ಹಾಸನ: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ, ಭ್ರಷ್ಟಾಚಾರಿ, ಲೈಂಗಿಕ ಹಗರಣಗಳಿಂದ ರಾಜ್ಯಕ್ಕೆ ಕಂಟಕಪ್ರಾಯವಾಗಿರುವ ಬಿಜೆಪಿಯನ್ನು ಸೋಲಿಸಿ ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಹಾಸನ ಜಿಲ್ಲಾ ಸಮಿತಿ ಜನರಿಗೆ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಹಾಸನ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್, ಜನ ಸಮುದಾಯವು ಈ ಹಿಂದೆ ಎಂದೂ ಇಲ್ಲದಂತಹ ಗಂಭೀರ ಸನ್ನಿವೇಶದಲ್ಲಿ ಮೇ 10, 2023ರಂದು ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿದೆ. ‘ಈ ಚುನಾವಣೆಯ ಫಲಿತಾಂಶಗಳು ಕೇವಲ ನಮ್ಮ ಬದುಕಿನ ಪ್ರಶ್ನೆಗಳಾದ ಅನ್ನ, ಬಟ್ಟೆ, ವಸತಿ, ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ ಇತ್ಯಾದಿಗಳನ್ನು ಜನಪರವಾಗಿ ಇತ್ಯಾರ್ಥ ಪಡಿಸಬೇಕಿರುವುದು ಮಾತ್ರವಲ್ಲದೆ ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ಕುವೆಂಪುರಂತಹ ಮಹನೀಯರ ಕನಸಿನ ಸಾಮರಸ್ಯದ, ಸಹಬಾಳ್ವೆಯ, ಸಮೃದ್ಧ ‘ಕರ್ನಾಟಕ’ವನ್ನು ಉಳಿಸಿ, ಬೆಳೆಸುವ ಚುನಾವಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಜನವಿರೋಧಿ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಿ, ಜಾತ್ಯತೀತ ಶಕ್ತಿಗಳು, ಪಕ್ಷಗಳನ್ನು ಬಲಪಡಿಸಬೇಕಿದೆ ಎಂದರು.
ರಾಜ್ಯದಲ್ಲಿ ಮೂರೂವರೆ ವರ್ಷ ಮತ್ತು ಕೇಂದ್ರದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಿಲ್ಲ. ಅವರು ಹೇಳುತ್ತಿರುವಂತೆ ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಡಬಲ್ ಬ್ಲೇಡ್ ಸರ್ಕಾರವಾಗಿದೆ. ರಾಜ್ಯ ಸರ್ಕಾರ ಜನಸಾಮಾನ್ಯರ ಜೇಬನ್ನು ಕತ್ತರಿಸುತ್ತಿದ್ದರೆ, ಕೇಂದ್ರ ಸರ್ಕಾರ ಕುತ್ತಿಗೆಯನ್ನೇ ಕತ್ತರಿಸುತ್ತಿದೆ. ಬಿಜೆಪಿ ಸರ್ಕಾರವು ಸತತ ಬೆಲೆ ಏರಿಕೆಯನ್ನು ನಿಯಂತ್ರಿಸದೆ ಜನಸಾಮಾನ್ಯರ ವಿರೋಧಿಯಾಗಿ ವರ್ತಿಸುತ್ತಿದೆ. ದಲಿತ ಮತ್ತು ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ಧಿಯ ಅನುದಾನಗಳನ್ನು ಕಡಿತಗೊಳಿಸಿದೆ. ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ವೈಖರಿಯಿಂದ ಜನರ ನಡುವೆ ಹೋಗಲಾರದ ಬಿಜೆಪಿ ರಾಜ್ಯ ನಾಯಕರು ಪ್ರಚಾರಕ್ಕೆ ತಾಲೂಕು ಮಟ್ಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವಂತಾಗಿದೆ. ಭ್ರಷ್ಟಾಚಾರಕ್ಕೆ ಮೋದಿ ಅವರ ಅಭ್ಯಂತರವಿಲ್ಲ. ಪುಲ್ವಾಮ ದಾಳಿಯ ಸಂಪೂರ್ಣ ಮಾಹಿತಿ ಇದ್ದರೂ ಕೇಂದ್ರ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಮೌನ ವಹಿಸಿದ್ದ ಬಗ್ಗೆ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಬಯಲಾಗಿದೆ. ಹಾಗಾಗಿ ಹುಸಿ ದೇಶಪ್ರೇಮದ ಮೂಲಕ ಜನರನ್ನು ಶೋಷಣೆ ಮಾಡುತ್ತಿರುವ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಬೇಕು ಎಂದು ಧರ್ಮೇಶ್ ಹೇಳಿದರು.
ಹಾಸನದಲ್ಲಿ ಪ್ರೀತಂ ಗೌಡರನ್ನು ಸೋಲಿಸಿ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅವರಿಗೆ ಮತ ನೀಡಬೇಕು ಶಾಸಕ ಪ್ರೀತಂಗೌಡ ಅವರು ಕಡುಭ್ರಷ್ಟಾಚಾರಿಯಾಗಿದ್ದು, ಜನರ ಆದ್ಯತೆಯ ಪ್ರಶ್ನೆಗಳ ಬಗ್ಗೆ ಗಮನ ಹರಿಸಿಲ್ಲ. ರಸ್ತೆ ಮಾಡಿದ್ದೇ ದೊಡ್ಡ ಅಭಿವೃದ್ಧಿ ಎಂದು ಅವರು ಹೇಳುತ್ತಿದ್ದಾರೆ. ಆದರೆ ಉದ್ಯೋಗ, ಆರೋಗ್ಯ, ಶಿಕ್ಷಣ, ವಸತಿ ಸಮಸ್ಯೆಗಳ ಕಡೆ ಗಮನ ಹರಿಸಿಲ್ಲ. ಆದರೆ ಬಾರ್ ಗಳು ಮಾತ್ರ ಅಭಿವೃದ್ಧಿ ಆಗಿವೆ. ಆದರೆ ಅನಧಿಕೃತ ಬಾರ್ ಗಳು ಹೆಚ್ಚಿನ ಅಭಿವೃದ್ಧಿ ಕಂಡಿವೆ. ಯುವಜನರನ್ನು ಮದ್ಯ ಮತ್ತಿತರ ಅಂಶಗಳಿಂದ ಭ್ರಷ್ಟರನ್ನಾಗಿ ಮಾಡಲಾಗಿದೆ ಹೇಳಿದರು.
ಅದೇ ರೀತಿ ಬೇಲೂರು, ಸಕಲೇಶಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಮತ್ತು ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಎಂ ಬೆಂಬಲ ವ್ಯಕ್ತಪಡಿಸಿದೆ ಎಂದು ವಿವರಿಸಿದರು. ಇದೇ ವೇಳೆ ರಾಜ್ಯ ವಿಧಾನಸಭಾ ಚುನಾವಣೆಗೆ ಸಿಪಿಎಂ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಸಕಲೇಶಪುರ ತಾಲೂಕು ಮುಖಂಡರಾದ ಸೌಮ್ಯ , ಜಿಲ್ಲಾ ಸಮಿತಿ ಸದಸ್ಯರಾದ ಅರವಿಂದ್, ಜಿ.ಪಿ.ಸತ್ಯನಾರಾಯಣ ಇದ್ದರು.