ದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 366 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸುಮಾರು ನಾಲ್ಕು ಶೇಕಡಾ (ಶೇ. 3.95) ಪಾಸಿಟಿವಿಟಿ ದರವಿದೆ. ಇದು ಫೆಬ್ರವರಿ 3ರ ಬಳಿಕದ ಅತ್ಯಧಿಕ ಪಾಸಿಟಿವಿಟಿ ದರವಾಗಿದೆ.
ಇದೀಗ ದೆಹಲಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 18,67,572ಕ್ಕೆ ಏರಿಕೆಯಾಗಿದೆ. ಒಂದು ದಿನದ ಅಂತರದಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಈವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದಿಂದ 26,158 ಮಂದಿ ಅಸುನೀಗಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಲೆಗಳಿಂದ ಸೋಂಕಿನ ವರದಿಗಳು ಬರುತ್ತಿದ್ದು, ಈ ಸಂಬಂಧ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಕೋವಿಡ್-19 ಪ್ರಕರಣ ಪತ್ತೆಯಾದ ನಿರ್ದಿಷ್ಟ ವಿಭಾಗ ಅಥವಾ ತರಗತಿ ಕೊಠಡಿಯನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಮತ್ತು ನಿರ್ದಿಷ್ಟ ಪ್ರಕರಣಗಳಲ್ಲಿ ಮಾತ್ರ ಇಡೀ ಶಾಲೆಯನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರಕಾರವು ಶುಕ್ರವಾರವಷ್ಟೇ ತನ್ನ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗಳ ಮುನ್ನೆಚ್ಚರಿಕೆ ಡೋಸ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. “ಲಸಿಕೆಯ ಮೊದಲ ಮತ್ತು ಎರಡನೇ ಡೋಸ್‌ಗಳನ್ನು ಪಡೆದುಕೊಂಡವರಿಗೆ ಅದೇ ಲಸಿಕೆಯ ಮೂರನೇ ಡೋಸ್‌ನ್ನು ನೀಡಲಾಗುತ್ತದೆ. ಎರಡನೇ ಡೋಸ್ ಪಡೆದುಕೊಂಡು 9 ತಿಂಗಳು ಪೂರೈಸಿದವರಿಗೆ ಮೂರನೇ ಡೋಸ್ ನೀಡಲಾಗುತ್ತದೆ,” ಎಂದು ದೆಹಲಿ ಸರಕಾರ ಪ್ರಕಟಿಸಿತು.
ಕೇಂದ್ರ ಸರಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಕೋವಿಡ್ – 19 ಲಸಿಕೆಗಳ ಮುನ್ನೆಚ್ಚರಿಕೆ ಡೋಸ್ ಅನ್ನು ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಪಡೆದುಕೊಳ್ಳುವ ಅಭಿಯಾನಕ್ಕೆ ಏಪ್ರಿಲ್ 10ರಂದು ಚಾಲನೆ ನೀಡಿದೆ. ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳು ಪೂರ್ಣಗೊಳಿಸಿದವರು ಈ ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಅಂಕಿ-ಅಂಶಗಳ ಪ್ರಕಾರ ದೆಹಲಿಯಲ್ಲಿ ಕಳೆದ ಒಂದು ವಾರದಲ್ಲಿ ಮನೆ ಹಾರೈಕೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 48ರಷ್ಟು ಏರಿಕೆ ಕಂಡಿದೆ. ಗುರುವಾರ 325 ಹೊಸ ಕೊರೊನಾ ವೈರಸ್ ಪ್ರಕರಣಗಳು ಹಾಗೂ ಶೇ. 2.39ರಷ್ಟು ಪಾಸಿಟಿವಿಟಿ ದರ ದಾಖಲಾಗಿದ್ದು ಮನೆ ಹಾರೈಕೆ ಪಡೆದುಕೊಳ್ಳುತ್ತಿರುವವರ ಸಂಖ್ಯೆ 574ಕ್ಕೆ ಏರಿಕೆಯಾಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯನ್ನು ಏಪ್ರಿಲ್ 20 ರಂದು ಕರೆಯಲಾಗಿದೆ.