- ದೆಹಲಿಯ ಟಿಕ್ರಿ ಗಡಿಭಾಗದಲ್ಲಿಯೇ ರೈತರ ಹೋರಾಟ ತೀವ್ರ
ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ರೈತರು ನಡೆಸುತ್ತಿರುವ ಹೋರಾಟ ಮುಂದುವರಿದಿದೆ.
ಪಂಜಾಬ್, ಹರಿಯಾಣ ಮತ್ತಿತರ ಪ್ರಾಂತ್ಯಗಳಿಂದ ಆಗಮಿಸಿರುವ ಸಾವಿರಾರು ರೈತರನ್ನು ಸಿಂಗು ಗಡಿಯಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ. ಈ ಹಿನ್ನೆಲೆ ಅಲ್ಲೇ ಸಭೆ ನಡೆಸಿದ ರೈತ ಮುಖಂಡರು, ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.
ಪೊಲೀಸರು ಉತ್ತರ ದೆಹಲಿಯ ಸ್ಥಳವೊಂದರಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದರೂ ಕೂಡ ಶನಿವಾರ ಬೆಳಗ್ಗೆ ಸೇರಿರುವ ರೈತರು ಟಿಕ್ರಿ ಗಡಿಭಾಗದ ಮೈದಾನದಲ್ಲಿಯೇ ತಮ್ಮ ಹೋರಾಟ ಮುಂದುವರಿಸಿದ್ದಾರೆ.
96 ಸಾವಿರ ಟ್ರಾಕ್ಟರು, 1.20 ಕೋಟಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಭಾರತದ ರಾಜಧಾನಿಯ ದೆಹಲಿಯ ಹೊರವಲಯದಲ್ಲಿ ನಿಂತಿದ್ದಾರೆ. ಪ್ರತಿಭಟನೆ ಹಿನ್ನೆಲೆ ದೆಹಲಿ ಮತ್ತು ಎನ್ ಸಿಆರ್ ನಗರಗಳ ಮಧ್ಯೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಎನ್ ಸಿಆರ್, ಕೇಂದ್ರ ದೆಹಲಿ, ಪಂಜಾಬಿ ಬಾಗ್, ನೈರುತ್ಯ ಮತ್ತು ಆಗ್ನೇಯ ದೆಹಲಿಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಹರ್ಯಾಣದ ಗಡಿಭಾಗದ ಸಿಂಗು, ಟಿಕ್ರಿ, ಧನ್ಸ, ಜಾರೊಡ ಕಲನ್ ಗಳಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ರೈತರ ಹೋರಾಟ ಮುಂದುವರಿದಿದೆ. ಹಲವು ಅಡೆತಡೆಗಳ ಮಧ್ಯೆಯೂ ಪಂಜಾಬ್ ರೈತರು ದಿಲ್ಲಿ ಚಲೋ ರ್ಯಾಲಿ ಮುಂದುವರಿಸಿದ್ದಾರೆ.
ಹರ್ಯಾಣದ ರೈತರೂ ಕೂಡ ತಮ್ಮ ನೆರೆ ರಾಜ್ಯದವರ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಎರಡೂ ರಾಜ್ಯಗಳಿಂದ ಸಾವಿರಾರು ರೈತರು ವಿವಿಧ ಗಡಿಭಾಗಗಳ ಮೂಲಕ ದೆಹಲಿಗೆ ನುಗ್ಗಲು ಯತ್ನಿಸಿದ್ದಾರೆ. ದೆಹಲಿಯ ಎಲ್ಲಾ ಗಡಿಭಾಗದಲ್ಲಿ ಪೊಲೀಸರು ಭದ್ರತೆ ನಿಯೋಜಿಸಿದ್ದು, ರೈತರ ಮುನ್ನಡೆಯನ್ನು ತಡೆಯಲು ಹರಸಾಹಸ ನಡೆಸಿದ್ದಾರೆ.
ಕೆಲ ಗಡಿಭಾಗದಲ್ಲಿ ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ ನಡೆದಿದ್ದು, ರೈತರನ್ನ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಆಶ್ರುವಾಯು ಅಸ್ತ್ರ ಪ್ರಯೋಗಿಸಿದ್ದಾರೆ. ಜೀವ ಹೋದರೂ ಪರವಾಗಿಲ್ಲ, ದೆಹಲಿ ಪ್ರವೇಶಿಸುತ್ತೇವೆ ಎಂದು ರೈತರು ಪಣ ತೊಟ್ಟಂತಿದೆ.