊಳ್ಳುತ್ತಾರೆಂದು ವರದಿ ನೀಡಲಾಗಿದೆ. ಇದಕ್ಕೆ ದೆಹಲಿ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.