ನವದೆಹಲಿ: ನೀಟ್-ಪಿಜಿ ಕೌನ್ಸಿಲಿಂಗ್ ವಿಳಂಬ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ದಬ್ಬಾಳಿಕೆ ನಡೆಸಿದ್ದು, ಪ್ರತಿಭಟನೆ ತೀವ್ರಗೊಂಡಿದೆ. ಪೊಲೀಸರ ದಬ್ಬಾಳಿಕೆ ಖಂಡಿಸಿ, 29ರಂದು 8 ಗಂಟೆಯಿಂದ ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ವೈದ್ಯಕೀಯ ಪ್ರವೇಶದಲ್ಲಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಒಂದು ವರ್ಷದಿಂದ ತಡೆಹಿಡಿಯಲಾದ ಹೊಸ ವೈದ್ಯರ ತುರ್ತು ನೇಮಕಾತಿ ವಿಳಂಬ ವಿರೋಧಿಸಿ ದೆಹಲಿಯಲ್ಲಿ ನೆನ್ನೆ ವೈದ್ಯರುಗಳು ಪ್ರತಿಭಟನೆ ಆರಂಭಿಸಿದರು. ಈ ವೇಳೆ ದೆಹಲಿ ಪೊಲೀಸರು ಪ್ರತಿಭಟನಾನಿರತ ವೈದ್ಯರುಗಳ ಮೇಲೆ ಲಾಠಿ ಪ್ರಯೋಗಿಸಿದ್ದಾರೆ.
ಪ್ರತಿಭಟನೆಯ ಸ್ಥಳದಲ್ಲಿ ಗಲಾಟೆ ನಡೆದು, ಪೊಲೀಸರು ಹಾಗೂ ವೈದ್ಯರುಗಳು ಗಾಯಗೊಂಡಿದ್ದಾರೆ. ಮಹಿಳಾ ವೈದ್ಯರು ಎಂದು ಪರಿಗಣಿಸದೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (ಎಫ್‌ಎಐಎಂಎ) ಪ್ರತಿಭಟನೆ ಮುಂದುವರೆಸುವ ಕರೆ ನೀಡಿದೆ. ಇಂದು ಸಹ ಪ್ರತಿಭಟನೆ ಮುಂದುವರಿದಿದೆ.
ಈ ಬಗ್ಗೆ ನೀಡಿರುವ ಎಫ್‌ಎಐಎಂಎ ಎಲ್ಲಾ ಆರ್‌ಡಿಎಗಳು ಮತ್ತು ಇತರ ವೈದ್ಯರ ಸಂಘಗಳಿಗೆ ಈ ಸಂಬಂಧ ಸೂಚನೆ ಹೊರಡಿಸಿದೆ. ನೀಟ್ ಸ್ನಾತಕೋತ್ತರ ಪರೀಕ್ಷೆಯ ನಂತರ ಕಾಲೇಜು ಹಂಚಿಕೆ ವಿಳಂಬವನ್ನು ವಿರೋಧಿಸಿ ವೈದ್ಯರುಗಳು ದೆಹಲಿಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಎಫ್‌ಓಡಿಆರ್‌ಎ ಪ್ರಧಾನ ಕಾರ್ಯದರ್ಶಿ ಡಾ.ಕುಲ್ ಸೌರಭ್ ಕೌಶಿಕ್ ಮಾಧ್ಯಮಗಳೊಂದಿಗೆ ಮಾತನಾಡಿ “ನಮ್ಮನ್ನು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿತ್ತು. ಚರ್ಚೆಯ ಬಳಿಕ ನಮ್ಮ ಪ್ರತಿಭಟನೆಯನ್ನು ಸಫ್ದರ್ ಜಂಗ್ ಅಸ್ಪತ್ರೆಯಿಂದ ಮುಂದುವರಿಸಲು ನಿರ್ಧರಿಸಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ, ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ನಾವು ಸಫ್ದರ್ ಜಂಗ್‌ಗೆ ಹಿಂದಿರುಗಿದ್ದೇವೆ. ಪ್ರತಿಭಟನೆ ಮುಂದುವರಿಸಲಿದೆʼʼ ಎಂದು ಹೇಳಿದ್ದಾರೆ.
ವೈದ್ಯರು ಸೋಮವಾರ ಸಂಜೆ ಸಫ್ದರ್ ಜಂಗ್ ಆಸ್ಪತ್ರೆ ಬಳಿ ಪ್ರತಿಭಟನಾ ಜಾಥ ನಡೆಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 188ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ವೇಳೆ ಏಳು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಡಿಸೆಂಬರ್ 29ರಂದು ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಭಾಗಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಬಂಧಿತ ವೈದ್ಯರನ್ನು ತಕ್ಷಣ ಬಿಡುಗಡೆ ಮಾಡಿ, ಸರ್ಕಾರ ಪೊಲೀಸರ ದಬ್ಬಾಳಿಕೆಗೆ ಕ್ಷಮೆ ಕೋರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.