ಶಿವಮೊಗ್ಗ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸಲು ಎಲ್ಲರೂ ದೆಹಲಿಗೆ ಬರುವ ಅಗತ್ಯವಿಲ್ಲ. ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ಆರಂಭಿಸಿ ವಿಧಾನಸೌಧ ಸುತ್ತುವರಿಯಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದರು.
ನಗರದ ಸೈನ್ಸ್ ಮೈದಾನದಲ್ಲಿ ಶನಿವಾರ ರಾಜ್ಯರೈತ ಸಂಘ ಹಾಗೂ ಐಕ್ಯ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ರೈತರ ಮಹಾ ಪಂಚಾಯತ್ ಉದ್ಘಾಟಿಸಿ ಅವರು ಮಾತನಾಡಿದರು. ‘ಮೂರು ಕರಾಳ ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ದೇಶದ ಬಡವರ ರೊಟ್ಟಿ, ಅನ್ನವನ್ನು ತಿಜೋರಿಗಳಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆ. ಭೂಮಿ ಕಳೆದುಕೊಳ್ಳುವ ರೈತರು ಭವಿಷ್ಯದಲ್ಲಿ ಸಂಕಷ್ಟ ಅನುಭವಿಸಲಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿ ಮತ್ತಷ್ಟು ಸಾಲಗಾರರನ್ನಾಗಿ ಮಾಡಿದೆ. ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಕಾಯ್ದೆಯಾಗಿಸಬೇಕು. ಅಲ್ಲಿಯವರೆಗೂ ದೆಹಲಿ ಗಡಿ ಬಿಟ್ಟು ಒಂದಿಂಚೂ ಕದಲುವುದಿಲ್ಲ’ ಎಂದು ಎಚ್ಚರಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರೈತ ಮಹಾ ಪಂಚಾಯತ್
ಯಾರೋ ಡ್ಯಾನ್ಸರ್ ಮಹಿಳೆ ಗಾಯಗೊಂಡರೆ ಟ್ವೀಟ್ ಮಾಡುವ ಪ್ರಧಾನಿ ಮೋದಿ, ರೈತರು ಸತ್ತರೂ ಏಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಂಖಡ ಯುದ್ಧ್‌ವೀಸಿಂಗ್ ಪ್ರಶ್ನಿಸಿದರು.
ರೈತರು ದೆಹಲಿ ಎತ್ತಿಕೊಂಡು ಹೋಗಲು ಬಂದಿರಲಿಲ್ಲ. ತಮ್ಮ ಹಕ್ಕನ್ನು ಕೇಳಲು ಬಂದಿದ್ದರು. ಆದರೆ, ದೆಹಲಿಯಲ್ಲಿ ಕುಳಿತ ಆ ವ್ಯಕ್ತಿಯೇ ದೇಶ ಮಾರಾಟ ಮಾಡುತ್ತಿದ್ದಾನೆ. ನೀವು ಕೂತು ಮಾರಾಟ ಮಾಡುವುದನ್ನು ನೋಡುತ್ತಿದ್ದೀರಾ. ಒಂದಲ್ಲ ಒಂದು ದಿನ ದೇಶವನ್ನು ಅದಾನಿ, ಅಂಬಾನಿ ಚಾಟಿ ಹಿಡಿದು ಚಲಾಯಿಸುವರು. ಮತ್ತೊಮ್ಮೆ ದೇಶ ಗುಲಾಮಗಿರಿಯತ್ತ ಹೋಗಲಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಗಂಡಾಂತರ ಕಾದಿದೆ ಎಂದರು.
ರಾಜ್ಯದ ರೈತ ಮುಖಂಡರುಗಳಾದ ಕಡಿದಾಳ್ ಶಾಮಣ್ಣ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ.ಗಂಗಾಧರ್, ಹೆಚ್.ಆರ್.ಬಸವರಾಜಪ್ಪ ಸೇರಿದಂತೆ ಅನೇಕರು ಮಹಾ ಪಚಾಯತ್ ನಲ್ಲಿ ಭಾಗಿಯಾಗಿದ್ದರು.
ಮಹಾ ಪಂಚಾಯತ್ ಆರಂಭದಲ್ಲಿ ಈವರೆಗಿನ ಹೋರಾಟದಲ್ಲಿ ಮೃತರಾದ ರೈತರಿಗೆ ಸಂತಾಪ ಸಲ್ಲಿಸಲಾಯಿತು. ಭತ್ತದ ಕಸೂತಿ ತೋರಣ ಅನಾವರಣದ ಮೂಲಕ ಮಹಾಪಂಚಾಯತ್ ಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ