ನವದೆಹಲಿ : ಅಧಿಕಾರಿವರ್ಗದ ಮೇಲೆ ನಿಯಂತ್ರಣ ಸೇರಿದಂತೆ ಆಡಳಿತದ ಪ್ರಮುಖ ಕ್ಷೇತ್ರಗಳ ಮೇಲೆ ದಿಲ್ಲಿಯ ಚುನಾಯಿತ ಸರ್ಕಾರದ ಹಕ್ಕುಗಳನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟಿನ ಐದು ಸದಸ್ಯರ ಸಾಂವಿಧಾನಿಕ ಪೀಠದ ಇತ್ತೀಚಿನ ತೀರ್ಪನ್ನು ನಿರರ್ಥಕಗೊಳಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಹೊರಡಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಇದು ನ್ಯಾಯಾಲಯದ ನಿಂದನೆಯಾಗುತ್ತದೆ ಮಾತ್ರವಲ್ಲದೆ, ಸಂವಿಧಾನದ ಒಕ್ಕೂಟ ಗುಣಲಕ್ಷಣಗಳ ಮೇಲೆ ಮತ್ತು ಸುಪ್ರೀಂ ಕೋರ್ಟ್ ನಿರೂಪಿಸಿರುವ ಜವಾಬುದಾರಿಕೆ ಮತ್ತು ಪ್ರಜಾಸತ್ತಾತ್ಮಕ ಆಳ್ವಿಕೆಯ ವಿಧಿ-ವಿಧಾನಗಳ ಮೇಲೆ ನೇರ ಪ್ರಹಾರವಾಗಿದೆ , ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ತೋರಿರುವ ಈ ಧಿಕ್ಕಾರವು ಮೋದಿ ಸರ್ಕಾರದ ನಗ್ನ ನಿರಂಕುಶ ಸ್ವಭಾವದ ಒಂದು ಮಾನದಂಡವಾಗಿದೆ ಎಂದು ಅದು ಹೇಳಿದೆ.
ಇದು ರಾಷ್ಟ್ರೀಯ ಹಿತಾಸಕ್ತಿಯ ಕ್ರಮ ಎಂಬ ಹುಸಿ ಕಾರಣಗಳನ್ನು ಕೊಟ್ಟಿರುವುದು ನ್ಯಾಯಾಲಯಕ್ಕೆ ಮಾಡಿರುವ ಒಂದು ಬಹಿರಂಗ ಅವಮಾನ. ಸಂವಿಧಾನ ಪೀಠವು ಒಂದು ಮೈಲಿಗಲ್ಲಾದ ಈ ತೀರ್ಪು ನೀಡಿದಾಗ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಅದಕ್ಕೇನೂ ಗೊತ್ತೇ ಇರಲಿಲ್ಲ ಎಂದು ಈ ಸರಕಾರ ಹೇಳಬಯಸುತ್ತದೆಯೇ ಎಂದು ಕೇಳಿರುವ ಪೊಲಿಟ್‍ಬ್ಯುರೊ ಇದು ದಿಲ್ಲಿಯ ಜನರು ಮತ್ತು ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರ ಸಾಂವಿಧಾನಿಕ ಒಕ್ಕೂಟ ಚೌಕಟ್ಟನ್ನು ನೆಲಸಮ ಮಾಡುತ್ತಿರುವ ಬಗ್ಗೆ ಆತಂಕಿತರಾಗಿರುವ ಎಲ್ಲಾ ನಾಗರಿಕರಿಗೆ ಸಂಬಂಧಿಸಿದ ಸಂಗತಿ ಎಂದು ಹೇಳಿದೆ. ಅದನ್ನು ವಿರೋಧಿಸಲೇಬೇಕು ಎಂದಿರುವ ಅದು ಈ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.