ನವದೆಹಲಿ: ತಮ್ಮ ಬೆಲೆಗಳಿಗೆ ಬೆಂಬಲ ಬೆಲೆ ನೀಡುವ ಕಾನೂನು ಜಾರಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಹೊಸದಾಗಿ ಮತ್ತೊಂದು ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ದವಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಬುಧವಾರ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಗೆ ರೈತರು ನಡೆಸಲು ಉದ್ದಶಿಸಿರುವ ‘ದೆಹಲಿ ಚಲೋ’ ಪುನರಾರಂಭಕ್ಕೆ ಮುಂಚಿತವಾಗಿ ಅವರ ಈ ಹೇಳಿಕೆ ನೀಡಿದ್ದಾರೆ.
ನಾನು ಮತ್ತೊಮ್ಮೆ ರೈತ ಮುಖಂಡರನ್ನು ಚರ್ಚೆಗೆ ಆಹ್ವಾನಿಸುತ್ತೇನೆ. ನಮಗೆ ಶಾಂತಿ ಕಾಪಾಡುವುದು ಮುಖ್ಯ ಎಂದು ಸಚಿವ ಅರ್ಜುನ್ ಮುಂಡಾ ಟ್ವೀಟ್ ಮಾಡಿದ್ದಾರೆ. “ಸಮಸ್ಯೆಗೆ ಪರಿಹಾರವನ್ನು ಚರ್ಚೆಯಿಂದ ನಾವು ಕಂಡುಕೊಳ್ಳಬೇಕು….ನಾವೆಲ್ಲರೂ ಒಟ್ಟಾಗಿ ಪರಿಹಾರವನ್ನು ಕಂಡುಕೊಳ್ಳಲು ನಾವು ಬಯಸುತ್ತೇವೆ” ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿದ ದೇವೇಗೌಡ – ಸಿದ್ದರಾಮಯ್ಯ ಆರೋಪ
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತ ಸರ್ಕಾರದ ಪ್ರಸ್ತಾವನೆಯನ್ನು ರೈತ ಮುಖಂಡರು ತಿರಸ್ಕರಿಸಿದ ನಂತರ, ಕೇಂದ್ರ ಸಚಿವ ಅರ್ಜುನ್ ಮುಂಡಾ ಮಂಗಳವಾರ ಪ್ರತಿಭಟನಾಕಾರರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು.
ಈ ಮಧ್ಯೆ, ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳು ಮತ್ತು ದಿಗ್ಬಂಧನಗಳನ್ನು ತೆಗೆದುಹಾಕಬೇಕು ಮತ್ತು ರೈತರು ದೆಹಲಿಗೆ ಶಾಂತಿಯುತವಾಗಿ ಮೆರವಣಿಗೆ ಮಾಡಲು ಅನುವು ಮಾಡಿಕೊಡಬೇಕೆಂದು ರೈತ ಮುಖಂಡರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಾನ್ ಸಿಂಗ್ ಪಂಧೇರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ನಡುವೆ, ಕೆಲವು ಯುವ ರೈತರು ಅಲ್ಲಿರುವ ಬಹು ಪದರದ ಬ್ಯಾರಿಕೇಡ್‌ಗಳ ಕಡೆಗೆ ಹೋಗುತ್ತಿರುವುದನ್ನು ಕಂಡು ಶಂಭು ಗಡಿಯಲ್ಲಿ ನೆಲೆಸಿದ್ದ ಹರಿಯಾಣ ಭದ್ರತಾ ಸಿಬ್ಬಂದಿ ಕೆಲವು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಹರ್ಯಾಣ ಪೊಲೀಸರು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ:‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ | ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ
ರೈತರು ದೆಹಲಿಯತ್ತ ಪಾದಯಾತ್ರೆ ಆರಂಭಿಸುತ್ತಿದ್ದಂತೆ ಹರಿಯಾಣ ಪೊಲೀಸರು ಯಾವುದೇ ಪ್ರಚೋದನೆ ಇಲ್ಲದೆ ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದಾರೆ ಎಂದು ಪಟಿಯಾಲ ರೇಂಜ್ ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್ ಹೇಳಿದ್ದಾರೆ. ಅದಕ್ಕಾಗಿ ಅವರು ಹರಿಯಾಣ ಪೊಲೀಸರಿಗೆ ತಮ್ಮ ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಈ ಮಧ್ಯೆ, ಪಂಜಾಬ್ ಪೊಲೀಸರು ಈಗ ಶಂಭು ಕಡೆಗೆ ಸಂಚಾರವನ್ನು ನಿರ್ಬಂಧಿಸಿದ್ದಾರೆ. ರೈತರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳನ್ನು ರಾಜಪುರದ ಬಳಿಯಿಂದ ತಿರುಗಿಸಲಾಗುತ್ತಿದೆ.
ಐದು ವರ್ಷಗಳ ಕಾಲ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಎಂಎಸ್‌ಪಿ ದರದಲ್ಲಿ ಖರೀದಿಸುವ ಬಿಜೆಪಿ ನೇತೃತ್ವದ ಕೇಂದ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ನಂತರ ರೈತರು ತಮ್ಮ ‘ದಿಲ್ಲಿ ಚಲೋ’ ಮೆರವಣಿಗೆಯನ್ನು ಇಂದು ಪುನರಾರಂಭಿಸಲಿದ್ದಾರೆ.
ಫೆಬ್ರವರಿ 13 ರಂದು ದೆಹಲಿಗೆ ತಮ್ಮ ಮೆರವಣಿಗೆ ಪ್ರಾರಂಭಿಸಿದ ಸಾವಿರಾರು ರೈತರನ್ನು ಹರಿಯಾಣ ಗಡಿಯಲ್ಲಿಯೇ ತಡೆಹಿಡಿಯಲಾಯಿತು. ಅಲ್ಲಿ ಅವರು ಭದ್ರತಾ ಸಿಬ್ಬಂದಿ ಡ್ರೋನ್‌ಗಳನ್ನು ಬಳಸಿ ರೈತರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಎಸೆದಿದ್ದಾರೆ. ಇದರಿಂದಾಗಿ ಹಲವಾರು ರೈತರು ಗಾಯಗೊಂಡಿದ್ದಾರೆ. ಕೆಲವು ಪ್ರತಿಭಟನಾಕಾರರ ವಿರುದ್ಧ ರಬ್ಬರ್ ಬುಲೆಟ್‌ನಲ್ಲಿ ದಾಳಿ ಮಾಡಲಾಗಿದ್ದು, ನೀರಿನ ಫಿರಂಗಿಗಳನ್ನು ಸಹ ಬಳಸಗಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ. ಅಂದಿನಿಂದ ಹರ್ಯಾಣ ಮತ್ತು ಪಂಜಾಬ್‌ನ ಗಡಿಯಲ್ಲಿರುವ ಶಂಭು ಮತ್ತು ಖಾನೌರಿ ಪಾಯಿಂಟ್‌ಗಳಲ್ಲಿ ರೈತರು ಬಿಡಾರ ಹೂಡಿದ್ದಾರೆ.
ವಿಡಿಯೊ ನೋಡಿ: ಸೆಕ್ಯೂಲರಿಸಂ ಹಾಗೂ ಸೊಶಿಯಲಿಸಂ ಬೆಸದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ – ಡಾ. ಪ್ರಕಾಶ್