ಮೇ10ರ ಸಂಜೆ ಪರಸ್ಪರ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು(ಡಿಜಿಎಂಒ)ಗಳು ಒಂದು ‘ತಿಳುವಳಿಕೆ’ಗೆ ಬಂದ ಮೇಲೆ ನಿಯಂತ್ರಣ ರೇಖೆಯ ಉದ್ದಕ್ಕೂ ಮತ್ತೆ-ಮತ್ತೆ ಇದರ ಉಲ್ಲಂಘನೆಗಳಾಗಿವೆ, ಸಶಸ್ತ್ರ ಪಡೆಗಳು ಇವಕ್ಕೆ ಸೂಕ್ತ ಮತ್ತು ಸಾಕಷ್ಟು ಪ್ರಮಾಣದಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಮೇ 11ರ ಪೂರ್ವಾಹ್ನ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ ಮಾಧ್ಯಮಗಳಿಗೆ ತಿಳಿಸಿದರು. ಭಾರತ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ, ಈ ಬಗ್ಗೆ ಪಾಕಿಸ್ತಾನ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಪರಿಸ್ಥಿತಿಯನ್ನು ಗಂಭೀರವಾಗಿ ಮತ್ತು ಹೊಣೆಗಾರಿಕೆಯಿಂದ ನಿಭಾಯಿಸಬೇಕು ಎಂದು ಕರೆ ನೀಡಲಾಗಿದೆ, ನಮ್ಮ ಸಶಸ್ತ್ರ ಪಡೆಗಳು ಎಚ್ಚರದಿಂದಿವೆ, ಅಂತರ್ರಾಷ್ಟ್ರೀಯ ಗಡಿಗಳು ಮತ್ತು ನಿಯಂತ್ರಣ ರೇಖೆಯಲ್ಲಿ ಮತ್ತೆ ಉಲ್ಲಂಘನೆಗಳು ನಡೆದರೆ ಕಠಿಣವಾಗಿ ವರ್ತಿಸಬೇಕು ಎಂಬ ನಿರ್ದೇಶನಗಳನ್ನು ನೀಡಲಾಗಿದೆ ಎಂದೂ ಅವರು ಹೇಳಿದರು.
ಗಡಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ನಿಧಾನವಾಗಿ ಮರಳುತ್ತಿದೆ. ಮಿಲಿಟರಿ ಚಟುವಟಿಕೆಗಳಿಂದಾಗಿ ಊರು ಬಿಟ್ಟು ಹೋದವರು ಮರಳುತ್ತಿದ್ದಾರೆ ಎಂದು ವರದಿಯಾಗಿದೆ.
ಮೇ11 ರ ಸಂಜೆ ಡಿಜಿಎಂಒ ಸೇರಿದಂತೆ ಸಶಸ್ತ್ರ ಪಡೆಗಳ ಮೂರೂ ವಿಭಾಗಗಳ ಅಧಿಕಾರಿಗಳು, ಒಟ್ಟು ಸನ್ನಿವೇಶದ ಬಗ್ಗೆ ಮಾಧ್ಯಮಗಳಿಗೆ ವಿವರಗಳನ್ನು ನೀಡಿದರು. ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯನ್ನು ಎರಡೂ ಕಡೆಗಳ ಡಿಜಿಎಂಒಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಎರಡೂ ದೇಶಗಳ ವಿದೇಶಾಂಗ ಮಂತ್ರಿಗಳೂ ಸೇರಿದಂತೆ ಬೇರೆ ಯಾರ ಸಭೆಯೂ ನಡೆದಿಲ್ಲ ಎಂದು ಹೇಳಲಾಯಿತು. ಮೇ 12ರಂದು ಎರಡೂ ದೇಶಗಳ ಡಿಜಿಎಂಒಗಳು ಈ ನಿಲುಗಡೆಯನ್ನು ದೀರ್ಘಾವಧಿಗೆ ವಿಸ್ತರಿಸುವ ಬಗ್ಗೆ ಮತ್ತೊಮ್ಮೆ ಮಾತುಕತೆಗಳನ್ನು ನಡೆಸುತ್ತಾರೆ ಎಂದೂ ಹೇಳಲಾಯಿತು.
ಮೇ 7ರಂದು 9 ಭಯೋತ್ಪಾದನಾ ಕೇಂದ್ರಗಳು ಮತ್ತು ಅವರ ಮಿಲಿಟರಿ ಮೂಲರಚನೆಗಳ ಮೇಲೆ ನಡೆಸಿದ ದಾಳಿಗಳಲ್ಲಿ, 100ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಇವರಲ್ಲಿ ಪುಲ್ವಾಮಾದಲ್ಲಿ ಹತ್ಯಾಕಾಂಡ ನಡೆಸಿದವರು, ಐಸಿ-814 ವಿಮಾನದ ಹೈಜಾಕರುಗಳೂ ಸೇರಿದ್ದಾರೆ. ಮೇ 7ರಿಂದ 10 ರ ನಡುವೆ ಪಾಕಿಸ್ತಾನದ 35-40 ಸೈನಿಕರು ಹತರಾಗಿದ್ದಾರೆ. ವಾಯುಪಡೆಗೆ ವಹಿಸಿದ ಕೆಲಸವನ್ನು ಕರಾರುವಾಕ್ಕಾಗಿ ಈಡೇರಿಸಿ ಪೈಲಟ್‍ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ. ಭಾರತದ ಕಾರ್ಯಾಚರಣೆ ಕರಾರುವಾಕ್ಕಾಗಿ ಅಳೆದು-ಸುರಿದು ಮಾಡಿದ ಸೀಮಿತ ಕಾರ್ಯಾಚರಣೆಯಾಗಿತ್ತು ಎಂದು ಪುನರುಚ್ಚರಿಸಲಾಯಿತು. ಭಾರತ ತನ್ನ ಐದು ಮಿಲಿಟರಿ ಸಿಬ್ಬಂದಿಯನ್ನು ಕಳಕೊಂಡಿದೆ ಎಂದು ತಿಳಿಸಲಾಯಿತು
ಮತ್ತೆ ಟ್ರಂಪ್ ಹೆಗ್ಗಳಿಕೆಯ ಹೇಳಿಕೆ
ಈ ನಡುವೆ ‘ಕದನ ವಿರಾಮ’ ಅಥವ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಬಗ್ಗೆ, ಅದರಲ್ಲಿ ಯುಎಸ್ ನ ಟ್ರಂಪ್ ಆಡಳಿತದ ‘ಸಹಾಯ’ದ ಬಗ್ಗೆ ನಮ್ಮ ಪ್ರಧಾನಮಂತ್ರಿಗಳ, ಗೃಹಮಂತ್ರಿಗಳ, ವಿದೇಶಾಂಗ ಮಂತ್ರಿಗಳ ಮತ್ತು ರಕ್ಷಣಾ ಮಂತ್ರಿಗಳ ಮೌನ ಮುಂದುವರೆದಿದೆ.
ಅತ್ತ ಯುಎಸ್ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ “ ಚಾರಿತ್ರಿಕ ಮತ್ತು ಧೀರ ನಿರ್ಧಾರಕ್ಕೆ ಬರುವಲ್ಲಿ ನೆರವಾಗಲು ಯುಎಸ್‍ಎ ಗೆ ಸಾಧ್ಯವಾಯಿತು ಎಂಬ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಹೇಳುತ್ತ “ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಒಂದು ‘ಸಾವಿರ ವರ್ಷಗಳ’ ನಂತರ ಒಂದು ಇತ್ಯರ್ಥಕ್ಕೆ ಬರಲು ಸಾಧ್ಯವಿದ್ದರೆ ನಿಮ್ಮಿಬ್ಬರೊಂದಿಗೂ ನಾನು ಕೆಲಸ ಮಾಡುತ್ತೇನೆ” ಎಂದೂ ಸೇರಿಸಿರುವುದಾಗಿ ವರದಿಯಾಗಿದೆ. ಜತೆಗೆ ಎರಡೂ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವುದಾಗಿಯೂ ಹೇಳಿದ್ದಾರೆ. ಅಲ್ಲಿನ ವಿದೇಶಾಂಗ ಸಚಿವರಂತೂ, ಎರಡೂ ದೇಶಗಳ ಮುಖಂಡರು ಒಂದು ತಟಸ್ಥ ಸ್ಥಳದಲ್ಲಿ ತಮ್ಮ ನಡುವಿನ ಪ್ರಶ್ನೆಗಳ ಬಗ್ಗೆ ಮಾತುಕತ ನಡೆಸಲಿದ್ದಾರೆ ಎಂದೂ ಹೇಳಿದ್ದರು. ಇವೆರಡನ್ನೂ ಭಾರತ ಸರಕಾರದ ಯಾವುದೇ ವಕ್ತಾರರೂ ಇದುವರೆಗೂ ನಿರಾಕರಿಸಿಯೂ ಇಲ್ಲ ಎಂಬುದು ಗಮನಾರ್ಹ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.
ನಿಮ್ಮ 1000ವರ್ಷಗಳ ವಿವಾದಕ್ಕೆ ಒಂದು ಪರಿಹಾರ ಹುಡುಕಲು ನಿಮ್ಮಿಬ್ಬರ ನಡುವೆ ಮಧ್ಯಸ್ಥಿಕೆಗೆ ನಾನು ರೆಡಿ!
ವ್ಯಂಗ್ಯಚಿತ್ರ:ಸತೀಶ ಆಚಾರ್ಯ, ಸೌತ್ ಫಸ್ಟ್
ಎರಡೂ ದೇಶಗಳ ಡಿಜಿಎಂಒ ಗಳೇ ಈ ‘ನಿಲುಗಡೆ’ಯ ಬಗ್ಗೆ ಮಾತಾಡಿದ್ದು ಎಂದು ಪುನರುಚ್ಚರಿಸಿದರೂ, ಅವರ ನಿರ್ಧಾರವನ್ನು ಪ್ರಕಟಿಸುವ ಮೊದಲೇ ಯುಎಸ್ ಅಧ್ಯಕ್ಷರು ಮತ್ತು ವಿದೇಶಾಂಗ ಕಾರ್ಯರ್ದರ್ಶಿಗಳು ಈ ಬಗ್ಗೆ ಘೋಷಣೆ ಮಾಡಿದ್ದು ಏಕೆ, ಹೇಗೆ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳ ಮುಖಂಡರು ಕೇಳಿದ್ದಾರೆ. ಈ ಬಗ್ಗೆ ಸರ್ವಪಕ್ಷ ಸಭೆ ಮತ್ತು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು, ಇದರಲ್ಲಾದರೂ ಪ್ರಧಾನಿಗಳು ಭಾಗವಹಿಸಿ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕನಿಷ್ಟ ಮೂರು ಕಾರಣಗಳಿಂದಾಗಿ ಇದು ಮೋದಿ ಸರಕಾರಕ್ಕೆ ಭಾರೀ ಮುಜುಗರವನ್ನು ಉಂಟು ಮಾಡಿದೆ ಎಂದು ಹೇಳಲಾಗಿದೆ.
ಮೊದಲನೆಯದಾಗಿ, ಕಾಶ್ಮೀರ ಮತ್ತು ಅಲ್ಲಿ ಭಯೋತ್ಪಾದನೆ ದ್ವಿಪಕ್ಷೀಯ ಪ್ರಶ್ನೆಗಳು, ಇದರಲ್ಲಿ ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶವಿಲ್ಲ ಎಂದು 1972ರ ಶಿಮ್ಲಾ ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಿದ್ದು, ಇದುವರೆಗೂ ಭಾರತ ಇದನ್ನು ಪಾಲಿಸಿಕೊಂಡು ಬಂದಿದೆ.
ಎರಡನೆಯದಾಗಿ, ಟ್ರಂಪ್ ಮತ್ತು ಮೋದಿ ನಡುವೆ ಗಟ್ಟಿಯಾದ ಗೆಳೆತನವಿದೆಯಾದ್ದರಿಂದ, ಟ್ರಂಪ್ ಭಾರತದ ಪರವಾದ ನಿಲುವನ್ನೇ ತಳೆಯುತ್ತಾರೆ ಎಂದು ಆಳುವ ಪಕ್ಷ ಭಾರೀ ಪ್ರಚಾರ ಮಾಡಿಕೊಂಡು ಬಂದಿದ್ದು, ಈಗ ಅವರು ಈ ಹೇಳಿಕೆಯಲ್ಲಿ ದ್ವಿಪಕ್ಷೀಯ ಪ್ರಶ್ನೆಗಳ ವಿಷಯದಲ್ಲಿ ಮಾತ್ರವಲ್ಲ, ವ್ಯಾಪಾರದಲ್ಲಿಯೂ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಿರುವಂತೆ ಕಾಣುತ್ತದೆ.
ಮೂರನೆಯದಾಗಿ, ಮೋದಿಯವರು ಹಿಂದಿನ ಪ್ರಧಾನಿಗಳಂತೆ ಶಾಂತಿ-ಗೀತಿಯೆಂದು ಸಮಯ ವ್ಯರ್ಥಮಾಡುವುದಿಲ್ಲ, ಅವರು ಧೈರ್ಯದಿಂದ ಮುನ್ನುಗ್ಗಿ ಪಾಕಿಸ್ತಾನಕ್ಕೆ ಪಾಟ ಕಲಿಸುತ್ತಾರೆ ಎಂದು ಈ ಬಾರಿಯೂ ಆಳುವ ಪಕ್ಷ ಪ್ರಚಾರ ಮಾಡುತ್ತಿತ್ತು. ಆದರೆ ಭಾರತದ ಕೈಮೇಲಾಗಿದೆ ಎಂದು ಅನಿಸುತ್ತಿದ್ದಾಗಲೇ ಅವರ ಪ್ರಿಯ ಗೆಳೆಯ ಟ್ರಂಪ್ ವಾಶಿಂಗ್ಟನ್‍ನಲ್ಲಿ ಕದನ ವಿರಾಮ ಪ್ರಕಟಿಸಿದರು!
ಇದಲ್ಲದೆ, ಪಾಕಿಸ್ತಾನದ ಪ್ರಧಾನಿಗಳು ಟ್ರಂಪ್ ರವರ ಹೇಳಿಕೆಯನ್ನು ಅತ್ಯಾದರದಿಂದ ಸ್ವಾಗತಿಸಿದ್ದಾರೆ, ಇದು ಪಾಕಿಸ್ತಾನದ ವಿಜಯ ಎಂದೂ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿಗಳು ಮತ್ತು ಮಗಳ ವಿರುದ್ಧವೂ ಟ್ರೋಲಿಂಗ್
ಮೇ 11ರಂದು ಆಳುವ ಪಕ್ಷ ಮತ್ತೊಂದು ಮುಜುಗರಕ್ಕೂ ಒಳಗಾಗಿದೆ. ‘ಆಪರೇಷನ್ ಸಿಂಧೂರ’ದಿಂದ ಭಾರತಕ್ಕೆ ಸಿಕ್ಕಿದ್ದೇನು ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದು, ಇದ್ದಕ್ಕಿದ್ದಂತೆ ಮೋದಿ ಸರಕಾರ ‘ಕದನ ವಿರಾಮ’ಕ್ಕೆ ಮುಂದಾದ್ದದ್ದು ಅವರ ಅಭಿಮಾನಿಗಳಲ್ಲಿ ಬಹಳ ಗೊಂದಲ ಉಂಟು ಮಾಡಿರುವಂತೆ ಕಾಣುತ್ತದೆ, ಮತ್ತು ಅದು ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯನ್ನು ಅಧಿಕೃತವಾಗಿ ಪ್ರಕಟಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿಯವರ ವಿರುದ್ಧ ಆಕ್ರೋಶವಾಗಿ ತಿರುಗಿದಂತೆ ಕಾಣುತ್ತದೆ. ಆಳುವ ಪಕ್ಷದ ಟ್ರೋಲ್ ಪಡೆ ಈ ನಿರ್ಧಾರ ಅವರದ್ದು ಎಂಬಂತೆ ಅವರ ಮೇಲೆ ಹರಿಹಾಯ್ದಿದೆ, ಅವರ ಮಗಳು ಈ ಹಿಂದೆ ರೊಹಿಂಗ್ಯ ಜನಗಳ ಹಕ್ಕುಗಳ ಬಗ್ಗೆ ಮಾತನಾಡಿರುವುದನ್ನು ನೆಪವಾಗಿಸಿಕೊಂಡು ಆಕೆಯ ವಿರುದ್ಧವೂ, ಈ ಮೊದಲು ಭಯೋತ್ಪಾದಕ ಗುಂಡಿಗೆ ಬಲಿಯಾದ ಲೆಫ್ಟಿನೆಂಟ್ ವಿನಯ ನರ್ವಾಲ್ ಪತ್ನಿ ಹಿಮಾಂಶಿಯವರ ವಿರುದ್ಧ ಮಾಡಿದಂತೆ ವಿಷತುಂಬಿದ ಮಾತುಗಳನ್ನು ಹರಿಯಬಿಟ್ಟಿದ್ದಾರೆ. ಇದಕ್ಕೆ ವ್ಯಾಪಕವಾದ ಕಟು ಟೀಕೆ ವ್ಯಕ್ತವಾಗಿದೆ.